ಗುವಾಹಟಿ: ಅರುಣಾಚಲ ಪ್ರದೇಶ (Arunachal Pradesh) ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವಾರ ಇರುವಾಗಲೇ ಬಿಜೆಪಿ 10 ಸೀಟುಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದೆ. ಇದರಲ್ಲಿ ಹಾಲಿ ಮುಖ್ಯಮಂತ್ರಿ ಮುಖ್ಯಮಂತ್ರಿ ಪೆಮಾ ಖಂಡು, ಉಪಮುಖ್ಯಮಂತ್ರಿ ಚೌನಾ ಮೇನ್ ಅವರೂ ಇದ್ದಾರೆ. ಶನಿವಾರ ಚುನಾವಣೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿತ್ತು. ಈ ವೇಳೆ ಈ ಕ್ಷೇತ್ರಗಳ ಅಭ್ಯರ್ಥಿಗಳು ಉಮೇದುವಾರಿಕೆ ವಾಪಸ್ ಪಡೆದ ಕಾರಣ 10 ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಮುಖ್ಯಮಂತ್ರಿ ಪೆಮಾ ಖಂಡು ಈ ಮಾಹಿತಿ ಪ್ರಕಟಿಸಿದ್ದಾರೆ.
“ನಾವು 10 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದ್ದೇವೆ. ಮತ ಚಲಾವಣೆ ಮೊದಲೇ ನಮಗೆ ಸಿಕ್ಕ ದೊಡ್ಡ ಗೆಲುವು. ಇದು ನಮ್ಮ ಅಭಿವೃದ್ಧಿ ಕಾರ್ಯಗಳಿಗೆ ಜನರ ಭಾರಿ ಬೆಂಬಲ ವ್ಯಕ್ತಗೊಂಡಿದೆ. ನಾವು ಮುಂದುವರಿಯಬೇಕೆಂದು ಜನರು ಬಯಸುತ್ತಾರೆ. ನಮ್ಮ ಸರ್ಕಾರ ರಚನೆ ಖಚಿತ. ನಾವು ಎರಡೂ ಲೋಕಸಭಾ ಸ್ಥಾನಗಳನ್ನು ಭರ್ಜರಿ ಬಹುಮತದೊಂದಿಗೆ ಗೆಲ್ಲುತ್ತೇವೆ” ಎಂದು ಖಂಡು ಹೇಳಿಕೊಂಡಿದ್ದಾರೆ.
ಅರುಣಾಚಲ ಪ್ರದೇಶ ವಿಧಾನಸಭೆಯ ಎಲ್ಲಾ 60 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 19 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಕಾಂಗ್ರೆಸ್ 34 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಅವಿರೋಧ ಆಯ್ಕೆಯ ಬಳಿಕ ರಾಜಧಾನಿ ಇಟಾನಗರದಲ್ಲಿ ಬಿಜೆಪಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಲ್ಲದೆ, ಬಿಜೆಪಿ ನಾಯಕಿ ದಸಾಂಗ್ಲು ಪುಲ್ ಅವರ ಏಕೈಕ ಪ್ರತಿಸ್ಪರ್ಧಿ ಕಾಂಗ್ರೆಸ್ನ ಬಫುಟ್ಸೊ ಕ್ರೋಂಗ್ ಸ್ಪರ್ಧೆಯಿಂದ ಹಿಂದೆ ಸರಿದ ನಂತರ ಅವರ ನಾಮಪತ್ರವೂ ಅವಿರೋಧವಾಗಿ ಮನ್ನಣೆ ಪಡೆಯಿತು. ದಸಾಂಗ್ಲು ಪುಲ್ ಮಾಜಿ ಮುಖ್ಯಮಂತ್ರಿ ಕಲಿಖೋ ಪುಲ್ ಅವರ ಪತ್ನಿ.
ಇದನ್ನೂ ಓದಿ: BJP’s 8th List Of Candidates : ಲೋಕ ಸಭಾ ಚುನಾವಣೆಗೆ ಬಿಜೆಪಿಯ 8ನೇ ಪಟ್ಟಿ ಬಿಡುಗಡೆ
ಮುಕ್ತೋ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ವಿರುದ್ಧ ಯಾವುದೇ ಅಭ್ಯರ್ಥಿ ಇರಲಿಲ್ಲ, ಅದೇ ರೀತಿ, ಸಾಗಾಲಿ ವಿಧಾನಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿ ಬಿಜೆಪಿಯ ಟೆಚಿ ರೋಟು ಕೂಡ ಗೆದ್ದಿದ್ದಾರೆ.
ಕ್ರಾ ದಾದಿಯ ತಾಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿಕ್ಕೆ ಟಾಕೊ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಪ್ಪರ್ ಸುಬನ್ಸಿರಿಯ ತಾಲಿಹಾದಲ್ಲಿ ಬಿಜೆಪಿಯ ನ್ಯಾಟೊ ಡುಕಾಮ್ ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿಯಾಗಿದ್ದರು.
“ಇದು ಮೋದಿ ಜಿ ಮತ್ತು ಅವರ ದೂರದೃಷ್ಟಿಯ ಮೇಲೆ ಜನರು ಹೊಂದಿರುವ ನಂಬಿಕೆ. ಅರುಣಾಚಲ ಪ್ರದೇಶದ ಬೃಹತ್ ಅಭಿವೃದ್ಧಿ ಮತ್ತು ಬದಲಾಗುತ್ತಿರುವ ನಾಯಕರ ಬಗ್ಗೆ ಜನರು ನಂಬಿಕೆ ಇಟ್ಟಿದ್ದಾರೆ ಎಂದು ಅರುಣಾಚಲ ಚುನಾವಣೆಯ ಪಕ್ಷದ ಉಸ್ತುವಾರಿ ಮತ್ತು ಅಸ್ಸಾಂ ಕ್ಯಾಬಿನೆಟ್ ಸಚಿವ ಅಶೋಕ್ ಸಿಂಘಾಲ್ ಹೇಳಿದ್ದಾರೆ.