Site icon Vistara News

ವಿಸ್ತಾರ ಸಂಪಾದಕೀಯ: ದೇಶ ವಿರೋಧಿಗಳಿಗೆ ನಡುಕ ಹುಟ್ಟಿಸುತ್ತಿರುವ ಎನ್‌ಐಎ

The NIA is making the anti-nationals tremble

#image_title

ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಭಾನುವಾರ ಪ್ರವೀಣ್ ನೆಟ್ಟಾರು ಹತ್ಯೆಯ ಮುಖ್ಯ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೂ ಮೂವರ ಶೋಧ ನಡೆದಿದೆ. ಇದೇ ವೇಳೆಗೆ ದೆಹಲಿ, ಹರಿಯಾಣ, ಕಾಶ್ಮೀರಗಳಲ್ಲಿ ದಾಳಿ ನಡೆಸಿರುವ ಎನ್‌ಐಎ (NIA) ತಂಡಗಳು, ಅಪರಾಧ ಕೃತ್ಯಗಳಿಗೆ ಬಳಕೆಯಾಗುತ್ತಿದ್ದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿವೆ. ಎನ್‌ಐಎ ಒಂದು ಕಡೆ ಉಗ್ರರ ಸಂಚನ್ನು ತಡೆಯುತ್ತಾ, ಇನ್ನೊಂದೆಡೆ ಅವರನ್ನು ಬಂಧಿಸುತ್ತಾ, ದೇಶವಿರೋಧಿ ಚಟುವಟಿಕೆಗಳಿಗೆ ಸಾಥ್ ನೀಡುವವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾ ಸಾಗುತ್ತಿರುವುದು ದೇಶಾದ್ಯಂತ ದೇಶವಿರೋಧಿ ಸಂಘಟನೆಗಳ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಎನ್‌ಐಎ ದೇಶದ ಸುರಕ್ಷತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎನ್ನುವಲ್ಲಿ ಎರಡು ಮಾತಿಲ್ಲ.

ಭಾನುವಾರದ ಬಂಧನ ರಾಜ್ಯದ ಮಟ್ಟಿಗೆ ದೊಡ್ಡದೊಂದು ಅಪರಾಧದ ಭೇದಿಸುವಿಕೆಯೇ ಆಗಿದೆ. ಈ ಹಿಂದೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಪಿಎಫ್‌ಐ ಭಾಗಿಯಾಗಿದ್ದುದನ್ನು ಅನುಮಾನಕ್ಕೆ ಆಸ್ಪದವಿಲ್ಲದಂತೆ ಎನ್‌ಐಎ ಸಾಬೀತುಪಡಿಸಿತ್ತು. ಇದರಿಂದಾಗಿ ಈ ದೇಶದ್ರೋಹಿ ಸಂಘಟನೆಯ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದ್ದಲ್ಲದೆ, ಅದರ ಹಲವಾರು ಮುಖಂಡರು ಬಂಧಿತರಾಗಿದ್ದರು. ಇಂಥ ಹಲವಾರು ಹೈ ಪ್ರೊಫೈಲ್‌ ಪ್ರಕರಣಗಳನ್ನು ಎನ್‌ಐಎ ನಿಭಾಯಿಸುತ್ತಿದೆ. ಎನ್‌ಐಎ ಅಸ್ತಿತ್ವಕ್ಕೆ ಬಂದುದೇ ಇಂಥದೊಂದು ಪ್ರಕರಣದ ಬಳಿಕ. 2008ರ ನವಂಬರ್‌ನಲ್ಲಿ ಮುಂಬೈಯಲ್ಲಿ ನಡೆದ ಉಗ್ರಗಾಮಿ ದಾಳಿಯ ಬಳಿಕ ಯುಪಿಎ ಸರ್ಕಾರ ಎನ್ಐಎ ಕಾಯಿದೆಯನ್ನು ಜಾರಿಗೆ ತಂದಿತು. ಎನ್ಐಎ ಸಂಸ್ಥೆ 2009ರಿಂದ ಕಾರ್ಯ ನಿರ್ವಹಿಸಲು ಆರಂಭಿಸಿತು. ಭಾರತ ಎದುರಿಸುತ್ತಿರುವ ಹಲವು ಬಗೆಯ ಭಯೋತ್ಪಾದನೆಗಳ ನಿಗ್ರಹಕ್ಕಾಗಿ ಎನ್‌ಐಎ ಕಾರ್ಯ ನಿರ್ವಹಿಸುತ್ತದೆ. ಭಾರತದ ಸಾರ್ವಭೌಮತ್ವ, ಸುರಕ್ಷತೆ, ವಿದೇಶಗಳೊಂದಿಗೆ ಭಾರತದ ಸ್ನೇಹ ಸಂಬಂಧ, ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಹಾನಿ ಉಂಟು ಮಾಡಬಹುದಾದ ಯಾವುದೇ ಸಂಘಟಿತ ಕಾರಸ್ಥಾನಗಳನ್ನು ಬಯಲಿಗೆಳೆಯುವುದು ಇದರ ಕಾರ್ಯ. ಉಗ್ರಗಾಮಿ ಚಟುವಟಿಕೆಗಳು, ಅದಕ್ಕೆ ಸಂಬಂಧಿಸಿದ ಆಯುಧಗಳ ಕಳ್ಳಸಾಗಣೆ, ಮಾದಕ ದ್ರವ್ಯ ಸಾಗಾಟ, ಕಳ್ಳ ನೋಟುಗಳ ಸಾಗಾಟ, ಗಡಿಯಾಚೆಯಿಂದ ನುಸುಳುವಿಕೆ ಇತ್ಯಾದಿಗಳ ಮೇಲೂ ಎನ್ಐಎ ನಿಗಾ ಇಡುತ್ತದೆ. ಎನ್ಐಎ ಸಂಸ್ಥೆಯ ಪ್ರಧಾನ ಕಚೇರಿ ದೆಹಲಿಯಲ್ಲಿದ್ದು, ಬೆಂಗಳೂರು ಸೇರಿದಂತೆ ಹತ್ತೊಂಬತ್ತು ಪ್ರಮುಖ ನಗರಗಳಲ್ಲಿ ಶಾಖಾ ಕಚೇರಿಗಳಿವೆ.

ಜಾಗತಿಕ ತನಿಖಾ ಸಂಸ್ಥೆ ಇಂಟರ್‌ಪೋಲ್‌, ಅಮೆರಿಕದ ಎಫ್‌ಬಿಐಗಳಂತೆ ಎನ್‌ಐಎ ಭಾರತದ ಅತ್ಯುನ್ನತ ಅಪರಾಧ ತನಿಖಾ ಸಂಸ್ಥೆಯಾಗಿದೆ. ಅತ್ಯನ್ನತ ಯಾಕೆಂದರೆ ಅದು ವಿದೇಶಗಳಲ್ಲಿರುವ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ವಿರುದ್ಧ ದಾಳಿ ನಡೆಸುವವರ ಕುರಿತೂ ವಿಚಾರಣೆ ನಡೆಸುವ ಬಲ ಹೊಂದಿದೆ. ಹೀಗಾಗಿಯೇ ಅದು ಅಂತಾರಾಜ್ಯ ಅಪರಾಧಗಳಂತೆಯೇ, ಅಂತಾರಾಷ್ಟ್ರೀಯ ಅಪರಾಧ ಪ್ರಕರಣಗಳಲ್ಲೂ ತನಿಖೆ ವ್ಯಾಪ್ತಿ ಹೊಂದಿದೆ. ಇದರಿಂದಾಗಿಯೇ ಪಿಎಫ್‌ಐ- ಖಲಿಸ್ತಾನ್‌ ಮುಂತಾದ ಸಂಘಟನೆಗಳು ಹೊಂದಿರುವ ಅಂತಾರಾಷ್ಟ್ರೀಯ ನಂಟುಗಳನ್ನು ಬಯಲಿಗೆಳೆಯಲು ಅದಕ್ಕೆ ಸಾಧ್ಯವಾಗುತ್ತಿದೆ. ಸ್ಫೋಟಕ ವಸ್ತುಗಳ ಕಾಯಿದೆ, ಪರಮಾಣು ಶಕ್ತಿ ಕಾಯಿದೆ, ಆ್ಯಂಟಿ ಹೈಜಾಕಿಂಗ್ ಆ್ಯಕ್ಟ್, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ, ನಾಗರಿಕ ವಿಮಾನಯಾನ ಸುರಕ್ಷತೆ ಕಾಯಿದೆ, ಸಾರ್ಕ್ ಶೃಂಗಸಭೆ (ಉಗ್ರವಾದ ಹತ್ತಿಕ್ಕುವ) ಕಾಯಿದೆ, ಸಾಗರಾಂತರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ, ಸಮೂಹನಾಶಕ ಶಸ್ತ್ರಾಸ್ತ್ರಗಳು ಹಾಗೂ ಅವುಗಳ ಪೂರೈಕೆ ತಡೆ ಕಾಯಿದೆ, ಭಾರತೀಯ ದಂಡ ಸಂಹಿತೆಯಡಿಯ ಅಪರಾಧಗಳು, ಶಸ್ತ್ರಾಸ್ತ್ರ ಕಾಯಿದೆ, ಮಾಹಿತಿ ತಂತ್ರಜ್ಞಾನ ಕಾಯಿದೆ, ಮಾದಕ ದ್ರವ್ಯ ತಡೆ ಕಾಯಿದೆಗಳಡಿ ಎನ್ಐಎ ವಿಚಾರಣೆ ನಡೆಸಬಹುದಾಗಿದೆ. ಸಿಬಿಐ ಕೋರ್ಟ್‌ನಂತೆ ಎನ್‌ಐಎ ಕೋರ್ಟ್‌ ಕೂಡ ಕಾರ್ಯಾಚರಿಸುತ್ತದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಶ್ರೀಲಂಕಾಗೆ ಭಾರತವೇ ಪರಮಾಪ್ತ ಎನ್ನುವುದು ಮತ್ತೊಮ್ಮೆ ಸಾಬೀತು

ರಾಜ್ಯದಲ್ಲಿ ಸದ್ಯ ಎನ್‌ಐಎಯ ಒಂದು ಶಾಖೆ ಹಾಗೂ ಒಂದು ಕೋರ್ಟ್‌ ಕಾರ್ಯಾಚರಿಸುತ್ತದೆ. ನಮಗೆಲ್ಲ ತಿಳಿದಿರುವಂತೆ, ರಾಜ್ಯದಲ್ಲಿ ಸಂಘಟಿತ ಅಪರಾಧಗಳು, ಭಯೋತ್ಪಾದಕರ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರು ಭಯೋತ್ಪಾದಕರ ಅಡಗುದಾಣವಾಗುತ್ತಿದೆ ಎಂಬ ಮಾತಿನಲ್ಲಿ ಉತ್ಪ್ರೇಕ್ಷೆಯಿಲ್ಲ. ರಾಜ್ಯದ ಕರಾವಳಿಯಲ್ಲಿ ಕೂಡ ಉಗ್ರರ ನೆಟ್‌ವರ್ಕ್‌ ದಟ್ಟವಾಗಿ ಹಬ್ಬಿದೆ. ಹೀಗಾಗಿ ಇಲ್ಲಿ ಎನ್‌ಐಎ ಶಾಖೆಯನ್ನು ಹೆಚ್ಚಿಸುವುದು, ಹೆಚ್ಚಿನ ಅಧಿಕಾರಿಗಳನ್ನು ನಿಯೋಜಿಸುವುದು, ಹೆಚ್ಚಿನ ತಂತ್ರಜ್ಞಾನ- ಸಾಧನೋಪಕರಣಗಳ ನೆರವು ಒದಗಿಸುವುದು ಸಾಧ್ಯವಾಗಬೇಕು. ತನಿಖಾ ಸಂಸ್ಥೆಗೆ ಮತ್ತಷ್ಟು ಮೂಲಸೌಕರ್ಯ ಕಲ್ಪಿಸಿಕೊಡಬೇಕು. ಸಾರ್ವಜನಿಕರು ಕೂಡ ತಮಗೆ ಸಿಗುವ ಸುಳಿವನ್ನು ಎನ್‌ಐಎ ಜತೆ ಮುಕ್ತವಾಗಿ ಹಂಚಿಕೊಳ್ಳಬೇಕು. ಆಗ ಎನ್‌ಐಎ ಸ್ಥಾಪನೆಯ ಉದ್ದೇಶ ಸಾರ್ಥಕವಾಗುತ್ತದೆ.

Exit mobile version