Site icon Vistara News

ವಿಸ್ತಾರ ಸಂಪಾದಕೀಯ: ಹುಲಿಗಳ ಸಂಖ್ಯೆ ಏರಿಕೆ ಸರಿ, ಮಾನವರ ಸುರಕ್ಷತೆಗೂ ಗಮನ ಕೊಡಿ

Tigers In Karnataka

India houses 75% of the world’s tigers, Karnataka Bags Second Spot Again

ಇನ್ನೇನು ಹುಲಿ ಸಂತತಿಯೇ ಅಳಿಯಲಿದೆ ಎಂಬ ಹಂತದಲ್ಲಿ ಆರಂಭವಾದ ಪ್ರಾಜೆಕ್ಟ್ ಟೈಗರ್(ಹುಲಿ ಸಂರಕ್ಷಣೆ) ಯೋಜನೆಗೆ ಈಗ ಭರ್ತಿ 50 ವರ್ಷ. ಅದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ರಾಜ್ಯದ ಬಂಡಿಪುರ ಹುಲಿ ಸಂರಕ್ಷಿತಾರಣ್ಯಕ್ಕೆ ಭಾನುವಾರ ಭೇಟಿ ನೀಡಿ, ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. 2022ರಲ್ಲಿ ಹುಲಿಗಳ ಸಂಖ್ಯೆ 3,167ಕ್ಕೆ ಏರಿಕೆಯಾಗಿದೆ. ಕಳೆದ ದಶಕದಲ್ಲಿ ಹುಲಿಗಳ ಸಂತತಿ ದುಪ್ಪಟ್ಟು ಆಗಿದ್ದು, ಪ್ರಪಂಚದ ಒಟ್ಟು ಹುಲಿಗಳ ಪೈಕಿ ಶೇ.70ರಷ್ಟು ಹುಲಿಗಳು ಭಾರತದಲ್ಲಿವೆ. ಇದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಹುಲಿ ಸಂರಕ್ಷಣೆ ವಿಷಯದಲ್ಲಿ ಸರ್ಕಾರ ಇನ್ನೂ ಬಹಳ ದೂರ ಕ್ರಮಿಸಬೇಕಿದೆ. ಮಂದಿನ 50 ವರ್ಷಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಗಳೊಂದಿಗೆ ಮುನ್ನಡಿ ಇಡಬೇಕಾದ ಅಗತ್ಯವಿದೆ.

ಹುಲಿ ಗಣತಿಯ ವರದಿಯ ಪ್ರಕಾರ, ಭಾರತದಲ್ಲಿ 2006ರಲ್ಲಿ 1,411 ಹುಲಿಗಳಿದ್ದವು. ಈ ಸಂಖ್ಯೆ 2010ರಲ್ಲಿ 1,706, 2014ರಲ್ಲಿ 2,967 ಆಗಿತ್ತು. ಈಗ 3,167ಕ್ಕೆ ಏರಿಕೆಯಾಗಿವೆ. 2010ರಲ್ಲಿ ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಡೆದಿದ್ದ ಟೈಗರ್‌ ಫೋರಂನಲ್ಲಿ ಮುಂದಿನ 10 ವರ್ಷದಲ್ಲಿ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡುವ ಸಂಕಲ್ಪವನ್ನು ರಾಷ್ಟ್ರಗಳು ಮಾಡಿದ್ದವು. ನಿಗದಿತ ಸಮಯಕ್ಕೂ ಮೊದಲೇ ಭಾರತವು ಗುರಿ ಸಾಧಿಸಿದೆ. ಹುಲಿ ಸಂರಕ್ಷಣೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ದೊಡ್ಡ ಬೆಕ್ಕಿನ ಪ್ರಭೇದಗಳನ್ನು ಅಂದರೆ, ಹುಲಿ (Tiger), ಚಿರತೆ (Leopard), ಸಿಂಹ (Lion), ಚೀತಾ (Cheetah), ಪ್ಯೂಮ (Cougar), ಜಾಗ್ವಾರ್ (Jaguar) ಮತ್ತು ಹಿಮ ಚಿರತೆಗಳನ್ನು (Snow Leopard) ರಕ್ಷಿಸಲು ‘ಇಂಟರ್‌ನ್ಯಾಷನಲ್‌ ಬಿಗ್‌ ಕ್ಯಾಟ್‌ ಅಲಯನ್ಸ್‌’ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಈ ಅಲಯನ್ಸ್‌ ಮೂಲಕ ಹಣಕಾಸು, ತಾಂತ್ರಿಕ ಸಹಕಾರಕ್ಕೆ ಅನುಕೂಲವಾಗುತ್ತದೆ. ಯಾವುದೇ ಒಂದು ದೇಶ ಒಬ್ಬಂಟಿಯಾಗಿ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಈ ಪ್ರಾಣಿಗಳ ಸಂರಕ್ಷಣೆ ವಿಷಯದಲ್ಲಿ ಸದಸ್ಯ ರಾಷ್ಟ್ರಗಳು ತಮ್ಮ ಅನುಭವ ಹಂಚಿಕೊಳ್ಳಬಹುದು, ತರಬೇತಿ ನೀಡಬಹುದು. ಅವುಗಳ ಸಾಮರ್ಥ್ಯ ವರ್ಧನೆಗೂ ಅನುಕೂಲವಾಗುತ್ತದೆ. ಈ ಒಕ್ಕೂಟದಲ್ಲಿ ಒಟ್ಟು 97 ರಾಷ್ಟ್ರಗಳು ಸದಸ್ಯ ಆಗಿದ್ದು, ಆಸಕ್ತ ಇತರ ದೇಶಗಳು ಹಾಗೂ ಸಂಘ ಸಂಸ್ಥೆಗಳೂ ಕೈಜೋಡಿಸಬಹುದಾಗಿದೆ. ಈ ಅಲಯನ್ಸ್‌‌ನೊಂದಿಗೆ ಭಾರತವು ಕೈ ಜೋಡಿಸಿರುವುದರಿಂದ ಭಾರತದ ಹುಲಿ ಸಂರಕ್ಷಣೆಗೆ ಮತ್ತೊಂದು ಆಯಾಮ ದೊರೆಯಲಿದೆ.

ಇಂದಿರಾ ಗಾಂಧಿ ಅವರು 1973 ಏಪ್ರಿಲ್ 1ರಂದು ‘ಪ್ರಾಜೆಕ್ಟ್ ಟೈಗರ್’ ಕಾರ್ಯಕ್ರಮ ಆರಂಭಿಸಿದಾಗ, ಕರ್ನಾಟಕದ ಬಂಡೀಪುರ ಸೇರಿದಂತೆ ದೇಶದ 9 ಕಡೆಗಳಲ್ಲಿ ಹುಲಿ ಸಂರಕ್ಷಣೆಯನ್ನು ಕೈಗೆತ್ತಿಕೊಳ್ಳಲಾಯಿತು. ಅದೀಗ 53 ಕಡೆಗಳಲ್ಲಿ ನಡೆಯುತ್ತಿದೆ. ದೇಶದ 23 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಹುಲಿ ಸಂರಕ್ಷಣೆಯ ಯೋಜನೆಯ ಯಶಸ್ಸಿನಿಂದ ಸಾಕಷ್ಟು ಲಾಭಗಳಾಗುತ್ತಿವೆ. ಹುಲಿಗಳ ಸಂಖ್ಯೆ ಹೆಚ್ಚಾದಂತೆ ಕಾಡುಗಳ ರಕ್ಷಣೆಯೂ ಅಧಿಕವಾಗುತ್ತಿದೆ. ಕಾಡು ನಾಶ ತಪ್ಪಿದರೆ ಅದರ ನೇರ ಲಾಭ ನಾಡಿಗಾಗುತ್ತದೆ. ಪರಿಸರ ಸಮತೋಲನಕ್ಕೂ ಇದು ಕಾರಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ನದಿಗಳ ಸಂರಕ್ಷಣೆಯೂ ಆಗುತ್ತಿದೆ. ಭಾರತದ ಮಟ್ಟಿಗೆ ಟೈಗರ್ ಪ್ರಾಜೆಕ್ಟ್ ಕೇವಲ ಹುಲಿ ಸಂರಕ್ಷಣೆ ಮಾತ್ರವಲ್ಲ. ಅದು ನಮ್ಮ ಅರಣ್ಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ನೆರವಾಗುತ್ತಿರುವ ಸಾಧನವೂ ಆಗಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸರ್ಕಾರಿ ನೌಕರರ ಪಿಂಚಣಿ ಸಂಕಟ ನಿವಾರಣೆಯಾಗಲಿ

ಪರಿಸರ ಸಮತೋಲನ ದೃಷ್ಟಿಯಿಂದ ಹಾಗೂ ಅಳಿದು ಹೋಗುತ್ತಿದ್ದಂತೆ ಹುಲಿ ಸಂತತಿಯ ರಕ್ಷಣೆಯ ದೃಷ್ಟಿಯಿಂದ ಟೈಗರ್ ಪ್ರಾಜೆಕ್ಟ್ ಅತ್ಯಂತ ಮಹತ್ವದ ಯೋಜನೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಈ ಯೋಜನೆಯ ಮತ್ತೊಂದು ಮಗ್ಗಲನ್ನು ವಿಶ್ಲೇಷಬೇಕಾದ ಅಗತ್ಯವಿದೆ. ಹುಲಿಗಳ ಸಂಖ್ಯೆ ಹೆಚ್ಚಾದಂತೆ ಪ್ರಾಣಿ-ಮಾನವ ಸಂಘರ್ಷವೂ ಹೆಚ್ಚುತ್ತದೆ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಂಚಿನ ಹಳ್ಳಿಗಳಲ್ಲಿ ಆಗಾಗ ಹುಲಿಗಳು ದಾಳಿ ನಡೆಸುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಆಗಾಗ ಹುಲಿಗಳು ನರ ಬಲಿ ಪಡೆಯುತ್ತಲೇ ಇರುತ್ತವೆ. ಅಂಥ ಹುಲಿಗಳನ್ನು ಹುಡುಕಿ ಕೊಲ್ಲುವಂತೆ ಜನರು ಸರ್ಕಾರದ ಮೇಲೆ ಒತ್ತಡ ತರುತ್ತಲೇ ಇರುತ್ತಾರೆ. ಹಾಗಾಗಿ, ಹುಲಿ ಸಂರಕ್ಷಣೆಯ ವಿಷಯದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಒಂದು ಸಮಸ್ಯೆಯನ್ನು ಬಗೆಹರಿಸಿ, ಮತ್ತೊಂದು ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತಾಗಬಾರದು! ಒಂದೆಡೆ ಹುಲಿ ಸಂರಕ್ಷಣೆಯೂ ಆಗಬೇಕು, ಮತ್ತೊಂದೆಡೆ ಹುಲಿ-ಮಾನವ ಸಂಘರ್ಷವನ್ನೂ ತಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ವಿಸ್ತೃತ ಕಾರ್ಯ ಯೋಜನೆ ರೂಪಿಸಬೇಕು.

Exit mobile version