Site icon Vistara News

Sudan crisis : ಸೇನಾಪಡೆ ಮತ್ತು ಅರೆ ಸೇನಾಪಡೆ ನಡುವಿನ ಕಾಳಗಕ್ಕೆ ತತ್ತರಿಸಿದ ಬಡ ಸುಡಾನ್, ಏನಿದರ ಹಿನ್ನೆಲೆ?

sudan crisis

#image_title

ಗಾತ್ರದಲ್ಲಿ ಆಫ್ರಿಕಾದ ಮೂರನೇ ಅತಿ ದೊಡ್ಡ ದೇಶವಾದ ಸುಡಾನ್‌ನಲ್ಲಿ ಕಳೆದ ಎರಡು ವಾರಗಳಿಂದ ಸೇನಾಪಡೆ ಮತ್ತು ಅರೆ ಸೇನಾಪಡೆಯ ಪರಸ್ಪರ ಕಾದಾಟಕ್ಕೆ 410ಕ್ಕೂ ಹೆಚ್ಚು ಮಂದಿ ಹತರಾಗಿದ್ದಾರೆ. 3500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಡಾನಿನ ರಾಜಧಾನಿ ಖರ್ಟೋಮ್‌ ರಣಾಂಗಣವಾಗಿದೆ. (Sudan crisis 2023) ದೇಶವನ್ನು ಶತ್ರುಗಳಿಂದ ರಕ್ಷಿಸಬೇಕಿದ್ದ ಸೇನಾಪಡೆ ಮತ್ತು ಅರೆ ಸೇನಾಪಡೆಯೇ ಇಲ್ಲಿ ಪರಸ್ಪರ ಘೋರ ಕಾಳಗ ನಡೆಸುತ್ತಿವೆ! ಇದು ಘೋರ ನಾಗರಿಕ ದಂಗೆಗೆ ಕಾರಣವಾಗುವ ಆತಂಕ ಸೃಷ್ಟಿಸಿದೆ.

ಕಾದಾಡುತ್ತಿರುವವರು ಯಾರು?

ಸುಡಾನ್‌ ಸೇನೆ ಮುಖ್ಯಸ್ಥ ಬರ್ಹಾನ್‌ ಮತ್ತು ಅರೆ ಸೇನಾ ಪಡೆ ಮುಖ್ಯಸ್ಥ ಮಹಮ್ಮದ್‌ ಹಮ್ದಾನ್‌ ದಾಗ್ಲೊ

ಸುಡಾನಿನ ಸಶಸ್ತ್ರ ಸೇನೆಯ (Sudanese Armed Forces) ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಅಬ್ದುಲ್‌ ಫತೇಹ್‌ ಅಲ್‌ ಬುರ್ಹಾನ್ ಮತ್ತು ಅರೆ ಸೇನಾಪಡೆಯ ಮುಖ್ಯಸ್ಥ (Rapid support Forces) ಮಹಮ್ಮದ್‌ ಹಮ್ದಾನ್‌ ದಾಗ್ಲೊ ಪರಸ್ಪರ ಸಂಘರ್ಷಕ್ಕಿಳಿದಿದ್ದಾರೆ. ಕಾರಣವೇನು? ನೋಡೋಣ. ಇಲ್ಲಿನ ಅರೆ ಸೇನಾಪಡೆಯನ್ನು ರ‍್ಯಾಪಿಡ್‌ ಸಪೋರ್ಟ್‌ ಫೋರ್ಸ್‌ ಎಂದೂ ಕರೆಯುತ್ತಾರೆ. ಆರಂಭದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದರು. 2001ರಲ್ಲಿ ಆಗಿನ ಸರ್ಕಾರವನ್ನು ಪತನಗೊಳಿಸಲು ಹಾಗೂ 2003ರಲ್ಲಿ ಸುಡಾನಿನ ಪಶ್ಚಿಮ ವಲಯದಲ್ಲಿ ಸಂಭವಿಸಿದ್ದ ದರ್‌ಫುರಿ ಬಂಡುಕೋರರ ದಂಗೆಯನ್ನು ಮಣಿಸಲು ಇಬ್ಬರೂ ಜಂಟಿಯಾಗಿ ಹೋರಾಡಿದ್ದರು. ಈಗ ಸುಡಾನಿನ ಸರ್ವಾಧಿಕಾರಿಗಳಾಗಲು ಇಬ್ಬರೂ ಬಡಿದಾಡುತ್ತಿದ್ದಾರೆ.

ಸುಡಾನ್‌ ಸಂಘರ್ಷಕ್ಕೆ ಕಾರಣವೇನು?

ಸುಡಾನ್‌ ಆಡಳಿತದ ಚುಕ್ಕಾಣಿಯನ್ನು 1989ರಿಂದ 2019 ರ ತನಕ 30 ವರ್ಷಗಳ ಕಾಲ ಉಮರ್‌ ಹಸನ್‌ ಅಹಮದ್‌ ಅಲ್‌ ಬಶೀರ್‌ ಎಂಬ ಮಾಜಿ ಮಿಲಿಟರಿ ಸೇನಾಧಿಕಾರಿ ಮತ್ತು ರಾಜಕಾರಣಿ ವಹಿಸಿದ್ದ. ಈತನ ಸರ್ವಾಧಿಕಾರಿ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು. ವ್ಯಾಪಕ ಫ್ರತಿಭಟನೆ, ಮಿಲಿಟರಿ ಮತ್ತು ನಾಗರಿಕ ದಂಗೆಯ ಪರಿಸ್ಥಿತಿ ನಿರ್ಮಾಣವಾಯಿತು. ಇದರ ಪರಿಣಾಮ 2019ರಲ್ಲಿ ಬಶೀರ್‌ ಸರ್ವಾಧಿಕಾರ ಅಂತ್ಯವಾಯಿತು. ಬಶೀರ್‌ ಪದಚ್ಯುತಿಯಾದರೂ, ಜನತೆ ಪ್ರಜಾಪ್ರಭುತ್ವ ಮಾದರಿಯ ಚುನಾಯಿತ ಸರ್ಕಾರವನ್ನು ಅಸ್ತಿತ್ವಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದರು. ಬಳಿಕ ಅಂತಾರಾಷ್ಟ್ರೀಯ ಬೆಂಬಲದೊಡನೆ ಮಿಲಿಟರಿ ಮತ್ತು ನಾಗರಿಕರ ಸಮ್ಮಿಶ್ರ ಆಡಳಿತ ವ್ಯವಸ್ಥೆಯಾದ ಟ್ರಾನ್ಸಿಶನಲ್‌ ಮಿಲಿಟರಿ ಕೌನ್ಸಿಲ್‌ (Transitional military council) ಬಂದಿತು. ಈ ವ್ಯವಸ್ಥೆಯಲ್ಲಿ ಅಬ್ದುಲ್ಲಾ ಹಮ್‌ದೋಕ್‌ ಅವರು ಸುಡಾನಿನ ಪ್ರಧಾನಿಯಾದರು. ಆದರೆ 2021ರ ಅಕ್ಟೋಬರ್‌ನಲ್ಲಿ ಮಿಲಿಟರಿ ದಂಗೆ ಸಂಭವಿಸಿ ಹಮ್‌ದೋಕ್‌ ಸರ್ಕಾರ ಉರುಳಿತು. ಲೆಫ್ಟಿನೆಂಟ್‌ ಜನರಲ್‌ ಅಬ್ದುಲ್‌ ಫತೇಹ್‌ ಅಲ್‌ ಬುರ್ಹಾನ್ ಸುಡಾನಿನ ಅಧ್ಯಕ್ಷರಾದರು. ಮಹಮ್ಮದ್‌ ಹಮ್ದಾನ್‌ ದಾಗ್ಲೊ ಉಪಾಧ್ಯಕ್ಷರಾದರು. 2023ರ ಜುಲೈನಲ್ಲಿ ಪ್ರಜಾಪ್ರಭುತ್ವ ಸರ್ಕಾರದ ಆಯ್ಕೆಗೆ ಚುನಾವಣೆ ನಡೆಯುವ ತನಕ ಮಿಲಿಟರಿ ಆಡಳಿತ ನಡೆಯಲಿದೆ ಎಂದು ಬುರ್ಹಾನ್‌ ಘೋಷಿಸಿದ್ದರು. ಅಂತಾರಾಷ್ಟ್ರೀಯ ಬೆಂಬಲದಲ್ಲಿ ನಡೆದ ಒಪ್ಪಂದದ ಪ್ರಕಾರ, ಸೇನೆ ಮತ್ತು ಅರೆ ಸೇನಾಪಡೆ ತಮ್ಮ ಅಧಿಕಾರವನ್ನು ಪ್ರಜಾಪ್ರಭುತ್ವ ಮದರಿಯ ಸರ್ಕಾರಕ್ಕೆ ಒಪ್ಪಿಸಬೇಕು. ಇದರಲ್ಲಿ ಎರಡು ಪ್ರಶ್ನೆಗಳ ಬಗ್ಗೆ ಮಿಲಿಟರಿ ಮತ್ತು ಅರೆ ಸೇನಾಪಡೆ ಮುಖ್ಯಸ್ಥರಲ್ಲಿ ತಕರಾರು ಇದೆ. ಅದು ಏನೆಂದರೆ, ಮೊದಲನೆಯದಾಗಿ ಸೇನಾ ಪಡೆ ಪ್ರಜಾಪ್ರಭುತ್ವ ಸರ್ಕಾರದ ನಿಯಂತ್ರಣಕ್ಕೆ ಬರುವುದು ಎಂದು ಎಂಬುದು. ಎರಡನೆಯದಾಗಿ ಅರೆ ಸೇನಾಪಡೆಯನ್ನು ಸಶಸ್ತ್ರ ಸೇನಾಪಡೆಯ ಜತೆ ವಿಲೀನಗೊಳಿಸುವುದು ಯಾವಾಗ? ಎಂಬುದು. ಆರ್‌ಎಸ್‌ಎಫ್‌ ಮುಖ್ಯಸ್ಥರ ವಾದ ಏನೆಂದರೆ, ಸೇನೆಯು ಆರ್‌ಎಸ್‌ಎಫ್‌ ಅನ್ನು ಈಗಲೇ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡರೆ, ಮತ್ತೆ ಸರ್ವಾಧಿಕಾರ ಜಾರಿಯಾದೀತು ಎಂಬ ಆರೋಪ.

2021ರ ದಂಗೆಯ ಬಳಿಕ ಸಶಸ್ತ್ರ ಸೇನಾಪಡೆ ಮತ್ತು ಅರೆ ಸೇನಾಪಡೆ (RSF) ಮುಖ್ಯಸ್ಥರ ನಡುವೆ ಬಾಂಧವ್ಯ ಹದಗೆಡಲು ಶುರುವಾಯಿತು. ಅರೆ ಸೇನಾಪಡೆಯ ಪ್ರಾಬಲ್ಯ ಹೆಚ್ಚುತ್ತಿದೆ ಎಂದು ಭಾವಿಸಿದ ಬುರ್ಹಾನ್‌, ಅದನ್ನು ಹತ್ತಿಕ್ಕಲು 10,000 ಯೋಧರನ್ನು ಒಳಗೊಂಡಿರುವ ಅರೆ ಸೇನಾಪಡೆಯನ್ನು ಸಶಸ್ತ್ರ ಸೇನಾಪಡೆಯಲ್ಲಿ ವಿಲೀನಗೊಳಿಸಲು ಪ್ರಸ್ತಾಪಿಸಿದರು. ಆದರೆ ಮಹಮ್ಮದ್‌ ಹಮ್ದಾನ್‌ ದಾಗ್ಲೊ ಈ ವಿಲೀನವನ್ನು ವಿರೋಧಿಸುತ್ತಿದ್ದಾರೆ. ಇನ್ನೂ 10 ವರ್ಷಗಳ ತನಕ ವಿಲೀನವನ್ನು ಮುಂದೂಡಬೇಕು ಎನ್ನುತ್ತಿದ್ದಾರೆ. ಕಳೆದ ಕೆಲವು ವಾರಗಳಿಂದ ಆರ್‌ಎಸ್‌ಎಫ್‌ನ ತುಕಡಿಗಳನ್ನು ಮರು ನಿಯೋಜಿಸಲಾಗುತ್ತಿದೆ. ಈ ಬದಲಾವಣೆ ಆರ್‌ಎಸ್‌ಎಫ್‌ ಮತ್ತು ಸಶಸ್ತ್ರ ಸೇನಾ ಪಡೆಯ ಪರಸ್ಪರ ಕಾಳಗಕ್ಕೆ ಕಾರಣವಾಗಿದೆ. ಇದು ಸೇನಾ ದಂಗೆಯ ಪ್ರಚೋದನೆ ಎಂದು ಮಿಲಿಟರಿ ಆಡಳಿತ ಆರೋಪಿಸಿದೆ.

ಸಂಘರ್ಷದಿಂದ ದಿವಾಳಿಯಾಗಲಿದೆಯೇ ಸುಡಾನ್?

ಸುಡಾನ್‌ನಲ್ಲಿ 2021ರಿಂದಲೂ ಪ್ರಜಾಪ್ರಭುತ್ವ ಪರ ಹೋರಾಟ ನಡೆಯುತ್ತಿದೆ. ಆದರೆ ಕನಸು ನನಸಾಗಿಲ್ಲ. ಬದಲಿಗೆ ಸೇನೆಯ ಎರಡು ಬಣಗಳ ಕಾದಾಟದಿಂದ ಅದು ಮತ್ತಷ್ಟು ವಿಳಂಬವಾಗುತ್ತಿದೆ. ಕೆಲ ಅಂತಾರಾಷ್ಟ್ರೀಯ ತಜ್ಞರ ಪ್ರಕಾರ ಈ ಸಂಘರ್ಷ ಸುಡಾನ್‌ನ ದಿವಾಳಿಯಾಗಿ ಪತನಕ್ಕೂ ಕಾರಣವಾದರೆ ಅಚ್ಚರಿ ಇಲ್ಲ. ಏಕೆಂದರೆ ಈಗಾಗಲೇ ಅಲ್ಲಿನ ಆರ್ಥಿಕತೆ ತೀವ್ರ ಸಂಕಷ್ಟದಲ್ಲಿದೆ. ನೈಸರ್ಗಿಕ ಸಂಪನ್ಮೂಲ ಇದ್ದರೂ, ದುರಾಡಳಿತದಿಂದ ಪ್ರಯೋಜನವಾಗುತ್ತಿಲ್ಲ. ಭಾರಿ ವಿದೇಶಿ ಸಾಲದ ಹೊರೆ ಸುಡಾನ್‌ ಮೇಲಿದೆ. ನಾಗರಿಕ ಒಕ್ಕೂಟಗಳು ಸುಡಾನಿನಲ್ಲಿ ಪ್ರಜಾಪ್ರಭುತ್ವ ಸರ್ಕಾರ ಮರಳಬೇಕು ಎಂದು ಒತ್ತಾಯಿಸುತ್ತಿವೆ. ಆದರೆ ಸೇನಾಧಿಕಾರಿಗಳ ಪ್ರತಿಷ್ಠೆ-ಕಾಳಗದಿಂದ ಪರಿಸ್ಥಿತಿ ಹಿಂಸಾತ್ಮಕವಾಗಿ ತಿರುಗಿದೆ. ಅಮೆರಿಕ ಸೇರಿದಂತೆ ವಿದೇಶಗಳು ಸುಡಾನ್‌ ರಾಜಧಾನಿಯಿಂದ ರಾಜತಾಂತ್ರಿಕರು, ಕುಟುಂಬಗಳನ್ನು ವಾಪಸ್‌ ಕರೆಸಿಕೊಳ್ಳುತ್ತಿವೆ.

ಯುದ್ಧಪೀಡಿತ ಸುಡಾನ್‌ನಲ್ಲಿ ಸಂಕಷ್ಟಕ್ಕೀಡಾಗಿರುವ ಭಾರತೀಯರನ್ನು ಸುರಕ್ಷಿತವಾಗಿ ತವರಿಗೆ ಕರೆಸಿಕೊಳ್ಳಲು ಭಾರತ ಶತ ಪ್ರಯತ್ನ ನಡೆಸಿದೆ. ಇದುವರೆಗೆ 150 ಮಂದಿ ಭಾರತೀಯರು ಸುಡಾನ್‌ನಿಂದ ಸೌದಿ ಅರೇಬಿಯಾಕ್ಕೆ ವಾಪಸಾಗಿದ್ದಾರೆ. ಜೆಡ್ಡಾಗೆ ಆಗಮಿಸಿರುವ ಅವರನ್ನು ಭಾರತಕ್ಕೆ ಕಳಿಸಿಕೊಡಲಾಗುವುದು ಎಂದು ಸೌದಿ ಅರೇಬಿಯಾ ಘೋಷಿಸಿದೆ. ಸುಡಾನ್‌ ದಂಗೆಯಲ್ಲಿ ಕೇರಳ ಮೂಲದ ಒಬ್ಬರು ಗುಂಡೇಟು ತಗುಲಿ ಮೃತಪಟ್ಟಿದ್ದಾರೆ.

Exit mobile version