Site icon Vistara News

ವಿಸ್ತಾರ ಸಂಪಾದಕೀಯ: ಈ ಬಾರಿ ಬರಗಾಲದ ಭೀತಿ, ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಲಿ

The fear of drought this time, let the government wake up now

#image_title

ಈ ಸಲದ ಬೇಸಿಗೆ ಗರಿಷ್ಠ ಬಿಸಿಯಾಗಿರಲಿದೆ ಎಂಬ ಅನುಭವ ಈಗಲೇ ಆಗುತ್ತಿದೆ. ಬೇಸಿಗೆಗೆ ಮುನ್ನವೇ ತಾಪಮಾನ ಹೆಚ್ಚುತ್ತಿದೆ. ಇದರ ಬೆನ್ನಿಗೇ, ಈ ಬಾರಿ ದೇಶದಲ್ಲಿ ಬರಗಾಲ (Drought) ಆವರಿಸಲಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆಗಳು ಹೇಳಿವೆ. ದೇಶದಲ್ಲಿ ಅವಧಿಪೂರ್ವ ಮುಂಗಾರು ಆಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ವರದಿ ಮಾಡಿದೆ. ವಾಡಿಕೆಗಿಂತ ಶೇ.30ರಷ್ಟು ಮಳೆ ಕಡಿಮೆಯಾಗಲಿದೆ. ಸಾಮಾನ್ಯವಾಗಿ ವಾಡಿಕೆಗಿಂತ ಶೇ.10ರಷ್ಟು ಮಳೆ ಪ್ರಮಾಣ ಕಡಿಮೆಯಾದರೆ, ಅದನ್ನು ಬರಗಾಲ ಎನ್ನಲಾಗುತ್ತದೆ. ಹೀಗಿರುವಾಗ, 30ರಷ್ಟು ಕುಂಠಿತವಾದರೆ, ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವರದಿ ತಿಳಿಸಿದೆ. ವರದಿಯ ಅಂಶಗಳನ್ನು ಗಮನಿಸಿದರೆ, ಭಾರತಕ್ಕೆ ಈ ಬಾರಿ ಬರಗಾಲ ಕಾಡಲಿರುವುದು ಖಚಿತ. ಪ್ರತಿ ನಾಲ್ಕು ಅಥವಾ ಐದು ವರ್ಷಕ್ಕೊಮ್ಮೆ ಬರ ಆವರಿಸುವುದು ಸಹಜ. ಹಾಗಾಗಿ ಈ ವರದಿಯನ್ನು ಅಲ್ಲಗಳೆಯಲಾಗದು.

ಈ ನಡುವೆ, ಕಳೆದ ಹತ್ತು ವರ್ಷಗಳ ಬೇಸಿಗೆಯ ತಿಂಗಳುಗಳಲ್ಲಿ ಬೆಂಗಳೂರಿನ ತಾಪಮಾನವು ಈ ವರ್ಷ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಹವಾಮಾನ ಇಲಾಖೆಯ ದತ್ತಾಂಶದಿಂದ ತಿಳಿದುಬಂದಿದೆ. 122 ವರ್ಷಗಳ ನಂತರ ಭಾರತದಲ್ಲಿ ಫೆಬ್ರವರಿಯ ಉಷ್ಣಾಂಶ ದಾಖಲೆ ಬರೆದಿತ್ತು. ಸೂರ್ಯ ದಿನೇದಿನೆ ಪ್ರಖರವಾಗುತ್ತಿದ್ದಾನೆ. ಎಲ್ಲ ರಾಜ್ಯಗಳಲ್ಲೂ ಬೇಸಿಗೆಯನ್ನು ಎದುರಿಸಲು, ಅಗತ್ಯ ಪರಿಹಾರ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಭಾರತದಲ್ಲಿ 2018ರಲ್ಲಿ ಎಲ್‌ನಿನೋ ಪರಿಣಾಮ ಉಂಟಾಗಿತ್ತು. ಅವಧಿಪೂರ್ವ ಮುಂಗಾರು ಆಗಮನವಾಗಿ, ಜೂನ್‌ನಲ್ಲಿ ಬಿತ್ತನೆ ಮಾಡಿದ ರೈತರು ಫಸಲು ಬಾರದೆ ಕಷ್ಟ ಅನುಭವಿಸಿದರು. ಇದೇ ರೀತಿ 2009, 2014, 2015ರಲ್ಲೂ ಭಾರತ ಕಷ್ಟ ಅನುಭವಿಸಿತ್ತು. ಮುಂಗಾರು ಕೈಕೊಟ್ಟು ಬರಗಾಲ ಎದುರಾದರೆ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಅದರಲ್ಲೂ, ಕೃಷಿರಂಗದ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಉತ್ಪಾದನೆ ಕುಂಠಿತವಾಗಿ ಕೈಗಾರಿಕೆಗಳಿಗೆ ಕಚ್ಚಾ ವಸ್ತು ಕೊರತೆ ಆಗಲಿದೆ. ಇದರಿಂದ ಮತ್ತೆ ಹಣದುಬ್ಬರ ಏರಿಕೆ ಸಾಧ್ಯತೆ ಇದೆ. ಆಹಾರದ ಕೊರತೆಯೂ ಬಾಧಿಸಲಿದೆ.

ಹಾಗಿದ್ದರೆ ಏನು ಮಾಡಬಹುದು? ಈ ವರ್ಷ ಹಾಗೂ ಮುಂದುವರಿಯುವ ಬರಗಾಲ ನಿಭಾಯಿಸಲು ದೀರ್ಘಕಾಲಿಕ ಕ್ರಮಗಳು ಅಗತ್ಯ. ಯೋಜಿತವಲ್ಲದ ನಗರೀಕರಣ, ಖಾಲಿಯಾಗುತ್ತಿರುವ ಹಸಿರು ಹೊದಿಕೆ, ಮಿತಿ ಮೀರಿದ ಕಾಂಕ್ರಿಟೀಕರಣ, ಹೆಚ್ಚಿನ ಇಂಗಾಲ ಹೊರಸೂಸುವಿಕೆಗಳೆಲ್ಲ ತಾಪಮಾನದ ದುಷ್ಪರಿಣಾಮವನ್ನು ತೀವ್ರಗೊಳಿಸುತ್ತವೆ. ಜಲಮೂಲಗಳು ಮತ್ತು ಕೆರೆಗಳ ವಿನಾಶವೂ ಮತ್ತೊಂದು ಕಾರಣ. ಜಲಮೂಲಗಳು ಗಾಳಿಗೆ ತೇವಾಂಶವನ್ನು ಸೇರಿಸಿ ಶುಷ್ಕತೆಯನ್ನು ತಡೆಯುತ್ತವೆ. ಕೆರೆಗಳನ್ನು ಕಳೆದುಕೊಂಡಿರುವುದು ಹವಾಮಾನದ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಇವೆಲ್ಲವೂ ಸರಿಯಾಗಬೇಕು. ಆದರೆ ಇದೆಲ್ಲ ದೀರ್ಘಕಾಲಿಕ ಯೋಜನೆಗಳ ಮಾತು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ : ಮಾಲಿನ್ಯ ತಡೆದರೆ ಮಾತ್ರ ಮುಂದಿನ ಪೀಳಿಗೆಗೆ ಭವಿಷ್ಯ

ಸದ್ಯದ ಬೇಸಿಗೆಯ ಸಮಸ್ಯೆಯನ್ನು ನೀಗಿಸಲು ರಾಜ್ಯ ಸರ್ಕಾರ ಈಗಲೇ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಯಾಕೆಂದರೆ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದೆ. ನೀತಿ ಸಂಹಿತೆ ಜಾರಿ ಬಳಿಕ ಜನಪ್ರತಿನಿಧಿಗಳು ಚುನಾವಣೆ ಪ್ರಚಾರ, ಪೈಪೋಟಿಯಲ್ಲಿ ಮಗ್ನರಾಗಲಿದ್ದಾರೆ. ಸರ್ಕಾರಿ ಯಂತ್ರ ಬಹುತೇಕ ನಿಷ್ಕ್ರಿಯವಾಗುತ್ತದೆ. ವಾಸ್ತವವಾಗಿ ಬರ ನಿರ್ವಹಣೆಗೆ ನೀತಿ ಸಂಹಿತೆ ಅಡ್ಡ ಬರುವುದಿಲ್ಲವಾದರೂ, ಅಧಿಕಾರಿಗಳೂ ಚುನಾವಣೆ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿರುತ್ತಾರೆ. ಮತ್ತು ಜನಪ್ರತಿನಿಧಿಗಳ ನಿಗಾ ಕೂಡ ಅವರ ಮೇಲಿರುವುದಿಲ್ಲವಾದ್ದರಿಂದ, ಅಗತ್ಯ ಉಪಕ್ರಮಗಳ ಹೊಣೆಯಿಂದ ಜಾರಿಕೊಳ್ಳಲು ನೀತಿ ಸಂಹಿತೆಯ ನೆಪ ಅವರಿಗೆ ನೆರವಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಈಗಲೇ ತ್ವರಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ನೀರಿನ ಪೂರೈಕೆ ಖಚಿತಪಡಿಸುವಿಕೆ, ನೀರು ಕಲುಷಿತಗೊಳ್ಳದಂತೆ ಮುನ್ನೆಚ್ಚರಿಕೆ, ಬರಗಾಲದ ಸಂಕಷ್ಟಗಳ ನಿವಾರಣೆಗೆ ಜಿಲ್ಲಾ ಮಟ್ಟದಲ್ಲಿ ಟಾಸ್ಕ್‌ ಫೋರ್ಸ್‌ ರಚನೆ- ಇತ್ಯಾದಿಗಳು ಆಗಬೇಕು. ಜನಸಾಮಾನ್ಯರು ಈ ಬಾರಿಯ ಬೇಸಿಗೆ ಮತ್ತು ಸಂಭವನೀಯ ಬರದಿಂದ ಬಳಲುವಂತಾಗದಿರಲಿ.

Exit mobile version