Site icon Vistara News

ವಿಸ್ತಾರ ಸಂಪಾದಕೀಯ: ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ಸ್ವಾಗತಾರ್ಹ

CAA

ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ನಾಲ್ಕು ವರ್ಷಗಳ ನಂತರ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯಿದೆಯನ್ನು (Citizenship Amendment Act) ಸೋಮವಾರ ಜಾರಿ ಮಾಡಿದೆ. ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದರ ಬಗ್ಗೆ ʼಈ ವರ್ಷದ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಸಿಎಎಯನ್ನು ಜಾರಿಗೆ ತರಲಾಗುವುದುʼ ಎಂದು ಹೇಳಿದ್ದರು. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂ, ಸಿಖ್, ಜೈನ, ಪಾರ್ಸಿ, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಪೌರತ್ವ ನೀಡುವ ಕಾಯಿದೆ ಇದಾಗಿದೆ. ಅವರ ದೇಶದಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವ ಕಾರಣ 2014ರ ಡಿಸೆಂಬರ್ 31ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ್ದ ಮೇಲಿನ ಧರ್ಮದವರಿಗೆ ಭಾರತೀಯ ಪೌರತ್ವ ತ್ವರಿತವಾಗಿ ಒದಗಿಸಲು 1955ರ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿ ಇದನ್ನು ರೂಪಿಸಲಾಗಿದೆ.

ಇದು ಸಂಸತ್​ನಲ್ಲಿ ಅಂಗೀಕಾರಗೊಂಡಾಗ ದೆಹಲಿಯಯಲ್ಲಿ ಮತ್ತು ಅಸ್ಸಾಂನಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಸಂಸತ್ತಿನಲ್ಲಿ ಅಂಗೀಕಾರವಾಗಿ ನಾಲ್ಕು ವರ್ಷಗಳ ನಂತರವೂ, ಸಿಎಎ ನಿಯಮಗಳು ಮತ್ತು ಪ್ರಕ್ರಿಯೆಯನ್ನು ಅಂತಿಮಗೊಳಿಸಬೇಕಾಗಿರುವುದರಿಂದ ಜಾರಿಗೆ ಬಂದಿರಲಿಲ್ಲ. ಇದೀಗ ಸರ್ಕಾರ ಎಲ್ಲ ಸಿದ್ಧತೆಗಳ ಬಳಿಕ ಜಾರಿಗೆ ತಂದಿದೆ. ಪಶ್ಚಿಮ ಬಂಗಾಳ, ಕೇರಳದಂಥ ಕೆಲವು ರಾಜ್ಯಗಳು ಇದನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿದ್ದೂ ಉಂಟು. ಆದರೆ ಕಾಲಕ್ರಮೇಣ ಇದರ ಕುರಿತು ಇದ್ದ ಪ್ರತಿಭಟನೆಯ ಅಂಶ ಕಡಿಮೆಯಾಗಿದೆ. ಆದರೆ ಇದರ ಬಗೆಗೆ ಕೆಲವು ವಲಯದಲ್ಲಿ ಇನ್ನೂ ತಪ್ಪು ಕಲ್ಪನೆ ಉಳಿದಂತಿದೆ. ಇದು ನಿವಾರಣೆ ಆಗುವುದು ಮತ್ತು ಎಲ್ಲರೂ ಇದರ ಜಾರಿಗೆ ಸಹಕರಿಸುವುದು ಮುಖ್ಯ.

ಇದರ ಪ್ರಕಾರ 2015ಕ್ಕಿಂತ ಮೊದಲು ಭಾರತಕ್ಕೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಸರ್ಕಾರ ಭಾರತೀಯ ಪೌರತ್ವ ನೀಡಬಹುದು. ಈ ಬಗ್ಗೆ ನಿಯಮಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಆನ್​ಲೈನ್​ ಪೋರ್ಟಲ್ ಸ್ಥಾಪಿಸಲಾಗಿದೆ. ಅರ್ಜಿದಾರರು ಪ್ರಯಾಣದ ದಾಖಲೆಗಳಿಲ್ಲದೆ ಪ್ರವೇಶದ ವರ್ಷವನ್ನು ಬಹಿರಂಗಪಡಿಸಬಹುದು. ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ. ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಸಿಎಎ ಮತ್ತು ಅಷ್ಟೇ ವಿವಾದಾತ್ಮಕ ಎನ್ಆರ್​​ಸಿ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ತರಲಾಗಿದೆ ಎಂಬ ಭಯವನ್ನು ಅಮಿತ್ ಶಾ ಕಳೆದ ತಿಂಗಳು ನಿವಾರಿಸಿದ್ದರು. “ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸಲಾಗುತ್ತಿದೆ ಮತ್ತು ಪ್ರಚೋದಿಸಲಾಗುತ್ತಿದೆ. ಸಿಎಎ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳವನ್ನು ಎದುರಿಸಿದ ನಂತರ ಭಾರತಕ್ಕೆ ಬಂದವರಿಗೆ ಮಾತ್ರ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ. ಇದು ಯಾರ ಪೌರತ್ವವನ್ನೂ ಕಸಿದುಕೊಳ್ಳಲು ಅಲ್ಲ” ಎಂದು ಹೇಳಿದ್ದರು.

ಈ ಸಂಪಾದಕೀಯವನ್ನೂ ಓದಿ : ವಿಸ್ತಾರ ಸಂಪಾದಕೀಯ: ದೇಶದಲ್ಲಿ ವಿಮಾನಯಾನ ಮೂಲ ಸೌಕರ್ಯ ಕ್ರಾಂತಿ

ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಕೈಬಿಟ್ಟ ಕಾರಣ ವಿರೋಧ ಪಕ್ಷಗಳಿಂದ ಮತ್ತು ಮುಸ್ಲಿಂ ಸಮುದಾಯದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಇದರಲ್ಲಿ ಹುರುಳಿಲ್ಲ. ಮುಸ್ಲಿಮರಿಗೂ ಈ ಕಾಯಿದೆಗೂ ಯಾವುದೇ ಸಂಬಂಧವಿಲ್ಲ. ಹಿಂದೂ, ಸಿಖ್, ಬೌದ್ಧರಿಗೆ ಭಾರತ ಹೊರತುಪಡಿಸಿ ಪೌರತ್ವ ಪಡೆಯಲು ಬೇರೆ ದೇಶಗಳೇ ಇಲ್ಲ. ಇತಿಹಾಸವನ್ನು ನೋಡಿದರೆ, ಭಾರತ, ಆಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಗಡಿಯುದ್ದಕ್ಕೂ ವಲಸೆ ನಡೆದಿರುವುದು ತಿಳಿಯುತ್ತದೆ. ಧರ್ಮದ ಕಾರಣಕ್ಕಾಗಿ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಆಶ್ರಯ ಕೋರಿ ಬಂದಿರುವ ಸಮುದಾಯಗಳಲ್ಲಿ ಅನೇಕರ ಟ್ರಾವೆಲ್‌ ಡಾಕ್ಯುಮೆಂಟ್‌ಗಳ ಅವಧಿ ಮುಗಿದಿದೆ ಅಥವಾ ಅಪೂರ್ಣ ದಾಖಲೆಗಳನ್ನು ಹೊಂದಿದ್ದಾರೆ. ಅಥವಾ ಅವರ ಬಳಿ ದಾಖಲೆಗಳೇ ಇಲ್ಲ. ಮೋದಿ ಸರ್ಕಾರವು ತನ್ನ ಮೊದಲನೇ ಅವಧಿಯಲ್ಲಿ ಈ ರೀತಿಯ ವಲಸಿಗರಿಗೆ ಪಾಸ್‌ಪೋರ್ಟ್‌ ಅಧಿನಿಯಮ(ಭಾರತ ಪ್ರವೇಶಕ್ಕೆ) 1920ರ ಹಾಗೂ ವಿದೇಶಿ ಅಧಿನಿಯಮ 1946ರ ಪ್ರತಿಕೂಲ ದಂಡನಾರ್ಹ ಅಂಶಗಳಿಂದಲೂ ವಿನಾಯಿತಿ ನೀಡಿದೆ. ಇದಷ್ಟೇ ಅಲ್ಲದೇ 2016ರಲ್ಲಿ ಮೋದಿ ಸರ್ಕಾರ ಈ ನಿರಾಶ್ರಿತರಿಗೆ ದೀರ್ಘ‌ಕಾಲಿಕ ವೀಸಾ ಪಡೆಯಲೂ ಅರ್ಹರನ್ನಾಗಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಒಟ್ಟಲ್ಲಿ, ಧಾರ್ಮಿಕ ಹಿಂಸೆಗೆ ತುತ್ತಾಗಿರುವವರಿಗೆ ನಾಗರಿಕತೆ ದೊರಕುವಂತೆ ಮಾಡಲು ಸಶಕ್ತಗೊಳಿಸುತ್ತದೆ.

ಸಂವಿಧಾನದ ಅನುಚ್ಛೇದ 25, ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಇಷ್ಟವಾದ ಧರ್ಮವನ್ನು ಮುಕ್ತವಾಗಿ ಅನುಸರಿಸಲು, ಆಚರಿಸಲು ಸಮಾನ ಹಕ್ಕನ್ನು ನೀಡುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಯಾವುದೇ ರೀತಿಯಲ್ಲೂ ಈ ಅಂಶಗಳನ್ನು ಉಲ್ಲಂಘಿಸಿಲ್ಲ. ಈ ಸತ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಎಯಿಂದಾಗಿ ಭಾರತೀಯ ಅಲ್ಪಸಂಖ್ಯಾತರ ಹಕ್ಕುಗಳ, ಭಾರತೀಯ ಜಾತ್ಯತೀತ ಮೌಲ್ಯಗಳ ಮತ್ತು ಸಂಪ್ರದಾಯಗಳ ಹನನವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಎ ಎನ್ನುವುದು ಅನ್ಯಾಯವನ್ನು ಎದುರಿಸುತ್ತಿರುವ ಸಾವಿರಾರು ನಿರ್ವಸಿತ ಕುಟುಂಬಗಳನ್ನು ಸಬಲೀಕರಣಗೊಳಿಸುವ ಐತಿಹಾಸಿಕ ಹೆಜ್ಜೆಯಾಗಿದೆ. ಇದು ಕಾಯಿದೆಯಾಗಿ ಜಾರಿಗೆ ಬಂದಿದೆ. ಸಮರ್ಪಕವಾಗಿ ಅನುಷ್ಠಾನಕ್ಕೂ ಬಂದರೆ, ಆಗ ಅದು ಇನ್ನಷ್ಟು ಅರ್ಥಪೂರ್ಣವಾಗುತ್ತದೆ.

Exit mobile version