ಬೆಂಗಳೂರು: 5, 8, 9, 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ (Public Exam, Board Exam) ನಡೆಸಲು ಅನುಮತಿ ನೀಡಿದ್ದ ಕರ್ನಾಟಕ ಹೈ ಕೋರ್ಟ್ (Karnataka High Court) ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ತಡೆಯಾಜ್ಞೆ ನೀಡಿದೆ. ಇಂದು ಬೆಳಗ್ಗೆ ತಾನೇ ಎಲ್ಲ ಶಾಲೆಗಳೂ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಇದಾದ ಬಳಿಕ ಈ ಆದೇಶ ಹೊರಬಿದ್ದಿದೆ.
5, 8, 9, 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗೆ ಅಸ್ತು ಎಂದು ಹೈ ಕೋರ್ಟ್ ಹೇಳಿತ್ತು. ಸದ್ಯ ಹೈ ಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. “ಸದ್ಯ ಯಾವುದೇ ಶಾಲೆಗಳು ಸಹ ಫಲಿತಾಂಶ ಪ್ರಕಟಿಸಬಾರದು. ಮುಂದಿನ ಆದೇಶದ ವರೆಗೆ ಕಾಯಬೇಕು” ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಏನಿದು ಪಬ್ಲಿಕ್ ಪರೀಕ್ಷೆ ಮತ್ತು ಅದರ ಸುತ್ತಲಿನ ವಿವಾದ?
ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಬಿ.ಸಿ ನಾಗೇಶ್ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಮಾದರಿಯ ಮೌಲ್ಯಾಂಕನ ಪರೀಕ್ಷೆ ಜಾರಿಗೆ ತಂದಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ 9ನೇ ತರಗತಿ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಬೋರ್ಡ್ ಎಕ್ಸಾಮ್ ನಡೆಸುವ ಚಿಂತನೆ ಮಾಡಲಾಗಿತ್ತು. 9ನೇ ತರಗತಿ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಪಬ್ಲಿಕ್ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಗಂಭೀರತೆ ಕಾಣಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಾದವಾಗಿತ್ತು.
ಆದರೆ, 2023ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಂಘಟನೆ ಕೋರ್ಟ್ ಮೆಟ್ಟಲೇರಿತ್ತು. ವಾದ ಆಲಿಸಿದ ಹೈಕೋರ್ಟ್ ಸರ್ಕಾರ ಸುತ್ತೋಲೆ ರದ್ದುಗೊಳಿಸಿ ಆದೇಶಿಸಿತ್ತು. ತಕ್ಷಣವೇ ರಾಜ್ಯದ ಶಿಕ್ಷಣ ಇಲಾಖೆ ವತಿಯಿಂದ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತು. ಎರಡೂ ಕಡೆಯವರ ವಾದ ಮಾತ್ರವಲ್ಲ, ಪರೀಕ್ಷೆಗಳು ಹೇಗೆ ನಡೆಯುತ್ತವೆ ಎಂಬಿತ್ಯಾದಿ ಅಂಶಗಳನ್ನು ಕೇಳಿಸಿಕೊಂಡ ಹೈಕೋರ್ಟ್ ಪರೀಕ್ಷೆ ನಡೆಸಲು ಷರತ್ತುಬದ್ಧ ಅನುಮತಿಯನ್ನು ನೀಡಿತ್ತು.
ಒಂದು ಹಂತದಲ್ಲಿ ಮಾರ್ಚ್ 13ರಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನು ರದ್ದುಪಡಿಸಿದ್ದ ಹೈಕೋರ್ಟ್ ಮಾರ್ಚ್ 14ರಂದು ತೀರ್ಪು ನೀಡಿ ಪರೀಕ್ಷೆಗೆ ಅನುಮತಿ ನೀಡಿತು. ಜತೆಗೆ ಮಾರ್ಚ್ 27ರಿಂದಲೇ ಪರೀಕ್ಷೆಯನ್ನು ಮರುನಿಗದಿ ಮಾಡಲು ಸೂಚಿಸಿತು. ಜತೆಗೆ ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಬಾರದು, ಯಾರನ್ನೂ ಅನುತ್ತೀರ್ಣಗೊಳಿಸಬಾರದು ಮತ್ತು ಫಲಿತಾಂಶವನ್ನು ಶಾಲಾ ಮಟ್ಟದಲ್ಲಿ ಮಾತ್ರ ಪ್ರಕಟಿಸಬೇಕು ಎಂಬ ಷರತ್ತುಗಳನ್ನು ವಿಧಿಸಿತು. ಇದಕ್ಕೆ ರಾಜ್ಯ ಸರ್ಕಾರವೂ ಒಪ್ಪಿ ಮಾರ್ಚ್ 27ರಿಂದ ಪರೀಕ್ಷೆಯನ್ನು ಆರಂಭಿಸಿತ್ತು.
ಈ ನಡುವೆ ಖಾಸಗಿ ಶಾಲೆಗಳ ಒಕ್ಕೂಟವು ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆದು, ಪರೀಕ್ಷೆ ಈಗಾಗಲೇ ಆರಂಭಗೊಂಡಿರುವುದರಿಂದ ಈಗ ತಡೆಯಾಜ್ಞೆ ನೀಡಲಾಗದು ಎಂದು ಹೇಳಿತ್ತು. ಬಳಿಕ ಮೇಲ್ಮನವಿಯ ವಿಚಾರಣೆ ನಡೆದಿದ್ದು. ಇಂದು ಪಬ್ಲಿಕ್ ಪರೀಕ್ಷೆಯ ವಿರುದ್ಧ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ: Public Exam : 5,8,9ನೇ ಕ್ಲಾಸ್ ಪಬ್ಲಿಕ್ ಪರೀಕ್ಷೆ ಪರಿಷ್ಕೃತ ಟೈಮ್ ಟೇಬಲ್ ಪ್ರಕಟ; ಯಾವಾಗ ಯಾವ ಪರೀಕ್ಷೆ?