Site icon Vistara News

SSLC Result 2024: ಎಸ್‌ಎಸ್‌ಎಲ್‌ಸಿ ಸಾಧಕರನ್ನು ಸನ್ಮಾನಿಸಿ, ಪ್ರೋತ್ಸಾಹ ಧನ ಘೋಷಿಸಿದ ಸಿಎಂ, ಡಿಸಿಎಂ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Result 2024) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ ಬಸಪ್ಪ ಕೊಣ್ಣೂರ ಮತ್ತು ತೃತೀಯ ಸ್ಥಾನ ಪಡೆದ ನವನೀತ್ ಕೆ.ಸಿ ಅವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪ್ರತ್ಯೇಕವಾಗಿ ಸನ್ಮಾನಿಸಿ, ಪ್ರೋತ್ಸಾಹ ಧನ ಘೋಷಿಸಿದ್ದಾರೆ. ಇದೇ ವೇಳೆ ಇಬ್ಬರು ವಿದ್ಯಾರ್ಥಿಗಳು ಓದಿದ ಮೊರಾರ್ಜಿ ವಸತಿ ಶಾಲೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು 1.5 ಕೋಟಿ ರೂ. ಅನುದಾನ ನೀಡುವುದಾಗಿ ತಿಳಿಸಿದ್ದಾರೆ.

ಇಬ್ಬರ ಶಿಕ್ಷಣಕ್ಕೆ ವೈಯಕ್ತಿಕ ನೆರವು ಘೋಷಿಸಿದ ಸಿಎಂ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ‌ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಅಂಕಿತಾ ಹಾಗೂ ತೃತೀಯ ರ‍್ಯಾಂಕ್ ಪಡೆದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದರು. ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಿ ಸಾಗಲಿ ಎಂದು ಮುಖ್ಯಮಂತ್ರಿಗಳು ಶುಭ ಹಾರೈಸಿದರು.‌

ಅಂಕಿತ ಮತ್ತು ನವನೀತ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ, ಪೋಷಕರನ್ನೂ ಅಭಿನಂದಿಸಿದರು. ಮುಂದಿನ‌ ವಿಧ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಅಂಕಿತಾಗೆ 5 ಲಕ್ಷ ರೂ. ಹಾಗೂ ನವನೀತ್ ಗೆ 3 ಲಕ್ಷ ರೂ.ಗಳ ನೆರವನ್ನು ಸಿಎಂ ಘೋಷಿಸಿದರು. ಅಂಕಿತಾ ಓದಿದ ಶಾಲೆಯ ಅಭಿವೃದ್ಧಿಗೆ ಒಂದು ಕೋಟಿ ರೂ. ಹಾಗೂ ನವನೀತ್ ವ್ಯಾಸಂಗ ಮಾಡಿದ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದರು.

ಇದನ್ನೂ ಓದಿ | SSLC Result : ರಾಜ್ಯ ಶಿಕ್ಷಣ ಗುಣಮಟ್ಟ ಕುಸಿತ, ICSE-CBSE ಕಡೆ ವಲಸೆ; ಇಲಾಖೆ ವಿರುದ್ಧ ಕ್ಯಾಮ್ಸ್‌ ಕಟು ಟೀಕೆ

ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಂದ ಸನ್ಮಾನ ಸ್ವೀಕರಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೋಷಕರು ಸರ್ಕಾರದ ನೆರವಿಗೆ ಧನ್ಯವಾದ ಅರ್ಪಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ನನ್ನ ಕಲ್ಪನೆ. 1994ರಲ್ಲಿ ಉಪ ಮುಖ್ಯಮಂತ್ರಿ ಆಗಿದ್ದಾಗ ಈ ಶಾಲೆಗಲಿಗೆ ಚಾಲನೆ ನೀಡಲಾಯಿತು ಎಂದು ಸಿದ್ದರಾಮಯ್ಯ ಹೇಳಿದರು.

ನಿಮ್ಮ ಸಾಧನೆಯೇ ನನಗೆ ಪ್ರೇರಣೆ: ಅಂಕಿತಾ

ಮುಖ್ಯಮಂತ್ರಿಗಳಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅಂಕಿತಾ, “ಸಾರ್ ನಿಮ್ಮ ಸಾಧನೆಗಳು, ನಿಮ್ಮ ಮಾತುಗಳು ನನ್ನ ಈ ಯಶಸ್ಸಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದವು” ಎಂದು ತಿಳಿಸಿದರು. ಮುಂದೆ ಐಎಎಸ್ ಅಧಿಕಾರಿ ಆಗಬೇಕೆಂಬ ಬಯಕೆಯನ್ನು ಅಂಕಿತಾ ವ್ಯಕ್ತಪಡಿಸಿದರು. ಈ ವೇಳೆ ಪಿಯುಸಿ ದಾಖಲಾತಿ ಸೇರಿದಂತೆ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ಒದಗಿಸುವುದಾಗಿ ಸಿಎಂ ಭರವಸೆ ನೀಡಿದರು.

ಅಂಕಿತಾಗೆ 5 ಲಕ್ಷ, ನವನೀತ್‌ಗೆ 2 ಲಕ್ಷ ಪ್ರೋತ್ಸಾಹ ಧನ ನೀಡಿದ ಡಿಸಿಎಂ ಡಿಕೆಶಿ

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಬಾಗಲಕೋಟೆ ಮುಧೋಳದ ಅಂಕಿತಾಗೆ 5 ಲಕ್ಷ ರೂ. ನೀಡಿ ಹಾಗೂ 3ನೇ ಸ್ಥಾನ ಪಡೆದ ಮಂಡ್ಯದ ನವನೀತ್‌ಗೆ 2 ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿನಂದಿಸಿದರು.

ಡಿಸಿಎಂ ಅವರ ಆಹ್ವಾನದ ಮೇರೆಗೆ ಅಂಕಿತಾ, ಆಕೆಯ ಪೋಷಕರು ಮತ್ತು ಶಾಲೆಯವರು, ನವನೀತ್ ಅವರ ಕುಟುಂಬದವರು ಸದಾಶಿವನಗರ ನಿವಾಸಕ್ಕೆ ಮಂಗಳವಾರ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸರಕಾರಿ ಶಾಲೆಯಲ್ಲಿ ಓದಿ 3ನೇ ರ‍್ಯಾಂಕ್ ಗಳಿಸಿರುವ ಮಂಡ್ಯದ ನವನೀತ್ ಕೂಡ ಆಗಮಿಸಿದ್ದರು.

ಶಿವಕುಮಾರ್ ಅವರು ಇಬ್ಬರೂ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಂಕಿತಾ ಅವರಿಗೆ 5 ಲಕ್ಷ ರೂ. ಚೆಕ್ ನೀಡಿದರು. ನವನೀತ್‌ಗೆ 2 ಲಕ್ಷ ರೂ. ಉಡುಗೊರೆ ಪ್ರಕಟಿಸಿ, ಚೆಕ್ ನೀಡುವಂತೆ ಕಚೇರಿ ಸಿಬ್ಬಂದಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, ಮೊನ್ನೆ 10ನೇ ತರಗತಿ ಫಲಿತಾಂಶ ನೋಡಿದಾಗ, ಬಾಗಲಕೋಟೆಯ ಬಸವರಾಜು ಅವರ ಪುತ್ರಿ ಅಂಕಿತಾ 625 ಕ್ಕೆ 625 ಅಂಕಗಳನ್ನು ಪಡೆದಿರುವುದನ್ನು ಕಂಡು ಸಂತೋಷವಾಯಿತು, ಬಹಳ ಹೆಮ್ಮೆ ಎನಿಸಿತು. ನಮ್ಮ ಸರ್ಕಾರಿ ಶಾಲೆ ಮಕ್ಕಳು ಹಾಗೂ ಅಲ್ಲಿನ ಶಿಕ್ಷಕರು ಬಹಳ ಸಮರ್ಥರಿದ್ದಾರೆ. ಅಂಕಿತಾ ಜತೆ ನಾನು ದೂರವಾಣಿ ಕರೆ ಮೂಲಕ ಮಾತನಾಡಿ ಬೆಂಗಳೂರಿಗೆ ಬಂದಾಗ ನನ್ನ ಮನೆಗೆ ಬರುವಂತೆ ಆಹ್ವಾನಿಸಿದ್ದೆ. ಅವರು ಇಂದು ಆಗಮಿಸಿದ್ದಾರೆ. ಸರ್ಕಾರದ ಪರವಾಗಿ ನಾನು ಈ ಹೆಣ್ಣುಮಗಳು ಹಾಗೂ ಆಕೆಯ ಪೋಷಕರನ್ನು ಅಭಿನಂದಿಸುತ್ತೇನೆ.

ಈಕೆಯ ಮುಂದಿನ ವಿದ್ಯಾಭ್ಯಾಸಕ್ಕೆ 5 ಲಕ್ಷ ರೂ. ಹಣವನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ. ಇನ್ನು ಮಂಡ್ಯದ ನವನೀತ್ ಕೂಡ ಸರಕಾರಿ ಶಾಲೆಯಲ್ಲಿ ಓದಿ ಮೂರನೇ ಸ್ಥಾನ ಪಡೆದಿದ್ದು, ಈತನಿಗೆ 2 ಲಕ್ಷ ಉಡುಗೊರೆಯಾಗಿ ನೀಡುತ್ತಿದ್ದೇನೆ. ಇವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ನನ್ನ ಆಸಕ್ತಿ ರಾಜಕಾರಣವಾದರೂ ನನ್ನ ಆಯ್ಕೆ ಶಿಕ್ಷಣ ಕ್ಷೇತ್ರ ಎಂದು ಯಾವಾಗಲೂ ಹೇಳುತ್ತಲೇ ಇರುತ್ತೇನೆ. ಗ್ರಾಮೀಣ ಭಾಗದ ಪಂಚಾಯ್ತಿ ಮಟ್ಟದಲ್ಲಿ ಸರ್ಕಾರಿ ಶಾಲೆಗಳನ್ನು ವಿಶ್ವ ಗುಣಮಟ್ಟದ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮಾಡುವುದು ನನ್ನ ಗುರಿ ಎಂದರು.

ಇದನ್ನೂ ಓದಿ | CBSE 12th Results 2024: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ, 87.98% ಪಾಸ್‌

ಸರ್ಕಾರದ ಹಣ ಬಳಸದೇ, ಸಿಎಸ್ಆರ್ ನಿಧಿ ಮೂಲಕ ಈ ಶಾಲೆಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಇವುಗಳ ನಿರ್ಮಾಣದ ಸಭೆ ಕರೆಯುತ್ತೇನೆ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ 20 ಶಾಲೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಈ ಶಾಲೆಗಳ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶ ನಮ್ಮದಾಗಿದೆ ಎಂದರು.

Exit mobile version