ಛತ್ತೀಸ್ಗಢದ ದಂತೇವಾಡ ಜಿಲ್ಲೆಯ ಅರನ್‌ಪುರ ಎಂಬಲ್ಲಿ ನಕ್ಸಲೀಯರು ನಡೆಸಿದ ಹೊಂಚು ದಾಳಿಯಲ್ಲಿ 11 ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಛತ್ತೀಸ್ಗಢ ಜಿಲ್ಲಾ ಮೀಸಲು ಪಡೆ ಸಿಬ್ಬಂದಿ (ಡಿಆರ್‌ಜಿ) ಪ್ರಯಾಣ ಮಾಡುತ್ತಿದ್ದ ವಾಹನವನ್ನು ಗುರಿಯಾಗಿಸಿ ಸುಧಾರಿತ ಸ್ಫೋಟಕ ಸಾಧನವನ್ನು ನಕ್ಸಲೀಯರು ಸ್ಫೋಟಿಸಿದ್ದಾರೆ. ಇದೊಂದು ಖಂಡನೀಯ, ಹೇಡಿತನದ ಹಾಗೂ ನೀಚ ಕೃತ್ಯ. ಇದಕ್ಕೆ ತಕ್ಕ ಪಾಠ ಕಲಿಸುವುದಾಗಿ ಗೃಹ ಸಚಿವರೂ ಸೇರಿದಂತೆ ಆಡಳಿತಗಾರರು ಹೇಳಿದ್ದಾರೆ. ಈ ಮಾತುಗಳು ಜಾರಿಗೂ ಬರಬೇಕಿದೆ.
ಈ ದಾಳಿಯಲ್ಲಿ ಕಂಡುಬಂದಿರುವ ವಿಪರ್ಯಾಸವೆಂದರೆ, ನಕ್ಸಲರ ವಿರುದ್ಧ ಹೋರಾಡಲು ವಿಶೇಷವಾಗಿ ತರಬೇತಿ ಪಡೆದ ಸ್ಥಳೀಯ ಬುಡಕಟ್ಟು ಸಮುದಾಯದ ಹೆಚ್ಚಿನ ಸೈನಿಕರೇ ಇದ್ದ ಡಿಆರ್‌ಜಿ ಪಡೆಯೇ ದಾಳಿಗೆ ತುತ್ತಾಗಿದೆ. ಅಂದರೆ ನಕ್ಸಲೀಯರು ಯಾರ ಉದ್ಧಾರದ ಕುರಿತು ತೋರಿಕೆಯ ನಾಟಕವಾಡುತ್ತ ಹೋರಾಡುತ್ತಿದ್ದಾರೋ, ಅವರನ್ನೇ ಹತ್ಯೆ ಮಾಡಿದ್ದಾರೆ. ಇದು ನಕ್ಸಲೀಯ ಹೋರಾಟದ ಪೊಳ್ಳುತನ, ಅದು ತಲುಪಿರುವ ಅಧಃಪತನ ಹಾಗೂ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಕೊನೆಯ ಪ್ರಯತ್ನಗಳನ್ನು ಸೂಚಿಸುತ್ತಿದೆ. ಸ್ಥಳೀಯ ಬುಡಕಟ್ಟು ಜನರ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ನಕ್ಸಲರು ದಶಕಗಳಿಂದ ಹಿಂಸಾಚಾರ ನಡೆಸುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಕ್ಸಲಿಸಂನ ಬಣ್ಣ ಬಯಲಾಗಿದೆ. ಸ್ಥಳೀಯ ಜನರೇ ನಕ್ಸಲರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬುಡಕಟ್ಟು ಸಮುದಾಯದಿಂದ ಬಂದ ಯೋಧರೇ ನಕ್ಸಲರನ್ನು ಮಟ್ಟ ಹಾಕುತ್ತಿದ್ದಾರೆ.
ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರೆ ಈ ದಾಳಿಯನ್ನು ತಪ್ಪಿಸಬಹುದಾಗಿತ್ತು. ಮೂಲಗಳ ಪ್ರಕಾರ ಛತ್ತೀಸ್ಗಢ ಜಿಲ್ಲಾ ಮೀಸಲು ಪಡೆ ಸಿಬ್ಬಂದಿ ಹೋಗುವ ಮಾರ್ಗದಲ್ಲಿ ಮುಂಚಿತವಾಗಿ ಗುಪ್ತಚರ ಮಾಹಿತಿ ಸಂಗ್ರಹಿಸಿರಲಿಲ್ಲ. ಸ್ಥಳ ಪರಿಶೀಲನೆಯೂ ನಡೆದಿರಲಿಲ್ಲ. ದಾರಿಯನ್ನು ಬದಲಿಸಿರಲಿಲ್ಲ. ಇದು ಮುಂದಿನ ಕಾರ್ಯಾಚರಣೆಗಳಿಗೆ ಪಾಠವಾಗಲಿ. ಆರಿಹೋಗುವ ಮುನ್ನ ದೀಪ ಜೋರಾಗಿ ಉರಿಯುವಂತೆ ನಕ್ಸಲರು ವರ್ತಿಸುತ್ತಿದ್ದಾರೆ. ದಾಳಿ ನಡೆಸಿದವರನ್ನು ಕಂಡುಹಿಡಿದು ಮಟ್ಟ ಹಾಕಬೇಕಿದೆ.
ಇದನ್ನೂ ಓದಿ: Naxal Attack: ಛತ್ತೀಸ್ಗಢ್ನಲ್ಲಿ ನಕ್ಸಲರಿಂದ ಐಇಡಿ ದಾಳಿ; 11 ಯೋಧರ ದುರ್ಮರಣ
ಅಮಾಯಕರನ್ನು ಕ್ರಾಂತಿಯ ಹೆಸರಲ್ಲಿ ಕೊಲ್ಲುವ ನಕ್ಸಲಿಸಂ ನಿರ್ಮೂಲನೆಗಾಗಿ ಸತತ ಕಾರ್ಯಾಚರಣೆ ನಡೆದಿದೆ. ದೇಶದ 14 ರಾಜ್ಯಗಳ ಸುಮಾರು 60 ಜಿಲ್ಲೆಗಳಲ್ಲಿ ಮಾವೋವಾದಿಗಳು ಹರಡಿಕೊಂಡಿದ್ದಾರೆ. ಕೇಂದ್ರ ಸರ್ಕಾರವಂತೂ ಇವರನ್ನು ಮಟ್ಟಹಾಕಲು ಸತತವಾಗಿ ಪ್ರಯತ್ನಿಸುತ್ತಲೇ ಇದೆ. ನಕ್ಸಲ್ ನಿಗ್ರಹ ಪಡೆಗಳನ್ನು ಸಬಲೀಕರಿಸಲಾಗಿದೆ. ತಾಲೂಕು ಮಟ್ಟದಲ್ಲಿ ಈ ಪಡೆಗಳ ಕೇಂದ್ರ ಸ್ಥಾಪಿಸಲಾಗಿದೆ. ಮಾಹಿತಿದಾರರ ಜಾಲವನ್ನು ಸಂವರ್ಧಿಸಲಾಗಿದೆ. ಹೆಚ್ಚಿನ ನಕ್ಸಲ್ ನಾಯಕರು ಎನ್‌ಕೌಂಟರ್‌ಗಳಲ್ಲಿ ಬಲಿಯಾಗಿದ್ದಾರೆ ಅಥವಾ ಶರಣಾಗಿದ್ದಾರೆ. ಶರಣಾಗಿರುವವರಿಗೆ ಸೂಕ್ತ ಶಿಕ್ಷೆ ಅಥವಾ ಕ್ಷಮಾದಾನವನ್ನು ಸರ್ಕಾರ ನೀಡಿದೆ. ಅನಧಿಕೃತ ವಿದೇಶಿ ಹಣದ ದೇಣಿಗೆ ವ್ಯವಹಾರವನ್ನು ಮಟ್ಟ ಹಾಕಿರುವುದರಿಂದ ನಕ್ಸಲಿಸಂನ ಬೆನ್ನೆಲುಬು ಮುರಿದಿದೆ. ಜತೆಗೆ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಪ್ರಗತಿ ಕಾರ್ಯಕ್ರಮಗಳು ಈ ಪಿಡುಗಿನ ನಿವಾರಣೆಗೆ ಹೆಚ್ಚು ಸಹಕಾರಿ ಎಂಬುದೂ ಸಾಬೀತಾಗಿದೆ. ಕೇಂದ್ರ ಸರ್ಕಾರ ಇಲ್ಲಿ ಯುವಕರಿಗೆ ಉದ್ಯೋಗ ನೀಡುವುದು, ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಈ ಪ್ರದೇಶಗಳಿಗೆ ವಿಶೇಷ ಹಣಕಾಸಿನ ಪ್ಯಾಕೇಜ್‌ಗಳನ್ನು ಘೋಷಿಸಿ ಅವುಗಳನ್ನು ಕಾರ್ಯಗತಗೊಳಿಸಿರುವುದು, ಅಲ್ಲಿನ ಜನತೆಗೆ ತಾವು ಅನ್ಯರಲ್ಲ ಎಂಬ ಭಾವನೆ ಮೂಡದಂತೆ ನೋಡಿಕೊಂಡಿರುವುದು ಮತ್ತೊಂದು ಉತ್ತಮ ಕ್ರಮ. ಕಳೆದ ಐದು ವರ್ಷಗಳಲ್ಲಿ ಇಂಥ ತೀರಾ ಹಿಂದುಳಿದ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ 3000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ. ಇದೆಲ್ಲದರ ಪರಿಣಾಮವಾಗಿ ನಕ್ಸಲಿಸಂನಲ್ಲಿ ಭಾರಿ ಇಳಿಕೆ ಕಂಡಿದೆ. ಆದರೆ ಇಂಥ ದಾಳಿಗಳು ಪ್ರಗತಿ- ಶಾಂತಿಯ ಹಳಿ ತಪ್ಪಿಸುತ್ತವೆ. ಸೇನಾ ಕಾರ್ಯಾಚರಣೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ನಕ್ಸಲ್‌ಮುಕ್ತ ಭಾರತದ ನಿರ್ಮಾಣ ಕಾರ್ಯ ಇನ್ನಷ್ಟು ಚುರುಕಾಗಿ ನಡೆಯಲಿ.