ಬೆಂಗಳೂರು: ಎಸ್ಎಸ್ಎಲ್‌ಸಿ ಪರೀಕ್ಷೆ-3 (SSLC Exam- 3) ನಾಳೆ (ಆಗಸ್ಟ್ 2) ಆರಂಭಗೊಳ್ಳಲಿದೆ. ಈ ಪರೀಕ್ಷೆಗೆ ರಾಜ್ಯಾದ್ಯಂತ 97,933 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾಹಿತಿ ನೀಡಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆ-3ನ್ನು ದಿನಾಂಕ 02-08-2024ರಿಂದ ದಿನಾಂಕ:09-08-2024 ರವರೆಗೆ ನಡೆಸಲು ಉದ್ದೇಶಿಸಲಾಗಿದೆ ಎಂದಿದೆ. ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ 97,933 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 67,716 ಬಾಲಕರು ಮತ್ತು 30,217 ಬಾಲಕಿಯರು ಸೇರಿದ್ದಾರೆ.
ಒಟ್ಟು ನೋಂದಣಿಯಲ್ಲಿ 459 ವಿದ್ಯಾರ್ಥಿಗಳು ಫಲಿತಾಂಶ ವೃದ್ಧಿಗಾಗಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ರಾಜ್ಯದ 410 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಸ್ಥಾನಿಕ ಜಾಗೃತ ದಳದವರು ಹಾಗೂ ಕೊಠಡಿ ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಮಾಹಿತಿ ನೀಡಿದೆ.
ಜಿಲ್ಲಾ ಮತ್ತು ತಾಲ್ಲೂಕು ಹಂತಗಳ ವಿಚಕ್ಷಣ ದಳಗಳು ಪರೀಕ್ಷಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತವೆ. ಜಿಲ್ಲಾಧಿಕಾರಿಗಳಿಂದ ನಿಯೋಜಿತ ಇತರೆ ಇಲಾಖೆಗಳ ಜಾಗೃತ ದಳಗಳು ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿವೆ. ಪ್ರತಿ ಕೇಂದ್ರದಲ್ಲಿಯೂ ಸಿ.ಸಿ.ಟಿ.ವಿ. ಗಳ ಮೂಲಕ ಪರೀಕ್ಷಾ ಅವ್ಯವಹಾರಗಳ ಬಗ್ಗೆ ನಿಗಾ ಇಡಲಾಗುವುದು ಎಂದು ಹೇಳಿದೆ.
ಯಾರ್ಯಾರಿಗೆ ಪರೀಕ್ಷೆ?
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗದವರು, ಪ್ರಸಕ್ತ ಸಾಲಿನ ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸಿದವರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEEB) ಮೂರನೇ ಅವಕಾಶ ನೀಡಿದ್ದು, ಅದರಂತೆ ಆಗಸ್ಟ್ 2ರಿಂದ 9ರವರೆಗೆ ಪರೀಕ್ಷೆ ನಡೆಯಲಿದೆ. ಇದೀಗ ಅಭ್ಯರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಶಾಲಾ ಮುಖ್ಯೋಪಾಧ್ಯಾಯರು ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಬೇಕು. ಒಂದು ವೇಳೆ ಏನಾದರೂ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ಪರಿಶೀಲನಾ ಶಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಮ್ಮ ಶಾಲೆಯ ಮುಖಾಂತರ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಡೌನ್‌ಲೋಡ್ ಮಾಡಿಕೊಂಡ ಪ್ರವೇಶ ಪತ್ರಗಳ ಸಂಖ್ಯೆ ಸರಿ ಹೊಂದುತ್ತಿವೆಯೇ ಎಂದು ತಪ್ಪದೇ ಪರಿಶೀಲಿಸಬೇಕು. ಒಂದು ವೇಳೆ ಯಾವುದಾದರು ವಿದ್ಯಾರ್ಥಿಯ ಪ್ರವೇಶ ಪತ್ರ ಬಂದಿಲ್ಲದಿದ್ದರೆ ಆ ವಿವರವನ್ನು ದಾಖಲೆಗಳೊಂದಿಗೆ ಮಂಡಳಿಗೆ ಕೂಡಲೇ ಕಳುಹಿಸಬೇಕು ಎಂದು ಸೂಚಿಸಲಾಗಿದೆ.
ಇವನ್ನು ಗಮನಿಸಿ
- ಪ್ರವೇಶ ಪತ್ರದಲ್ಲಿ ಹಾಗೂ ಕೇಂದ್ರ ನಾಮಯಾದಿಪಟ್ಟಿಯಲ್ಲಿ ಭಾವಚಿತ್ರ ಇಲ್ಲದೇ ಇರುವ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ. ಇದಕ್ಕೆ ಮಂಡಳಿ ಜವಾಬ್ದಾರಿಯಲ್ಲ. ಹೀಗಾಗಿ ಪ್ರವೇಶ ಪತ್ರದಲ್ಲಿ ವಿದ್ಯಾರ್ತಿಯ ಫೋಟೊ ಇದೆ ಎನ್ನುವುದನ್ನು ಖಚಿತಪಡಿಸಿ. ಇಲ್ಲದಿದ್ದರೆ ಈಗಲೇ ಮಂಡಳಿಯ ಗಮನಕ್ಕೆ ತನ್ನಿ.
- ಶಾಲಾ ಲಾಗಿನ್ನಿಂದ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿ ಕೂಡಲೇ ವಿತರಿಸಬೇಕು ಮತ್ತು ಹಾಗೂ ಪ್ರವೇಶ ಪತ್ರದಲ್ಲಿ ನೀಡಲಾಗಿರುವ ಸೂಚನೆಗಳನ್ನು ತಪ್ಪದೇ ಪಾಲಿಸಲುತಿಳಿಸಬೇಕು.
- ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪಾಸಾದ ವಿಷಯಕ್ಕೆ ಪರೀಕ್ಷೆ ಬರೆಯುವಂತೆ ಮುದ್ರಣವಾಗಿದ್ದಲ್ಲಿ ಪಾಸಾದ ಬಗ್ಗೆ ಚುಕ್ಕೆ ಗುರುತಿಲ್ಲದ ಫಲಿತಾಂಶ ಪಟ್ಟಿಯನ್ನು ಮುಖ್ಯಶಿಕ್ಷಕರು ದೃಢೀಕರಿಸಿ ಪರೀಕ್ಷೆ ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ಪರಿಶೀಲನಾ ಶಾಖೆಯ ಅಧಿಕಾರಿಗಳಿಗೆ ಕಳುಹಿಸಬೇಕು.
- ಪ್ರವೇಶ ಪತ್ರವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಇದನ್ನೂ ಓದಿ: SSLC Exam 3: SSLC ಫೇಲಾದವರಿಗೆ ಮತ್ತೊಂದು ಚಾನ್ಸ್; 3ನೇ ಪರೀಕ್ಷೆಯ ನೋಂದಣಿ, ಪರೀಕ್ಷೆ ದಿನಾಂಕ ಘೋಷಣೆ