ಮಂಗಳೂರು: ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ದುರ್ಷರ್ಮಿಗಳು ಚಾಕುವಿನಿಂದ ಇರಿದ (Stabbing in Mangalore) ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರು ಎಂಬಲ್ಲಿ ಘಟನೆ ಸಂಭವಿಸಿದೆ.
ಬೋಳಿಯಾರು ನಿವಾಸಿಗಳಾದ ಸುರೇಶ್ ಹಾಗೂ ನಂದ ಕುಮಾರ್ ಚೂರಿ ಇರಿತಕ್ಕೆ ಒಳಗಾದವರು. ಮೋದಿ ಅಧಿಕಾರ ಸ್ವೀಕರಿಸಿದ ಬೋಳಿಯಾರ್ ವಿಜಯೋತ್ಸವ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಮುಗಿಸಿ ಅವರು ಬೋಳಿಯಾರು ಪೇಟೆಯಲ್ಲಿ ನಿಂತಿದ್ದರು. ಈ ವೇಳೆ ಅಪರಿಚಿತ ದುಷ್ಕರ್ಮಿಗಳ ತಂಡದಿಂದ ಏಕಾಏಕಿ ಇರಿದು ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಇಬ್ಬರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಅಧಿಕಾರಿಗಳಿಂದ ಮನೆ ಹರಾಜು ನೋಟಿಸ್; ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡ ರೈತ
ದಾವಣಗೆರೆ: ಸಾಲದ ಹೊರೆ ಮತ್ತು ಬ್ಯಾಂಕ್ ಅಧಿಕಾರಿಗಳಿಂದ ಮನೆ ಹರಾಜು ನೋಟಿಸ್ ಬಂದಿದ್ದಕ್ಕೆ ಮನನೊಂದು ರೈತರೊಬ್ಬರು ನೇಣಿಗೆ (Farmer Death) ಶರಣಾಗಿದ್ದಾರೆ. ಹನುಮಂತಪ್ಪ (43) ಮೃತ ದುರ್ದೈವಿ.
ಹನುಮಂತಪ್ಪ ತಮ್ಮ ಜಮೀನಿನಲ್ಲಿದ್ದ ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತನ ಸಾವಿನಿಂದ ಆಕ್ರೋಶಗೊಂಡ ಇತರೆ ರೈತರು ಪ್ರತಿಭಟನೆ ನಡೆಸಿದರು. ಬ್ಯಾಂಕ್ ಅಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಕಿಡಿಕಾರಿದರು.
ದಾವಣಗೆರೆ ತಾಲೂಕಿನ ಗುಡಾಳ್ ಗೊಲ್ಲರಹಟ್ಟಿ ಗ್ರಾಮದ ನಿವಾಸಿ ಹನಮಂತಪ್ಪ, 4 ಲಕ್ಷ ರೂಪಾಯಿ ಮನೆ ಸಾಲ ಹಾಗೂ 2.60 ಲಕ್ಷ ರೂಪಾಯಿ ಕುರಿ ಸಾಕಾಣಿಕೆಗೆ ಸಾಲ ಮಾಡಿಕೊಂಡಿದ್ದರು. ಮನೆ ಸಾಲ ಪ್ರತಿ ತಿಂಗಳು ತುಂಬುತ್ತಿದ್ದರು, ಆದರೆ ಕುರಿಸಾಲ ಮಾತ್ರ ಬಾಕಿ ಉಳಿದಿತ್ತು.
ಕುರಿ ಸಾಲ ತಿರಿಸಲು ಹೋದರೆ ಮನೆ ಹಾಗೂ ಕುರಿ ಸಾಲ ಎರಡು ಒಟ್ಟಿಗೆ ಕಟ್ಟುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಶನಿವಾರ ದಾವಣಗೆರೆ ನಗರದ ಚಾಮರಾಜಪೇಟೆ ಕೆನರಾ ಬ್ಯಾಂಕ್ ಅಧಿಕಾರಿಗಳು ಮನೆ ಬಾಗಿಲಿಗೆ ಹರಾಜು ನೋಟಿಸ್ ಅಂಟಿಸಿ, ಫೋಟೋ ತೆಗೆದುಕೊಂಡು ಹೋಗಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ ಭಾನುವಾರ ಬೆಳಗ್ಗೆ ನಾಲ್ಕು ಗಂಟೆಗೆ ಜಮೀನಿಗೆ ಹೋದ ಹನುಮಂತಪ್ಪ ನೇಣಿಗೆ ಶರಣಾಗಿದ್ದಾರೆ. ರೈತನ ಆತ್ಮಹತ್ಯೆಗೆ ಡಿಸಿ ಹಾಗೂ ಬ್ಯಾಂಕ್ ಅಧಿಕಾರಿಗಳೇ ಕಾರಣ. ಮನೆ ಸಾಲ ನಿರಂತರವಾಗಿ ಕಟ್ಟಿದ್ದರೂ ಹರಾಜಿಗೆ ಮುಂದಾಗಿದ್ದಾರೆ ಎಂದು ರೈತರು ಕಿಡಿಕಾರಿದರು. ನಮ್ಮ ಸಮಸ್ಯೆಗೆ ಪರಿಹಾರ ಸಿಗುವ ತನಕ ಶವ ಸಂಸ್ಕಾರ ಮಾಡಲ್ಲ ಎಂದು ಪಟ್ಟು ಹಿಡಿದರು. ಜಿಲ್ಲಾ ಆಸ್ಪತ್ರೆ ಶವಾಗಾರದ ಮುಂದೆ ಹೋರಾಟ ನಡೆಸಿದರು.