Site icon Vistara News

Taiwan Earthquake: ತೈವಾನ್‌ನಲ್ಲಿ ಪ್ರಬಲ ಭೂಕಂಪ, ಸುನಾಮಿ ಅಲರ್ಟ್‌

Taiwan Earthquake

ತೈಪೆ: ತೈವಾನ್‌ ಪೂರ್ವದಲ್ಲಿ (East Taiwan) ಬುಧವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 8 ಗಂಟೆಗೆ ಸ್ವಲ್ಪ ಮೊದಲು ಪ್ರಬಲ ಭೂಕಂಪ (Taiwan earthquake) ಸಂಭವಿಸಿದೆ. ಹಲವಾರು ಕಟ್ಟಡಗಳು ಕುಸಿದಿದ್ದು, ಇವುಗಳಡಿ ಜನ ಸಿಲುಕಿಕೊಂಡಿರುವ ಭೀತಿ ಇದೆ. ತೈವಾನ್‌ ಹಾಗೂ ದಕ್ಷಿಣ ಜಪಾನ್‌ನ (Japan) ಕೆಲವು ಭಾಗಗಳಿಗೆ ಸುನಾಮಿ (Tsunami alert) ಎಚ್ಚರಿಕೆಯನ್ನು ನೀಡಲಾಗಿದೆ.

ತೈವಾನ್ ಭೂಕಂಪದ ನಂತರ ಫಿಲಿಪೈನ್ಸ್ ಜನರಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿತು. ಕರಾವಳಿ ಪ್ರದೇಶಗಳಿಂದ ಸ್ಥಳಾಂತರಗೊಳ್ಳಲು ಆದೇಶಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಸಂಸ್ಥೆಯು, ಭೂಕಂಪವು 7.4ರ ತೀವ್ರತೆಯನ್ನು ಹೊಂದಿದೆ ಎಂದು ಹೇಳಿದೆ. ಅದರ ಕೇಂದ್ರಬಿಂದುವು ತೈವಾನ್‌ನ ಹುವಾಲಿಯನ್ ಸಿಟಿಯಿಂದ 18 ಕಿಲೋಮೀಟರ್ ದಕ್ಷಿಣಕ್ಕೆ 34.8 ಕಿಮೀ ಆಳದಲ್ಲಿದೆ. ಜಪಾನ್‌ನ ಹವಾಮಾನ ಸಂಸ್ಥೆಯು 7.4ರ ತೀವ್ರತೆಯನ್ನು ಗುರುತಿಸಿದೆ.

ತೈವಾನ್‌ನ ಪೂರ್ವದಲ್ಲಿ ಸಂಭವಿಸಿದ ಭೂಕಂಪವು “25 ವರ್ಷಗಳಲ್ಲಿ ಅತ್ಯಂತ ಪ್ರಬಲವಾಗಿದೆ” ಎಂದು ತೈಪೆಯ ಭೂಕಂಪನ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ. “ಭೂಕಂಪವು ಭೂಮಿಗೆ ಹತ್ತಿರದಲ್ಲಿದೆ. ಆಳದಲ್ಲಿಲ್ಲ. ಇದು ತೈವಾನ್ ಮತ್ತು ಕಡಲಾಚೆಯ ದ್ವೀಪಗಳಾದ್ಯಂತ ಕಂಡುಬಂದಿದೆ. 1999ರ ಭೂಕಂಪದ ನಂತರದ 25 ವರ್ಷಗಳಲ್ಲಿ ಇದು ಪ್ರಬಲವಾದುದು” ಎಂದು ವು ಚಿಯೆನ್-ಫು ತಿಳಿಸಿದರು. ಸೆಪ್ಟೆಂಬರ್ 1999ರ ಭೂಕಂಪ 7.6 ರಿಕ್ಟರ್‌ನದಾಗಿದ್ದು 2,400 ಜನರನ್ನು ಕೊಂದಿತ್ತು.

ಲಘುವಾದ ಜನಸಂಖ್ಯೆಯುಳ್ಳ Hualienನಲ್ಲಿ ಐದು ಅಂತಸ್ತಿನ ಕಟ್ಟಡ ಹೆಚ್ಚು ಹಾನಿಗೊಳಗಾಗಿದೆ. ಅದರ ಮೊದಲ ಮಹಡಿ ಕುಸಿದಿದೆ ಮತ್ತು ಉಳಿದವು 45 ಡಿಗ್ರಿ ಕೋನದಲ್ಲಿ ವಾಲುತ್ತಿದೆ. ರಾಜಧಾನಿ ತೈಪೆಯಲ್ಲಿ, ಹಳೆಯ ಕಟ್ಟಡಗಳು ಮತ್ತು ಕೆಲವು ಹೊಸ ಕಚೇರಿ ಸಂಕೀರ್ಣಗಳ ಭಾಗಗಳು ಬಿದ್ದಿವೆ.

ತೈವಾನ್‌ನ ಹಲವಾರು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿದೆ. ತೈವಾನ್ ದೂರದರ್ಶನ ಕೇಂದ್ರಗಳು ಭೂಕಂಪದ ಕೇಂದ್ರಬಿಂದುವಿನ ಸಮೀಪವಿರುವ ಹುವಾಲಿಯನ್‌ನಲ್ಲಿ ಕೆಲವು ಕುಸಿದ ಕಟ್ಟಡಗಳ ತುಣುಕನ್ನು ತೋರಿಸಿದವು ಮತ್ತು ಕೆಲವು ಜನರು ಅದರಡಿ ಸಿಕ್ಕಿಬಿದ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಭೂಕಂಪನ ಶಾಂಘೈವರೆಗೆ ಅನುಭವಕ್ಕೆ ಬಂದಿದೆ. ಭೂಕಂಪದ ಕೇಂದ್ರವು ಹುವಾಲಿಯನ್ ಪೂರ್ವ ಕೌಂಟಿಯ ಕರಾವಳಿಯಲ್ಲಿ ತೈವಾನ್ ದ್ವೀಪದ ಪೂರ್ವ ಕರಾವಳಿಯ ನೀರಿನಲ್ಲಿದೆ ಎಂದು ತೈವಾನ್ ಕೇಂದ್ರ ಹವಾಮಾನ ಆಡಳಿತ ತಿಳಿಸಿದೆ.

ಮಿಯಾಕೊಜಿಮಾ ದ್ವೀಪ ಸೇರಿದಂತೆ ದೂರದ ಜಪಾನಿನ ದ್ವೀಪಗಳಿಗೆ ಮೂರು ಮೀಟರ್‌ಗಳಷ್ಟು ಎತ್ತರದ ಸುನಾಮಿ ಅಲೆಗಳನ್ನು ತಕ್ಷಣವೇ ನಿರೀಕ್ಷಿಸಲಾಗಿದೆ ಎಂದು ವರದಿಗಳು ಹೇಳಿವೆ. ನಹಾ ಸೇರಿದಂತೆ ಓಕಿನಾವಾ ಪ್ರದೇಶದ ಬಂದರುಗಳಿಂದ ಹಡಗುಗಳು ಸಮುದ್ರದತ್ತ ತೆರಳಿದವು. ಇದು ಹಡಗುಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನವಾಗಿದೆ.

23 ಮಿಲಿಯನ್ ಜನರಿರುವ ದ್ವೀಪದಾದ್ಯಂತ ಸುರಂಗಮಾರ್ಗ ಸೇವೆ ಸೇರಿ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ರಾಜಧಾನಿಯಲ್ಲಿ ಸ್ಥಿತಿಗತಿ ತ್ವರಿತವಾಗಿ ಸಹಜ ಸ್ಥಿತಿಗೆ ಮರಳಿದವು.

ಇದನ್ನೂ ಓದಿ: SS Rajamouli: ಜಪಾನ್‌ ಭೂಕಂಪದಲ್ಲಿ ಬದುಕುಳಿದ ರಾಜಮೌಳಿ, ಮಗ ಕಾರ್ತಿಕೇಯ!

Exit mobile version