Site icon Vistara News

Ram Navami 2024: ವನವಾಸದ ವೇಳೆ ಶ್ರೀರಾಮ ಭೇಟಿ ನೀಡಿದ ಈ ಸ್ಥಳಗಳೀಗ ಪವಿತ್ರ

Sri Rama

ಶ್ರೀರಾಮನ ಕೋಟ್ಯಂತರ ಹಿಂದೂಗಳ ಆರಾಧ್ಯ ದೇವ. ಹಿಂದೂ ಧರ್ಮದಲ್ಲಿ ದಸರಾ, ರಾಮನವಮಿ, ದೀಪಾವಳಿಯಂತಹ ಹಬ್ಬಗಳನ್ನು ಶ್ರೀರಾಮನ (Sri Rama) ಹೆಸರಿನಿಂದಲೇ ಆಚರಿಸಲಾಗುತ್ತದೆ. ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ. ಇದರಲ್ಲಿ ಶ್ರೀರಾಮನ ಜೀವನ ಚರಿತ್ರೆಯನ್ನು ಉಲ್ಲೇಖಿಸಲಾಗಿದೆ. 14 ವರ್ಷಗಳ ವನವಾಸದ ಸಮಯದಲ್ಲಿ ಶ್ರೀರಾಮನು ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನ ಜೊತೆ ಅನೇಕ ಪ್ರದೇಶಗಳನ್ನು ಸುತ್ತಿದ್ದಾನೆ. ಈ ಬಗ್ಗೆ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಆ ಸ್ಥಳಗಳು ಈಗಲೂ ಪ್ರಖ್ಯಾತವಾಗಿವೆ. ಅಂತಹ ಪ್ರಮುಖ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅಯೋಧ್ಯೆ

ಇದು ಉತ್ತರ ಪ್ರದೇಶದ ಸರಯೂ ನದಿಯ ದಡದ ಮೇಲಿದೆ. ರಾಮಾಯಣದ ಪ್ರಕಾರ ಇದು ಶ್ರೀರಾಮನ ಜನ್ಮಸ್ಥಳವಾಗಿದೆ. ತನ್ನ ತಂದೆಯ ಆಜ್ಞೆಯಂತೆ ಶ್ರೀರಾಮನು 14 ವರ್ಷ ವನವಾಸವನ್ನು ಈ ಸ್ಥಳದಿಂದಲೇ ಪ್ರಾರಂಭಿಸಿದ ಎನ್ನಲಾಗುತ್ತದೆ.

ಪ್ರಯಾಗರಾಜ್‌

ಇದು ಉತ್ತರ ಪ್ರದೇಶದ ತ್ರಿವೇಣಿ ಸಂಗಮಕ್ಕೆ ಸಮೀಪದಲ್ಲಿರುವ ನಗರವಾಗಿದೆ. ಇದನ್ನು ಮೊದಲ ಅಲಹಾಬಾದ್ ಎಂದು ಕರೆಯಲಾಗುತ್ತಿತ್ತು. ಶ್ರೀರಾಮನು ವನವಾಸದ ಸಮಯದಲ್ಲಿ ಸೀತೆ ಮತ್ತು ಲಕ್ಷ್ಮಣನ ಜೊತೆ ಇಲ್ಲಿ ಋಷಿ ಭಾರದ್ವಾಜರ ಆಶ್ರಮದಲ್ಲಿ ಸ್ವಲ್ಪ ಸಮಯ ಕಳೆದು ನಂತರ ಗಂಗಾ ನದಿಯನ್ನು ದಾಟಿ ತಮ್ಮ ಪ್ರಯಾಣವನ್ನು ಮುಂದುವರಿಸಿದ ಎನ್ನಲಾಗುತ್ತದೆ.

ಚಿತ್ರಕೂಟ

ಮಧ್ಯಪ್ರದೇಶ ಸತ್ನಾ ಜಿಲ್ಲೆಯಲ್ಲಿರುವ ಚಿತ್ರಕೂಟ ಪವಿತ್ರ ಯಾತ್ರಾ ಸ್ಥಳವಾಗಿದೆ. ವನವಾಸದ ಸಮಯದಲ್ಲಿ ರಾಮ ತನ್ನ ಸಹೋದರ ಭರತನನ್ನು ಇಲ್ಲಿ ಭೇಟಿ ಮಾಡಿದ ಎನ್ನಲಾಗುತ್ತದೆ. ಹಾಗೇ ಈ ಸ್ಥಳದಲ್ಲಿರುವಾಗ ತನ್ನ ತಂದೆ ದಶರಥನ ಸಾವಿನ ಸುದ್ದಿಯನ್ನು ತಿಳಿದು ದುಃಖಿಸಿದನು ಎನ್ನಲಾಗುತ್ತದೆ. ಅಯೋಧ್ಯೆಗೆ ಮರಳಲು ನಿರಾಕರಿಸಿದ ರಾಮನ ಪಾದುಕೆಗಳನ್ನು ಭರತನು ಈ ಸ್ಥಳದಿಂದ ಅಯೋಧ್ಯೆಗೆ ತೆಗೆದುಕೊಂಡು ಹೋಗಿ ಸಿಂಹಾಸನದ ಮೇಲೆ ಇರಿಸಿದ ಎನ್ನಲಾಗುತ್ತದೆ.

ಪಂಚವಟಿ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಪಂಚವಟಿ ಪ್ರಾಚೀನ ನಗರವಾಗಿದೆ. ಇಲ್ಲಿ ಶ್ರೀರಾಮನು ತನ್ನ ವಾಸ ಸ್ಥಳವನ್ನು ನಿರ್ಮಿಸಿ ಸೀತೆ ಮತ್ತು ಲಕ್ಷ್ಮಣನ ಜೊತೆ ವಾಸವಾಗಿದ್ದ ಎನ್ನಲಾಗುತ್ತದೆ. ಸೀತೆ ಮಾಯಾಜಿಂಕೆಯನ್ನು ಈ ಸ್ಥಳದಲ್ಲಿ ನೋಡಿದ್ದಳು ಮತ್ತು ರಾವಣನು ಸೀತೆಯನ್ನು ಇಲ್ಲಿಂದಲೇ ಅಪಹರಿಸಿದ ಎಂಬ ಉಲ್ಲೇಖವಿದೆ. ಇಲ್ಲಿ ಸೀತಾ ಗುಹೆ, ಕಪಾಲೇಶ್ವರ ಮಂದಿರದಂತಹ ಅನೇಕ ಪುರಾತನ ದೇವಾಲಯಗಳಿವೆ.

ದಂಡಕಾರಣ್ಯ

ಇದು ರಾವಣನ ಸಹೋದರಿ ಶೂರ್ಪನಕಾ ರಾಮನನ್ನು ಭೇಟಿಯಾದ ಸ್ಥಳ. ಈ ಸ್ಥಳದಲ್ಲಿ ರಾಮನನ್ನು ಕಂಡು ಶೂರ್ಪನಕಾ ಮನಸೋತು ವಿವಾಹದ ಬೇಡಿಕೆ ಇಟ್ಟಳು ಎನ್ನಲಾಗುತ್ತದೆ. ಈ ಸ್ಥಳ ಈಗ ಛತ್ತೀಸ್‌ಗಢ, ಒರಿಸ್ಸಾ ಮತ್ತು ಆಂಧ್ರಪ್ರದೇಶದಲ್ಲಿ ಬರುತ್ತದೆ. ಇಲ್ಲಿಗೆ ಪ್ರವಾಸಿಗರು ದೂಧಸಾಗರ ಜಲಪಾತ ಮತ್ತು ಸುಲಾ ದ್ರಾಕ್ಷಿತೋಟ ನೋಡಲು ಬರುತ್ತಾರೆ.

ಕಿಷ್ಕಿಂದಾ

ರಾಮಾಯಣದ ಪ್ರಕಾರ ಇದು ವಾನರ ರಾಜ್ಯ. ಇಲ್ಲಿ ವಾನರ ರಾಜ ವಾಲಿ ಮತ್ತು ಅವನ ಸಹೋದರ ಸುಗ್ರೀವ ಉತ್ತರಾಧಿಕಾರಿಯಾಗಿದ್ದರು. ಕಿಷ್ಕಿಂದಾ ಕರ್ನಾಟಕದ ಹಂಪಿ ಬಳಿ ತುಂಗಾಭದ್ರಾ ನದಿಯ ಸುತ್ತಮುತ್ತಲಿನ ಸ್ಥಳವಾಗಿದೆ. ಇಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ.

ಇದನ್ನೂ ಓದಿ: Breast Cancer: ಮಹಿಳೆಯರೇ ಹುಷಾರ್‌; 2040ರ ವೇಳೆಗೆ ಸ್ತನ ಕ್ಯಾನ್ಸರ್‌ಗೆ 10 ಲಕ್ಷ ಜನ ಬಲಿಯಾಗಲಿದ್ದಾರಂತೆ!

ರಾಮೇಶ್ವರಂ

ಇದು ತಮಿಳುನಾಡಿನಲ್ಲಿರುವ ದ್ವೀಪ ನಗರವಾಗಿದೆ. ಇಲ್ಲಿ ರಾಮ ತನ್ನ ಪತ್ನಿ ಸೀತೆಯನ್ನು ರಾವಣನಿಂದ ರಕ್ಷಿಸಲು ವಾನರ ಸೇನೆಯ ಸಹಾಯದಿಂದ ಶ್ರೀಲಂಕಾಗೆ ಹೋಗಲು ರಾಮಸೇತುವೆಯನ್ನು ನಿರ್ಮಿಸಿದ ಎನ್ನಲಾಗುತ್ತದೆ. ಈಗಲೂ ಇಲ್ಲಿ ರಾಮಸೇತುವಿನ ಕುರುಹುಗಳಿವೆ. ರಾಮೇಶ್ವರಂಗೆ ಉತ್ತರ ಭಾರತದಿಂದಲೂ ಸಾವಿರಾರು ಯಾತ್ರಿಕರು ಭೇಟಿ ನೀಡುತ್ತಾರೆ.

Exit mobile version