Site icon Vistara News

Terminal 2: ಭಾರಿ ಮಳೆಗೆ ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಸೋರಿಕೆ; ವಿಮಾನ ಹಾರಾಟ ಅಸ್ತವ್ಯಸ್ತ

KIA bengaluru terminal 2

ಬೆಂಗಳೂರು: ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport – KIA) ನೂತನ ಟರ್ಮಿನಲ್ 2 (Terminal 2, T2) ಇದರಲ್ಲಿ ಭಾರಿ ಸೋರಿಕೆ (leakage) ಕಂಡುಬಂತು. ಭಾರಿ ಮಳೆಯ ಪರಿಣಾಮ ಇಲ್ಲಿಗೆ ಬರಬೇಕಿದ್ದ ಹಲವು ವಿಮಾನಗಳನ್ನು ಬೇರೆ ಕಡೆಗೆ ಕಳಿಸಲಾಯಿತು.

ನಿನ್ನೆ ರಾತ್ರಿಯ ಭಾರಿ ಮಳೆಯ ನಂತರ T2ನ ಬ್ಯಾಗೇಜ್ ಕ್ಲೈಮ್ ಪ್ರದೇಶದ ಬಳಿ ಛಾವಣಿಯಿಂದ ಮಳೆನೀರು ಜಿನುಗತೊಡಗಿತು. “ಮಳೆನೀರು ಛಾವಣಿಯಿಂದ ಸೋರಿಕೆಯಾಗಲು ಪ್ರಾರಂಭಿಸಿತು. ಕನ್ವೇಯರ್ ಬೆಲ್ಟ್ ಬಳಿ ಕೊಚ್ಚೆಗುಂಡಿಯಂತೆ ಆಯಿತು. ಪ್ರಯಾಣಿಕರಿಗೆ ಅನನುಕೂಲತೆಯನ್ನು ತಪ್ಪಿಸಲು ಗೃಹರಕ್ಷಕ ಸಿಬ್ಬಂದಿ ಯತ್ನಿಸಿದ್ದು, ನೀರನ್ನು ತೆರವುಗೊಳಿಸಿದರು” ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ತಿಳಿಸಿದ್ದಾರೆ.

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಈ ಬಗ್ಗೆ ಹೇಳಿಕೆ ನೀಡಿದ್ದು, ಹೀಗೆ ಹೇಳಿದೆ: “ಮೇ 9, 2024ರ ಸಂಜೆ ಅಲ್ಪಾವಧಿಯಲ್ಲಿಯೇ ಅತಿ ಹೆಚ್ಚು ಮಳೆ ಸುರಿದ ಪರಿಣಾಮ, ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ಗಳ ಕೆಲವು ಪ್ರದೇಶಗಳಲ್ಲಿ ನೀರು ಸೋರಿಕೆಯಾಗಿದೆ. ನಮ್ಮ ಕಾರ್ಯಾಚರಣೆ ತಂಡಗಳು ಈ ಸೋರಿಕೆಯನ್ನು ತಗ್ಗಿಸಲು ಮತ್ತು ಚಟುವಟಿಕೆಯನ್ನು ಸಾಮಾನ್ಯ ಸ್ಥಿತಿಗೆ ತರಲು ತ್ವರಿತವಾಗಿ ಪ್ರತಿಕ್ರಿಯಿಸಿವೆ. ನಮ್ಮ ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗಾಗಿ ನಾವು ವಿಷಾದಿಸುತ್ತೇವೆ.”

KIAಯ T2 ಅನ್ನು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನವೆಂಬರ್ 11, 2022ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇದನ್ನು ಉದ್ಘಾಟಿಸಿದರು. ʼಉದ್ಯಾನವನ ಟರ್ಮಿನಲ್ʼ ಎಂದು ಕರೆಯಲ್ಪಡುವ T2, ಯುನೆಸ್ಕೋದಿಂದ ʼವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣ’ ಎಂದು ಗುರುತಿಸಲ್ಪಟ್ಟಿದೆ. ಜನವರಿ 15, 2023ರಂದು ದೇಶೀಯ ಕಾರ್ಯಾಚರಣೆಯನ್ನು ಆರಂಭಿಸಿದ ಟರ್ಮಿನಲ್, ಉದ್ಘಾಟನೆಯ ಕೆಲವೇ ತಿಂಗಳುಗಳಲ್ಲಿ ಸೋರಿಕೆಯನ್ನು ಕಂಡಿದೆ. T2ನಲ್ಲಿ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳು ಸೆಪ್ಟೆಂಬರ್ 12ರಂದು ಪ್ರಾರಂಭವಾದವು.

ವಿಮಾನ ಹಾರಾಟದ ದಿಕ್ಕು ಬದಲಾವಣೆ

ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿಗೆ ಬರುತ್ತಿದ್ದ 17 ವಿಮಾನಗಳನ್ನು ಚೆನ್ನೈ ಕಡೆಗೆ ತಿರುಗಿಸಲಾಯಿತು. 13 ದೇಶೀಯ ವಿಮಾನಗಳು, ಮೂರು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳು ಮತ್ತು ಒಂದು ಅಂತಾರಾಷ್ಟ್ರೀಯ ಕಾರ್ಗೋ ವಿಮಾನವನ್ನು ತಿರುಗಿಸಲಾಗಿದೆ ಎಂದು ಬಿಐಎಎಲ್ ವಕ್ತಾರರು ತಿಳಿಸಿದ್ದಾರೆ. “ಬಲವಾದ ಗಾಳಿಯೊಂದಿಗೆ ಭಾರೀ ಮಳೆಯ ಕಾರಣ ವಿಮಾನ ನಿಲ್ದಾಣದೊಳಗೆ ರಾತ್ರಿ 9:35ರಿಂದ 10:30ರ ನಡುವೆ ಲ್ಯಾಂಡಿಂಗ್‌ ಸಾಧ್ಯವಾಗಲಿಲ್ಲ. ಇದು ವಿಮಾನಗಳ ಮಾರ್ಗವನ್ನು ತಿರುಗಿಸಲು ಕಾರಣವಾಯಿತು” ಎಂದು ತಿಳಿಸಿದ್ದಾರೆ.

ಬೆಂಗಳೂರಿನಿಂದ ಚೆನ್ನೈಗೆ ತಿರುಗಿಸಲಾದ ದೇಶೀಯ ವಿಮಾನಗಳಲ್ಲಿ ತಲಾ ನಾಲ್ಕು ಇಂಡಿಗೋ (ಪುಣೆ, ಕೋಲ್ಕತ್ತಾ, ಲಕ್ನೋ ಮತ್ತು ಮಧುರೈ) ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ (ಹೈದರಾಬಾದ್, ಲಕ್ನೋ, ಮುಂಬೈ ಮತ್ತು ರಾಂಚಿಯಿಂದ), ದೆಹಲಿ ಮತ್ತು ಹೈದರಾಬಾದ್‌ನಿಂದ ಎರಡು ಏರ್ ಇಂಡಿಯಾ ವಿಮಾನಗಳು ಸೇರಿವೆ. ಇತರ ದೇಶೀಯ ವಿಮಾನಗಳೆಂದರೆ: ದೆಹಲಿಯಿಂದ ವಿಸ್ತಾರಾ ವಿಮಾನ, ಪುಣೆಯಿಂದ ಆಕಾಶ ಏರ್ ವಿಮಾನ ಮತ್ತು ಜಾಮ್‌ನಗರದಿಂದ ಸ್ಟಾರ್ ಏರ್ ವಿಮಾನ. ಬೆಂಗಳೂರಿನಿಂದ ಚೆನ್ನೈಗೆ ಕಳಿಸಲಾದ ಮೂರು ಅಂತಾರಾಷ್ಟ್ರೀಯ ವಿಮಾನಗಳು: ಸಿಂಗಾಪುರ್ ಏರ್‌ಲೈನ್ಸ್ (SQ 510), ಅಬುಧಾಬಿಯಿಂದ ಎತಿಹಾದ್ (EY 238) ಮತ್ತು ಆಮ್‌ಸ್ಟರ್‌ಡ್ಯಾಮ್‌ನಿಂದ KLM ವಿಮಾನ (KL-879).

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ 72.4 ಮಿಮೀ ಮಳೆ ದಾಖಲಾಗಿದ್ದರೆ, ಬೆಂಗಳೂರು ನಗರದಲ್ಲಿ ಮೇ 10 ರಂದು ಬೆಳಿಗ್ಗೆ 8:30 ರವರೆಗೆ 14 ಮಿಮೀ ಮಳೆಯಾಗಿದೆ. ಮೇ 9ರ ಸಂಜೆ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಅನೇಕ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಚಾಲುಕ್ಯ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆ ಹಾಗೂ ಹುಣಸಮಾರನಹಳ್ಳಿವರೆಗೆ ಜಲಾವೃತವಾಗಿತ್ತು.

ಇದನ್ನೂ ಓದಿ: Karnataka Weather : 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ; ಗುಡುಗು ಸಹಿತ ಭಾರಿ ಮಳೆಗೆ ಯೆಲ್ಲೋ ಅಲರ್ಟ್‌ ಘೋಷಣೆ

Exit mobile version