ವಿಮಾನದಲ್ಲಿ ದುರ್ವರ್ತನೆ ತೋರಿದ ಮತ್ತೊಂದು ಪ್ರಕರಣ ವರದಿಯಾಗಿದೆ. ಮುಂಬಯಿ- ದೆಹಲಿ ನಡುವಿನ ಏರ್ ಇಂಡಿಯಾ ವಿಮಾನದಲ್ಲಿ ಕುಡಿದು ಮತ್ತನಾದ ಪ್ರಯಾಣಿಕನೊಬ್ಬ ಫ್ಲೋರ್‌ನ ಮೇಲೆಯೇ ಗಲೀಜು ವಿಸರ್ಜಿಸಿಕೊಂಡಿದ್ದಾನೆ. ಜೂನ್ 24ರಂದು ಎಐಸಿ 866 ವಿಮಾನದಲ್ಲಿ ಈ ಘಟನೆ ನಡೆದಿದ್ದು, ದುರ್ವರ್ತನೆ ತೋರಿದ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಇದೇನೂ ಹೊಸತಲ್ಲ. ಇತ್ತೀಚೆಗೆ ಇಂಥ ಹಲವು ಪ್ರಕರಣಗಳು ನಡೆದಿವೆ. 2022ರ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಮಹಿಳಾ ಸಹಪ್ರಯಾಣಿಕರೊಬ್ಬರ ಮೇಲೆ ಉದ್ದೇಶಪೂರ್ವಕ ಮೂತ್ರ ವಿಸರ್ಜಿಸಿದ್ದ. ಇದಾದ ಕೆಲವೇ ದಿನಗಳಲ್ಲಿ, ಡಿಸೆಂಬರ್ 9ರಂದು, ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನೊಬ್ಬ ಮಹಿಳೆಯ ಮೇಲೆ ಮೂತ್ರ ಮಾಡಿದ್ದ. ವಿಮಾನ ನಿಲ್ದಾಣದಲ್ಲಿ ಮೂತ್ರ ಮಾಡುವುದು, ಅಶ್ಲೀಲ ವರ್ತನೆ ಎಲ್ಲವೂ ನಡೆಯುತ್ತಿದೆ. ಬ್ಯಾಂಕಾಕ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನವೊಂದರಲ್ಲಿ, ವಿಮಾನದ ಸುರಕ್ಷತಾ ನಿಯಮ ಪಾಲಿಸಲು ಒಬ್ಬ ಪ್ರಯಾಣಿಕ ನಿರಾಕರಿಸಿದ್ದ. ಇದರಿಂದ ಗಲಾಟೆ ಆರಂಭವಾಗಿ, ಪ್ರಯಾಣಿಕರೇ ಪರಸ್ಪರ ಹೊಡೆದಾಡಿಕೊಂಡ ವಿಡಿಯೋ ಕೂಡ ವೈರಲ್ ಆಗಿತ್ತು. ಸುಶಿಕ್ಷಿತರ ಪ್ರಯಾಣದ ಮಾಧ್ಯಮ ಅಂದುಕೊಳ್ಳಲಾಗಿರುವ ವಿಮಾನಯಾನದಲ್ಲಿ ಇಂಥದೆಲ್ಲ ನಡೆಯುತ್ತಿರುವುದು ಆಶ್ಚರ್ಯ, ಆಘಾತಕರ ಮಾತ್ರವಲ್ಲದೆ, ನಾಚಿಕೆಗೇಡು ಕೂಡ ಹೌದು.
ಈ ಘಟನೆಗಳೇನು ದಿನವೂ ನಡೆಯುತ್ತಿದ್ದವೋ, ಈಗ ಮಾತ್ರ ವರದಿಯಾಗುತ್ತಿವೆಯೋ ಅನ್ನಿಸುವಂತೆ ಘಟನೆಗಳ ಪ್ರಮಾಣ ಇದೆ. ಬಹುಶಃ ನಮ್ಮ ಸರ್ಕಾರಿ ಬಸ್ಸುಗಳಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಕೂಡ ಈ ರೀತಿಯ ವರ್ತನೆಗಳು ನಡೆಯುವುದಿಲ್ಲ. ಹೆಚ್ಚಾಗಿ ಕಡಿಮೆ ಸಾಕ್ಷರರು, ಅಶಿಕ್ಷಿತರು ಪ್ರಯಾಣಿಸುವ ಗ್ರಾಮೀಣ ಸಾರಿಗೆಗಳಲ್ಲಿ ಕೂಡ ಯಾರೂ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ ನಿದರ್ಶನ ಇಲ್ಲ. ಈ ದಾಖಲೆ ಬಹುಶಃ ನಮ್ಮ ಹೆಮ್ಮೆಯ ಏರ್ ಇಂಡಿಯಾ ಪ್ರಯಾಣಿಕರಿಗೇ ಸಲ್ಲಬೇಕು. ಹಾಗೇ ಇಂಥದ್ದನ್ನು ತಡೆಯಲಾಗದ, ಕಠಿಣ ಕ್ರಮ ಕೈಗೊಳ್ಳಲಾಗದ ವಿಮಾನಯಾನ ಸಂಸ್ಥೆಗಳ ನಡೆಯೂ ಆಶ್ಚರ್ಯಕರ.
ಹಾಗೆ ನೋಡುವುದಾದರೆ, ಭಾರತೀಯ ವಿಮಾನ ಪ್ರಯಾಣಿಕರು ಈ ಜಗತ್ತಿನಲ್ಲೇ ಅತ್ಯಂತ ಅಸಭ್ಯ ಪ್ರಯಾಣಿಕರು ಎನ್ನಲು ಅಡ್ಡಿಯಿಲ್ಲ. ಇದು ನಾವು ನಾಚಿಕೆಯಿಂದ ತಲೆ ತಗ್ಗಿಸಬೇಕಾದಂಥ ವಿಷಯ. ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಘನತೆಯಿಂದ ವರ್ತಿಸುವ ನಮ್ಮ ಪ್ರಯಾಣಿಕರು ಭಾರತೀಯ ವಾಯುಯಾನ ಪ್ರದೇಶದಲ್ಲಿ ಮಾತ್ರ ಹಗ್ಗ ಬಿಚ್ಚಿ ಬಿಟ್ಟ ಗೂಳಿಗಳಂತೆ ವರ್ತಿಸಲು ಆರಂಭಿಸುತ್ತೇವೆ. ಸಾರ್ವಜನಿಕ ಸಭ್ಯತೆಯ ಕಲ್ಪನೆ ಕೂಡ ನಮಗಿಲ್ಲ. ಸಾರ್ವಜನಿಕ ಸಾರಿಗೆಯಲ್ಲಿ ಒಳಗೇ ಉಗುಳುವ, ಕಸ ಹಾಕುವ ನಾವು ಅದೇ ಪ್ರವೃತ್ತಿಯನ್ನೇ ವಾಯುಯಾನಕ್ಕೂ ವಿಸ್ತರಿಸಿಕೊಂಡಿದ್ದೇವೆ. ವಿಮಾನದಲ್ಲಿ ಎಲ್ಲರಿಗೂ ಸೀಟ್ ಬುಕ್ ಆಗಿರುತ್ತದೆ, ಯಾರೂ ನಿಂತು ಪ್ರಯಾಣಿಸಬೇಕಿಲ್ಲ ಎನ್ನುವುದು ಕಾಮನ್ ಸೆನ್ಸ್. ಆದರೆ ವಿಮಾನ ಹತ್ತಿದ ಕೂಡಲೇ ನೂಕುನುಗ್ಗಲು, ಸೀಟಿಗಾಗಿ ಹೋರಾಟ ನಡೆಸುವ ಹಾಸ್ಯಾಸ್ಪದ ಚಿತ್ರಣ ನಮ್ಮಲ್ಲಿ ಮಾತ್ರ ಕಾಣಲು ಸಾಧ್ಯ. ಲಗೇಜ್ ಹಾಕುವಲ್ಲಿ ತೆಗೆಯುವಲ್ಲಿ ಕಿತ್ತಾಡುವುದು, ಪಾನಮತ್ತರಾಗಿ ಗಗನಸಖಿಯರ ಜತೆಗೂ ಸಹಪ್ರಯಾಣಿಕರ ಜತೆಗೂ ಅಸಭ್ಯವಾಗಿ ವರ್ತಿಸುವುದು, ವಿಮಾನ ಸಿಬ್ಬಂದಿಯನ್ನು ಅಗೌರವಿಸುವಂತೆ ಕೀಳಾಗಿ ನಡೆಸಿಕೊಳ್ಳುವುದು, ಅಶ್ಲೀಲವಾಗಿ ಟೀಕೆ ಮಾಡುವುದು ಎಲ್ಲವನ್ನೂ ಕಾಣಬಹುದು. ಇಂಥ ಪ್ರಯಾಣಿಕರನ್ನು ಸುಶಿಕ್ಷಿತರೆನ್ನಬೇಕೋ, ಸುಶಿಕ್ಷಿತರ ರೂಪದಲ್ಲಿರುವ ಮೃಗಗಳೆನ್ನಬೇಕೋ?
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಭಾರತೀಯ ಮುಸ್ಲಿಮರ ಸುರಕ್ಷತೆ ಬಗ್ಗೆ ಬರಾಕ್ ಒಬಾಮಾಗೆ ಚಿಂತೆ ಬೇಕಿಲ್ಲ
ವಿಮಾನಯಾನ ಸಂಸ್ಥೆಗಳ ತಪ್ಪು ಕೂಡ ಇದರಲ್ಲಿದೆ. ಇಂಥ ವರ್ತನೆ ತೋರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದು, ಅಂಥವರಿಗೆ ಮುಂದಿನ ಕೆಲ ವರ್ಷಗಳ ಕಾಲ ವಿಮಾನಯಾನ ನಿಷೇಧಿಸುವುದು ಸಾಧ್ಯವಾದರೆ ಇಂಥ ಅಟಾಟೋಪಗಳು ಬಂದ್ ಆಗುತ್ತವೆ. 2022ರ ಮೂತ್ರ ವಿಸರ್ಜನೆಯ ಪ್ರಕರಣದಲ್ಲಿ ವಿಷಯ ಲೋಕಕ್ಕೆಲ್ಲಾ ತಿಳಿದ ಬಳಿಕವಷ್ಟೇ ಏರ್ ಇಂಡಿಯಾ ಸಂಸ್ಥೆ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಇಂಥ ನಿರ್ಲಕ್ಷ್ಯ ಸಲ್ಲದು. ಸುಶಿಕ್ಷಿತರೆನಿಸಿಕೊಂಡವರು ಕೂಡ ಕೆಲವು ಸಂದರ್ಭಗಳಲ್ಲಿ ಪ್ರಾಣಿಗಳಂತೆ ವರ್ತಿಸುತ್ತಾರೆ. ಇಂಥವರನ್ನು ಅಲ್ಲಲ್ಲಿಯೇ ಮಟ್ಟ ಹಾಕಿದರೆ ಸರಿಹೋದೀತು. ಹಾಗೇ ಸಭ್ಯತೆ, ಘನತೆ ಕಾಪಾಡಿಕೊಳ್ಳುವ ಹೊಣೆಗಾರಿಕೆ ಪ್ರಯಾಣಿಕರ ಮೇಲಿದೆ.