Site icon Vistara News

ವಿಸ್ತಾರ ಸಂಪಾದಕೀಯ: ಸೂಕ್ತ ಕಾಲದಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ವಹಿಸಿ

Corona Virus

ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್‌ 1 (COVID Subvariant JN.1) ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಹೈ ಅಲರ್ಟ್‌ ಆಗಿದೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಶನಿವಾರ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ವರದಿಯಾಗುತ್ತಿದೆ. ಕರ್ನಾಟಕದಲ್ಲಿ ಈವರೆಗೆ 58 ಕೋವಿಡ್ ಪಾಸಿಟಿವ್ ಕೇಸ್ ಇವೆ. ಈ ಪೈಕಿ 11 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ತಿಂಗಳಿನಲ್ಲಿ ಕೊರೊನಾದಿಂದ ಒಬ್ಬರು ಸಾವನ್ನಪ್ಪಿದ್ದು, ಈಗ ಕೊರೊನಾ ಹೆಚ್ಚಾಗಲಿದೆ ಎಂಬ ಮಾಹಿತಿಯಿದೆ. ಹೀಗಾಗಿ ಕೇಂದ್ರದ ಅಧಿಕಾರಿಗಳ ಜತೆ ನಮ್ಮ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಐಎಲ್‌ಐ ಹಾಗೂ ಸಾರಿ ಪ್ರಕರಣ ಕಂಡು ಬಂದರೆ ಕಡ್ಡಾಯವಾಗಿ ಟೆಸ್ಟ್ ಮಾಡಬೇಕು. ಕೊರೊನಾ ಲಕ್ಷಣ ಕಂಡು ಬಂದರೆ ಕಡ್ಡಾಯ ಪರೀಕ್ಷೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಮತ್ತೆ ಕೊರೊನಾ ಆತಂಕದ ದಿನಗಳು ಮರಳುವ ಸೂಚನೆ ಕಂಡುಬರುತ್ತಿದೆ. ಆದರೆ ಈ ಬಾರಿ ತೀರಾ ಆತಂಕಪಡುವ ಅಗತ್ಯ ಇಲ್ಲವೆಂದೂ ತಿಳಿಯಬೇಕು. ಯಾಕೆಂದರೆ ಕೋವಿಡ್‌ ಲಸಿಕೆ ನಮ್ಮಲ್ಲಿದೆ. ಹೆಚ್ಚಿನ ಜನಸಂಖ್ಯೆಗೆ ಒಂದು ಬಾರಿ ಕೋವಿಡ್‌ ಬಂದು ಹೋಗಿರುವುದರಿಂದ ನೈಸರ್ಗಿಕ ಇಮ್ಯುನಿಟಿ, ಸಮುದಾಯ ಪ್ರತಿರೋಧ ಶಕ್ತಿಯೂ ಲಭ್ಯವಾದಂತಿದೆ. ಹೀಗಾಗಿ ಮೊದಲ ಅಲೆ, ಎರಡನೇ ಅಲೆಗಳು ಸೃಷ್ಟಿಸಿದ ಅನಾಹುತವನ್ನು ಈ ಬಾರಿ ಕೋವಿಡ್‌ ಸೃಷ್ಟಿಸದು ಎಂಬ ಧೈರ್ಯವನ್ನು ತಾಳಬಹುದು. ಆದರೆ ಮುನ್ನೆಚ್ಚರಿಕೆ ಅತ್ಯಂತ ಅಗತ್ಯ. ಕೊರೊನಾ ಪರೀಕ್ಷೆಗೆ ಹೆಚ್ಚಿನ ಕಿಟ್ ಖರೀದಿಗೆ ಸೂಚಿಸಲಾಗಿದೆ. ಮುಂದಿನ ಮೂರು ತಿಂಗಳಿಗೆ ಅಗತ್ಯವಿರುವಷ್ಟು ಟೆಸ್ಟಿಂಗ್ ಕಿಟ್ ಖರೀದಿಗೆ ಸೂಚಿಸಲಾಗಿದ್ದು, ಎಲ್ಲಾ ಆಸ್ಪತ್ರೆಯಲ್ಲಿ ಅಧಿಕಾರಿಗಳಿಗೆ ಮಾಕ್ ಡ್ರಿಲ್ ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಪರೀಕ್ಷೆ ಕಿಟ್‌ಗಳು ಎಲ್ಲ ಕಡೆಯೂ ಅಗತ್ಯಕ್ಕೆ ತಕ್ಕಂತೆ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕಿದೆ.

ಕೊರೊನಾ ಮುನ್ನೆಚ್ಚರಿಕೆಗಳ ಸಂದರ್ಭದಲ್ಲಿ ಸವಾಲಾಗಿರುವ ವಿಚಾರ ಎಂದರೆ ಸಾರ್ವಜನಿಕರಲ್ಲಿ ಆರೋಗ್ಯದ ಪ್ರಜ್ಞೆಯನ್ನು ಮೂಡಿಸುವುದು. ಇಂದು ಸಾರ್ವಜನಿಕ ಸ್ಥಳಗಳಲ್ಲಿ ಯಾರೂ ಮಾಸ್ಕ್‌ ಧರಿಸುತ್ತಿಲ್ಲ. ಕೊರೊನಾದೊಂದಿಗೇ ಮುನ್ನೆಚ್ಚರಿಕೆಗಳೂ ಗಾಳಿಯಲ್ಲಿ ಆವಿಯಾಗಿವೆ. ಕೊರೊನಾ ನಂತರದ ಬದುಕಿನ ಬಗ್ಗೆ ಊಹಾಪೋಹಗಳನ್ನು ಮಾಡಲಾಗಿತ್ತು. ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ ಬಳಕೆ ಅತಿ ಸಾಮಾನ್ಯವಾಗಲಿದೆ ಎಂದು ಊಹಿಸಲಾಗಿತ್ತು. ಆದರೆ ಅದು ಯಾವುದೂ ಕಾಣುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನ ಕಡ್ಲೆಕಾಯಿ ಪರಿಷೆಯಲ್ಲಿ ಲಕ್ಷಾಂತರ ಜನ ಸೇರಿದ್ದರಾದರೂ, ಯಾರೂ ಮಾಸ್ಕ್‌ ಧರಿಸಿದ್ದು ಕಂಡುಬರಲಿಲ್ಲ. ಪ್ರತಿಯೊಂದನ್ನೂ ಸರ್ಕಾರ ಹೇಳಿಯೇ ಆಗಬೇಕಿಲ್ಲ. ಜನತೆ ತಮ್ಮ ಆರೋಗ್ಯದ ಜಾಗ್ರತೆಯನ್ನು ತಾವೇ ಮಾಡಬೇಕು. ತುಂಬಾ ಜನಜಂಗುಳಿ ಸೇರಿದಾಗ ಮಾಸ್ಕ್‌ ಧರಿಸುವುದು ಸೂಕ್ತ. ಹಾಗೆಯೇ ಹೊರಗೆ ಹೋಗಿ ಬಂದ ಬಳಿಕ ಸ್ಯಾನಿಟೈಸರ್‌ ಬಳಸುವುದು, ಕೈಗಳನ್ನು ತೊಳೆದುಕೊಳ್ಳುವುದು, ಕೈಗಳಿಂದ ಮುಖ ಸವರಿಕೊಳ್ಳದಿರುವುದನ್ನೂ ರೂಢಿ ಮಾಡಿಕೊಳ್ಳುವುದು ಸದಾ ಕಾಲಕ್ಕೂ ಉತ್ತಮ ಆರೋಗ್ಯ ಪ್ರಜ್ಞೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಅನುದಾನ ಘೋಷಣೆಯಾದರೆ ಸಾಲದು, ಕಲ್ಯಾಣವೂ ಆಗಬೇಕು

ಇನ್ನು ಸರ್ಕಾರ ಕೂಡ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಕೋವಿಡ್‌ ನಿರ್ವಹಣೆಗೆ ಅಗತ್ಯ ಬಿದ್ದರೆ ಒಂದು ಟಾಸ್ಕ್‌ ಫೋರ್ಸ್‌ ರಚಿಸಬೇಕು. ಆಸ್ಪತ್ರೆಗಳಲ್ಲಿ ನ್ಯೂನತೆ ಕಂಡು ಬಂದರೆ ಸರಿಪಡಿಸಬೇಕು. ಕೋವಿಡ್‌ ಪರೀಕ್ಷೆ ಕಿಟ್‌ಗಳು ಲಭ್ಯವಿರಬೇಕು. ಪ್ರಕರಣಗಳು ಹೆಚ್ಚಿದರೆ ಅವರ ಟ್ರೀಟ್‌ಮೆಂಟ್‌ಗೆ ಪ್ರತ್ಯೇಕ ಜಾಗ ನಿಗದಿಪಡಿಸಬೇಕು. ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ತಜ್ಞರಿಂದ ಸಲಹೆಗಳನ್ನು ಪಡೆಯಬೇಕು. ಅಗತ್ಯ ಬಿದ್ದಾಗ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಬೇಕು. ಹೊರರಾಜ್ಯದ ಪ್ರಯಾಣಿಕರ ಮೇಲೆ ಸೂಕ್ತ ಸಮಯದಲ್ಲಿ ನಿಗಾ ಇಡುವುದು, ತಪಾಸಣೆ ಮಾಡುವುದು ಅಗತ್ಯವಾದೀತು. ಮುಂದಿನ ದಿನಗಳಲ್ಲಿ ಕೋವಿಡ್‌ನಂಥ ಸಾಂಕ್ರಾಮಿಕಗಳು ಮತ್ತೆ ಮತ್ತೆ ಬರಲಿವೆ ಎಂದು ತಜ್ಞರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಆರೋಗ್ಯ ಸೇವಾ ವ್ಯವಸ್ಥೆಯನ್ನು ಸಮಗ್ರವಾಗಿ ಬಲಪಡಿಸುವುದು ಅಗತ್ಯವಾಗಿದೆ.

Exit mobile version