ವಿಸ್ತಾರ ಸಂಪಾದಕೀಯ: ಗ್ರೇಸ್‌ ಮಾರ್ಕ್ಸ್‌ ಅಲ್ಲ, ಗುಣಮಟ್ಟದ ಶಿಕ್ಷಣವೇ ಫಲಿತಾಂಶಕ್ಕೆ ದಾರಿ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಗ್ರೇಸ್‌ ಮಾರ್ಕ್ಸ್‌ ಅಲ್ಲ, ಗುಣಮಟ್ಟದ ಶಿಕ್ಷಣವೇ ಫಲಿತಾಂಶಕ್ಕೆ ದಾರಿ

ಕೃಪಾಂಕಗಳನ್ನು ನೀಡಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂದು ಇಲಾಖೆ ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಕೃಪಾಂಕ ಪಡೆದು ಪಿಯುಸಿಗೋ ಇತರ ಕೋರ್ಸ್‌ಗಳಿಗೋ ಹೋದ ವಿದ್ಯಾರ್ಥಿ ಅಲ್ಲಿ ಕಂಗಾಲಾಗುತ್ತಾನೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೇ ತೊಂದರೆ. ಇಲ್ಲಿ ಕೃಪಾಂಕ ಪಡೆದವರು ಅಲ್ಲೂ ಅದನ್ನೇ ನಿರೀಕ್ಷಿಸಿದರೆ ಆಶ್ಚರ್ಯವಿಲ್ಲ. ಆದರೆ ಅಲ್ಲಿ ಹಾಗೆ ನಡೆಯುವುದಿಲ್ಲ. ಜೀವನದಲ್ಲಿಯೂ ಯಾರೂ ಗ್ರೇಸ್‌ ಮಾರ್ಕ್ಸ್‌ ಕೊಡುವುದಿಲ್ಲ. ಪ್ರತಿಭೆಯಿಂದಲೇ ಮೇಲೆ ಬರಬೇಕಾಗುತ್ತದೆ.

VISTARANEWS.COM


on

Siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 20 ಗ್ರೇಸ್‌ ಮಾರ್ಕ್ಸ್‌ (SSLC Grace Marks) ಕೊಟ್ಟಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರನ್ನು ಕೇಳಿ ಹೆಚ್ಚುವರಿ ಅಂಕವನ್ನು ಕೊಟ್ಟಿರಿ? ಹೀಗೆ ಅಂಕ ಕೊಡುವ ಅಗತ್ಯತೆ ಏನಿತ್ತು? ಶಿಕ್ಷಣ ಗುಣಮಟ್ಟ ಕುಸಿದಿದ್ದು ಏಕೆ? ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಣದ ಗುಣಮಟ್ಟ ಕುಸಿದಿದ್ದೇಕೆ? ಗ್ರೇಸ್ ಮಾರ್ಕ್ಸ್ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ತಜ್ಞರು ಸೇರಿ ಹಲವರಿಂದ ವಿರೋಧಗಳು ಕೇಳಿ ಬರುತ್ತಿವೆ. ಗ್ರೇಸ್ ಮಾರ್ಕ್ಸ್ ಕೊಡುವುದು ಅವೈಜ್ಞಾನಿಕ ಎಂಬ ಬಗ್ಗೆ ಅಭಿಪ್ರಾಯಗಳು ಬರುತ್ತಿವೆ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್‌ ಮಾರ್ಕ್ಸ್ ಕೊಡುವ ಬಗ್ಗೆ ಮರುಪರಿಶೀಲನೆ ಮಾಡಿ ಎಂದು ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಿಕ್ಷಣ ಸಚಿವರು ಹೇಳುವ ಪ್ರಕಾರ, ಎಸ್‌ಎಸ್‌ಎಲ್‌ಸಿಯಲ್ಲಿ ಈ ಹಿಂದೆಯೂ ಶೇಕಡಾ 5ರಷ್ಟು ಕೃಪಾಂಕಗಳು ಇತ್ತು. ಕೋವಿಡ್ ವೇಳೆ ಅದನ್ನು ಶೇಕಡಾ 10ಕ್ಕೆ ಏರಿಕೆ ಮಾಡಲಾಗಿತ್ತು. ಈ ಬಾರಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಳಕ್ಕಾಗಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್‌ ಕೊಡಲಾಗಿದೆ. ಮುಂದಿನ ವರ್ಷದಿಂದ ಇದು ಮುಂದುವರಿಯುವುದಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಕೃಪಾಂಕಗಳನ್ನು ಯಾಕೆ ಕೊಡಬೇಕಾಯಿತು ಎಂದು ನೋಡೋಣ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. 2022-23ರಲ್ಲಿ 83.89% ಇತ್ತು. ಈ ಬಾರಿ ಗಾಬರಿಗೊಳಿಸುವ ಪ್ರಮಾಣದಲ್ಲಿ, ಅಂದರೆ ಶೇ.30ರಷ್ಟು ಫಲಿತಾಂಶ ಕುಸಿದಿದೆ. ಅಂದರೆ ನಿಜವಾಗಿ ಬಂದಿರುವುದು ಶೇ. 53 ಫಲಿತಾಂಶ ಮಾತ್ರ. ಇದರಿಂದ ಗಾಬರಿಯಾದ ಶಿಕ್ಷಣ ಇಲಾಖೆ, ಮುಖಂಭಂಗ ತಪ್ಪಿಸಿಕೊಳ್ಳುವುದಕ್ಕಾಗಿ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಟ್ಟಿದೆ. ಈ ವರೆಗೆ ಇದ್ದ ಪಾಸಿಂಗ್‌ ಮಾರ್ಕ್ಸ್‌ ಶೇಕಡಾ 35 ಅನ್ನು ಶೇಕಡಾ 25ಕ್ಕೆ ಇಳಿಸಿದೆ. ಅಂದರೆ 35 ಅಂಕಗಳ ಬದಲಿಗೆ 25 ಅಂಕವನ್ನು ಪಡೆದ ವಿದ್ಯಾರ್ಥಿಯೂ ಪಾಸ್‌ ಎಂದು ಮಾಡಲಾಗಿದೆ. ಅಲ್ಲದೆ, ಕೃಪಾಂಕದ ಪ್ರಮಾಣವನ್ನು ಶೇ. 10ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಈ ಎರಡೂ ಕ್ರಮದಿಂದಾಗಿ ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಇಲ್ಲವಾದರೆ ಇಷ್ಟು ಮಕ್ಕಳು ನಪಾಸಾಗುತ್ತಿದ್ದರು. ಇಷ್ಟು ಕೃಪಾಂಕ ನೀಡಿದರೂ ದೊರೆತ ಫಲಿತಾಂಶ ಮಾತ್ರ 73.40% ಅಷ್ಟೇ. ಅಂದರೆ ಕಳೆದ ಸಲಕ್ಕಿಂತ ಶೇಕಡಾ 10.49ರಷ್ಟು ಕಡಿಮೆ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದರೂ ಕಡಿಮೆ ಫಲಿತಾಂಶ ದಾಖಲಾಗಿದೆ.

ಇದೇಕೆ ಹೀಗಾಯಿತು? ಇದು ವೆಬ್‌ ಕಾಸ್ಟಿಂಗ್‌ನಿಂದ ಎಂದು ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿದೆ. ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿದೆ. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಹೀಗಾಗಿ ಮೇಲ್ವಿಚಾರಣೆ ಬಿಗಿಯಾಗಿದೆ. ಅಂದರೆ ನಕಲು ಮಾಡಲು ಸಾಧ್ಯವಾಗಲಿಲ್ಲ ಎಂದು ನೇರವಾಗಿ ಹೇಳಬಹುದು. ಅಂದರೆ ಪರೋಕ್ಷವಾಗಿ, ನಕಲು ಮಾಡುವುದಕ್ಕೆ ಅವಕಾಶ ಇದ್ದುದರಿಂದಲೇ ಮೊದಲು ಇಷ್ಟೊಂದು ಫಲಿತಾಂಶ ಬರುತ್ತಿತ್ತು ಎಂದು ಒಪ್ಪಿಕೊಂಡಂತಾಯಿತಲ್ಲವೆ? ಈ ಸಲದ ಫಲಿತಾಂಶ ಕಡಿಮೆ ಎನ್ನುವುದಕ್ಕಿಂತಲೂ, ನಕಲು ಮಾಡಿಯೇ ನಾವು ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದೆವು ಎನ್ನುವ ಕಟುವಾಸ್ತವ ನಮ್ಮನ್ನು ಹೆಚ್ಚು ಕುಟುಕಬೇಕು.

ಸರಿ, ಈಗ ಪರೀಕ್ಷಾ ಪದ್ಧತಿ ಬಿಗಿಯಾದಂತಾಯಿತು. ಆದರೆ ಕೃಪಾಂಕಗಳನ್ನು ನೀಡಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂದು ಇಲಾಖೆ ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಕೃಪಾಂಕ ಪಡೆದು ಪಿಯುಸಿಗೋ ಇತರ ಕೋರ್ಸ್‌ಗಳಿಗೋ ಹೋದ ವಿದ್ಯಾರ್ಥಿ ಅಲ್ಲಿ ಕಂಗಾಲಾಗುತ್ತಾನೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೇ ತೊಂದರೆ. ಇಲ್ಲಿ ಕೃಪಾಂಕ ಪಡೆದವರು ಅಲ್ಲೂ ಅದನ್ನೇ ನಿರೀಕ್ಷಿಸಿದರೆ ಆಶ್ಚರ್ಯವಿಲ್ಲ. ಆದರೆ ಅಲ್ಲಿ ಹಾಗೆ ನಡೆಯುವುದಿಲ್ಲ. ಜೀವನದಲ್ಲಿಯೂ ಯಾರೂ ಗ್ರೇಸ್‌ ಮಾರ್ಕ್ಸ್‌ ಕೊಡುವುದಿಲ್ಲ. ಪ್ರತಿಭೆಯಿಂದಲೇ ಮೇಲೆ ಬರಬೇಕಾಗುತ್ತದೆ. ಕೃಪಾಂಕಗಳ ಬದಲು ಸರ್ಕಾರ ಗುಣಮಟ್ಟದ ಬೋಧನೆ, ಅರ್ಹ ಶಿಕ್ಷಕರ ನೇಮಕ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಇಂಗ್ಲಿಷ್‌ ಕಲಿಕೆ, ಸ್ಪರ್ಧಾತ್ಮಕ ಶಿಕ್ಷಣದ ಪರಿಚಯ, ಗಟ್ಟಿಮುಟ್ಟಾದ ಶಾಲೆ ಕಟ್ಟಡ ತರಗತಿಗಳು, ಪ್ರಯೋಗಾಲಯ ಹಾಗೂ ಲ್ಯಾಬ್‌ಗಳು, ಅನ್ಯ ಕೆಲಸಗಳಿಂದ ಶಿಕ್ಷಕರಿಗೆ ಮುಕ್ತಿ- ಇವುಗಳನ್ನೆಲ್ಲ ಕಲ್ಪಿಸಬೇಕು. ಆಗ ಉತ್ತಮ ಫಲಿತಾಂಶ ಕೊಡಿ ಎಂದು ಕಟ್ಟುನಿಟ್ಟು ಮಾಡುವುದರಲ್ಲಿ ಅರ್ಥವಿದೆ. ಶಿಕ್ಷಕರಿಂದ ಎಲ್ಲ ಸಾಧ್ಯತೆಗಳನ್ನೂ ಕಿತ್ತುಕೊಂಡು ಒಳ್ಳೆಯ ಫಲಿತಾಂಶ ನೀಡಿ ಎಂದರೆ ಹೇಗೆ ಸಾಧ್ಯ?

ಇದನ್ನೂ ಓದಿ: SSLC Grace Marks: ಯಾರನ್ನು ಕೇಳಿ ಶೇ. 20 ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರಿ? ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಬೆಲೆ ಏರಿಕೆ ಮಾಡುವುದೇ ರಾಜ್ಯ ಸರ್ಕಾರದ 6ನೇ ‘ಗ್ಯಾರಂಟಿ’ ಆಗದಿರಲಿ!

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬೆಲೆಯೇರಿಕೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದ, ಬೆಲೆಯೇರಿಕೆ ವಿರುದ್ಧ ಆಕ್ರೋಶ, ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್‌ ಈಗ ರಾಜ್ಯ ಸರ್ಕಾರದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದೆ. ಮೊದಲೇ, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಬಳಲುತ್ತಿರುವ ರಾಜ್ಯದ ಜನರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವು ಗಾಯದ ಮೇಲೆ ಬರೆ ಎಳೆದಂತಾಗಿದೆ.

VISTARANEWS.COM


on

Siddaramaiah
Koo

ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಟಿಕೆಟ್‌, ಮನೆಗಳಲ್ಲಿ 200 ಯೂನಿಟ್‌ಗಳವರೆಗೆ ವಿದ್ಯುತ್‌ ಫ್ರೀ, ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ಸೇರಿ ಐದು ಉಚಿತ ಗ್ಯಾರಂಟಿಗಳನ್ನು ಘೋಷಿಸಿದ ಸಿದ್ದರಾಮಯ್ಯ (Siddaramaiah) ನೇತೃತ್ವದ ರಾಜ್ಯ ಸರ್ಕಾರವು (Karnataka Government), ಅವುಗಳನ್ನು ಯಶಸ್ವಿಯಾಗಿಯೂ ಜಾರಿಗೆ ತಂದಿದೆ. ಯಶಸ್ವಿ ಜಾರಿಯಿಂದ ದೇಶಾದ್ಯಂತ ಖ್ಯಾತಿಯನ್ನೂ ಗಳಿಸಿದೆ. ಆದರೆ, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ನೇರವಾಗಿ ಜನರ ಜೇಬಿಗೆ ಕೈ ಹಾಕಿದೆ. ಒಂದು ಲೀಟರ್‌ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಏರಿಕೆ (Petrol, Diesel Price Hike) ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಈಗ ತೀವ್ರ ಚರ್ಚೆ, ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ.

ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ, ಅವುಗಳನ್ನು ಸಮರ್ಪಕವಾಗಿ ಜಾರಿಗೂ ತಂದ, ಬಡವರಿಗೆ ಅನುಕೂಲ ಮಾಡಿಕೊಟ್ಟ ಸಿದ್ದರಾಮಯ್ಯ ಅವರ ಸರ್ಕಾರವು ಮೊದಲಿಗೆ ಮದ್ಯದ ಬೆಲೆಯನ್ನು ಏರಿಕೆ ಮಾಡಿತು. ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕಿ ಸಂಪನ್ಮೂಲವನ್ನು ಕ್ರೋಡೀಕರಣ ಮಾಡಿತು. ಒಂದೇ ವರ್ಷದಲ್ಲಿ ಎರಡೆರಡು ಬಾರಿ ಮದ್ಯದ ಬೆಲೆಯೇರಿಕೆ ಮಾಡಿತು. ಅಷ್ಟೇ ಅಲ್ಲ, ರಾಜ್ಯ ಸರ್ಕಾರವು ಈಗಾಗಲೇ ಮುದ್ರಾಂಕ ಶುಲ್ಕಗಳನ್ನು ಏರಿಸಿದೆ. ದತ್ತು ಸ್ವೀಕಾರ ಪ್ರಮಾಣಪತ್ರ, ಅಫಿಡವಿಟ್‌, ಆಸ್ತಿ ಪರಭಾರೆ, ಪವರ್‌ ಆಫ್‌ ಅಟಾರ್ನಿ ಸೇರಿ ಯಾವುದೇ ದಾಖಲೆಯನ್ನು ಪಡೆಯಲು ನಿಗದಿಪಡಿಸಿದ್ದ ಶುಲ್ಕವನ್ನು ಎರಡು ಅಥವಾ ಅದಕ್ಕಿಂತ ಹೆಚ್ಚು ಪಟ್ಟು ಹೆಚ್ಚಿಸಲಾಗಿದೆ. ಇದು ಕೂಡ ಸಂಪನ್ಮೂಲ ಕ್ರೋಡೀಕರಣದ ಭಾಗವೇ ಆಗಿದೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಅದರ ಬೆಲೆ ಹೆಚ್ಚಿಸಿದರೂ ತೊಂದರೆ ಇಲ್ಲ ಎಂದು ಜನ ಸುಮ್ಮನಾದರು. ಮುದ್ರಾಂಕ ಶುಲ್ಕವು ದಿನನಿತ್ಯದ ಖರ್ಚು-ವೆಚ್ಚ ಅಲ್ಲದ ಕಾರಣ, ಅದರ ಬೆಲೆಯೇರಿಕೆಯನ್ನೂ ಜನ ಮನ್ನಿಸಿದರು. ಆದರೆ, ಈಗ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿರುವುದು ಅಕ್ಷಮ್ಯವಾಗಿದೆ.

ಪೆಟ್ರೋಲ್‌ ಬೆಲೆಯನ್ನು ಒಂದು ಲೀಟರ್‌ಗೆ 3 ರೂ. ಹಾಗೂ ಡೀಸೆಲ್‌ ಬೆಲೆಯನ್ನು ಲೀಟರ್‌ಗೆ 3.5 ರೂ. ಏರಿಕೆ ಮಾಡಿರುವುದು ಜನರ ಮೇಲೆ ನೇರವಾಗಿ, ನಿತ್ಯವೂ ಪರಿಣಾಮ ಬೀರುತ್ತದೆ. ಈಗಾಗಲೇ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇ ಜಾಸ್ತಿಯೇ ಇದ್ದ ಕಾರಣ ಮತ್ತೆ ಏರಿಕೆ ಮಾಡಿರುವುದು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇರಿಕೆಯಿಂದ ಸಾಗಣೆ ವೆಚ್ಚ ಜಾಸ್ತಿಯಾಗುತ್ತದೆ. ಇದು ಅಗತ್ಯವಸ್ತುಗಳ ಬೆಲೆಯೇರಿಕೆಗೂ ಕಾರಣವಾಗುತ್ತದೆ. ಸಕಲ ರೀತಿಯಲ್ಲೂ ಜನರ ಜೇಬಿಗೆ ಭಾರವಾಗುತ್ತದೆ. ಪ್ರತಿದಿನವೂ ಬಡವರ ಹಣಕ್ಕೆ ಕತ್ತರಿ ಬೀಳುತ್ತದೆ. ಅಲ್ಲಿಗೆ ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಿಂದ ಪಡೆದುಕೊಂಡಂತೆ ಆಗುತ್ತದೆ. ಆಗ ಗ್ಯಾರಂಟಿಗಳ ಆಶಯವೇ ಮಣ್ಣುಪಾಲಾದಂತಾಗುತ್ತದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದಾಗ, ಅಡುಗೆ ಅನಿಲ ಸಿಲಿಂಡರ್‌ ಬೆಲೆಯೂ ಜಾಸ್ತಿ ಮಾಡಿದಾಗ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಬೆಲೆಯೇರಿಕೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿದೆ. ಚುನಾವಣೆ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ‘ಬೆಲೆಯೇರಿಕೆ’ ಅಸ್ತ್ರವನ್ನೇ ಬಳಸಿದೆ. ಹೀಗಿರುವಾಗ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರವೇ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದರೆ ಹೇಗೆ? “ಗ್ಯಾರಂಟಿ ಯೋಜನೆಗಳಿಗೆ ಹಣ ಬೇಕಲ್ಲ, ಅದಕ್ಕಾಗಿ ಬೆಲೆಯೇರಿಕೆ ಮಾಡಿದ್ದೇವೆ” ಎಂದು ಸಚಿವ ಎಂ.ಬಿ.ಪಾಟೀಲ್‌ ಅವರು ಹೇಳಿರುವುದು ಯಾವ ರೀತಿಯಲ್ಲಿ ಸಮಂಜಸ? ಸಿದ್ದರಾಮಯ್ಯನವರೇ, ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ. ಇದರಿಂದ ನಿಮ್ಮ ಸರ್ಕಾರಕ್ಕೆ ಹೆಸರೂ ಬಂದಿದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ, ಕರ್ನಾಟಕದಲ್ಲಿ ನೀವು ನಿರೀಕ್ಷಿಸಿದಷ್ಟು ಸೀಟುಗಳು ಕಾಂಗ್ರೆಸ್‌ಗೆ ಬರದಿರುವ ಹೊತ್ತಿನಲ್ಲಿ ರಾಜ್ಯದ ಜನರ ಮೇಲೆ ಬೆಲೆಯೇರಿಕೆ ಅಸ್ತ್ರವನ್ನು ಬಳಸುತ್ತಿರುವುದು, ‘ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ’ ಎಂಬಂತಹ ವರ್ತನೆಯೇ? ಖಂಡಿತವಾಗಿಯೂ ಇದು ಜನ ವಿರೋಧಿ ಕ್ರಮ.

ಇದನ್ನೂ ಓದಿ: Pralhad Joshi: ತೈಲ ಬೆಲೆ ಏರಿಸಿ ಕರ್ನಾಟಕದವರ ಕೈಗೆ ಗ್ಯಾರಂಟಿ ಚೊಂಬು ಕೊಟ್ಟ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: 3ನೇ ಬಾರಿಯ ‘ವಿಸ್ತೃತ’ ಸರ್ಕಾರವು ‘ವಿಕಸಿತ ಭಾರತ’ಕ್ಕೆ ಶ್ರಮಿಸಲಿ

ಲೋಕಸಭೆ ಚುನಾವಣೆ ಫಲಿತಾಂಶವು ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ಬಿಜೆಪಿಗೆ ಇದ್ದ ಬಹುಮತ ಈಗ ಇಲ್ಲದ ಕಾರಣ ಮೈತ್ರಿಪಕ್ಷಗಳ ಮರ್ಜಿಗೆ ಕಾಯಬೇಕಿದೆ. ಅತ್ತ, ಕಾಂಗ್ರೆಸ್‌ ಮುಂದಾಳತ್ವದ ಇಂಡಿಯಾ ಒಕ್ಕೂಟವೂ ಬಲಿಷ್ಠವಾಗಿದೆ. ಹಾಗಾಗಿ, 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ನರೇಂದ್ರ ಮೋದಿ ಅವರು ಮೈತ್ರಿಪಕ್ಷಗಳ ಜತೆ ಸಮನ್ವಯ ಸಾಧಿಸುವ ಜತೆಗೆ ಪ್ರತಿಪಕ್ಷಗಳನ್ನೂ ಎದುರಿಸಬೇಕಿದೆ. ಇದರ ಮಧ್ಯೆ, ವಿಕಸಿತ ಭಾರತದ ಕನಸು ಸಾಕಾರಗೊಳ್ಳಲು ಕೂಡ ನೂತನ ಸರ್ಕಾರ ಹೆಚ್ಚು ಶ್ರಮ ವಹಿಸಬೇಕಿದೆ.

VISTARANEWS.COM


on

pm narendra Modi Cabinet
Koo

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಬಹುಮತ ಸಾಧಿಸಿದ್ದು, ನರೇಂದ್ರ ಮೋದಿ (Narendra Modi) ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರ ಜತೆಗೆ ಅನುಭವಿಗಳು, ಮೈತ್ರಿ ಪಕ್ಷಗಳ ಸಂಸದರು, ಯುವ ಸಂಸದರು ಸೇರಿ ಹಲವು ಮಾನದಂಡಗಳನ್ನು ಆಧರಿಸಿ ಆಯ್ಕೆ ಮಾಡಿದ 72 ಸಂಸದರು ಸಚಿವರಾಗಿ (Modi 3.0 Cabinet) ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಸುಮಾರು 80 ದಿನಗಳಿಗೂ ಅಧಿಕ ಅವಧಿವರೆಗೆ 7 ಹಂತಗಳಲ್ಲಿ ಮತದಾನ ನಡೆದು, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ, ಈಗ ನರೇಂದ್ರ ಮೋದಿ ಅವರ ನೇತೃತ್ವದಲ್ಲಿಯೇ ಸತತ ಮೂರನೇ ಬಾರಿಗೆ ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ಹಾಗಾಗಿ, ಚುನಾವಣೆ ಸಮಯದ ರಾಜಕೀಯ ಮೇಲಾಟ, ಆರೋಪ, ಪ್ರತ್ಯಾರೋಪ, ಟೀಕೆ, ವ್ಯಂಗ್ಯ, ತಿರುಗೇಟುಗಳನ್ನು ಬಿಟ್ಟು, ಆಡಳಿತ ಪಕ್ಷದವರು ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ನಿರ್ಮಾಣದ ಕನಸನ್ನು ನನಸಾಗಿಸಲು ಶ್ರಮಿಸಬೇಕಿದೆ. ಚುನಾವಣೆ ನೀತಿ ಸಂಹಿತೆ, ಫಲಿತಾಂಶದ ಹಿನ್ನೆಲೆಯಲ್ಲಿ ನಿಂತ ನೀರಾಗಿದ್ದ ಆಡಳಿತ ಯಂತ್ರಕ್ಕೆ ಈಗ ವೇಗ ನೀಡಬೇಕಿದೆ.

ಹಾಗೆ ನೋಡಿದರೆ, ವಿಕಸಿತ ಭಾರತದ ಕಲ್ಪನೆ ಸಾಕಾರಗೊಳಿಸಲು ದೇಶದಲ್ಲಿ ಸಕಾರಾತ್ಮಕ ವಾತಾವರಣವೇ ಇದೆ. ದೇಶದ ಜಿಡಿಪಿ ಬೆಳವಣಿಗೆಯ ಕುರಿತು ಅಂದಾಜಿಸಲಾಗಿದೆ. ಹಣದುಬ್ಬರವೂ ನಿಯಂತ್ರಣಕ್ಕೆ ಬರುತ್ತಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮೂಲ ಸೌಕರ್ಯ ಯೋಜನೆಗಳಿಗೆ ಒತ್ತು ನೀಡಿರುವುದು, ರೈಲು, ರೈಲು ನಿಲ್ದಾಣಗಳ ಆಧುನೀಕರಣ, ದಾಖಲೆ ವೇಗದಲ್ಲಿ ರಸ್ತೆ ನಿರ್ಮಾಣ, ಅತ್ಯಾಧುನಿಕ ವಿಮಾನ ನಿಲ್ದಾಣಗಳು ತಲೆ ಎತ್ತಿರುವುದು, ಇಸ್ರೋ ಬಾಹ್ಯಾಕಾಶ ಯೋಜನೆಗಳಿಗೆ ಉತ್ತೇಜನ ನೀಡಿರುವುದು ಸೇರಿ ಹಲವು ಕಾರ್ಯಕ್ರಮಗಳು ದೇಶದ ಅಭಿವೃದ್ದಿ ಮಾನದಂಡವನ್ನು ದುಪ್ಪಟ್ಟುಗೊಳಿಸಿವೆ. ಇದರಿಂದಾಗಿ ಸರ್ಕಾರದ ಸಚಿವರು, ಸಂಸದರು ವಿಕಸಿತ ಭಾರತದ ಕಲ್ಪನೆಯ ಸಾಕಾರಗೊಳಿಸಲು ಹೆಚ್ಚಿನ ಶ್ರಮ ವಹಿಸಬೇಕು. ಹೊಸ ಹೊಸ ಯೋಜನೆಗಳು, ಯೋಜನೆಗಳ ಸಮರ್ಪಕ ಜಾರಿ ಮೂಲಕ ದೇಶದ ಏಳಿಗೆಗೆ ಇನ್ನಷ್ಟು ಕೊಡುಗೆ ನೀಡಬೇಕು.

ಕೇಂದ್ರದಲ್ಲಿ 10 ವರ್ಷಗಳಿಂದ ಇದ್ದ ಬಹುಮತದ ಸರ್ಕಾರ ಈಗಿಲ್ಲ. ಬಿಜೆಪಿಯು 240 ಸೀಟುಗಳಿಗೆ ಸೀಮಿತವಾಗಿದ್ದು, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಾಗಾಗಿ, ಮೋದಿ ಸರ್ಕಾರವು ಸುಸ್ಥಿರ ಆಡಳಿತ ನೀಡಬೇಕು ಎಂದರೆ ಮೈತ್ರಿಕೂಟದಲ್ಲಿ ಸ್ಥಿರತೆ ಕಾಪಾಡಬೇಕು, ಸಮನ್ವಯತೆ ಸಾಧಿಸಬೇಕು. ಪ್ರಾದೇಶಿಕ ಪಕ್ಷಗಳಿಗೆ, ಪ್ರಾದೇಶಿಕ ಪಕ್ಷಗಳ ರಾಜ್ಯಗಳಿಗೆ ಹೆಚ್ಚಿನ ಮನ್ನಣೆ ನೀಡಬೇಕು. ಧರ್ಮ, ಜಾತಿಯ ವಿಷಯಗಳಿಗೆ ಪ್ರಾಮುಖ್ಯತೆ ಕೊಡದೆ, ಎಲ್ಲ ಮೈತ್ರಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರವನ್ನು ಮುನ್ನಡೆಸಬೇಕು. ಮೋದಿ ಸರ್ಕಾರವು ಉದ್ಯಮಿಗಳ ಪರವಾದ ಸರ್ಕಾರ ಎಂಬ ಕುಖ್ಯಾತಿ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿಯಾಗಿದೆ. ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್‌ ಸೇರಿ ಅಗತ್ಯ ವಸ್ತುಗಳ ಬೆಲೆಯೇರಿಕೆಯು ಬಡ ಹಾಗೂ ಮಧ್ಯಮ ವರ್ಗದವರನ್ನು ಹೈರಾಣಾಗಿಸಿದೆ. ಇಂತಹ ವಿಷಯಗಳ ಕುರಿತು ಮೋದಿ ಹಾಗೂ ಟೀಮ್‌ ಗಮನ ಹರಿಸಬೇಕು. ಬಜೆಟ್‌ನಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ನೇರವಾಗಿ ಅನುಕೂಲವಾಗುವ (ಕಿಸಾನ್‌ ಸಮ್ಮಾನ್‌, ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಸಬ್ಸಿಡಿ ಹೆಚ್ಚಳ ಇತ್ಯಾದಿ) ಯೋಜನೆಗಳನ್ನು ಘೋಷಿಸಬೇಕು.

ಕಳೆದ 10 ವರ್ಷಗಳಲ್ಲಿ ಲೋಕಸಭೆಯಲ್ಲಿ ಬಲಿಷ್ಠ ಪ್ರತಿಪಕ್ಷವೇ ಇರಲಿಲ್ಲ. ಕಾಂಗ್ರೆಸ್‌ ಸೇರಿ ಯಾವೊಂದು ಪಕ್ಷವೂ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯುವಷ್ಟು ಸಮರ್ಥವಾಗಿರಲಿಲ್ಲ. ಇದು ಕೂಡ ಮೋದಿ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಆದರೆ, ಫಲಿತಾಂಶದ ಬಳಿಕ ಚಿತ್ರಣ ಬದಲಾಗಿದೆ. ಕಾಂಗ್ರೆಸ್‌ 52 ಕ್ಷೇತ್ರಗಳಿಂದ 99 ಕ್ಷೇತ್ರಗಳಿಗೆ ತನ್ನ ಸದಸ್ಯ ಬಲವನ್ನು ಹೆಚ್ಚಿಸಿಕೊಂಡಿದೆ. ಇಂಡಿಯಾ ಒಕ್ಕೂಟವು ಒಗ್ಗಟ್ಟಾಗಿ 232 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಾಗಾಗಿ, ಸಮ್ಮಿಶ್ರ ಸರ್ಕಾರಕ್ಕೆ ಆಡಳಿತ ನಡೆಸುವುದು ಹಗ್ಗದ ಮೇಲಿನ ನಡಿಗೆಯೇ ಆಗಿದೆ. ಇನ್ನು, ಕಳೆದ 10 ವರ್ಷಗಳಿಂದ ಬಲಿಷ್ಠವಾಗಿ, ಸಮರ್ಥವಾಗಿ ಕಾರ್ಯನಿರ್ವಹಿಸದ ಪ್ರತಿಪಕ್ಷಗಳು ಇನ್ನಾದರೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಬೇಕು. ಸರ್ಕಾರ ಲಯ ತಪ್ಪಿದಾಗ ಸರಿದಾರಿಗೆ ತರಬೇಕು. ಸರ್ಕಾರಕ್ಕೆ ಆಗಾಗ ಎಚ್ಚರಿಕೆ ನೀಡುವ ಜತೆಗೆ ಚಾಟಿ ಬೀಸಬೇಕು. ಒಟ್ಟಿನಲ್ಲಿ, ಸಬಲ ಸಮ್ಮಿಶ್ರ ಸರ್ಕಾರ ಹಾಗೂ ಪ್ರಬಲ ಪ್ರತಿಪಕ್ಷಗಳು ಕೂಡಿ ದೇಶದ ಏಳಿಗೆಗೆ, ವಿಕಸಿತ ಭಾರತ ಕಲ್ಪನೆಯ ಸಾಕಾರಕ್ಕೆ ಶ್ರಮಿಸಬೇಕು ಎಂಬುದೇ ಎಲ್ಲರ ಆಶಯವಾಗಿದೆ.

ಇದನ್ನೂ ಓದಿ: Modi 3.0 Cabinet: ನಡ್ಡಾ To ಎಚ್‌ಡಿಕೆ ;‌ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಿವು

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮೋದಿ ಮೂರನೇ ಅವಧಿ, ಆಗಲಿ ಇನ್ನಷ್ಟು ವಿಕಾಸದ ಬುನಾದಿ

ಮೋದಿಯವರಿಂದ ನಾವು ಸುಸ್ಥಿರ ಸರಕಾರವನ್ನು ನಿರೀಕ್ಷಿಸಬಹುದು. ಮೋದಿಯವರಲ್ಲಿ ಈ ವಯಸ್ಸಿನಲ್ಲೂ ದೇಶವನ್ನು ಮುನ್ನಡೆಸಬಲ್ಲ ಛಲ, ಒಳನೋಟ, ಮುತ್ಸದ್ಧಿತನ, ಜಾಣ್ಮೆ ಎಲ್ಲ ಇವೆ. ಆಂತರಿಕ ಹಾಗೂ ಬಾಹ್ಯ ನಾಯಕರ ಗೆಳೆತನವೂ ಇದೆ. ಆಧುನಿಕತೆಯನ್ನು ಬರಮಾಡಿಕೊಳ್ಳುವ ನಾಯಕತ್ವವೂ ಇದೆ. ಒಬ್ಬ ನಾಯಕನಲ್ಲಿ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಬೇಕಿಲ್ಲ. ಮೋದಿ ಸರಕಾರ ಭಾನುವಾರದ ಪ್ರಮಾಣ ವಚನದ ದಿನದಿಂದಲೇ ತನ್ನ ʼವಿಕಸಿತ ಭಾರತʼದ ಗುರಿಯತ್ತ ಮುನ್ನುಗ್ಗಲಿ.

VISTARANEWS.COM


on

Narendra Modi
Koo

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿ ಆಗಲಿದ್ದಾರೆ. ಇಂದು ಬಹುಮತ ಪಡೆದಿರುವ ಎನ್‌ಡಿಎ ಮೈತ್ರಿಕೂಟದ ಸಭೆ ನಡೆದು, ಅಲ್ಲಿ ಮೋದಿಯವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಜೂನ್‌ 9ರಂದು ಕೆಲವು ಸಚಿವರೊಂದಿಗೆ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೈತ್ರಿಕೂಟದ ಎಲ್ಲ ಸದಸ್ಯರ ಬೆಂಬಲ ಇರುವುದರಿಂದ, ನೂತನ ಸರಕಾರ ರಚನೆ ಕಷ್ಟವಾಗಲಾರದು. ಹತ್ತು ವರ್ಷಗಳ ಅನುಭವವೂ ಮೋದಿಯವರ ಬೆನ್ನಿಗೆ ಇದೆ. ಆದ್ದರಿಂದ ಕೇಂದ್ರ ಸರಕಾರ ರಚನೆಯ ಬಗ್ಗೆ ಅವರಿಗೆ ಯಾರೂ ಕಿವಿಮಾತು ಹೇಳುವುದು ಬೇಕಿಲ್ಲ. ಆದರೆ ಮೈತ್ರಿಧರ್ಮದ ಪಾಲನೆ ಮಾಡಿಕೊಂಡು ಈ ಬಾರಿ ಸರಕಾರ ಮುನ್ನಡೆಸುವುದು ಬಿಜೆಪಿಗೆ ಹಗ್ಗದ ಮೇಲಿನ ನಡಿಗೆಯೇ ಆಗಲಿದೆ.

ಎನ್‌ಡಿಎ ಸಭೆಯಲ್ಲಿ ಮೋದಿಯವರು ಭವಿಷ್ಯದ ಹಲವು ಮುನ್ನೋಟದ ನುಡಿಗಳನ್ನು ಆಡಿದ್ದಾರೆ. ದೇಶದ ಜಿಡಿಪಿಯನ್ನು ಇನ್ನಷ್ಟು ಹೆಚ್ಚಿಸುವುದು, ಯುವಜನತೆಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದು, ಮಹಿಳೆಯರ ಸಬಲೀಕರಣ, ಹಳ್ಳಿಗಳಿಗೆ ಆರೋಗ್ಯಸೇವೆ ಮತ್ತು ಡಿಜಿಟಲ್‌ ಇಂಡಿಯಾದ ವಿಸ್ತರಣೆ, ಫಲಾನುಭವಿ ಯೋಜನೆಗಳ ವಿಸ್ತರಣೆಯ ಮೂಲಕ ವಿಕಸಿತ ಭಾರತದ ಸಾಕ್ಷಾತ್ಕಾರ, ರೈತರ ಸಬಲೀಕರಣ- ಇತ್ಯಾದಿಗಳು ಈ ಭಾಷಣದಲ್ಲಿ ಸ್ಥಾನ ಪಡೆದಿದ್ದವು. ಮೂಲಸೌಕರ್ಯದಂಥ ವಿಚಾರಗಳಲ್ಲಿ ಮೋದಿ ಸರಕಾರ ದೇಶದ ಬಹಳಷ್ಟು ಹಳ್ಳಿಗಳನ್ನೂ ನಗರಗಳನ್ನೂ ತಲುಪಿದೆ. ವಂದೇಮಾತರಂ ರೈಲುಗಳೂ ಎಕ್ಸ್‌ಪ್ರೆಸ್‌ವೇಗಳೂ ಗ್ರಾಮಸಡಕ್‌ ಯೋಜನೆಗಳೂ ಇದಕ್ಕೆ ಉದಾಹರಣೆ. ಜೈಶಂಕರ್‌, ನಿತಿನ್‌ ಗಡ್ಕರಿ ಮೊದಲಾದ ಮೋದಿ ಎರಡನೇ ಅವಧಿಯ ಸಚಿವರು ಅದ್ಭುತ ಅನ್ನಿಸುವಂಥ ಕಾರ್ಯವೈಖರಿಯನ್ನೇ ಮೆರೆದಿದ್ದಾರೆ. ಇಂಥ ಕರ್ತವ್ಯನಿಷ್ಠರನ್ನು ಮುಂದಿನ ಅವಧಿಗೂ ಮುಂದುವರಿಸಬೇಕಿದೆ. ಆಗ ಮಾತ್ರ ಅವರು ಕೈಗೊಂಡ ಕೆಲಸಗಳು ತಾರ್ಕಿಕ ಅಂತ್ಯ ಕಾಣಬಹುದು.

ಜಾಗತಿಕವಾಗಿ ಎರಡು ಯುದ್ಧಗಳು ನಡೆಯುತ್ತಿರುವ ಈ ಪ್ರಕ್ಷುಬ್ಧ ಅವಧಿಯಲ್ಲಿ ಮೂರನೇ ಬಾರಿಗೆ ಒಂದು ಸರಕಾರ ಆಯ್ಕೆಯಾಗುವುದು ಅಸಾಧಾರಣ ಸಾಧನೆ. ಜಾಗತಿಕ ಅನಿಶ್ಚಿತತೆ ಇರುವ ಸಮಯದಲ್ಲಿ ನಮ್ಮ ದೇಶದ ಜನತೆ ನಿರಂತರತೆ, ಸ್ಥಿರತೆ ಬಯಸಿದ್ದಾರೆ. ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಪುನರಾಗಮನವನ್ನು ವಿಶ್ವ ನಾಯಕರು ಸ್ವಾಗತಿಸಿದ್ದಾರೆ. 121ಕ್ಕೂ ಹೆಚ್ಚು ವಿಶ್ವ ನಾಯಕರು ಅವರನ್ನು ಅಭಿನಂದಿಸಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬೈಡೆನ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಂತಹ ವಿಶ್ವ ನಾಯಕರು ಮೋದಿಯವರ ಪುನರಾಗಮನವನ್ನು ಸ್ವಾಗತಿಸಿದ್ದು, ಇವರೊಂದಿಗೆ ಮೋದಿ ವೈಯಕ್ತಿಕ ಸಂಬಂಧವನ್ನೂ ಆತ್ಮೀಯವಾಗಿ ಕಾಪಾಡಿಕೊಂಡಿರುವುದು ಉಲ್ಲೇಖನೀಯ.

ಇನ್ನು ಮೈತ್ರಿಕೂಟದಲ್ಲಿರುವ ಇಬ್ಬರು ಬಲಿಷ್ಠ ಪ್ರಾದೇಶಿಕ ನಾಯಕರಾದ ನಿತೀಶ್‌ ಕುಮಾರ್‌ ಹಾಗೂ ಚಂದ್ರಬಾಬು ನಾಯ್ಡು ಅವರೊಂದಿಗಿನ ಸಂಬಂಧ. ಇದು ಎನ್‌ಡಿಎಗೆ ಈ ಅವಧಿಯಲ್ಲಿ ಮುಖ್ಯವಾದುದು. ಇಬ್ಬರಿಗೂ ಬಹುತೇಕ ಮೋದಿಯವರಷ್ಟೇ ವಯಸ್ಸು ಆಗಿದೆ. ಇಬ್ಬರೂ ಮಾಗಿದ ರಾಜಕಾರಣಿಗಳು; ಅನವಶ್ಯಕ ರಿಸ್ಕ್‌ ತೆಗೆದುಕೊಳ್ಳುವವರಲ್ಲ. ಈ ಸಲದ ಫಲಿತಾಂಶ ಅವರಿಗೂ ಹಲವು ಪಾಠ ಕಲಿಸಿದೆ. ಬಿಹಾರ ಹಾಗೂ ಆಂಧ್ರಪ್ರದೇಶಗಳಲ್ಲೂ ಬಿಜೆಪಿ ಸಾಕಷ್ಟು ವಿಸ್ತರಿಸಿದೆ; ಈ ಪಕ್ಷಗಳಿಗೆ ಸಮಾನವಾಗಿಯೇ ಸ್ಥಾನಬಲ ಹೆಚ್ಚಿಸಿಕೊಂಡಿದೆ. ಈ ನಾಯಕರಿಗೆ ತಮ್ಮ ರಾಜ್ಯದ ಸಂಬಂಧವನ್ನು ಕೇಂದ್ರದೊಡನೆ ಕಾಪಾಡಿಕೊಂಡು, ರಾಜ್ಯದಲ್ಲೂ ಬೆಲೆ ಭದ್ರಪಡಿಸಿಕೊಂಡು ಉಳಿಯುವ ಹಂಬಲವಿದೆ. ಇಬ್ಬರೂ ಕೇಂದ್ರದಲ್ಲೂ ಸಾಕಷ್ಟು ಅಧಿಕಾರ ಅನುಭವಿಸಿದವರೇ. ಹೀಗಾಗಿ ಒಂದೆರಡು ಸಚಿವ ಸ್ಥಾನಗಳಿಗಾಗಿ ಚೌಕಾಸಿ ಮಾಡಿದರೂ, ಸಂಬಂಧ ಹರಿದುಕೊಳ್ಳುವಷ್ಟರ ಮಟ್ಟಿಗೆ ಯಾರೂ ಹೋಗುವವರಲ್ಲ. ಕರ್ನಾಟಕದ ಜೆಡಿಎಸ್‌ ಕೂಡ ಎರಡು ಸ್ಥಾನಗಳನ್ನು ಹೊಂದಿದ್ದು, ಒಂದು ಸಚಿವ ಸ್ಥಾನವನ್ನಂತೂ ಪಡೆಯುವುದು ಶಕ್ಯವಿದೆ.

ಹೀಗಾಗಿ, ಈ ಬಾರಿಯೂ ಮೋದಿಯವರಿಂದ ನಾವು ಸುಸ್ಥಿರ ಸರಕಾರವನ್ನು ನಿರೀಕ್ಷಿಸಬಹುದು ಎನ್ನಬಹುದು. ಮೋದಿಯವರಲ್ಲಿ ಈ ವಯಸ್ಸಿನಲ್ಲೂ ದೇಶವನ್ನು ಮುನ್ನಡೆಸಬಲ್ಲ ಛಲ, ಒಳನೋಟ, ಮುತ್ಸದ್ಧಿತನ, ಜಾಣ್ಮೆ ಎಲ್ಲ ಇವೆ. ಆಂತರಿಕ ಹಾಗೂ ಬಾಹ್ಯ ನಾಯಕರ ಗೆಳೆತನವೂ ಇದೆ. ಆಧುನಿಕತೆಯನ್ನು ಬರಮಾಡಿಕೊಳ್ಳುವ ನಾಯಕತ್ವವೂ ಇದೆ. ಒಬ್ಬ ನಾಯಕನಲ್ಲಿ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಬೇಕಿಲ್ಲ. ಮೋದಿ ಸರಕಾರ ಭಾನುವಾರದ ಪ್ರಮಾಣ ವಚನದ ದಿನದಿಂದಲೇ ತನ್ನ ʼವಿಕಸಿತ ಭಾರತʼದ ಗುರಿಯತ್ತ ಮುನ್ನುಗ್ಗಲಿ.

ಇದನ್ನೂ ಓದಿ: Narendra Modi: ಭಾನುವಾರ ಸಂಜೆ 7.15ಕ್ಕೆ ಮೋದಿ ಪ್ರಮಾಣವಚನ‌; ಹಲವು ಸಂಸದರಿಗೂ ಮಂತ್ರಿ ಭಾಗ್ಯ!

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮಿಶ್ರಫಲ ನೀಡಿದ ಫಲಿತಾಂಶ; ಆಡಳಿತ ಪಕ್ಷಕ್ಕೆ ಪಾಠ, ವಿಪಕ್ಷ ಬಲಿಷ್ಠ

ವಿಸ್ತಾರ ಸಂಪಾದಕೀಯ: ಹತ್ತು ವರ್ಷಗಳ ಕಾಲ ಆಡಳಿತ ನಡೆಸಿರುವ ಎನ್‌ಡಿಎಗೆ ಮತದಾರ ಮತ್ತೊಂದು ಅವಕಾಶವನ್ನು ನೀಡಿದ್ದಾನೆ. 1984ರ ಬಳಿಕ ಇದೇ ಮೊದಲ ಬಾರಿಗೆ ಭಾರತದ ಮತದಾರ ಮೂರನೇ ಅವಧಿಗೆ ಒಂದು ಸರಕಾರವನ್ನು ಚುನಾಯಿಸಿದ್ದಾನೆ.

VISTARANEWS.COM


on

narendra modi amit shah jp nadda election results 2024
Koo

ಭಾರತ ಹಾಗೂ ಇತರ ದೇಶಗಳೂ ಕುತೂಹಲದಿಂದ ಕಾಯುತ್ತಿದ್ದ ಲೋಕಸಭೆ ಚುನಾವಣೆ (Lok sabha Election 2024) ಫಲಿತಾಂಶ (Election results 2024) ಪ್ರಕಟವಾಗಿದೆ. 543 ಬಲದ ಲೋಕಸಭೆಯಲ್ಲಿ ಬಹುಮತ ಸಾಧಿಸಿ ಸರಕಾರ ರಚಿಸಬೇಕಿದ್ದರೆ 272 ಸ್ಥಾನಗಳನ್ನು ಗೆಲ್ಲಬೇಕು; ಆದರೆ ಯಾವುದೇ ಒಂದು ಪಕ್ಷ ಅಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಎರಡು ಅವಧಿಗೆ ಆಡಳಿತ ನಡೆಸಿರುವ ಬಿಜೆಪಿ- ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಒಟ್ಟಾರೆ 291 ಸ್ಥಾನಗಳಲ್ಲಿ ಮುಂದಿದ್ದು, ಸರ್ಕಾರ ರಚಿಸಲು ಮುಂದಾಗಿದೆ. ಬಿಜೆಪಿ ಅತ್ಯಧಿಕ ಸ್ಥಾನಗಳನ್ನು (240) ಗಳಿಸಿರುವ ಪಕ್ಷವಾಗಿದೆ. ʼ400 ಸ್ಥಾನಗಳನ್ನು ಗೆಲ್ಲುವʼ ಕನಸು ಹೊಂದಿದ್ದ ಎನ್‌ಡಿಎಗೆ ಅದನ್ನು ಸಾಧ್ಯವಾಗಿಸಿಕೊಳ್ಳಲು ಆಗಿಲ್ಲ. ಆಡಳಿತ ಪಕ್ಷಕ್ಕೆ ದೃಢವಾದ ಹೋರಾಟ ನೀಡಿರುವ ಕಾಂಗ್ರೆಸ್‌ ಹಾಗೂ ಇಂಡಿಯಾ ಬ್ಲಾಕ್‌ ಒಟ್ಟಾಗಿ 235 ಸ್ಥಾನಗಳನ್ನು ಗೆದ್ದುಕೊಳ್ಳಲು ಶಕ್ತವಾಗಿದ್ದರೂ ಅಧಿಕಾರದ ಸನಿಹ ಸುಳಿಯಲು ಸಾಧ್ಯವಾಗದು. ಒಟ್ಟಾರೆಯಾಗಿ ನೋಡಿದರೆ ಇದು ಮಿಶ್ರಫಲ ನೀಡಿರುವ ಫಲಿತಾಂಶ; ಎಲ್ಲ ಪಕ್ಷಗಳೂ ಕಲಿಯಬೇಕಾದ ಹಲವು ಪಾಠಗಳನ್ನು ಹುದುಗಿಸಿ ಈ ಫಲಿತಾಂಶವನ್ನು ಮತದಾರರು ನೀಡಿದ್ದಾರೆ.

ಹತ್ತು ವರ್ಷಗಳ ಕಾಲ ಆಡಳಿತ ನಡೆಸಿರುವ ಎನ್‌ಡಿಎಗೆ ಮತದಾರರು ಮತ್ತೊಂದು ಅವಕಾಶವನ್ನು ನೀಡಿದ್ದಾರೆ. ದಶಕಗಳ ಬಳಿಕ ಭಾರತದ ಮತದಾರರು ನಿರಂತರ ಮೂರನೇ ಅವಧಿಗೆ ಒಂದು ಸರಕಾರವನ್ನು ಚುನಾಯಿಸಿದ್ದಾರೆ. ಅಂದರೆ ಎನ್‌ಡಿಎ ಮೇಲೆ ಭರವಸೆಯನ್ನು ದೇಶದ ಜನತೆ ಉಳಿಸಿಕೊಂಡಿದೆ. ಎನ್‌ಡಿಎ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಸಮಾಜ ಕಲ್ಯಾಣ ಕಾರ್ಯಕ್ರಮಗಳು, ಫಲಾನುಭವಿಗಳಿಗೆ ತಲುಪಿದೆ ಹಾಗೂ ಜನ ಅದನ್ನು ನೆನಪಿಟ್ಟುಕೊಂಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. 2014ರಲ್ಲಿ ಯುಪಿಎ ಸರಕಾರದ ವಿರುದ್ಧ ಕಂಡುಬಂದಿದ್ದ ಜನತೆಯ ಪ್ರಬಲ ಆಕ್ರೋಶ, ಆಡಳಿತ ವಿರೋಧಿ ಅಲೆ ಈಗ ಕಂಡುಬಂದಿಲ್ಲ. ಹೀಗಾಗಿ ಎನ್‌ಡಿಎ ಸರಕಾರದ ಯಶಸ್ಸು ಅದನ್ನು ಮುಂದಕ್ಕೆ ಒಯ್ದಿದೆ. ಆದರೆ ಬಿಜೆಪಿಗೆ ಪೂರ್ಣ ಬಹುಮತವನ್ನೂ ಮತದಾರ ನೀಡಿಲ್ಲ. ಅದಕ್ಕೂ ಹಲವು ಕಾರಣಗಳಿವೆ. ಹತ್ತು ವರ್ಷಗಳ ಕಾಲ ಆಳಿಸಿಕೊಂಡ ನಂತರ ಸಹಜವಾಗಿಯೇ ಮತದಾರನಿಗೆ ಒಂದು ಪಕ್ಷದ ಕೊರತೆಗಳು ಗೊತ್ತಾಗತೊಡಗುತ್ತವೆ.

ಮುಖ್ಯವಾಗಿ, ಎನ್‌ಡಿಎ ಪಕ್ಷಗಳ ಬಗ್ಗೆ ಪ್ರತಿಪಕ್ಷಗಳು ನಡೆಸಿದ ಪ್ರಚಾರದ ತೀವ್ರತೆ ಅತ್ಯುಚ್ಛ ಮಟ್ಟವನ್ನು ಮುಟ್ಟಿದೆ. ಇದರಲ್ಲಿ ಸ್ವಲ್ಪ ಸತ್ಯವೂ ಅಪಾರ ಪ್ರಮಾಣದ ಸುಳ್ಳೂ ಇತ್ತು. ಮೋದಿ ಸರಕಾರ ಅಲ್ಪಸಂಖ್ಯಾತರ ವಿರೋಧಿ ಎಂಬುದು ಅವುಗಳಲ್ಲಿ ಒಂದು. ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಮೋದಿ ಸರಕಾರ ಸಾಕಷ್ಟು ನೀಡಿದ್ದರೂ, ವಿಪಕ್ಷಗಳ ಈ ಅಪಪ್ರಚಾರದ ಮುಂದೆ ಅದು ನಿಲ್ಲಲಿಲ್ಲ. ಅಂತಾರಾಷ್ಟ್ರೀಯವಾಗಿ ಮೋದಿ ಸರ್ಕಾರದ, ಆ ಮೂಲಕ ದೇಶದ ಮಾನ ಹರಾಜು ಹಾಕುವ ಕಾರ್ಯಕ್ರಮವನ್ನೂ ಹಲವರು ನಡೆಸಿದರು. ಎನ್‌ಡಿಎ ಸರಕಾರದ ಸಾಧನೆಯ ಅಂಕಿಅಂಶಗಳನ್ನು ಜನತೆಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಕೊನೆಯ ಕ್ಷಣಗಳಲ್ಲಿ ಬಿಜೆಪಿ ಸ್ವಲ್ಪ ತೀವ್ರವಾದಿ ಹಿಂದುತ್ವದ ಧೋರಣೆಯನ್ನೂ ತೋರಿಸಲು ಮುಂದಾಯಿತು. ಇದು ಮುಸ್ಲಿಂ ಮತಗಳನ್ನು ಮತ್ತಷ್ಟು ಬಿಜೆಪಿಯ ವಿರುದ್ಧ, ಇಂಡಿಯಾ ಒಕ್ಕೂಟದ ಪರ ಕ್ರೋಡೀಕರಿಸಲು ಸಾಧ್ಯವಾಗಿರಬಹುದು.

ಎನ್‌ಡಿಎ ಅರ್ಥ ಮಾಡಿಕೊಳ್ಳಬೇಕಾದ ಮುಖ್ಯ ಪಾಠ ಎಂದರೆ, ಪ್ರಾದೇಶಿಕ ಪಕ್ಷಗಳು ಹಾಗೂ ಮಿತ್ರಪಕ್ಷಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು. ಹಾಗೆಯೇ ತನ್ನ ಪಕ್ಷದ ಪ್ರಾದೇಶಿಕ ನಾಯಕರನ್ನೂ ಕಡೆಗಣಿಸಬಾರದು. ಪ್ರಾದೇಶಿಕ ನಾಯಕರಿಗೆ ತಮ್ಮದೇ ಆದ ಅಜೆಂಡಾ ಇದ್ದರೂ, ಸ್ಥಳೀಯ ಸಮೀಕರಣಗಳು ಇವರನ್ನು ಅವಲಂಬಿಸಿರುತ್ತವೆ. ಹಾಗೇ ರಾಮ ಮಂದಿರದಂಥ ಸಂಗತಿಗಳು ಈ ಸಲ ಒಂದು ವರ್ಗದ ಮಂದಿಯನ್ನು ಮಾತ್ರ ಸೆಳೆಯಲು ಶಕ್ತವಾದವು. ಇದು ಈಗಾಗಲೇ ಬಿಜೆಪಿ ಬಗ್ಗೆ ಒಲವುಳ್ಳವರನ್ನು ಇನ್ನಷ್ಟು ತೃಪ್ತಿಪಡಿಸಿತೇ ಹೊರತು, ಹೊಸ ಮತದಾರರನ್ನು ತರಲಿಲ್ಲ. ಇದಕ್ಕೆ ಉತ್ತರಪ್ರದೇಶವೇ ಉದಾಹರಣೆ. ಅಲ್ಲಿ ಇದ್ದ ಸ್ಥಾನಗಳನ್ನು ಉಳಿಸಿಕೊಳ್ಳಲು ಬಿಜೆಪಿ ಶಕ್ತವಾಗಲಿಲ್ಲ. ಬಿಜೆಪಿ ವಿರೋಧಿ ಮತಗಳು ಇಲ್ಲಿ ಕ್ರೋಡೀಕೃತಗೊಂಡವು. ಈ ಕ್ರೋಡೀಕರಣಕ್ಕೆ ಆಕ್ರಮಣಕಾರಿಯಾದ ಬಿಜೆಪಿಯ ಚುನಾವಣಾ ಪ್ರಚಾರ ಭಾಷಣಗಳು, ಧ್ರುವೀಕರಣವಾದಿ ನಡೆ ಕಾರಣವಿರಬಹುದು. ಇದನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಎನ್‌ಡಿಎ ಎಲ್ಲರನ್ನೂ ಒಳಗೊಳ್ಳುವುದು ಸಾಧ್ಯವಿಲ್ಲ.

ಅನೇಕರಿಗೆ ಮತದಾರ ಈ ಬಾರಿ ಪಾಠ ಕಲಿಸಿದ್ದಾನೆ. ಅತ್ಯಾಚಾರ ಆರೋಪಿಯಾಗಿ ಜೈಲಿನಲ್ಲಿರುವ ಸಂಸದನನ್ನು ಭಾರಿ ಮತಗಳ ಅಂತರದಿಂದ ಸೋಲಿಸಿರುವುದು, ಮತದಾರನಿಗೆ ಇಂಥ ನಾಯಕರ ಬಗ್ಗೆ ಎಷ್ಟು ಜಿಗುಪ್ಸೆ ಮೂಡಿದೆ ಎಂಬುದಕ್ಕೆ ಉದಾಹರಣೆ. ಹಾಗೆಯೇ ಸ್ಮೃತಿ ಇರಾನಿ, ಅಣ್ಣಾಮಲೈಯಂಥ ನಾಯಕರನ್ನು ಸೋಲಿಸುವ ಮೂಲಕವೂ ಮತದಾರ ಹಲವು ಪಾಠಗಳನ್ನು ಮುಂದಿರಿಸಿದ್ದಾನೆ. ಜೊತೆಗೆ ಬೆಂಗಳೂರೂ ಗ್ರಾಮಾಂತರದಲ್ಲಿ ಡಾ.ಮಂಜುನಾಥ್‌ ಅವರಂಥ ಹೊಸಬರನ್ನು ಗೆಲ್ಲಿಸಿರುವುದು ಮತದಾರನ ವಿವೇಕಕ್ಕೆ ಸಾಕ್ಷಿ. ತಮಿಳುನಾಡು, ಕೇರಳಗಳಲ್ಲಿ ಪ್ರಾದೇಶಿಕ ಶಕ್ತಿಗಳ ಪ್ರಾಬಲ್ಯವನ್ನು ಮುರಿಯಲು ಎನ್‌ಡಿಎಗೆ ಸಾಧ್ಯವಾಗಿಲ್ಲ. ಆದರೆ ಹಲವು ಕಡೆ ಹೊಸ ಸ್ಥಾನಗಳನ್ನು ಗೆದ್ದುಕೊಂಡಿದೆ. ಉದಾಹರಣೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ. ಕಾಂಗ್ರೆಸ್‌ ಉಚಿತ ಯೋಜನೆಗಳ ಆಮಿಷಗಳನ್ನು ಮುಂದಿಟ್ಟಿರುವುದು ಹಲವು ಕಡೆ ಕೆಲಸ ಮಾಡಿರುವಂತಿದೆ. ಇದು ಬೊಕ್ಕಸಕ್ಕೆ ಹೊರೆಯೆನಿಸುತ್ತದಾದರೂ, ಭಾರತದಂಥ ದೇಶಗಳ ಪ್ರಜೆಗಳು ಇಂಥ ಉಚಿತಗಳನ್ನು ಬಾಚಿಕೊಳ್ಳುವುದರಲ್ಲಿ ಮುಂದು; ಹೀಗಾಗಿ ಇದನ್ನು ಮುಂದಿನ ದಿನಗಳಲ್ಲಿ ಪರಿಗಣಿಸದೇ ನಿರ್ವಾಹವಿಲ್ಲ.

ಎನ್‌ಡಿಎಗೆ ಅಧಿಕಾರ ನೀಡಿದ ಮತದಾರರು, ವಿಪಕ್ಷವಾದ ಕಾಂಗ್ರೆಸ್‌ ಹಾಗೂ ಇಂಡಿಯಾ ಒಕ್ಕೂಟವನ್ನೂ ಗಟ್ಟಿಗೊಳಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ ಅನ್ನು 52 ಸ್ಥಾನಕ್ಕೆ ಇಳಿಸಿದ್ದ ಮತದಾರರೇ ಈ ಸಲ ಅದನ್ನು ನೂರರ ಆಸುಪಾಸಿಗೆ ತಂದು ನಿಲ್ಲಿಸಿದ್ದಾರೆ ಎಂದರೆ, ಮತದಾರರ ಚೈತನ್ಯವನ್ನೂ, ಅವರ ವಿವೇಚನಾ ಶಕ್ತಿಯನ್ನೂ ಅರ್ಥ ಮಾಡಿಕೊಳ್ಳಬಹುದು. ಮತದಾರ ಭ್ರಷ್ಟಾಚಾರಿ ಸರ್ಕಾರಕ್ಕೆ ಪಾಠ ಕಲಿಸಲೂ ಶಕ್ತ; ಹಾಗೇ ಏನೂ ಅಲ್ಲದ ಪಕ್ಷವನ್ನು ಮೇಲೆತ್ತಲೂ ಶಕ್ತ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಇನ್ನಷ್ಟು ಮಾಗಬೇಕು ಅನ್ನಿಸಿದರೂ, ಭಾರತ್‌ ಜೋಡೋ ಮುಂತಾದ ಕಾರ್ಯಕ್ರಮಗಳ ಮೂಲಕ ಮತದಾರರ ಮನದಲ್ಲಿ ತುಸುವಾದರೂ ತಮ್ಮ ಇಮೇಜ್‌ ಹೆಚ್ಚಿಸಿಕೊಳ್ಳಲು ಶಕ್ತರಾದರು. ಹಾಗಾಗಿ ಎರಡೂ ಕಡೆ ಗೆದ್ದಿದ್ದಾರೆ. ಇವರಿಂದ, ಗೆಲ್ಲುವ ಮತಗಳ ಅಂತರವನ್ನು 3 ಲಕ್ಷದಿಂದ 1.5 ಲಕ್ಷಕ್ಕೆ ಇಳಿಸಿಕೊಂಡ ನರೇಂದ್ರ ಮೋದಿಯವರೂ ಪಾಠ ಕಲಿಯಬಹುದು. ಇದೇ ವೇಗವನ್ನು ಉಳಿಸಿಕೊಂಡರೆ ಇಂಡಿಯಾ ಬ್ಲಾಕ್‌ ಮುಂದಿನ ಚುನಾವಣೆ ಹೊತ್ತಿಗೆ ಇನ್ನಷ್ಟು ಸದೃಢವಾಗಬಹುದು. ವಾಸ್ತವವಾಗಿ ದೃಢ ವಿರೋಧ ಪಕ್ಷ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಗತ್ಯ. ಅದು ಈಗ ಸಾಧ್ಯವಾಗಿದೆ. ಗಟ್ಟಿ ವಿರೋಧ ಪಕ್ಷವಾಗಿ ಇಂಡಿಯಾ ಕೆಲಸ ಮಾಡಿದರೆ, ಆಡಳಿತ ಪಕ್ಷವೂ ಇನ್ನಷ್ಟು ಎಚ್ಚರದಿಂದ, ಪರಿಣಾಮಕಾರಿಯಾಗಿ ಕೆಲಸ ಮಾಡಬಹುದಾಗಿದೆ.

ಇದನ್ನೂ ಓದಿ: Election Results 2024: ತಮಿಳುನಾಡಿನಲ್ಲಿ ಪೈಪೋಟಿ ನೀಡಿ ಸೋತ ಅಣ್ಣಾಮಲೈ; ಬಿಜೆಪಿ ಮತ ಗಳಿಕೆ ಪ್ರಮಾಣ ಶೇ. 3.57ರಿಂದ ಶೇ. 11.04ಕ್ಕೆ ಜಿಗಿತ!

Continue Reading
Advertisement
Darshan Arrested renuka shed like hell more murders here
ಸ್ಯಾಂಡಲ್ ವುಡ್41 seconds ago

Darshan Arrested: ಬಡ್ಡಿ ಕಟ್ಟದವರಿಗೆ ‘ನರಕ’ ಆಗಿತ್ತೇ ಈ ಶೆಡ್? ಇಲ್ಲಿ ನಡೆದಿವೆಯೇ ಇನ್ನಷ್ಟು ಕೊಲೆಗಳು?

Foeticide
ಕರ್ನಾಟಕ8 mins ago

Foeticide: ಬೆಳಗಾವಿಯಲ್ಲಿ ನಕಲಿ ವೈದ್ಯನಿಂದ ಭ್ರೂಣಗಳ ಹತ್ಯೆ; ಜಮೀನಲ್ಲಿ ಸಿಕ್ಕಿತು ಶಿಶುವಿನ ಶವ

SCO vs AUS
ಕ್ರೀಡೆ34 mins ago

SCO vs AUS: ಆಸೀಸ್​ಗೆ 5 ವಿಕೆಟ್​ ಗೆಲುವು; ಸೂಪರ್​-8ಗೆ ಲಗ್ಗೆಯಿಟ್ಟ ಇಂಗ್ಲೆಂಡ್​

Darshan Arrested vinish write special message for darshan fathers day
ಸ್ಯಾಂಡಲ್ ವುಡ್50 mins ago

Darshan Arrested: `ಅಪ್ಪ, ನೀವೇ ನನ್ನ ಹೀರೊʼಎಂದ ದರ್ಶನ್‌ ಪುತ್ರ; ಫಾದರ್ಸ್‌ ಡೇಗೆ ಭಾವುಕ ಪೋಸ್ಟ್‌!

INDW vs SAW
ಕ್ರೀಡೆ1 hour ago

INDW vs SAW: ಶುಭಾರಂಭದ ನಿರೀಕ್ಷೆಯಲ್ಲಿ ಹರ್ಮನ್​ಪ್ರೀತ್​ ಬಳಗ; ಇಂದು ಮೊದಲ ಏಕದಿನ

Kannada New Movie Maryade Prashne out now
ಸ್ಯಾಂಡಲ್ ವುಡ್1 hour ago

Kannada New Movie : ಆರ್​ಜೆ ಪ್ರದೀಪ್​ರ ‘ಮರ್ಯಾದೆ ಪ್ರಶ್ನ’ಗೆ ಆಲ್​ ಓಕೆಯ ಸಖತ್‌ ಹಾಡು!

Darshan Arrested
ಕರ್ನಾಟಕ1 hour ago

Darshan Arrested: ಕೊಲೆ ಬಳಿಕ ಮೈಸೂರಲ್ಲಿ ಕೂತು ಕೇಸ್‌ ಮುಚ್ಚಿಹಾಕಲು ದರ್ಶನ್‌ ಯತ್ನ; ಇಂದು ಸ್ಥಳ ಮಹಜರು!

Kotee Movie Review dolly dhanjay News In Kannada
ಸ್ಯಾಂಡಲ್ ವುಡ್1 hour ago

Kotee Movie Review: ಎಲ್ಲರೂ ಬೆತ್ತಲೆಯಾಗಿರುವ ಸಮಾಜದಲ್ಲಿ ಬಟ್ಟೆ ಹಾಕಿಕೊಂಡವನಿಗೆ ನಾಚಿಕೆಯಾದಾಗ?!

Illegal beef trade
ದೇಶ1 hour ago

ಗೋಮಾಂಸ ಅಕ್ರಮ ವ್ಯಾಪಾರ ನಡೆಸುತ್ತಿದ್ದ 11 ಮುಸ್ಲಿಮರ ಮನೆ ಕೆಡವಿದ ಪೊಲೀಸರು; 150 ಹಸುಗಳ ರಕ್ಷಣೆ

Actor Darshan ACP Chandan Kumar work salute by people
ಕ್ರೈಂ2 hours ago

Actor Darshan: ದರ್ಶನ್‌ ಬಂಧಿಸಿದ ಎಸಿಪಿ ಚಂದನ್ ಕುಮಾರ್‌ ಕೆಲಸಕ್ಕೆ ಸೆಲ್ಯೂಟ್‌ ಎಂದ ಗ್ರಾಮಸ್ಥರು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ20 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌