Site icon Vistara News

Kannada Name Board: ಕನ್ನಡ ನಾಮಫಲಕ ಅಳವಡಿಸದಿದ್ದರೆ ಮಾ.5ಕ್ಕೆ ಮತ್ತೆ ಪ್ರತಿಭಟನೆ: ನಾರಾಯಣಗೌಡ ಎಚ್ಚರಿಕೆ

Demand to provide job reservation for Kannadigas; Massive Dharani sathyagraha on July 1 from Karave

ಬೆಂಗಳೂರು: ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಫೆಬ್ರವರಿ 28 ರೊಳಗಾಗಿ ಶೇ. 60ರಷ್ಟು ಕನ್ನಡ ಅಳವಡಿಕೆಗೆ ಬಿಬಿಎಂಪಿ ಗಡುವು ನೀಡಿತ್ತು. ಆದರೆ, ಇನ್ನೂ ಹಲವು ಕಡೆ ಕನ್ನಡ ನಾಮಫಲಕ ಅಳವಡಿಕೆ (Kannada Name Board) ಮಾಡದಿರುವುದು ಕಂಡುಬಂದಿದೆ. ಹೀಗಾಗಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹಿಸಿ ಮಾ.5ರಂದು ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿರುವ ಅವರು, ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಲೇಬೇಕು. ಬೆಂಗಳೂರು ಮಾತ್ರವಲ್ಲ, ರಾಜ್ಯದ 31 ಜಿಲ್ಲೆಗಳಲ್ಲೂ ಈ ಕಾನೂನು ಜಾರಿಗೆ ಬರಬೇಕು. ಬಿಬಿಎಂಪಿ ನೀಡಿದ ಗಡುವು ಬುಧವಾರಕ್ಕೆ ಮುಗಿದಿದೆ. ಮಾರ್ಚ್ 1ರವರೆಗೆ ನಾವು ಕಾದು ನೋಡುತ್ತೇವೆ. ಮಾರ್ಚ್ 5ರಂದು ಮತ್ತೆ ಬೀದಿಗಿಳಿದು, ಬಿಬಿಎಂಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ 27 ರಂದು ಬೆಂಗಳೂರಿನಲ್ಲಿ ಕನ್ನಡದಲ್ಲಿ ನಾಮಫಲಕ ಕಡ್ಡಾಯಕ್ಕೆ ಆಗ್ರಹಿಸಿ ಹೋರಾಟ ನಡೆದಿತ್ತು. ಅಂದು ಆಂಗ್ಲ ಭಾಷೆಯಲ್ಲಿದ್ದ ನಾಮಫಲಕಗಳನ್ನ ಕಿತ್ತು ಹಾಕಿದ್ದೆವು. ಆಗ ನಾನು 14 ದಿನ ಜೈಲುವಾಸ ಮಾಡಿದ್ದೆ. ರಾಜ್ಯ ಸರ್ಕಾರ ಕನ್ನಡ ನಾಮಫಲಕ ಅನುಷ್ಠಾನಕ್ಕೆ ಸುಗ್ರಿವಾಜ್ಞೆ ತರುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿತ್ತು. ನಂತರ ಬಿಬಿಎಂಪಿ ಒಂದು ಗಡುವು ಕೇಳಿತ್ತು. ಇಂದಿಗೆ ಗಡುವು ಮುಗಿದಿದೆ. ಎಷ್ಟರ ಮಟ್ಟಿಗೆ ಕನ್ನಡ ನಾಮಫಲಕ ಅಳವಡಿಕೆಯಾಗಿದೆ ಎಂದು ಬಿಬಿಎಂಪಿ ಕಮಿಷನರ್ ಜೊತೆ ಚರ್ಚೆ ಮಾಡಿದ್ದೇವೆ ಎಂದರು.

46,600 ಉದ್ದಿಮೆದಾರರು ಕನ್ನಡ ನಾಮಫಲಕ ಅಳವಡಿಕೆ ಮಾಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ 3,616 ಉದ್ದಿಮೆದಾರರು ಅಳವಡಿಕೆ ಮಾಡಬೇಕು, ಅದನ್ನು ಶೀಘ್ರದಲ್ಲಿ ಅನುಷ್ಠಾನಕ್ಕೆ ತರುತ್ತೇವೆ ಎಂದಿದ್ದಾರೆ. ಆದರೆ ಇದು ಕೇವಲ ಬೆಂಗಳೂರಿನಗೆ ಅಷ್ಟೇ ಅಲ್ಲ, ರಾಜ್ಯದ 31 ಜಿಲ್ಲೆಗಳಿಗೂ ಅನ್ವಯ ಆಗಬೇಕು. ಮಾರ್ಚ್ 1ರವರೆಗೆ ಕಾದುನೋಡುತ್ತೇವೆ, ಮಾರ್ಚ್ 5ರಂದು ಮತ್ತೆ ಬೀದಿಗೆ ಇಳಿದು ಬಿಬಿಎಂಪಿ ವಿರುದ್ಧ ಹೋರಾಟ ಮಾಡುತ್ತೇವೆ. ಈ ಬಗ್ಗೆ ಇಂದು ಸಂಜೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮತ್ತೊಂದು ದಿನ ಗಡುವು ವಿಸ್ತರಣೆ

ಕನ್ನಡ ನಾಮಫಲಕ ಅಳವಡಿಕೆಗೆ ಮತ್ತೊಂದು ದಿನ ಬಿಬಿಎಂಪಿ ಅವಕಾಶ ನೀಡಿದೆ.. ಫೆ.29 ಸಂಜೆಯೊಳಗೆ ನಿಯಮ ಪಾಲಿಸದಿದ್ದರೆ ಅಂಗಡಿಗಳನ್ನು ಬಂದ್‌ ಮಾಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಈಗಾಗಲೇ ಶೇ. 90 ರಷ್ಟು ನಾಮಫಲಕ ಬದಲಾಗಿದೆ. ಇನ್ನು ಉಳಿದಿರುವುದು 3 ಸಾವಿರ ನಾಮಫಲಕ ಮಾತ್ರ. ಅವರು ಗುರುವಾರ ಸಂಜೆಯೊಳಗೆ ಬದಲಾಯಿಸಬೇಕು. ಇಲ್ಲದಿದ್ದರೆ ಅಂಗಡಿ ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Sedition case: ಪಾಕ್‌ ಪರ ಘೋಷಣೆ ವಿವಾದ; ಬೀದಿಗಿಳಿದ ಜೆಡಿಎಸ್‌; ಬಂಧನಕ್ಕೆ ಪಟ್ಟು

ನಾಮಫಲಕ ಅಳವಡಿಕೆಗೆ ಮತ್ತಷ್ಟು ಗಡುವು ನೀಡುವಂತೆ ಕೆಲವು ಅಂತಾರಾಷ್ಟ್ರೀಯ ಕಂಪನಿಗಳು, ಎಸ್‌ಬಿಐ, ಕೆನರಾ ಬ್ಯಾಂಕ್ ಮನವಿ ಮಾಡಿವೆ. ಈ ಬಗ್ಗೆ ನಾಳೆ ಸಂಜೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Exit mobile version