Site icon Vistara News

ವಿಸ್ತಾರ ಸಂಪಾದಕೀಯ: ಉಜ್ಜಯಿನಿಯ ಹೀನ ಕೃತ್ಯ; ಒಮ್ಮೆ ಆ ಬಾಲಕಿಯ ಜಾಗದಲ್ಲಿ ನಮ್ಮವರನ್ನು ಕಲ್ಪಿಸಿಕೊಂಡರೆ…

Stop Violence

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ನಡೆದಿದೆ. 12 ವರ್ಷದ ಬಾಲಕಿ ಮೇಲೆ ಘೋರ ಲೈಂಗಿಕ ದೌರ್ಜನ್ಯ (Pocso case) ನಡೆದಿದೆ. ಆದರೆ ಇದರ ನಂತರ ನಡೆದಿರುವುದು ನಾವೆಲ್ಲ ಇನ್ನಷ್ಟು ನಾಚಿಕೆಪಡಬೇಬೇಕಾದ ಸಂಗತಿ. ಸಂತ್ರಸ್ತಳಾದ ಆಕೆ ಮೈತುಂಬ ಗಾಯಳಾಗಿ ರಕ್ತಸಿಕ್ತವಾಗಿ ನರಳುತ್ತ ಬೀದಿಯಲ್ಲಿ ಸಹಾಯಕ್ಕಾಗಿ ಮನೆ ಮನೆಗೆ ತೆರಳಿ ಮೊರೆಯಿಟ್ಟರೂ ಯಾರೂ ಆಕೆಗೆ ಸಹಾಯ ಮಾಡಿಲ್ಲ. ಹೀಗೆ ಆಕೆ ಆಕೆ 8 ಕಿಲೋಮೀಟರ್‌ನಷ್ಟು ದೂರ ನಡೆದಿದ್ದಾಳೆ. ಕೊನೆಗೆ ಆಕೆ ಬದ್ನಗರ ರಸ್ತೆ ಬಳಿ ಇದ್ದ ಆಶ್ರಮಕ್ಕೆ ತೆರಳಿದ್ದು, ಅಲ್ಲಿದ್ದ ರಾಹುಲ್‌ ಶರ್ಮಾ ಎಂಬ ಸನ್ಯಾಸಿಯೊಬ್ಬರು ಬಾಲಕಿಗೆ ಬಟ್ಟೆ ಹೊದಿಸಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ʼʼಆಕೆಗೆ ತೀವ್ರವಾಗಿ ರಕ್ತಸ್ರಾವ ಆಗುತ್ತಿತ್ತು. ಮೈತುಂಬ ಗಾಯಗಳಾಗಿದ್ದವು, ಆಕೆಯ ಕಣ್ಣುಗಳು ಊದಿಕೊಂಡಿದ್ದವು. ಮಾತನಾಡಲು ಕೂಡ ಬಾಲಕಿಗೆ ಸಾಧ್ಯವಾಗುತ್ತಿರಲಿಲ್ಲʼʼ ಎಂದು ಸನ್ಯಾಸಿ ತಿಳಿಸಿದ್ದಾರೆ.

ಬಾಲಕಿ ಸಹಾಯಕ್ಕಾಗಿ ಹಲವರ ಮುಂದೆ ಯಾಚಿಸುತ್ತಿರುವ ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಅದರಲ್ಲಿ ಹಲವು ಫೂಟೇಜ್‌ಗಳು ಸಾರ್ವಜನಿಕಗೊಂಡಿವೆ. ಅದರಲ್ಲಿ, ಬಾಲಕಿಯ ಪಕ್ಕದಲ್ಲೇ ಹಲವಾರು ವಾಹನಗಳು ಸಾಗಿಹೋಗುವುದನ್ನು ಕಾಣಬಹುದಾಗಿದೆ; ಯಾರೂ ನಿಲ್ಲಿಸಿ ಆಕೆಗೆ ಏನಾಯಿತೆಂದು ಕೇಳಿಲ್ಲ. ಆಕೆ ಒಂದು ಟೋಲ್‌ಗೇಟನ್ನು ದಾಟಿ ಹೋಗಿದ್ದಾಳೆ. ಅಲ್ಲಿಯೂ ಸಿಬ್ಬಂದಿ ಆಕೆಗೆ ಸ್ವಲ್ಪ ಮಟ್ಟಿನ ಹಣ ನೀಡಿದ್ದಾರೆ ಬಿಟ್ಟರೆ, ಬೇರೇನೂ ಸಹಾಯ ಮಾಡಿಲ್ಲ. ಹೀಗೇ ಆಕೆ 8 ಕಿ.ಮೀ ನಡೆದಿದ್ದಾಳೆ ಎಂದರೆ, ಎಷ್ಟು ಮಂದಿಯ ಮುಂದೆ ಆಕೆ ಆರ್ತತೆಯಿಂದ ಅಲವತ್ತುಕೊಂಡಿರಬಹುದು, ಎಷ್ಟು ಮಂದಿ ನೆರವು ನಿರಾಕರಿಸಿರಬಹುದು ಎಂಬುದನ್ನು ಊಹಿಸಬಹುದು. ಇನ್ನ ಕೆಲವರು ಆಕೆ ಮನೆ ಮುಂದೆ ಬಂದಾಗ ಆಕೆಯನ್ನು ಬೈದು ಓಡಿಸಿಯೂ ಇದ್ದಾರೆ. ಇದು ನಾಗರಿಕ ಸಮಾಜದ ಮೌಲ್ಯಗಳಿಗೆ ಧಕ್ಕೆ ತರುವ ಸಂಗತಿಯಷ್ಟೇ ಅಲ್ಲ; ನಮ್ಮ ಸಮಾಜ ಅದೆಷ್ಟು ಪೈಶಾಚಿಕಗೊಂಡಿದೆ ಎಂಬುದನ್ನೂ ನಮ್ಮ ಗಮನಕ್ಕೆ ತರುವ ಸಂಗತಿಯಾಗಿದೆ.

ಇಂಥ ಸ್ಥಿತಿಯಲ್ಲಿ ಆಕೆ ಎಂಟು ಕಿ.ಮೀ ಜನರ ನಡುವೆಯೇ ನಡೆದರೂ ಕಾಡಿನಲ್ಲಿ ನಡೆದಂತಾಯಿತು ಎಂಬುದೇ ವಿಪರ್ಯಾಸ. ನಾಗರಿಕರಾದ ಯಾರೇ ಆಗಲಿ ಆಕೆಗೆ ಒಂದು ಸಹಾಯಹಸ್ತವನ್ನು ಚಾಚಬಹುದಿತ್ತು. ಅದು ಕನಿಷ್ಠ ಮಾನವೀಯ ಮೌಲ್ಯದ ಸಂಗತಿಯಾಗಿತ್ತು. ಇದನ್ನು ಯಾರೂ ಯಾರಿಗೂ ಬೋಧಿಸಬೇಕಾಗಿಲ್ಲ. ಮನುಷ್ಯಮಾತ್ರರಾದವರು ಮಾಡಬೇಕಾದ ಸಂಗತಿಯೇ ಇದು. ಅಪ್ತಾಪ್ತ ವಯಸ್ಸಿನ ಬಾಲಕಿ ಇಂಥ ಸ್ಥಿತಿಯಲ್ಲಿರುವಾಗ, ಆಕೆ ಏನೋ ಅಪಾಯಕ್ಕೆ ತುತ್ತಾಗಿದ್ದಾಳೆ ಎಂದು ಅರ್ಥ ಮಾಡಿಕೊಳ್ಳದಿರುವಷ್ಟು ದಡ್ಡರು ಯಾರೂ ಇಲ್ಲ. ಒಂದು ಕ್ಷಣ ನಿಂತು ಆಕೆಗೆ ಬಟ್ಟೆ ನೀಡುವುದೋ, ಅಥವಾ ಆಕೆಯ ಅಳಲನ್ನು ಕೇಳಿ ಪೊಲೀಸರಿಗೆ ಫೋನ್‌ ಮಾಡುವುದೋ ಮಾಡಬಹುದಿತ್ತು. ಅಪಘಾತಗಳು ಸಂಭವಿಸಿದಾಗ ನೆರವಾಗುವವರು, ಅತ್ಯಾಚಾರ ಸಂತ್ರಸ್ತರಿಗೆ ನೆರವು ನೀಡುವವರನ್ನು ಪೊಲೀಸರು ಯಾವ ಕಾರಣಕ್ಕೂ ಪೊಲೀಸ್‌ ಠಾಣೆಗೆ ಕರೆಸುವುದಾಗಲೀ ವಿಚಾರಣೆಯ ಹೆಸರಿನಲ್ಲಿ ಹಿಂಸಿಸುವುದಾಗಲೀ ಮಾಡುವಂತಿಲ್ಲ ಎಂಬ ನಿಯಮ ಇದೆ. ಇಷ್ಟಿದ್ದೂ ಯಾರೂ ನೆರವಿಗೆ ಬರಲಿಲ್ಲ.

ಇದರ ನಂತರ ಪೊಲೀಸ್‌ ತನಿಖೆ ನಡೆದಿದೆ. ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ತಂದೆ ʼʼಆತನನ್ನು ನಾನು ಸಮರ್ಥಿಸಿಕೊಳ್ಳಲು ಹೋಗಲಾರೆ. ಅವನಿಗೆ ಮರಣದಂಡನೆ ಆಗಲಿʼʼ ಎಂದು ಹೇಳಿದ್ದಾರೆ. ಇದೆಲ್ಲ ಸರಿ. ಇದರ ಜತೆಗೆ, ಬಾಲಕಿಗೆ ಸಹಾಯ ಮಾಡದ ವ್ಯಕ್ತಿಗಳ ಮೇಲೂ ಲೈಂಗಿಕ ದೌರ್ಜನ್ಯ ಕಾನೂನುಗಳ ಅಡಿಯಲ್ಲಿ (POCSO) ಕೇಸು ದಾಖಲಿಸುವ ಸಾಧ್ಯತೆ ಇದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಸಂತ್ರಸ್ತೆಗೆ ʼಸಹಾಯ ನೀಡದ ಅಥವಾ ಇದನ್ನು ವರದಿ ಮಾಡಲು ವಿಫಲರಾದ’ ಆರೋಪಗಳನ್ನು ಅಂಥವರ ಮೇಲೆ ಹಾಕಬಹುದು ಎಂಬುದು ನಿಜ. ಇದರ ನಡುವೆ ಆಶಾವಾದದ ಬೆಳ್ಳಿ ಕಿರಣದಂತೆ, ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ಮತ್ತು ಮದುವೆಯ ಹೊಣೆಯನ್ನು ಮಹಾಕಲ್ ಪೊಲೀಸ್ ಠಾಣೆಯ ಪ್ರಭಾರಿ ಅಜಯ್ ವರ್ಮಾ ಹೊತ್ತುಕೊಂಡಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಬೆಂಬಲಿಸಲು ಅನೇಕರು ಮುಂದೆ ಬಂದಿದ್ದಾರೆ ಎಂದಿದ್ದಾರೆ. ಇದು ಕೆಟ್ಟದ್ದರ ನಡುವೆಯೂ ಒಳ್ಳೆಯ ಸುದ್ದಿ. ಉಜ್ಜಯಿನಿ ಅತ್ಯಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ತಮಿಳುನಾಡಿಗೆ ನೀರು, ಕರ್ನಾಟಕಕ್ಕೆ ಕಣ್ಣೀರು; ಅನ್ಯಾಯಕ್ಕೆ ಕೊನೆ ಎಲ್ಲಿ?

ಆದರೆ ಒಂದು ನಾಗರಿಕ ಸಮಾಜವಾಗಿ ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಬಾಲಕಿಗೆ ಸಹಾಯ ಮಾಡದ ಜನರ ನಡುವೆ ಇದ್ದಿದ್ದರೆ ನಾವೇನು ಮಾಡುತ್ತಿದ್ದೆವು ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಿದೆ. ಇದರ ಉತ್ತರದಲ್ಲಿ, ನಾವು ನಾಗರಿಕರೇ ಅಲ್ಲವೇ ಎಂಬುದಕ್ಕೂ ಉತ್ತರ ಸಿಗಲಿದೆ. ಒಂದು ಸಲ, ಆ ಬಾಲಕಿಯ ಜಾಗದಲ್ಲಿ ನಮ್ಮ ಮನೆಯ ಹೆಣ್ಣುಮಕ್ಕಳನ್ನು ಕಲ್ಪಿಸಿಕೊಂಡರೂ ಇದಕ್ಕೆ ಉತ್ತರ ನೀಡಿಕೊಳ್ಳುವುದು ಸುಲಭ. ಬಾಲಕಿಯ ಮೊರೆಯ ಸ್ಪಂದಿಸದವರ ಮೇಲೆ ಕೇಸ್‌ ಹಾಕುವುದು ಸುಲಭ. ಆದರೆ ಇವರು ಇಂಥ ಸನ್ನಿವೇಶಗಳಲ್ಲಿ ನೆರವಿಗೆ ಧಾವಿಸುವಂಥ ಮಾನವೀಯತೆಯನ್ನು ಇಲ್ಲಿ ಬೆಳೆಸುವುದು, ಈ ಸಮಾಜದಲ್ಲಿ ಅದನ್ನು ರೂಢಿಸುವುದು ಹೇಗೆ, ಯಾವಾಗ? ಇದನ್ನು ನಾವು ಕಂಡುಕೊಳ್ಳಬೇಕಿದೆ.

Exit mobile version