ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಶುಕ್ರವಾರ (ಏಪ್ರಿಲ್ 26) ಗಲಾಟೆ ನಡೆದು, ಚುನಾವಣೆ ಮತಯಂತ್ರವನ್ನು (EVM) ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು (Election Commission) ಏಪ್ರಿಲ್ 29ರಂದು ಮರು ಮತದಾನ ನಡೆಸಲು ತೀರ್ಮಾನಿಸಿದೆ. ಕ್ಷೇತ್ರ ಚುನಾವಣಾಧಿಕಾರಿಗಳ ಬಳಿ ವರದಿ ಪಡೆದ ಚುನಾವಣಾ ಆಯೋಗವು, ಮರು ಮತದಾನ (Re-election) ನಡೆಸಲು ತೀರ್ಮಾನಿಸಿದೆ. ಹಾಗಾಗಿ, ಸೋಮವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ ನಡೆಯಲಿದೆ.
ಮತಯಂತ್ರ ಧ್ವಂಸ ಮಾಡಿದ ಗ್ರಾಮಸ್ಥರು
ಇಂಡಿಗನತ್ತ ಗ್ರಾಮದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿದ್ದರು. ಮತದಾನದಿಂದ ದೂರ ಉಳಿದ ಗ್ರಾಮಸ್ಥರಿಂದ ಈ ಕೃತ್ಯ ನಡೆದಿತ್ತು. ಈ ವೇಳೆ ಗ್ರಾಮಸ್ಥರ ಮನವೊಲಿಕೆಗೆ ತೆರಳಿದ್ದ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಲಾಗಿತ್ತು. ಆಕ್ರೋಶಗೊಂಡ ಹಲವರು ಇವಿಎಂ, ಮೇಜು ಕುರ್ಚಿ ಮತಗಟ್ಟೆ ಸಾಮಗ್ರಿಗಳನ್ನು ಧ್ವಂಸ ಮಾಡಿದ್ದರು. ಇದರಿಂದಾಗಿ ಚುನಾವಣೆ ನಡೆದಿರಲಿಲ್ಲ.
ಲಾಠಿ ಚಾರ್ಚ್; ಹಲವರಿಗೆ ಗಾಯ
ಸ್ಥಳದಲ್ಲಿ ಜನರನ್ನು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್ ನಡೆಸಲಾಗಿತ್ತು. ಇದೇ ವೇಳೆ ತಿರುಗಿಬಿದ್ದ ಜನರು ಸಹ ಪೊಲೀಸರ ಮೇಲೆ ಕಲ್ಲು ತೂರಿದ್ದರು. ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ. ಸಾರ್ವಜನಿಕರು ಸೇರಿ ಅಧಿಕಾರಿಗಳಿಗೂ ಗಾಯಗಳಾಗಿದ್ದವು. ಪುರುಷರು, ಮಹಿಳೆಯರು ಎನ್ನದೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ.
ಇಂಡಿಗನತ್ತ, ತೇಕಣೆ, ಮೆಂದಾರೆ ಹಾಗೂ ತುಳಸಿಕೆರೆ ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕಾರ ಮಾಡಲಾಗಿದೆ. ಪಡಸಲನತ್ತ ಗ್ರಾಮದಲ್ಲಿ 85 ಮತದಾರರ ಪೈಕಿ ಕೇವಲ ಇಬ್ಬರು ಮತದಾನ ಮಾಡಿದ್ದಾರೆ. ಉಳಿದಂತೆ ಮತಗಟ್ಟೆಗಳತ್ತ ಯಾರೊಬ್ಬರೂ ಸುಳಿದಿಲ್ಲ. ಎಷ್ಟೇ ಬಾರಿ ಮನವಿ ಮಾಡಿದರೂ ಈ ಗ್ರಾಮಗಳಲ್ಲಿ ಮೂಲ ಸೌಕರ್ಯವನ್ನು ಕಲ್ಪಿಸಿಲ್ಲ. ಚುನಾವಣೆ ಬಂದಾಗ ಮಾತ್ರ ಈ ರಾಜಕಾರಣಿಗಳಿಗೆ ನಮ್ಮ ನೆನಪಾಗುತ್ತದೆ. ಅದಾದ ಬಳಿಕ ನಮ್ಮನ್ನು ಕೇಳುವವರೇ ಇಲ್ಲ ಎಂದು ಆರೋಪಿಸಿ ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳ ಗ್ರಾಮಸ್ಥರು ಮತದಾನವನ್ನು ಬಹಿಷ್ಕಾರ ಮಾಡಿದ್ದರು. ಇದೇ ವೇಳೆ ಗಲಾಟೆ ನಡೆದಿತ್ತು.
ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ; ಮೋದಿ, ರಾಹುಲ್ ಗಾಂಧಿ ಪ್ರತಿಕ್ರಿಯೆ ಕೇಳಿದ ಚುನಾವಣೆ ಆಯೋಗ!