ಹೊಸದಿಲ್ಲಿ: ಸ್ಪೈಸ್ ಜೆಟ್ (SpiceJet) ವಿಮಾನ (Airlines) ಸಿಬ್ಬಂದಿಯ ಎಡವಟ್ಟಿನಿಂದಾಗಿ 12 ಗಂಟೆಗಳ ಕಾಲ ವಿಮಾನ ಟೇಕ್ ಆಫ್ (Delhi Bangalore Flight) ಆಗದೆ, ಬೆಂಗಳೂರಿಗೆ ಬರಬೇಕಿದ್ದ ಪ್ರಯಾಣಿಕರು ದಿಲ್ಲಿಯಲ್ಲಿಯೇ ವಿಮಾನದೊಳಗೇ ಕೊಳೆಯುವಂತಾಯಿತು. ನಿನ್ನೆ ಸಂಜೆ ಬೆಂಗಳೂರಿಗೆ ಬರಬೇಕಿದ್ದ ವಿಮಾನ, ಕಡೆಗೂ ಬೆಳಿಗ್ಗೆ ಟೇಕ್ ಆಫ್ (Take Off) ಆಗಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Devanahalli International Airport) ಬಂದಿದೆ.
ದೆಹಲಿ- ಬೆಂಗಳೂರು SG8151 ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಕರು ಈ ಘೋರ ಅನುಭವಿಸಿದ್ದಾರೆ. ಸುಮಾರು 12 ಗಂಟೆಗಳ ಕಾಲ ಫ್ಲೈಟ್‌ನಲ್ಲೇ ಪ್ರಯಾಣಿಕರು ಅನ್ನ ನೀರು ಇಲ್ಲದೇ ಕಾಲ ಕಳೆದರು. ಟರ್ಮಿನಲ್ 3ರಿಂದ ನಿನ್ನೆ ರಾತ್ರಿ 7.40ಕ್ಕೆ ವಿಮಾನ ಟೇಕಾಫ್ ಆಗಬೇಕಿತ್ತು. ಆದರೆ ವಿಮಾನ ಟೇಕಾಫ್ ಆಗದೇ ಟರ್ಮಿನಲ್‌ನಲ್ಲಿಯೇ ನಿಲ್ಲಿಸಿಕೊಳ್ಳಲಾಗಿತ್ತು. ತಾಂತ್ರಿಕ ದೋಷದಿಂದ ವಿಮಾನ ನಿಂತಿರುವುದಾಗಿ ಮಾಹಿತಿ ಲಭ್ಯವಾಗಿತ್ತು.
ಸತತ 12 ಗಂಟೆಗಳ ಬಳಿಕ ಟೇಕ್ ಆಫ್ ಆದ ವಿಮಾನ ಇಂದು ಬೆಳಗ್ಗೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ದೆಹಲಿಯಿಂದ ಅಂತೂ ಬೆಂಗಳೂರಿಗೆ ತಲುಪಿಕೊಂಡ ಪ್ರಯಾಣಿಕರು ಸ್ಪೈಸ್ ಜೆಟ್ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಸ್ಪೈಸ್ ಜೆಟ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಮಾನದ ಸಿಬ್ಬಂದಿ ಊಟ ತಿಂಡಿ ಕೊಡದೆ ನಮ್ಮನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಏರ್‌ಲೈನ್ಸ್ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಬಿಪಿ ಶುಗರ್ ಮಾತ್ರೆ ತೆಗೆದುಕೊಳ್ಳಲೂ ಆಗಿಲ್ಲ ಎಂದು ಕೆಲವರು ಆಕ್ರೋಶಿಸಿದ್ದಾರೆ. ವಿಮಾನಕ್ಕೆ ಏನು ಆಗಿದೆ, ಪರ್ಯಾಯ ವ್ಯವಸ್ಥೆ ಏನು, ಇತ್ಯಾದಿಗಳ ಬಗೆಗೆ ಯಾವ ಮಾಹಿತಿಯನ್ನೂ ನೀಡದೆ ನಮ್ಮನ್ನು ಕತ್ತಲಲ್ಲಿಡಲಾಗಿತ್ತು ಎಂದು ಸಂತ್ರಸ್ತ ಪ್ರಯಾಣಿಕ ತಿಳಿಸಿದ್ದು, ತಮಗೆ ಆಗಿರುವ ಮಾನಸಿಕ ಹಿಂಸೆಗಾಗಿ ಕಾನೂನು ಮೊರೆ ಹೋಗುವ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ಆಟಗಾರರನ್ನು ಕರೆ ತಂದ ಏರ್ ಇಂಡಿಯಾಗೆ ವರದಿ ಕೇಳಿದ ಡಿಜಿಸಿಎ; ಕಾರಣವೇನು?
ಮುಂಬಯಿ: ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ಟೀಮ್ ಇಂಡಿಯಾ(Team India) ಆಟಗಾರರನ್ನು ನವದೆಹಲಿಗೆ ಕರೆ ತಂದ ಏರ್ ಇಂಡಿಯಾಗೆ(Chartered flight for Team India) ಸಂಕಷ್ಟವೊಂದು ಎದುರಾಗಿದೆ. ನೆವಾರ್ಕ್‌ನಿಂದ ದೆಹಲಿ ನಡುವೆ ಹಾರಾಟ ನಡೆಸಬೇಕಿದ್ದ ಏರ್ ಇಂಡಿಯಾದ(Air India) ಸಾಮಾನ್ಯ ಪ್ಯಾಸೆಂಜರ್ ವಿಮಾನವನ್ನು ಜುಲೈ 2ರಂದು ರದ್ದುಗೊಳಿಸಿ, ಭಾರತದ ಕ್ರಿಕೆಟ್ ತಂಡವನ್ನು ಸ್ವದೇಶಕ್ಕೆ ಕರೆತರುವ ಉದ್ದೇಶದಿಂದ ಬಾರ್ಬಡೋಸ್‌ಗೆ ಡೈವರ್ಟ್ ಮಾಡಿದ ಕ್ರಮಕ್ಕೆ ಭಾರತೀಯ ವಿಮಾನಯಾನ ನಿಯಂತ್ರಕ ಸಂಸ್ಥೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(DGCA)ವು ಏರ್ ಇಂಡಿಯಾದಿಂದ ವರದಿ ಕೇಳಿದೆ.
ಟಿ20 ವಿಶ್ವಕಪ್ ಟೂರ್ನಿ ಮುಗಿದ ಮರು ದಿನವೇ ವೆಸ್ಟ್ ಇಂಡೀಸ್ನಲ್ಲಿ ಉಂಟಾದ ಬೆರಿಲ್ ಚಂಡಮಾರುತದಿಂದಾಗಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಬಾರ್ಬಡೋಸ್‌ನಲ್ಲೇ ನಾಲ್ಕು ದಿನಗಳ ಕಾಲ ಸಿಲುಕಿಕೊಂಡಿದ್ದರು. ಹವಾಮಾನವು ಸುಧಾರಿಸಿದ ನಂತರ, ವಿಶ್ವ ಚಾಂಪಿಯನ್‌ಗಳನ್ನು ಮರಳಿ ಮನೆಗೆ ಕರೆತರಲು ಬಿಸಿಸಿಐ ವಿಶೇಷ ಏರ್ ಇಂಡಿಯಾ ಚಾರ್ಟರ್ಡ್ ವಿಮಾನವನ್ನು ಬಾರ್ಬಡೋಸ್‌ಗೆ ಕಳುಹಿಸಲಾಗಿತ್ತು. ಸುಮಾರು 18 ಗಂಟೆಗಳ ಸುದೀರ್ಘ ಪ್ರಯಾಣದ ನಂತರ, ತಂಡವು ಅಂತಿಮವಾಗಿ ಇಂದು(ಗುರುವಾರ) ಬೆಳಗ್ಗೆ ಭಾರತಕ್ಕೆ ಬಂದಿಳಿದೆ. ಇದೀಗ ಪ್ಯಾಸೆಂಜರ್ ವಿಮಾನವನ್ನು ರದ್ದುಗೊಳಿಸಿದ ಕ್ರಮಕ್ಕೆ ಉತ್ತರ ನೀಡುವಂತೆ ಏರ್ ಇಂಡಿಯಾಗೆ ಡಿಜಿಸಿಎ ಆದೇಶಿಸಿದೆ.
ಇದನ್ನೂ ಓದಿ: Namma Metro : ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆಗೆ ನಮ್ಮ ಮೆಟ್ರೋ ವಿಸ್ತರಣೆ?