Site icon Vistara News

ವಿಸ್ತಾರ ಸಂಪಾದಕೀಯ: ದೇಶಾದ್ಯಂತ ವ್ಯವಸ್ಥಿತ ಧಾನ್ಯ ಸಂಗ್ರಹ ಕೇಂದ್ರ ಮಹತ್ವದ ನಿರ್ಧಾರ

Narendra Modi

Systematic grain collection center across the country is an important decision

ನರೇಂದ್ರ ಮೋದಿ ಸರ್ಕಾರ ದೇಶಾದ್ಯಂತ ಬೃಹತ್‌ ಧಾನ್ಯ ಸಂಗ್ರಹ ಸಾಮರ್ಥ್ಯ ವೃದ್ಧಿಗೆ 1 ಲಕ್ಷ ಕೋಟಿ ರೂ. ವೆಚ್ಚದ ಯೋಜನೆ ಘೋಷಿಸಿದೆ. ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ 700 ಲಕ್ಷ ಟನ್‌ ಧಾನ್ಯ ಸಂಗ್ರಹ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಯೋಜನೆಯ ಆರಂಭಿಕ ಹಂತದಲ್ಲಿ ಆಯ್ದ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2 ಸಾವಿರ ಟನ್‌ ಧಾನ್ಯ ಸಂಗ್ರಹ ಸಾಮರ್ಥ್ಯದ ಗೋದಾಮುಗಳು ನಿರ್ಮಾಣವಾಗಲಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಆಹಾರ ಸಂಗ್ರಹಣಾ ಯೋಜನೆಗೆ ಅನುಮತಿ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಇದುವರೆಗೆ ದೇಶದಲ್ಲಿ ಒಟ್ಟು 1450 ಲಕ್ಷ ಟನ್ ಸಂಗ್ರಹ ಸಾಮರ್ಥ್ಯವಿದ್ದು, ಈಗ ಸಹಕಾರಿ ಕ್ಷೇತ್ರದಲ್ಲಿ 700 ಲಕ್ಷ ಟನ್ ಸಂಗ್ರಹಣಾ ಸಾಮರ್ಥ್ಯ ಆರಂಭವಾಗಲಿದೆ. ಈ ಮೂಲಕ ದೇಶದ ಒಟ್ಟು ಶೇಖರಣಾ ಸಾಮರ್ಥ್ಯ 2150 ಲಕ್ಷ ಟನ್‌ಗೆ ಏರಿಕೆಯಾಗಲಿದೆ.

ಈ ಯೋಜನೆ ರೈತರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ, ದೇಶದಲ್ಲಿ ಸದ್ಯ 3,100 ಲಕ್ಷ ಟನ್‌ ಧಾನ್ಯ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ಉತ್ಪಾದನೆಯಲ್ಲಿ ಶೇ.47ರಷ್ಟು ಧಾನ್ಯಗಳನ್ನು ಮಾತ್ರ ಗೋದಾಮುಗಳಲ್ಲಿ ಸಂಗ್ರಹಿಸಬಹುದಾಗಿದೆ. ಆಹಾರ ಧಾನ್ಯಗಳನ್ನು ದೀರ್ಘಕಾಲ ಸುರಕ್ಷಿತವಾಗಿ ಮತ್ತು ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳದಂತೆ ಶೇಖರಿಸಿ ಇಡುವ ಪ್ರಮುಖ ಉದ್ದೇಶದೊಂದಿಗೆ ಜಾರಿಗೆ ತರಲಾಗುತ್ತಿರುವ ಈ ಯೋಜನೆಯ ಮೂಲಕ ಜನರಿಗೆ ಆಹಾರ ಧಾನ್ಯಗಳ ಲಭ್ಯತೆ ಹೆಚ್ಚಲಿದೆ. ದೇಶಾದ್ಯಂತ ಧಾನ್ಯಗಳ ಸಂಗ್ರಹ ಹಾಗೂ ಲಭ್ಯತೆ ಇರುವುದರಿಂದ, ಪಡಿತರ ವ್ಯವಸ್ಥೆಗೆ ಪೂರಕವಾಗಿ ಆಹಾರಧಾನ್ಯಗಳನ್ನು ಲಭ್ಯವಿರುವಂತೆ ನೋಡಿಕೊಳ್ಳಬಹುದು.

ಇದುವರೆಗೆ ರೈತರು ಬೆಳೆದ ಆಹಾರಧಾನ್ಯಗಳಿಗೆ ಸೂಕ್ತವಾದ ಗೋದಾಮು ವ್ಯವಸ್ಥೆಯಿರಲಿಲ್ಲ. ಇದರಿಂದಾಗಿ ರೈತರು ದೊರೆತ ಕಡಿಮೆ ದರಕ್ಕೆ ತಮ್ಮ ಧಾನ್ಯಗಳನ್ನು ಮಾರಬೇಕಾಗುತ್ತಿತ್ತು. ಹೆಚ್ಚು ಧಾನ್ಯ ಸಂಗ್ರಹಿಸುವ ವ್ಯವಸ್ಥೆ ಇದ್ದರೆ ರೈತರು ಉತ್ತಮ ಬೆಲೆ ಇರುವಾಗ ಧಾನ್ಯ ಮಾರಲು ಅನುವಾಗುತ್ತದೆ. ಜತೆಗೆ ಸಾಗಾಟದ ವೆಚ್ಚವೂ ಕಡಿಮೆಯಾಗುತ್ತದೆ. ಸರಿಯಾದ ಸಂಗ್ರಹ ವ್ಯವಸ್ಥೆಯಿದ್ದಾಗ ಕ್ರಿಮಿಕೀಟಗಳಿಂದ ಧಾನ್ಯವನ್ನು ರಕ್ಷಿಸಲು ಸಾಧ್ಯವಾಗಲಿದೆ. ಅತಿಯಾದ ತೇವಾಂಶ ಅಥವಾ ಅತಿಯಾದ ಉಷ್ಣಾಂಶಗಳಿಂದಲೂ ಆಹಾರಧಾನ್ಯಗಳು ಹಾಳಾಗುತ್ತವೆ. ಇದುವರೆಗೆ ಹೀಗೆ ಹಾಳಾಗುತ್ತಿದ್ದ ಧಾನ್ಯದ ಪ್ರಮಾಣ ಸುಮಾರು ಶೇ.20ರಷ್ಟು. ಹೀಗೆ ಹಾಳಾಗುವಿಕೆಯಿಂದ ರಕ್ಷಿಸಲು ಸುಸಜ್ಜಿತ ಗೋದಾಮುಗಳು ಕಾರ್ಯ ನಿರ್ವಹಿಸುತ್ತವೆ.

ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳು ಮತ್ತು ಈ ಸಂಗ್ರಾಹಾಗಾರಗಳು ಜತೆಯಾಗಿ ಕಾರ್ಯ ನಿರ್ವಹಿಸಲಿವೆ. ಇವುಗಳ ಮೂಲಕ ನಿಭಾವಣೆಯಾಗುವ ಧಾನ್ಯ ಸಂಗ್ರಹ ವ್ಯವಸ್ಥೆಯಿಂದ, ರೈತರಿಗೆ ಸೂಕ್ತ ಬೆಲೆಯೂ ಸಿಗುತ್ತದೆ. ಈ ಸೊಸೈಟಿಗಳು ಗ್ರಾಮೀಣ ವ್ಯವಸ್ಥೆಯ ಜೀವನಾಡಿಗಳಾಗಿದ್ದು, ಇವುಗಳ ಮೂಲಕ ಧಾನ್ಯಸಂಗ್ರಹ, ನ್ಯಾಯಬೆಲೆ ವ್ಯವಸ್ಥೆಯೂ ದೊರೆಯುವಂತೆ ವ್ಯವಸ್ಥೆ ಮಾಡುವ ಬಗ್ಗೆ ಸಚಿವರು ಹೇಳಿದ್ದಾರೆ. ದೇಶದಲ್ಲಿ ಸುಮಾರು 1 ಲಕ್ಷ ಕೃಷಿ ಸಾಲ ಸೊಸೈಟಿಗಳ ಜಾಲವಿದೆ. ಇವುಗಳೊಂದಿಗೆ 13 ಕೋಟಿ ರೈತರ ಬದುಕು ಜೋಡಿಕೊಂಡಿದೆ. ವಿಕೇಂದ್ರೀಕೃತ ಸಂಗ್ರಹಾಗಾರ ವ್ಯವಸ್ಥೆಯನ್ನು ಇವುಗಳ ಜತೆಗೆ ಜೋಡಿಸಿದಾಗ ಅವು ಬಲಿಷ್ಠವಾದ ಕೃಷಿಧಾನ್ಯ ವ್ಯವಸ್ಥೆಯಾಗಿ ರೂಪುಗೊಳ್ಳಲಿವೆ. ಇದರಿಂದ ಕನಿಷ್ಠ ಬೆಂಬಲ ಬೆಲೆಯನ್ನೂ ಸಫಲವಾಗಿ ತಲುಪಿಸಲು ಸಾಧ್ಯ. ಆ ಮೂಲಕ ರೈತರೂ ಸಶಕ್ತರಾಗಲಿದ್ದಾರೆ ಎಂಬ ಚಿಂತನೆಯೂ ಇದರ ಹಿಂದೆ ಇದೆ.

ಇದನ್ನೂ ಓದಿ: Union Cabinet: ವಿಶ್ವದಲ್ಲೇ ಬೃಹತ್‌ ಧಾನ್ಯ ಸಂಗ್ರಹಣೆ ಸಾಮರ್ಥ್ಯ ವೃದ್ಧಿಗೆ ಕೇಂದ್ರ 1 ಲಕ್ಷ ಕೋಟಿ ರೂ.; ರೈತರಿಗೇನು ಲಾಭ?

ಈ ಸ್ಟೋರೇಜ್‌ ಯೋಜನೆಯಿಂದಾಗಿ ಹಲವು ಗುರಿಗಳು ಪೂರೈಸಲಿವೆ. ಹಾಳಾಗುವ ಆಹಾರಧಾನ್ಯಗಳ ಸಂಗ್ರಹ, ಬೆಂಬಲ ಬೆಲೆಯ ಗರಿಷ್ಠ ಲಭ್ಯತೆ, ದೇಶಕ್ಕೆ ಆಹಾರ ಭದ್ರತೆ, ಪಡಿತರ ವ್ಯವಸ್ಥೆಯ ಪರಿಣಾಮಕಾರಿತನ ಇತ್ಯಾದಿ. ಇವೆಲ್ಲವುಗಳಿಂದಾಗಿ ಇದು ಮಹತ್ವದ ಯೋಜನೆಯೆನಿಸಲಿದೆ. ವಿಶ್ವದಲ್ಲೇ ಬೃಹತ್‌ ಎನ್ನಲಾಗಿರುವ ಈ ಧಾನ್ಯ ಸಂಗ್ರಹ ಕೇಂದ್ರ ಯೋಜನೆ ತ್ವರಿತವಾಗಿ ಜಾರಿಗೆ ಬಂದು ರೈತರಿಗೆ ಇದರ ಪ್ರಯೋಜನ ಸಿಗುವಂತಾಗಲಿ.

Exit mobile version