Site icon Vistara News

Puri Jagannath Rath Yatra: ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಒಬ್ಬನ ಸಾವು, 400 ಭಕ್ತರಿಗೆ ಗಾಯ!

Puri Jagannath Rath Yatra

Stampede during Puri Jagannath Rath Yatra in Puri, 400 Injured

ಪುರಿ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ 121 ಮಂದಿ ಮೃತಪಟ್ಟಿರುವ ಬೆನ್ನಲ್ಲೇ ಒಡಿಶಾದಲ್ಲಿರುವ (Odisha) ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಯ (Puri Jagannath Rath Yatra) ವೇಳೆಯೂ ಕಾಲ್ತುಳಿತ ಸಂಭವಿಸಿದ್ದು, ಒಬ್ಬ ವ್ಯಕ್ತಿ ಮೃತಪಟ್ಟರೆ, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭಾನುವಾರ ರಥ ಎಳೆಯುವಾಗ ನೂಕುನುಗ್ಗಲು ಉಂಟಾಗಿದ್ದು, ಉಸಿರಾಡಲು ಆಗದೆ ಒಬ್ಬ ಭಕ್ತ ಮೃತಪಟ್ಟಿದ್ದಾರೆ. ನೂಕುನುಗ್ಗಲು ಬಳಿಕ ಕಾಲ್ತುಳಿತ (Stampede) ಉಂಟಾಗಿದ್ದು, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

“ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಉಂಟಾಗಿದೆ. ಒಬ್ಬ ಭಕ್ತ ಉಸಿರಾಡಲು ಆಗದೆ ಮೃತಪಟ್ಟಿದ್ದಾನೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ರಥ ಎಳೆಯುವಾಗ ಒಬ್ಬರಿಗೊಬ್ಬರು ನೂಕುನುಗ್ಗಲು ಮಾಡಿದ್ದಾರೆ. ಇದರಿಂದಾಗಿ ಕಾಲ್ತುಳಿತ ಉಂಟಾಗಿದೆ” ಎಂದು ಅಧಿಕಾರಿಗಳು ತಿಳಿಸಿದರು. “ಒಬ್ಬ ವ್ಯಕ್ತಿ ಮೃತಪಟ್ಟಿರುವುದು ಹೃದಯಾಘಾತದಿಂದ ಅಲ್ಲ. ನೂಕುನುಗ್ಗಲು ಉಂಟಾದ ಕಾರಣ ಉಸಿರಾಡಲು ಆಗದೆ, ಉಸಿರುಗಟ್ಟಿ ಆತ ಮೃತಪಟ್ಟಿದ್ದಾನೆ” ಎಂದು ಸೇಂಟ್‌ ಜಾನ್‌ ಆಂಬುಲೆನ್ಸ್‌ ಸೇವೆಗಳ ವಿಭಾಗದ ಅಸಿಸ್ಟಂಟ್‌ ಕಮಾಂಡಂಟ್‌ ಸುಶಾಂತ್‌ ಕುಮಾರ್‌ ಪಟ್ನಾಯಕ್‌ ತಿಳಿಸಿದ್ದಾರೆ.

ಕಾಲ್ತುಳಿತದ ಬಳಿಕ 300 ಜನರನ್ನು ಪುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 50 ಮಂದಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಡಿಸ್‌ಚಾರ್ಜ್‌ ಮಾಡಲಾಗಿದೆ. ಯಾರಿಗೂ ಗಂಭೀರವಾಗಿ ಗಾಯಗಳಾಗಿಲ್ಲ. ಕಾಲ್ತುಳಿತದ ಬಳಿಕವೂ ರಥಯಾತ್ರೆಯು ಸುಗಮವಾಗಿ ಸಾಗಿದೆ ಎಂಬುದಾಗಿ ಒಡಿಶಾ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ರಥಯಾತ್ರೆ ವೀಕ್ಷಿಸಿದ ದ್ರೌಪದಿ ಮುರ್ಮು

ಪ್ರಸಿದ್ಧ ಜಗನ್ನಾಥ ದೇಗುಲದ ವಾರ್ಷಿಕ ರಥಯಾತ್ರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿದ್ದು,, ಅವರು ಲಕ್ಷಾಂತರ ಭಕ್ತರೊಂದಿಗೆ ಈ ರಥಯಾತ್ರೆಯನ್ನು ವೀಕ್ಷಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ವಿಶೇಷ ವ್ಯವಸ್ಥೆ ಮಾಡಿದ್ದು, ಸಾಮಾನ್ಯವಾಗಿ ಒಂದೇ ದಿನದಲ್ಲಿ ನಡೆಯುವ ಯಾತ್ರೆಯನ್ನು ಸುಗಮವಾಗಿ ನಡೆಸಲು ಒಡಿಶಾ ಸರ್ಕಾರ ವಿಸ್ತೃತ ವ್ಯವಸ್ಥೆಗಳನ್ನು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಗನ್ನಾಥ ದೇವಾಲಯದ ಮೂರು ದೇವರುಗಳಾದ ಜಗನ್ನಾಥ, ಬಲರಾಮ್ ಮತ್ತು ಸುಭದ್ರಾ ಮೂರು ವಿಭಿನ್ನ ರಥಗಳಲ್ಲಿ ಸವಾರಿ ಮಾಡುತ್ತಾರೆ. ಈ ಕಾರಣಕ್ಕಾಗಿ ರಥಯಾತ್ರೆಯನ್ನು ರಥೋತ್ಸವ ಎಂದು ಕರೆಯುತ್ತಾರೆ. ಅವರ ವಿಭಿನ್ನ ರಥಗಳನ್ನು ನಂದಿಘೋಷ, ತಾಳಧ್ವಜ ಮತ್ತು ದೇವದಳನ ಎಂದು ಕರೆಯಲಾಗುತ್ತದೆ. ಭಗವಾನ್ ಜಗನ್ನಾಥನ ನಂದಿಘೋಷ ರಥವು ಹದಿನೆಂಟು ಚಕ್ರಗಳನ್ನು ಹೊಂದಿದೆ. ಭಗವಾನ್ ಬಲರಾಮನ ತಾಳಧ್ವಜ ರಥವು ಹದಿನಾರು ಚಕ್ರಗಳನ್ನು ಹೊಂದಿದೆ ಮತ್ತು ಸುಭದ್ರೆಯ ಪದ್ಮಧ್ವಜ ರಥವು ಹದಿನಾಲ್ಕು ಚಕ್ರಗಳನ್ನು ಹೊಂದಿದೆ.

ಇದನ್ನೂ ಓದಿ: Puri Jagannath Yatra: ಪ್ರತಿ ವರ್ಷ ಹೊಸ ರಥ, ಜಗನ್ನಾಥನಿಗೆ ಜ್ವರ! ಪುರಿ ರಥ ಯಾತ್ರೆ ವಿಶೇಷ ಹಲವು!

Exit mobile version