Site icon Vistara News

BBK Season 10 : ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಸ್ನೇಕ್ ಶ್ಯಾಮ್

Snake Shayam

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ (BBK Season 10) ಮೊದಲ‌ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸ್ನೇಕ್ ಶ್ಯಾಮ್​ ಹೊರ ಬಂದಿದ್ದಾರೆ. ಅಕ್ಟೋಬರ್ 8ರಂದು ಚಾಲನೆ ಪಡೆದ ಬಿಗ್​ಬಾಸ್​ ರಿಯಾಲಿಟಿ ಶೋಗೆ 18 ಮಂದಿ ಸ್ಪರ್ಧಿಸುವ ಅವಕಾಶ ಪಡೆದಿದ್ದರು. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್​ ಈಶ್ವರ್ ಹಾಗೂ ಸೀಸನ್​ 4ರ ವಿಜೇತ ಪ್ರಥಮ್​ ಕೂಡ ಅತಿಥಿಗಳಾಗಿ ಬಂದು ಹೋಗಿದ್ದರು. ಇದೀಗ ಮೊದಲ ಎಲಿಮಿನೇಷನ್ ನಡೆದಿದ್ದು ಸ್ನೇಕ್​ ಶ್ಯಾಮ್​ ಮನೆ ತೊರೆಯುವಂತಾಗಿದೆ.

ಇತರ ಸ್ಪರ್ಧಿಗಳ ಅಬ್ಬರದ ನಡುವೆ ಸ್ನೇಕ್ ಶ್ಯಾಮ್​ ಚಟುವಟಿಕೆ ರಹಿತರಂತೆ ಕಂಡು ಬಂದರು. ವಯಸ್ಸು ಮತ್ತು ಆರೋಗ್ಯ ಪೂರಕವಾಗಿರದ ಕಾರಣ ಅವರಿಗೆ ಪ್ರಭಾವಿ ಆಟವನ್ನು ಆಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರು ಹೊರಕ್ಕೆ ಬಂದಿರಬಹುದು ಎನ್ನಲಾಗಿದೆ. ಏತನ್ಮಧ್ಯೆ ಅವರು ಹಾವಿನ ಕುರಿತ ವಿಸ್ಮಯಕಾರಿ ಸಂಗತಿಗಳನ್ನು ಇತರ ಸ್ಪರ್ಧಿಗಳ ಜತೆ ಹಂಚಿಕೊಳ್ಳುವ ಮೂಲಕ ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡಿದ್ದರು.

ವೀಕೆಂಡ್ ಎಪಿಸೋಡಿನ‌ ಕಿಚ್ಚನ ಪಂಚಾಯಿತಿ ಶನಿವಾರ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಇಂದಿನ ‘ಸೂಪರ್ ಸಂಡೆ ಸುದೀಪ್ ಜೊತೆ’ಯಲ್ಲಿ ಸ್ಪರ್ಧಿಗಳ ಜೊತೆಗೆ ಮಾತುಕತೆಗೆ ಇಳಿದ ಕಿಚ್ಚ, ನಗಿಸುತ್ತಲೇ ಹೇಳಬೇಕಾದ ಮಾತುಗಳನ್ನು ಸ್ಪಷ್ಟವಾಗಿ ಹೇಳಿದರು. ನಾಮಿನೇಷನ್ ಪಟ್ಟಿಯಲ್ಲಿ ಸ್ನೇಕ್ ಶ್ಯಾಮ್, ಮೈಕಲ್ ಅಜಯ್, ಸಿರಿ, ನೀತು,ಡ್ರೋಣ್ ಪ್ರತಾಪ್, ಇವರೆಲ್ಲ ಇದ್ದರು. ಇವರಲ್ಲಿ ಮೊದಲು ಸೇಫ್‌ ಆಗಿದ್ದು ನೀತು ಅವರು. ನಂತರ ಉಳಿದಿದ್ದು, ಮೈಕಲ್, ಸಿರಿ ಮತ್ತು ಸ್ನೇಕ್‌ ಶ್ಯಾಮ್‌ ಅವರು.

ಇದನ್ನೂ ಓದಿ: BBK Season 10: ಬಿಗ್‌ ಬಾಸ್‌ ʻಫನ್ ಫ್ರೈಡೇʼ ಮೋಜಿನ ಆಟದಲ್ಲಿ ಗೆದ್ದ ಸ್ಪರ್ಧಿ ಇವರು!

ಐವತ್ತೆಂಟು ಸಾವಿರ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಖ್ಯಾತಿ ಹೊಂದಿದ್ದ ಶ್ಯಾಮ್ ಅವರನ್ನು ಜನರು ಹೋಲ್ಡ್ ನಲ್ಲಿಟ್ಟಿದ್ದರು. ಬಿಗ್ ಬಾಸ್ ಅವರನ್ನು ಉಳಿದ ಹೋಲ್ಡ್ ಸ್ಪರ್ಧಿಗಳ ಜೊತೆಗೆ ಮನೆಯೊಳಗೆ ಕಳಿಸಿದ್ದರು. ‘ಒಂದು ವಾರ ನಿಮ್ಮ ಪರ್ಫಾರ್ಮೆನ್ಸ್ ನೋಡಿ ಮುಂದಿನ ನಿರ್ಧಾರ ತಿಳಿಸಲಾಗುತ್ತದೆ’ ಎಂದೂ ಆಸಮಯದಲ್ಲಿ ಕಿಚ್ಚ ಸುದೀಪ್ ಹೇಳಿದ್ದರು. ಹೋಗುವಾಗ ಇಂಟ್ರೆಸ್ಟಿಂಗ್ ಕಂಟೆಸ್ಟೆಂಟ್ ಆಗಿಯೇ ಕಾಣಿಸಿದ್ದ ಶ್ಯಾಮ್, ಬಿಗ್ ಬಾಸ್ ಮನೆಯೊಳಗೆ ಸದ್ದು ಮಾಡಿದ್ದು ಕಡಿಮೆ. ಇಂದಿನ ಎಪಿಸೋಡ್‌ನಲ್ಲಿಯೂ ಉಳಿದ ಸ್ಪರ್ಧಿಗಳಲ್ಲಿ ಹೆಚ್ಚಿನ ಜನರು ಶ್ಯಾಮ್ ಅವರೇ ಹೊರಗೆ ಹೋಗಬೇಕು ಎಂದು ಅಭಿಪ್ರಾಯಪಟ್ಟರು. ಇದೀಗ ಅವರು ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಿದ್ದಿದ್ದಾರೆ.

‘ನನಗೆ ಬಿಗ್​ಬಾಸ್ ಮನೆಯಲ್ಲಿ ಸಾಕಷ್ಟು ಸ್ನೇಹಿತರು ಇದ್ದರು. ಆದ್ರೆ ಇಲ್ಲಿ ನನಗೆ ಹೆಲ್ತ್ ಕೈಕೊಟ್ಟಿತು. ಹಾಗೆಯೇ ಪ್ರಾಣಿಗಳ ನೆನಪು ತುಂಬ ಕಾಡುತ್ತಿತ್ತು. ಅದೇ ಕಾರಣಕ್ಕೆ ನನಗೆ ಇಲ್ಲಿ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Exit mobile version