ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ (BJP) ನಾಯಕ ಸುಬ್ರಮಣಿಯನ್ ಸ್ವಾಮಿ (Subramanian Swamy) ಅವರು ಆಕ್ಸಿಸ್ ಬ್ಯಾಂಕ್ (Axis Bank) ಮೇಲೆ ಗಂಭೀರ ಆರೋಪ ಮಾಡಿದ್ದು, ಸರಿಸುಮಾರು 5,100 ಕೋಟಿ ರೂಪಾಯಿಗಳ ಆರ್ಥಿಕ ಅವ್ಯವಹಾರವನ್ನು ಆರೋಪಿಸಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ (Max Life Insurance) ಕಂಪನಿಯ ಷೇರುಗಳನ್ನು ಒಳಗೊಂಡ ವಹಿವಾಟುಗಳ ಮೂಲಕ ಬ್ಯಾಂಕ್ ಅನ್ಯಾಯವಾಗಿ ಲಾಭ ಗಳಿಸಿದೆ (Unjust Gains) ಎಂದು ಸ್ವಾಮಿ ಪ್ರತಿಪಾದಿಸಿದ್ದಾರೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ಸಂಕ್ಷಿಪ್ತವಾಗಿ ವಿಚಾರಣೆ ನಡೆಸಿತು.
ಆಕ್ಸಿಸ್ ಬ್ಯಾಂಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಅರ್ಜಿಯ ಪೂರ್ವ ಪ್ರತಿಯನ್ನು ಸ್ವೀಕರಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ನ್ಯಾಯಾಲಯವು ಮಾರ್ಚ್ 13ಕ್ಕೆ ಪ್ರಕರಣವನ್ನು ಮುಂದೂಡಿತು.
ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಮತ್ತು ಮ್ಯಾಕ್ಸ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್‌ನ ವಂಚನೆ ಚಟುವಟಿಕೆಗಳನ್ನು ತನಿಖೆ ಮಾಡಲು ಸಾರ್ವಜನಿಕ ಹಿತಾಸಕ್ತಿಯಲ್ಲಿ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಮನವಿ ಒತ್ತಾಯಿಸಿದೆ.
ಮ್ಯಾಕ್ಸ್ ಲೈಫ್‌ನ ಈಕ್ವಿಟಿ ಷೇರುಗಳ ಖರೀದಿ ಮತ್ತು ಮಾರಾಟದಿಂದ ಆಕ್ಸಿಸ್ ಬ್ಯಾಂಕ್ ಮತ್ತು ಅದರ ಗುಂಪು ಘಟಕಗಳು ಅನಗತ್ಯ ಲಾಭ ಗಳಿಸಿವೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶನಗಳನ್ನು ಉಲ್ಲಂಘಿಸಿ ಈ ವಹಿವಾಟುಗಳನ್ನು ಪಾರದರ್ಶಕವಲ್ಲದ ರೀತಿಯಲ್ಲಿ ನಡೆಸಲಾಗಿದೆ ಎಂದು ಸ್ವಾಮಿ ಆರೋಪಿಸಿದ್ದಾರೆ.
ಬ್ಯಾಂಕ್‌ಗಳ ನಿರ್ವಹಣೆಯನ್ನು ಬ್ಯಾಂಕಿಂಗ್ ಅನುಭವವಿಲ್ಲದ ಬೇರೆ ವೃತ್ತಿಪರರಿಗೆ ಹಸ್ತಾಂತರಿಸಲಾಗುತ್ತಿದೆ. ಅನ್ಯಾಯದ ಮತ್ತು ಪಾರದರ್ಶಕವಲ್ಲದ ವಿಧಾನಗಳ ಮೂಲಕ ಷೇರುಗಳನ್ನು ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಮನವಿ ಹೇಳಿದೆ.
ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಷೇರು ವ್ಯವಹಾರಗಳಲ್ಲಿ 5,100 ಕೋಟಿ ರೂಪಾಯಿಗಳ ಅನ್ಯಾಯದ ಲಾಭಗಳ ಬಗ್ಗೆ ಮಾಡಲಾದ ಆರೋಪಗಳಲ್ಲಿ ಹುರುಳಿಲ್ಲ ಹಾಗೂ ಅದರಿಂದ ಯಾವುದೇ ದುಷ್ಪರಿಣಾಮವಿಲ್ಲ ಎಂದು ಆಕ್ಸಿಸ್ ಬ್ಯಾಂಕ್ ಎಕ್ಸ್ಚೇಂಜ್ ಫೈಲಿಂಗ್‌ನಲ್ಲಿ ಸ್ಪಷ್ಟಪಡಿಸಿದೆ.
ಮ್ಯಾಕ್ಸ್ ಲೈಫ್‌ನ ಷೇರುಗಳ ವಹಿವಾಟುಗಳಿಗೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಸರ್ಕಾರಿ ಅನುಮೋದನೆಯನ್ನು ಸಂಸ್ಥೆ ಪಡೆದುಕೊಂಡಿದೆ. ಯಾವುದೇ ಆಧಾರರಹಿತ ಆರೋಪಗಳ ವಿರುದ್ಧ ಬ್ಯಾಂಕ್ ಅನ್ನು ರಕ್ಷಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ.
2021ರಲ್ಲಿ ಆಕ್ಸಿಸ್ ಬ್ಯಾಂಕ್ ಮತ್ತು ಇತರ ಗುಂಪು ಘಟಕಗಳು ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್‌ನಲ್ಲಿ 12.02% ಪಾಲನ್ನು ಖರೀದಿಸಿದ್ದವು. ಕಳೆದ ವರ್ಷ ಆಗಸ್ಟ್‌ನಲ್ಲಿ, ಬ್ಯಾಂಕ್‌ನ ಮಂಡಳಿಯು 7% ಹೆಚ್ಚಿನ ಪಾಲನ್ನು ಖರೀದಿಸಲು ಜೀವ ವಿಮಾದಾರರಲ್ಲಿ 1,612 ಕೋಟಿ ರೂ.ಗಳ ಹೆಚ್ಚಿನ ಹೂಡಿಕೆಯನ್ನು ಅನುಮೋದಿಸಿತ್ತು. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಫೆಬ್ರವರಿಯಲ್ಲಿ ಈ ಹೆಚ್ಚುವರಿ ಷೇರು ಖರೀದಿಗೆ ತನ್ನ ಒಪ್ಪಿಗೆ ನೀಡಿದೆ.
ಮ್ಯಾಕ್ಸ್ ಲೈಫ್‌ನಲ್ಲಿ ಹೆಚ್ಚುವರಿ ಪಾಲನ್ನು ಖರೀದಿಸಲು ಆಕ್ಸಿಸ್ ಬ್ಯಾಂಕ್ ಮತ್ತು ಗ್ರೂಪ್ ಘಟಕಗಳ ಎರಡನೇ ಪ್ರಯತ್ನ ಇದಾಗಿದೆ. 2022ರ ಅಕ್ಟೋಬರ್‌ನಲ್ಲಿ, IRDAI ಮ್ಯಾಕ್ಸ್ ಲೈಫ್‌ಗೆ ರೂ 3 ಕೋಟಿ ದಂಡ ಮತ್ತು ಆಕ್ಸಿಸ್ ಬ್ಯಾಂಕ್‌ಗೆ ರೂ 2 ಕೋಟಿ ದಂಡ ವಿಧಿಸಿತ್ತು. ಮ್ಯಾಕ್ಸ್ ಲೈಫ್‌ನ ವ್ಯವಹಾರದ ಅನುಮೋದನೆಯನ್ನು ಪಡೆಯಲು ಕಂಪನಿಯು ನೀಡಿದ ವಿವರಗಳಲ್ಲಿ ವಂಚನೆಯಿದೆ ಎಂದು ವಿಮಾ ನಿಯಂತ್ರಕರು ಹೇಳಿದ್ದರು. ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಒಪ್ಪಂದದಲ್ಲಿ ಅನಗತ್ಯ ಲಾಭ ಗಳಿಸಿದ್ದಕ್ಕಾಗಿ ದಂಡ ವಿಧಿಸಲಾಗಿತ್ತು.
ಇದನ್ನೂ ಓದಿ: Subramanian Swamy: ಮೋದಿಯನ್ನು ಫಾಲೋ ಮಾಡುವವರು ಮೂರ್ಖರು ಎಂದ ಸುಬ್ರಮಣಿಯನ್ ಸ್ವಾಮಿ