ಬೆಂಗಳೂರು: 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-2ರ (SSLC 2024 Exam 2) ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಬಿಡುಗಡೆ ಮಾಡಿದ್ದು, ಜೂನ್ 14 ರಿಂದ 22ರವರೆಗೆ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಧ್ಯಕ್ಷೆ ಎನ್.ಮಂಜುಶ್ರೀ ಸುತ್ತೋಲೆ ಹೊರಡಿಸಿದ್ದಾರೆ.
2024ರ ಎಸ್ಎಸ್ಎಲ್‌ಸಿ ಪರೀಕ್ಷೆ-2 ಅನ್ನು ಈ ಹಿಂದೆ ಜೂನ್ 7ರಿಂದ 14ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಸರ್ಕಾರದ ಸೂಚನೆ ಅನ್ವಯ ಪರೀಕ್ಷೆ-2ನ್ನು ಮುಂದೂಡಿ, ಜೂನ್ 14ರಿಂದ 22 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.
ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಎಸ್ಎಸ್ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣ www.kseab.karnataka.gov.in ದಿಂದ ಪಡೆದುಕೊಂಡು ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾ ಉಪನಿರ್ದೇಶಕರು(ಆಡಳಿತ) ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ
- 14-06-2024 ಶುಕ್ರವಾರ: ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್(ಎನ್ಸಿಇಆರ್ಟಿ), ಸಂಸ್ಕೃತ.
- 15-06-2024 ಶನಿವಾರ: ತೃತೀಯ ಭಾಷೆ – ಹಿಂದಿ (ಎನ್ಸಿಇಆರ್ಟಿ), ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
- 18-06-2024 ಮಂಗಳವಾರ: ಕೋರ್ ಸಬ್ಜೆಕ್ಟ್ -ಗಣಿತ, ಸಮಾಜ ಶಾಸ್ತ್ರ
- 19-06-2024 ಬುಧವಾರ: ಅರ್ಥ ಶಾಸ್ತ್ರ
- 20-06-2024 ಗುರುವಾರ: ಕೋರ್ ಸಬ್ಜೆಕ್ಟ್- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ.
- 21-06-2024 ಶುಕ್ರವಾರ– ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ
- 22-06-2024 ಶನಿವಾರ – ಕೋರ್ ಸಬ್ಜೆಕ್ಟ್- ಸಮಾಜ ವಿಜ್ಞಾನ
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಗ್ರೇಸ್ ಮಾರ್ಕ್ಸ್ ಅಲ್ಲ, ಗುಣಮಟ್ಟದ ಶಿಕ್ಷಣವೇ ಫಲಿತಾಂಶಕ್ಕೆ ದಾರಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫೇಲ್ ಆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿಕೆ
ಬೆಂಗಳೂರು: 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ – 1ರಲ್ಲಿ (SSLC 2024 Exam 2) ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿ ರಾಜ್ಯ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾದ ಸೂಚನೆಗಳ ಅನ್ವಯ ಮುಂದೂಡಲಾಗಿದ್ದು, ಮೇ 29ರಿಂದ ಜೂ.6ರವರೆಗೆ ವಿಶೇಷ ಪರಿಹಾರ ಬೋಧನೆ ತರಗತಿಗಳು ನಡೆಯಲಿವೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದ ಮೇರೆಗೆ ನಿರ್ದೇಶಕರು (ಪ್ರೌಢ ಶಿಕ್ಷಣ) ಆದೇಶ ಹೊರಡಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಹಿಂದೆ ಮೇ 15ರಿಂದ ಜೂನ್ 5ರವರೆಗೆ ವಿಶೇಷ ಪರಿಹಾರ ಬೋಧನೆ ತರಗತಿ ನಡೆಸಲು ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಈಗ ಸರ್ಕಾರದ ಸೂಚನೆ ಮೇರೆಗೆ ವಿಶೇಷ ತರಗತಿಗಳನ್ನು ಮೇ 29ರಿಂದ ಜೂನ್ 13ವರೆಗೆ ನಡೆಸಲು ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.