Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಅನ್ಯ ಭಾಷೆಯನ್ನು ಹೇರಬೇಡಿ, ಕನ್ನಡ ಹೋರಾಟಗಾರರನ್ನು ಬಿಡುಗಡೆ ಮಾಡಿ: ನಾಡು-ನುಡಿಯ ಕುರಿತು ಕೈಗೊಂಡ 6 ನಿರ್ಣಯಗಳು ಇಲ್ಲಿವೆ

six resolutions adopted in kannada sahitya sammelana

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು ಆರು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಹಿಂದಿ ಹಾಗೂ ಇನ್ನಾವುದೇ ಭಾಷೆಯನ್ನು ಕನ್ನಡದ ಮೇಲೆ ಹೇರುವಂತಿಲ್ಲ ಎನ್ನುವ ನಿರ್ಣಯವನ್ನೂ ಅಂಗೀಕರಿಸಲಾಗಿದೆ.

ಸಮ್ಮೇಳನದ ಅಂತಿಮ ದಿನವಾದ ಭಾನುವಾರ ಒಟ್ಟು ಆರು ನಿರ್ಣಯಗಳ ಕುರಿತು ಕಸಾಪ ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೀಲ್‌ ಪಾಂಡು ಮಾಹಿತಿ ನೀಡಿದರು.

ಇದಕ್ಕೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ. ಸಿದ್ಧಲಿಂಗಪ್ಪ ಅಧ್ಯಕ್ಷರು ಸೂಚಕರಾದರೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್‌. ಕೃಷ್ಣಪ್ಪ ಅನುಮೋದಿಸಿದರು.

ನಿರ್ಣಯ 1: ಹಾವೇರಿ ಮಹಾಜನತೆಗೆ ಕೃತಜ್ಞತೆ
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಆಡಳಿತ ಹಾಗೂ ಎಲ್ಲ ಕಾರ್ಯಕರ್ತರಿಗೂ ಮತ್ತು ಆತಿಥ್ಯವನ್ನು ನೀಡಿದ, ಪ್ರೀತಿತೋರಿದ ಹಾವೇರಿಯ ಸಮಸ್ತ ಜನತೆಗೂ ಈ ಮಹಾಸಭೆಯು ಹೃತ್ಪೂರ್ವಕ ಧನ್ಯವಾದಗಳನ್ನು ಹಾಗೂ ಕೃತಜ್ಞತೆಗಳನ್ನು ಅರ್ಪಿಸುತ್ತದೆೆ.
ಸೂಚಕರು: ನೇ.ಭ. ರಾಮಲಿಂಗಶೆಟ್ಟಿ
ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು
ಅನುಮೋದಕರು: ಎನ್.ಬಿ. ಗೋಪಾಲಗೌಡ
ಅಧ್ಯಕ್ಷರು, ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು


ನಿರ್ಣಯ – 2: ಸಮಗ್ರ ಭಾಷಾ ಕಾಯ್ದೆ ಅನುಷ್ಠಾನ
ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕವನ್ನು ಕೂಡಲೇ ಸುಗ್ರೀವಾಜ್ಞೆ ಮೂಲಕ ಕಾನೂನಿನ ರೂಪ ಪಡೆದು ಶಿಕ್ಷಣ, ನ್ಯಾಯಾಂಗ, ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು ಎಂದು ಈ ಸಮ್ಮೇಳನ ಕರ್ನಾಟಕ ಸರ್ಕಾರವನ್ನು ಬಲವಾಗಿ ಆಗ್ರಹಿಸುತ್ತದೆ.
ಸೂಚಕರು: ಡಾ. ಮಹೇಶ ಜೋಶಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
ಅನುಮೋದಕರು: ಡಾ. ದೊಡ್ಡರಂಗೇಗೌಡಸಮ್ಮೇಳನಾಧ್ಯಕ್ಷರು, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ನಿರ್ಣಯ – 3: ಗಡಿವಿವಾದ ಇತ್ರ್ಥಗೊಳ್ಳಲಿ
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ಇರುವ ಮಹಾಜನ ವರದಿಯು, ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿತವಾಗಿ ಪ್ರಕರಣ ವಿಚಾರಣೆಯ ಹಂತದಲ್ಲಿ ಇರುವುದರಿಂದ, ನ್ಯಾಯಾಲಯದ ಅಂತಿಮ ತೀರ್ಪಿನ ಮಾರ್ಗದರ್ಶನದಂತೆ ಸೂಕ್ತ ಕ್ರಮವನ್ನು ವಿಳಂಬವಿಲ್ಲದೇ ಕೈಗೊಳ್ಳಬೇಕೆಂದು ಈ ಸಮ್ಮೇಳನ ಸರ್ಕಾರವನ್ನು ಆಗ್ರಹಿಸುತ್ತದೆ.
ಸೂಚಕರು : ಮಂಗಲಾ ಮೆಟಗುಡ್ಡ
ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಅನುಮೋದಕರು : ಎಂ. ಶೈಲಕುಮಾರ್
ಅಧ್ಯಕ್ಷರು, ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

ನಿರ್ಣಯ – 4 : ಚಳವಳಿಗಾರರ ಬಿಡುಗಡೆ
ಕನ್ನಡಕ್ಕಾಗಿ ಹೋರಾಡಿದ ಕನ್ನಡ ಚಳಿವಳಿಗಾರರ ಮೇಲಿನ ಈ ಸಂಬಂಧಿತ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಕೂಡಲೆ ಹಿಂದಕ್ಕೆ ಪಡೆಯಬೇಕು ಎಂದು ಈ ಸಮ್ಮೇಳನ ಆಗ್ರಹಿಸುತ್ತದೆ.
ಸೂಚಕರು : ಬಿ.ಎಂ. ಪಟೇಲ್ ಪಾಂಡು
ಗೌರವ ಕೋಶಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
ಅನುಮೋದಕರು: ಬಿ.ಎನ್. ವಾಸರೆ
ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

ನಿರ್ಣಯ – 5 : ಹಿಂದಿ ಹೇರಿಕೆ ಬೇಡ
ಭಾರತ ಸಂವಿಧಾನದ ಎಂಟನೇ ಪರಿಚ್ಛೇದದ ಅನ್ವಯ ಎಲ್ಲ ಪ್ರಾಂತೀಯ ಭಾಷೆಗಳನ್ನು ಸಮಾನ ಎಂದು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿರುವ ೨೨ ಭಾಷೆಗಳಲ್ಲಿರುವ ಕನ್ನಡ, ಕರ್ನಾಟಕದ ಸಾರ್ವಭೌಮ ಭಾಷೆಯಾಗಿದೆ. ಇದರ ಮೇಲಿನ ಹಿಂದಿ ಅಥವಾ ಇನ್ಯಾವುದೇ ಭಾಷೆಯ ಆಕ್ರಮಣವನ್ನು, ಹೇರಿಕೆಯನ್ನು ಈ ಸಮ್ಮೇಳನ ತೀವ್ರವಾಗಿ ಖಂಡಿಸುತ್ತದೆ.
ಸೂಚಕರು : ಕೆ. ಸಿದ್ಧಲಿಂಗಪ್ಪ
ಅಧ್ಯಕ್ಷರು, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಅನುಮೋದಕರು: ಬಿ.ಎನ್. ಕೃಷ್ಣಪ್ಪ
ಅಧ್ಯಕ್ಷರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

ನಿರ್ಣಯ – 6 : ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಹಕಾರ
“ವಿಶ್ವ ಕನ್ನಡ ಸಮ್ಮೇಳನವನ್ನು” ದಾವಣಗೆರೆಯಲ್ಲಿ ಜರುಗಿಸಬೇಕೆನ್ನುವ ನಿರ್ಣಯವನ್ನು ಕರ್ನಾಟಕ ಸರ್ಕಾರವು ತೆಗೆದುಕೊಂಡಿರುವುದರಿಂದ ಅದರ ಅರ್ಥಪೂರ್ಣ ಮತ್ತು ಯಶಸ್ವಿ ಆಯೋಜನೆಯ ಸಂಬಂಧದಲ್ಲಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಜರುಗಿಸುತ್ತಾ ಬಂದಿರುವ ಅನುಭವದ ಹಿನ್ನೆಲೆಯನ್ನು ಹೊಂದಿರುವ, ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ “ಕನ್ನಡ ಸಾಹಿತ್ಯ ಪರಿಷತ್ತಿನ” ಸಹಯೋಗದೊಂದಿಗೆ ಜರುಗಿಸಬೇಕೆಂದು ಮತ್ತು ನಿಯೋಜಿತ ಸಮ್ಮೇಳನದ ಸಂಬAಧವಾಗಿ ಸರ್ಕಾರ ಜರುಗಿಸುವ ಸಭೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಈ ಸಮ್ಮೇಳನವು ಒಕ್ಕೊರಲಿನಿಂದ ಸರ್ಕಾರವನ್ನು ಆಗ್ರಹಿಸುತ್ತದೆ.
ಸೂಚಕರು : ಬಿ. ವಾಮದೇವಪ್ಪ
ಅಧ್ಯಕ್ಷರು, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಅನುಮೋದಕರು : ಸೂರಿ ಶ್ರೀನಿವಾಸ್
ಅಧ್ಯಕ್ಷರು, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

“ಪ್ರಸ್ತುತ ಸಮ್ಮೇಳನವು ತೆಗೆದುಕೊಂಡ ಮೇಲಿನ ಈ ನಿರ್ಣಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರ-ಸಹಯೋಗದೊಂದಿಗೆ ಅನುಷ್ಠಾನಗೊಳಿಸಬೇಕೆಂದು ಸರ್ಕಾರವನ್ನು ಈ ಸಮ್ಮೇಳನವು ಆಗ್ರಹಿಸುತ್ತದೆ”

Exit mobile version