ಬೆಂಗಳೂರು: ರಾಜ್ಯದಲ್ಲಿ ಇನ್ನುಮುಂದೆ ವಾಹನಗಳ ನೋಂದಣಿ ಮತ್ತಷ್ಟು ದುಬಾರಿಯಾಗಲಿದೆ. ಯಾಕೆಂದರೆ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ಅಧಿನಿಯಮ 2024ಕ್ಕೆ ರಾಜ್ಯಪಾಲರ ಅನುಮೋದನೆ ಸಿಕ್ಕಿದ್ದು, ಈ ಕಾನೂನಿನ ಅನ್ವಯ ಹೊಸದಾಗಿ ನೋಂದಣಿ ಮಾಡಿಸುವ ವಾಹನಗಳ ಮೇಲೆ ಶೇ.3 ಹೆಚ್ಚುವರಿ ಸೆಸ್ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸಾರಿಗೆ ವಾಹನಗಳ (ಯೆಲ್ಲೋ ಬೋರ್ಡ್ ವಾಣಿಜ್ಯ ವಾಹನ) ಮೇಲೆ ಶೇ.3 ಸೆಸ್ ವಿಧಿಸಲಿದ್ದು, ಬಸ್, ಟ್ಯಾಕ್ಸಿ ಹಾಗೂ ಆಟೋ ಮತ್ತಿತರ ಸಾರಿಗೆ ಉದ್ದೇಶಕ್ಕೆ ಬಳಸುವ ವಾಹನಗಳ ನೋಂದಣಿ ವೇಳೆ ತೆರಿಗೆಯ ಹೊರೆ ಬೀಳಲಿದೆ. ಇದರಿಂದ ಸಂಗ್ರಹಿಸುವ ಸೆಸ್ ಅನ್ನು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಗೆ ಬಳಸಲಾಗುತ್ತದೆ.
ಇವಿಗಳಿಗೆ ಶೇ.10 ಲೈಫ್‌ಟೈಮ್ ಟ್ಯಾಕ್ಸ್
ಇನ್ನು ತೆರಿಗೆ ತಿದ್ದುಪಡಿಯು ಎಲೆಕ್ಟ್ರಿಕ್ ವಾಹನಗಳ (ಇವಿ) ಮೇಲೆ ಆಜೀವ ತೆರಿಗೆ (ಲೈಫ್‌ಟೈಮ್ ಟ್ಯಾಕ್ಸ್) ವಿಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಎಲೆಕ್ಟ್ರಿಕ್ ಕಾರು, ಜೀಪ್, ಓಮ್ನಿ ಬಸ್‌ಗಳು ಮತ್ತು ವಿದ್ಯುತ್ ಚಾಲಿತ ಖಾಸಗಿ ಸೇವಾ ವಾಹನಗಳು, 25 ಲಕ್ಷ ರೂ.ಗಿಂತ ಹೆಚ್ಚಿನ ದರದ ವಾಹನಗಳ ನೋಂದಣಿಯ ಸಮಯದಲ್ಲಿ ವಾಹನದ ವೆಚ್ಚದ ಶೇ.10 ಆಜೀವ ತೆರಿಗೆ ಪಾವತಿಸಬೇಕು.
ಇದನ್ನೂ ಓದಿ | Money Guide: ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಆಗುತ್ತಿಲ್ಲವೆ?; ಈ ಸಮಸ್ಯೆ ಇರಬಹುದು ಗಮನಿಸಿ
2016ರಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ಪಾವತಿ ಮಾಡುವುದರಿಂದ ರಾಜ್ಯದಲ್ಲಿ ವಿನಾಯಿತಿ ನೀಡಲಾಗಿತ್ತು. ರಸ್ತೆ ತೆರಿಗೆ ಹಾಗೂ ನೋಂದಣಿ ವೇಳೆ ಶೂನ್ಯ ತೆರಿಗೆ ಘೋಷಣೆ ಮಾಡಲಾಗಿತ್ತು. ಇನ್ನು ಭಾರತದಲ್ಲಿ ಅತೀ ಹೆಚ್ಚು ರಸ್ತೆ ತೆರಿಗೆ ವಿಧಿಸುತ್ತಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಶೇ. 13 ರಿಂದ 20 ರಷ್ಟು ರಸ್ತೆ ತೆರಿಗೆ ವಿಧಿಸಲಾಗುತ್ತಿದೆ. ರಾಜ್ಯದಲ್ಲಿ ಶೇ.10 ರಷ್ಟು ಮೂಲಭೂತ ಸೌಕರ್ಯ ಸೆಸ್ ಹಾಗೂ ಶೇ. 1 ರಷ್ಟು ಪಟ್ಟಣ ಸಾರಿಗೆ ಸೆಸ್ ಮೂಲಕ ಒಟ್ಟು ಶೇ. 11 ರಷ್ಟು ಸೆಸ್ ವಿಧಿಸಲಾಗುತ್ತಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ದುಬಾರಿಯಾಗಿದೆ.