ಹೊಸದಿಲ್ಲಿ: ಅಮೆರಿಕ ವಿರೋಧಿ ನಿಲುವುಗಳನ್ನು ಹೊಂದಿರುವ ತೀವ್ರ ಎಡಪಂಥೀಯ ನಾಯಕ, ಸ್ಲೊವಾಕಿಯಾ ಪ್ರಧಾನ ಮಂತ್ರಿ ರಾಬರ್ಟ್ ಫಿಕೊ (Slovakia Prime minister Robert Fico) ಹತ್ಯೆ ಯತ್ನ (Assassination attempt) ಬುಧವಾರ ನಡೆದಿದೆ. ದುಷ್ಕರ್ಮಿಯೊಬ್ಬ ಅವರತ್ತ ಗುಂಡು ಹಾರಿಸಿದ್ದು, ರಾಬರ್ಟ್ ಫಿಕೊ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸುದ್ದಿ ದೂರದರ್ಶನ ಕೇಂದ್ರ TA3 ಪ್ರಕಾರ, ರಾಜಧಾನಿ ಬ್ರಾಟಿಸ್ಲಾವಾದ ಈಶಾನ್ಯಕ್ಕೆ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 59 ವರ್ಷದ ರಾಬರ್ಟ್ ಫಿಕೊ ಅವರು ಸ್ಥಳೀಯ ಸಭಾಂಗಣದ ಮುಂದೆ ತಮ್ಮ ಬೆಂಬಲಿಗರನ್ನು ಭೇಟಿಯಾಗುವ ಸಂದರ್ಭದಲ್ಲಿ ದುಷ್ಕರ್ಮಿ ಅವರ ಹೊಟ್ಟೆಗೆ ನಾಲ್ಕು ಗುಂಡುಗಳನ್ನು ಹಾರಿಸಿದ್ದಾನೆ.
“ಇಂದು ಹ್ಯಾಂಡ್ಲೋವಾದಲ್ಲಿ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಹತ್ಯೆ ಪ್ರಯತ್ನ ನಡೆದಿದೆ. ಗಾಯಗೊಂಡ ಅವರನ್ನು ಹೆಲಿಕಾಪ್ಟರ್ ಮೂಲಕ ಬನ್ಸ್ಕಾ ಬೈಸ್ಟ್ರಿಕಾಗೆ ಸಾಗಿಸಲಾಗುತ್ತಿದೆ. ಅವರಿಗೆ ತೀವ್ರವಾದ ಶಸ್ತ್ರಕ್ರಿಯೆಯ ಅಗತ್ಯವಿದೆ” ಎಂದು ಎಂದು ಸರ್ಕಾರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಸ್ಲೊವಾಕಿಯಾ ಸಂಸತ್ತಿನ ಉಪ ಸ್ಪೀಕರ್ ಲುಬೊಸ್ ಬ್ಲಾಹಾ ಅವರು ಸಂಸತ್ತಿನ ಅಧಿವೇಶನದಲ್ಲಿ ರಾಬರ್ಟ್ ಫಿಕೊ ಮೇಲಿನ ದಾಳಿಯನ್ನು ದೃಢಪಡಿಸಿದರು. ಸ್ಲೋವಾಕಿಯಾದ ಅಧ್ಯಕ್ಷ ಜುಝಾನಾ ಕ್ಯಾಪುಟೋವಾ ಈ ದಾಳಿಯನ್ನು ಖಂಡಿಸಿದ್ದು, ಇದು ಪ್ರಧಾನ ಮಂತ್ರಿಯವರ ಮೇಲಿನ “ಕ್ರೂರ ಮತ್ತು ನಿರ್ದಯ” ದಾಳಿ ಎಂದು ಕರೆದರು. “ನಾನು ಆಘಾತಕ್ಕೊಳಗಾಗಿದ್ದೇನೆ. ಈ ನಿರ್ಣಾಯಕ ಕ್ಷಣದಲ್ಲಿ ರಾಬರ್ಟ್ ಫಿಕೊಗೆ ಹೆಚ್ಚಿನ ಶಕ್ತಿ ಮತ್ತು ಚೇತರಿಕೆ ದೊರೆಯಲಿ ಎಂದು ಹಾರೈಸುತ್ತೇನೆ” ಎಂದರು.
ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿರುವ ರಾಬರ್ಟ್ ಫಿಕೊ ಮತ್ತು ಅವರ ಎಡಪಂಥೀಯ ಸ್ಮರ್ (ದಿಕ್ಕು) ಪಕ್ಷವು ಸ್ಲೋವಾಕಿಯಾದಲ್ಲಿ ಸೆಪ್ಟೆಂಬರ್ 30ರಂದು ನಡೆದ ಸಂಸತ್ತಿನ ಚುನಾವಣೆಯಲ್ಲಿ ಜಯಗಳಿಸಿತು. ಈ ಗೆಲುವು ಫಿಕೊ ಅವರ ರಾಜಕೀಯ ಪುನರಾಗಮನಕ್ಕೆ ದಾರಿಯಾಗಿದೆ. ಅವರು ರಷ್ಯಾದ ಪರ ಮತ್ತು ಅಮೇರಿಕನ್ ವಿರೋಧಿ ನಿಲುವನ್ನು ಹೊಂದಿದ್ದಾರೆ. ಫಿಕೊ ನೀತಿಗಳನ್ನು ಪ್ರತಿಭಟಿಸಲು ಸಾವಿರಾರು ಜನರು ರಾಜಧಾನಿಯಲ್ಲಿ ಮತ್ತು ಸ್ಲೋವಾಕಿಯಾದಾದ್ಯಂತ ಪದೇ ಪದೆ ರ್ಯಾಲಿ, ಪ್ರತಿಭಟನೆ ಮಾಡಿದ್ದಾರೆ.
ರಾಬರ್ಟ್ ಫಿಕೊ ಹತ್ಯೆಯ ಯತ್ನದ ಬಗ್ಗೆ ವಿಶ್ವದಾದ್ಯಂತ ಹಲವಾರು ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ. Xನಲ್ಲಿನ ಪೋಸ್ಟ್‌ನಲ್ಲಿ, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ʼಯುರೋಪಿಯನ್ ರಾಜಕೀಯದಲ್ಲಿ ಹಿಂಸೆಗೆ ಯಾವುದೇ ಸ್ಥಳವಿಲ್ಲʼ ಎಂದು ಹೇಳಿದರು.
ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರು, “ನಮ್ಮ ಪ್ರಜಾಪ್ರಭುತ್ವಗಳಲ್ಲಿ ದ್ವೇಷ ಮತ್ತು ಹಿಂಸಾಚಾರಕ್ಕೆ ಆಸ್ಪದ ಕೊಡಬಾರದು. ಅತ್ಯಂತ ನಿರ್ಣಯದಿಂದ ಇದರ ವಿರುದ್ಧ ಹೋರಾಡಬೇಕು” ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: America v/s Russia:ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ; ರಷ್ಯಾ ಆರೋಪಕ್ಕೆ ಅಮೆರಿಕ ಹೇಳಿದ್ದೇನು?