Site icon Vistara News

ವಿಸ್ತಾರ ಸಂಪಾದಕೀಯ: ಲ್ಯಾಂಡರ್‌ಗೆ ಪುಟ್ಟ ಹೆಜ್ಜೆ, ಭಾರತಕ್ಕೆ ಮಹಾ ಜಿಗಿತ

Chandrayaan 3

ಆಗಸ್ಟ್‌ 23, 2023- ಭಾರತದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಇತಿಹಾಸ ಈ ದಿನವನ್ನು ಸದಾ ನೆನಪಿಸಿಕೊಳ್ಳಲಿದೆ. ನಮ್ಮ ದೇಶ ಮೊದಲ ಉಪಗ್ರಹ ಹಾರಿಸಿದ ದಿನ, ಮೊದಲ ಭಾರತೀಯ ಬಾಹ್ಯಾಕಾಶ ಯಾತ್ರಿ ಯಾನ ಮಾಡಿದ ದಿನ, ಮೊದಲ ಅಣುಬಾಂಬ್‌ ಪರೀಕ್ಷಿಸಿದ ದಿನಗಳೆಲ್ಲ ಹೇಗೆ ಐತಿಹಾಸಿಕ ದಿನಗಳಾಗಿವೆಯೇ ಹಾಗೇ ಇದೂ ಕೂಡ, ಭಾರತ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ದಿನವೆಂದು ಸ್ಮರಣೀಯವಾಗಿರಲಿದೆ. ಹಾಗೆಯೇ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಯೂ ನಮ್ಮದಾಗಿದೆ. ಚಂದ್ರನಲ್ಲಿ ನೌಕೆ ಇಳಿಸಿದ ನಾಲ್ಕೇ ರಾಷ್ಟ್ರಗಳ ಪಟ್ಟಿಯಲ್ಲಿ ನಮ್ಮದೂ ಒಂದಾಗಿದೆ ಎಂಬ ಹೆಮ್ಮೆ ಕೂಡ ಈಗ ನಮ್ಮದು. ಇದು ನಮ್ಮ ವಿಜ್ಞಾನಿಗಳ ದಶಕಗಳ ಪರಿಶ್ರಮ, ಬುದ್ಧಿವಂತಿಕೆ, ಅವರಿಗೆ ಬೆಂಗಾವಲಾಗಿ ನಿಂತ ಆಡಳಿತಗಾರರ ಧೀಮಂತಿಕೆ ಮತ್ತು ವಿವೇಕಗಳ ಫಲ. ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟ ನೀಲ್‌ ಆರ್ಮ್‌ಸ್ಟ್ರಾಂಗ್‌ನ ಮಾತುಗಳನ್ನೇ ಸ್ವಲ್ಪ ಬದಲಾಯಿಸಿ ಹೇಳುವುದಾದರೆ, ʼʼಇದು ವಿಕ್ರಮ್ ಲ್ಯಾಂಡರ್‌ಗೆ ಪುಟ್ಟ ಹೆಜ್ಜೆ. ಆದರೆ ಭಾರತಕ್ಕೆ ಮಹಾ ಜಿಗಿತ.‌ʼʼ

ನಮ್ಮ ವಿಜ್ಞಾನಿಗಳ ನಿಖರ ಎಣಿಕೆ, ಯೋಜನೆ ತಪ್ಪಾಗಲಿಲ್ಲ. ನಿಗದಿತ ಸಮಯಕ್ಕೆ ಸರಿಯಾಗಿ ಚಂದ್ರಯಾನ-3 ನೌಕೆಯ ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಯಿತು. ಲ್ಯಾಂಡಿಂಗ್ ಮುಂಚಿನ ಆ 17 ಭಯಾನಕ ನಿಮಿಷಗಳ ಕಠಿಣ ಹಂತವನ್ನು ಪಾಸು ಮಾಡುವಲ್ಲಿ ಲ್ಯಾಂಡರ್ ಯಶಸ್ವಿಯಾಯಿತು. ಲ್ಯಾಂಡ್​ ಆದ ಸ್ವಲ್ಪ ಹೊತ್ತಿನಲ್ಲಿ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೊ ನಿಯಂತ್ರಣ ಕಚೇರಿ ಜತೆ ಸಂವಹನ ನಡೆಸಲು ಆರಂಭಿಸಿದೆ. ಇದೀಗ ಲ್ಯಾಂಡರ್‌ನಿಂದ ‌ಪ್ರಜ್ಞಾನ್ ರೋವರ್‌ ಹೊರಬಂದು ತನ್ನ ಸಂಶೋಧನೆಯ ಕಾರ್ಯವನ್ನು ಆರಂಭಿಸಿದೆ. ಅಂದರೆ ಈ ಬಾರಿ ಇಸ್ರೋ ತನ್ನ ಮಿಷನ್‌ನಲ್ಲಿ ಪೂರ್ಣ ಯಶಸ್ವಿಯಾಗಿದೆ. ಇದರೊಂದಿಗೆ ಕಳೆದ ಬಾರಿ ಕೊನೆಯ ಕ್ಷಣದಲ್ಲಿ ಆಗಿದ್ದ ಸಾಫ್ಟ್‌ ಲ್ಯಾಂಡಿಂಗ್‌ನ ವಿಫಲತೆಯ ಕ್ಷಣಗಳಿಂದ ಮುಕ್ತಗೊಂಡಿದೆ. ಇಸ್ರೇಲ್‌, ಜಪಾನ್‌, ದಕ್ಷಿಣ ಕೊರಿಯಾ ಮುಂತಾದ ಅತ್ಯಾಧುನಿಕ ತಂತ್ರಜ್ಞಾನ ಪರಿಣತ ದೇಶಗಳು ಚಂದ್ರನಲ್ಲಿ ನೌಕೆ ಇಳಿಸಲು ಯತ್ನಿಸಿವೆ. ಆದರೆ ಭಾರತ ಅವನ್ನೆಲ್ಲ ಮೀರಿಸಿವೆ ಎಂಬುದು ನಮ್ಮ ರೋಮಾಂಚನಕ್ಕೆ ಇನ್ನೊಂದು ಕಾರಣ.

ಭಾರತೀಯರಾದ ನಾವು ಹೆಮ್ಮೆ ಪಡಬೇಕಾದ ಇನ್ನೊಂದು ಸಂಗತಿ ಎಂದರೆ ಇದು ಊಹಾತೀತವಾಗಿ ಕಡಿಮೆ ಬಜೆಟ್‌ನ ಯಾನ. ಇದಕ್ಕೆ ತಗುಲಿದ ವೆಚ್ಚ 600 ಕೋಟಿ ರೂ. ಮಾತ್ರ. ನಮ್ಮ ದೇಶದ ಅತ್ಯಂತ ಸಣ್ಣ ರಾಜ್ಯದ (ಗೋವಾ) ವಾರ್ಷಿಕ ಬಜೆಟ್‌ನ ಗಾತ್ರ ಕೂಡ ಇದರ ಹತ್ತು ಪಟ್ಟು ಇದೆ! ಕೆಲವೇ ದಿನಗಳ ಹಿಂದೆ ವಿಫಲಗೊಂಡಿದ್ದ ರಷ್ಯದ ಲೂನಾರ್‌ ಮಿಷನ್‌ನ ವೆಚ್ಚ ಕೂಡ ಸುಮಾರು 1600 ಕೋಟಿ ರೂ.ಗಳಷ್ಟಿತ್ತು. ಅಂದರೆ ನಮ್ಮ ಈ ತಂತ್ರಜ್ಞಾನ ಸಾಧನೆಯಿಂದ ಆರ್ಥಿಕತೆಗೂ ಯಾವ ಹೊರೆಯೂ ಉಂಟಾಗಿಲ್ಲ. ʼಈ ಯೋಜನೆಯ ವೆಚ್ಚದಲ್ಲಿ ಬಡವರ ಕಲ್ಯಾಣ ಕಾರ್ಯಕ್ರಮ ಮಾಡಬಹುದಾಗಿತ್ತುʼ ಎಂದು ವಾದಿಸುವ ಮನೋಧರ್ಮದವರಿಗೂ ಇದರಿಂದ ಬಾಯಿ ಕಟ್ಟುವುದು ಖಂಡಿತ. ನಮಗೆ ಆಗುವ ಲಾಭಗಳನ್ನು ಹೋಲಿಸಿದರೆ ಇದು ಅಂಥ ವೆಚ್ಚವೇನಲ್ಲ.

ಈ ಯೋಜನೆಯ ಯಶಸ್ಸಿನ ಹಿಂದೆ ನಮ್ಮ ದೇಶದ ಏಳು ದಶಕಗಳ ವೈಜ್ಞಾನಿಕ ಪ್ರಗತಿ ಇದೆ. ಬ್ರಿಟಿಷರು ಕೈಬಿಟ್ಟು ಹೋದ ಬಳಿಕ ಈ ದೇಶದ ಜನ ಕಚ್ಚಾಡಿ ನಾಶವಾಗಿ ಹೋಗುತ್ತಾರೆ ಎಂದು ಕೆಲವು ಪಾಶ್ಚಿಮಾತ್ಯರು ಭವಿಷ್ಯ ಹೇಳಿದ್ದರು. ಆದರೆ ನಾವಿಂದು ಅವರೆಲ್ಲರ ಹುಬ್ಬೇರುವಂತೆ ಆಗಸದಲ್ಲಿ ವಿಜಯಧ್ವಜ ನೆಟ್ಟಿದ್ದೇವೆ. ನಮ್ಮನ್ನು ಆಳಿದ ಬ್ರಿಟನ್‌ ದೇಶವೇ ಈದೀಗ ಭಾರತದ ಬಳಿ ಬಾಹ್ಯಾಕಾಶ ಸಂಶೋಧನೆಗೆ ಮಾರ್ಗದರ್ಶನ ಪಡೆಯುವ ಸ್ಥಿತಿ ಇದೆ. ಸಾಧನೆ ಎಂದರೆ ಇದೇ ಅಲ್ಲವೇ? ಹಾಗೆಯೇ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಂದ ಹಿಡಿದು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರವರೆಗೆ ಹೆಚ್ಚಿನೆಲ್ಲ ಪ್ರಧಾನಿಗಳು ನಮ್ಮ ವಿಜ್ಞಾನಿಗಳ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇದು ಕೂಡ ನೆನೆಯಬೇಕಾದ ವಿಷಯ. ಹಾಗೆಯೇ ನು ಇನ್ ಚಂದ್ರಯಾನ 3 ಯಶಸ್ವಿಯಾಗಲಿ ಎಂದು ದೇಶಾದ್ಯಂತ ಮಂದಿರ, ಮಸೀದಿ ಮತ್ತು ಚರ್ಚುಗಳಲ್ಲಿ ಜನರು ವಿಶೇಷ ಪ್ರಾರ್ಥನೆ ಕೈಗೊಂಡಿದ್ದರು. ವಿಶೇಷ ಹೋಮಗಳನ್ನು ನಡೆಸಲಾಗಿತ್ತು. ಕೋಟ್ಯಂತರ ಜನರ ಭಾವನೆ, ಕನಸು, ಕಾತರಗಳೆಲ್ಲ ಈ ಒಂದು ಯಾನದ ಯಶಸ್ಸಿನ ಹಿಂದೆ ಒಗ್ಗೂಡಿದ್ದವು. ಇದೆಲ್ಲವೂ ಇಂದು ಫಲಿಸಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರಾಜಕೀಯ ಹಗೆತನಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಬಲಿಯಾಗದಿರಲಿ

ಈ ಒಂದು ಸಾಫ್ಟ್‌ ಲ್ಯಾಂಡಿಂಗ್‌ನಿಂದ ಏನು ಮಹಾ ಸಾಧನೆಯಾದಂತಾಯಿತು ಎಂದು ಪ್ರಶ್ನಿಸುವ ಸಿನಿಕರೂ ಇರಬಹುದು. ಅದಕ್ಕೂ ಉತ್ತರವಿದೆ. ಚಂದ್ರಯಾನ ಮಾಡಿನ ಎಲೈಟ್‌ ರಾಷ್ಟ್ರಗಳ ಸಾಲಿಗೆ ಸೇರುವುದರೊಂದಿಗೆ, ಭಾರತ ಕಡೆಗಣಿಸಲಾಗದ ವಿಜ್ಞಾನ- ತಂತ್ರಜ್ಞಾನ ಶಕ್ತಿ ಎಂಬುದನ್ನು ಅನುಮಾನಕ್ಕೆಡೆಯಿಲ್ಲದಂತೆ ಸಾಬೀತುಪಡಿಸಿದೆ. ಇದು ಭಾರತದ ಔನ್ನತ್ಯ ಸ್ಥಾನಮಾನಗಳನ್ನು ನಿಸ್ಸಂಶಯವಾಗಿಯೂ ಮತ್ತಷ್ಟು ಮೇಲೆತ್ತಿದೆ. ಈಗಾಗಲೇ ಖಾಸಗಿ ಬಾಹ್ಯಾಕಾಶ ಉಡಾವಣೆಗಳು ಮತ್ತು ಸಂಬಂಧಿತ ಉಪಗ್ರಹ ಆಧಾರಿತ ವ್ಯವಹಾರಗಳನ್ನು ಭಾರತ ನಡೆಸುತ್ತಿದೆ. ಈ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಹೆಚ್ಚಲಿದೆ. ಅನೇಕ ದೇಶಗಳಿಗೆ, ಸ್ವಂತ ಬಾಹ್ಯಾಕಾಶ ಸಾಧನೆ ಮಾಡುವ ಸಾಮರ್ಥ್ಯವಿಲ್ಲ. ಅವು ಭಾರತವನ್ನು ನೆಚ್ಚುತ್ತವೆ. 2023ರ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆ 546 ಶತಕೋಟಿ ಡಾಲರ್‌ (45.35 ಲಕ್ಷ ಕೋಟಿ ರೂ.) ಮೌಲ್ಯವನ್ನು ತಲುಪಿದೆ. ಕಳೆದ ದಶಕದಲ್ಲಿ ಇದರ ಮೌಲ್ಯದಲ್ಲಿ 91 ಶೇಕಡಾ ಹೆಚ್ಚಳವಾಗಿದೆ. ಭಾರತದ ಬಾಹ್ಯಾಕಾಶ ಆರ್ಥಿಕತೆಯ ಮೊತ್ತ ಸುಮಾರು 11.37 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಮೊತ್ತದ ವಹಿವಾಟಿನಿಂದ ಏನನ್ನೂ ಸಾಧಿಸಬಹುದಾಗಿದೆ. ಹೀಗಾಗಿಯೇ ಇದೊಂದು ಮಹತ್ವದ ಕ್ಷಣ

Exit mobile version