Site icon Vistara News

Janaspandana: ರಾಜ್ಯ ಮಟ್ಟದ ಮೊದಲ ಜನಸ್ಪಂದನ ಕಾರ್ಯಕ್ರಮ ಇಂದು, ವಿಧಾನಸೌಧದ ಎದುರು ಜಮಾಯಿಸಿದ ಜನ

janaspandana2

ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಮಹತ್ವದ ಜನಸ್ಪಂದನ (Janaspandana) ಕಾರ್ಯಕ್ರಮ ರಾಜಧಾನಿಯ ವಿಧಾನಸೌಧದ ಎದುರು ನಡೆಯುತ್ತಿದ್ದು, ರಾಜ್ಯಮಟ್ಟದ ಮೊದಲ ಜನಸ್ಪಂದನ ಕಾರ್ಯಕ್ರಮ ಇದಾಗಿದೆ. ವಿಧಾನಸೌಧದ ಮುಂಭಾಗದಲ್ಲಿ ಭರ್ಜರಿ ಸಿದ್ಧತೆ ಮಾಡಲಾಗಿದ್ದು, ಬೆಳಗ್ಗಿನಿಂದಲೇ ಜನ ಜಮಾಯಿಸಿದ್ದಾರೆ.

“ನನ್ನ ಜನ ನನ್ನ ಅಭಿಮಾನ” ಎಂಬ ಶೀರ್ಷಿಕೆ ಅಡಿ ಕಾರ್ಯಕ್ರಮ ನಡೆಯುತ್ತಿದ್ದು, ಇಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಅಹವಾಲು ಸಲ್ಲಿಸಲು ಬರುವ 8 ಸಾವಿರಕ್ಕೂ ಹೆಚ್ಚು ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ದೂರದ ಊರುಗಳಿಂದ ಬರುವ ಜನರಿಗೆ ಉಚಿತ ಬಸ್ ವ್ಯವಸ್ಥೆ, ಮೆಜೆಸ್ಟಿಕ್ ಬಸ್ ಮತ್ತು ರೈಲು ನಿಲ್ದಾಣಕ್ಕೆ ತೆರಳಲು ಉಚಿತ ವ್ಯವಸ್ಥೆ, ಕುಡಿಯುವ ನೀರು, ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.

ಪ್ರಮುಖ ಜನರ ಸಮಸ್ಯೆ ಆಲಿಸಲು ವಿವಿಧ ಇಲಾಖೆಗಳ ಮುಖ್ಯಸ್ಥರು, ಕಾರ್ಯದರ್ಶಿಗಳ ಹಾಜರಿಗೆ ಸೂಚನೆ ನೀಡಲಾಗಿದೆ. ಬೃಹತ್ ಸಂಖ್ಯೆಯಲ್ಲಿ ಅಹವಾಲು ಸಲ್ಲಿಸಲು ಜನ ಆಗಮಿಸುವ ಹಿನ್ನೆಲೆಯಲ್ಲಿ ವಿಧಾನಸೌಧದ ಬೃಹತ್ ಮೆಟ್ಟಿಲುಗಳ, ಉತ್ತರದಲ್ಲಿ ಜರ್ಮನ್ ಟೆಂಟ್ ಹಾಕಲಾಗುತ್ತದೆ. ಜನರು ಆನ್ ಲೈನ್ ಮೂಲಕವೂ ಅಹವಾಲು ದಾಖಲಿಸಬಹುದು. 1902ಕ್ಕೆ ಕರೆ ಮಾಡಿ ನೋಂದಣಿ ಮಾಡಿಸಬೇಕು.

ನೇರವಾಗಿ ಬರುವವರು ಆಧಾರ್ ಕಾರ್ಡ್, ಪಡಿತರ ಚೀಟಿ ತರಲು ಮನವಿ ಮಾಡಲಾಗಿದೆ. ಕಂದಾಯ, ಆಹಾರ, ಇಂಧನ, ಬಿಬಿಎಂಪಿ, ಬಿಡಿಎ, ಗ್ರಾಮೀಣಾಭಿವೃದ್ಧಿ ಮತ್ತಿತರ 36 ಇಲಾಖೆಗಳಿಗೆ ಪ್ರತ್ಯೇಕ ಕೌಂಟರ್ ಮಾಡಲಾಗಿದೆ. ಜನ ಮುಂಜಾನೆಯಿಂದಲೇ ವಿಧಾನ ಮುಂದೆ ಆಗಮಿಸುತ್ತಿದ್ದು, ತಮ್ಮ ತಮ್ಮ ಸಮಸ್ಯೆಗಳು ಇರುವ ಇಲಾಖೆಗಳ ಕೌಂಟರ್‌ಗಳಿಗೆ ಬಂದು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ‌‌‌‌.

ಪ್ರತಿ ಮೂರು ತಿಂಗಳಿಗೊಮ್ಮೆ ಜನಸ್ಪಂದನ ನಡೆಸಲು ಸಿಎಂ ತೀರ್ಮಾನಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಾಗಿತ್ತು. ಇಂದಿನ ಜನಸ್ಪಂದನ ನೋಡಲು ವಿಧಾನಸೌಧದಲ್ಲಿ 20 ಎಲ್‌ಇಡಿ ಸ್ಕ್ರೀನ್‌ಗಳ ಅಳವಡಿಕೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಖುದ್ದು ಕೌಂಟರ್‌ಗಳಿಗೆ ತೆರಳಿ ಅಹವಾಲು ಆಲಿಸುವ ವ್ಯವಸ್ಥೆಯೂ ಇದೆ. ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸಿಎಂ ತಾಕೀತು ಮಾಡಲಿದ್ದಾರೆ.

Exit mobile version