ಹಿಂದುತ್ವ ಹಾಗೂ ಇಸ್ಲಾಂ ಕುರಿತು ಡೆಮಾಕ್ರಸಿ ಪ್ರೊಗ್ರೆಸ್ಸಿವ್ ಆಜಾದ್ ಪಕ್ಷದ ಮುಖ್ಯಸ್ಥ, ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇಸ್ಲಾಂಗಿಂತ ಹಿಂದು ಧರ್ಮವು ಪುರಾತನ ಇತಿಹಾಸ ಹೊಂದಿದೆ. ಭಾರತದಲ್ಲಿರುವ ಮುಸ್ಲಿಮರು ಮೊದಲು ಹಿಂದುಗಳಾಗಿದ್ದರು. ಅವರನ್ನು ಮತಾಂತರಗೊಳಿಸಿ ಮುಸ್ಲಿಮರನ್ನಾಗಿ ಮಾಡಲಾಗಿದೆ. ಕಾಶ್ಮೀರದಲ್ಲಿರುವ ಮುಸ್ಲಿಮರೆಲ್ಲರೂ ಹಿಂದು ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರು. ಭಾರತದಲ್ಲಿರುವ ಮುಸ್ಲಿಮರು ಹಿಂದುಗಳೇ ಆಗಿದ್ದರು. ಈಗಿನ ಮುಸ್ಲಿಮರೆಲ್ಲರೂ ಮೊದಲು ಹಿಂದುಗಳಾಗಿದ್ದರು. ಕಾಶ್ಮೀರದಲ್ಲೂ ಇದೇ ಆಗಿದೆ. ಕಾಶ್ಮೀರಿ ಪಂಡಿತರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅವರು ನೀಡಿದ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಪರ-ವಿರೋಧ ಚರ್ಚೆಗಳು ಕೂಡ ಶುರುವಾಗಿವೆ.
ಗುಲಾಂ ನಬಿ ಆಜಾದ್ ಅವರ ಹೇಳಿಕೆಯ ಹಿಂದೆ ಗೂಢಾರ್ಥವೇನೂ ಇಲ್ಲ. ಇದು ಬಹಳ ಹಿಂದಿನಿಂದ ಹೆಚ್ಚಿನವರಿಗೆ ತಿಳಿದಿರುವ ಸಂಗತಿಯೇ ಆಗಿದೆ. ಇದನ್ನು ಹಿಂದೂ ಧರ್ಮದ ಮುಖಂಡರು, ರಾಷ್ಟ್ರೀಯತೆಯ ಪ್ರತಿಪಾದಕರು ಹೇಳುತ್ತಲೇ ಬಂದಿದ್ದಾರೆ. ಎಲ್ಲಿಯವರೆಗೆ ಎಂದರೆ, ಇಲ್ಲಿನ ಇಂದಿನ ಮುಸ್ಲಿಮರ ಮೂಲ ಹಿಂದೂ ಧರ್ಮವೇ ಆಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರು ಕೂಡ ಹೇಳಿದ್ದುಂಟು. ಆದರೆ ಮುಖ್ಯವಾಹಿನಿ ರಾಜಕಾರಣದ ಮುಸ್ಲಿಂ ಮುಖಂಡರೊಬ್ಬರು ಈ ಮಾತನ್ನು ಹೇಳುತ್ತಿರುವುದು ಇದೇ ಮೊದಲು. ಕಾಂಗ್ರೆಸ್ ಮುಖಂಡರಾಗಿದ್ದಾಗ ಅವರು ಈ ಮಾತನ್ನು ಹೇಳುವ ಧೈರ್ಯ ಮಾಡಿರಲಿಲ್ಲ; ಈಗ ಕಾಂಗ್ರೆಸ್ ತೊರೆದ ಬಳಿಕ ಹೇಳಿದ್ದಾರೆ. ಇರಲಿ, ಈಗಲಾದರೂ ಧೈರ್ಯ ತೋರಿದ್ದಾರೆ ಎಂದು ಪ್ರಶಂಸಿಸೋಣ. ಗುಲಾಂ ಹೇಳಿಕೆ ಎರಡೂ ಸಮುದಾಯಗಳ ಕಣ್ಣು ತೆರೆಸುವಂತಿದೆ.
ಇಸ್ಲಾಂ ಕೇವಲ 1,500 ವರ್ಷಗಳ ಇತಿಹಾಸ ಹೊಂದಿದೆ. ಆದರೆ, ಹಿಂದುತ್ವವು ಇದಕ್ಕಿಂತ ತುಂಬ ಹಳೆಯದು. ಮೊಘಲರ ಅವಧಿಯಲ್ಲಿ 10-20 ಜನ ಮಾತ್ರ ಹೊರಗಿನಿಂದ ಕಾಶ್ಮೀರಕ್ಕೆ ಬಂದಿರಬಹುದು. ಕಾಶ್ಮೀರದಲ್ಲಿ 600 ವರ್ಷಗಳ ಹಿಂದೆ ಮುಸ್ಲಿಮರು ಇರಲಿಲ್ಲ. ಕಣಿವೆಯಲ್ಲಿ ಇದ್ದವರೆಲ್ಲ ಕಾಶ್ಮೀರಿ ಪಂಡಿತರೇ ಆಗಿದ್ದರು. ಅಂದರೆ, ಈಗಿರುವ ಮುಸ್ಲಿಮರು ಮೊದಲು ಕಾಶ್ಮೀರಿ ಪಂಡಿತರೇ ಆಗಿದ್ದರು. ಹಾಗಾಗಿ, ಇಲ್ಲಿನ ಮುಸ್ಲಿಮರ ಮೂಲ ಹಿಂದು ಧರ್ಮವೇ ಆಗಿತ್ತು. ಹಿಂದು ಧರ್ಮದ ಆಧಾರದ ಮೇಲೆಯೇ ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರ ಇದೆ. ಹಾಗಾಗಿ, ನಮ್ಮ ಮೂಲ ಹಿಂದು ಧರ್ಮವೇ ಆಗಿದೆ ಎಂಬುದು ಗುಲಾಂ ನಬಿ ಆಜಾದ್ ಅವರ ಸ್ಪಷ್ಟ ಅಭಿಪ್ರಾಯವಾಗಿದೆ. ಇದಕ್ಕೆ ಪೂರಕವಾಗಿ ಇನ್ನೊಂದು ನಿದರ್ಶನ ನೀಡಬಹುದು. 300 ವರ್ಷಗಳ ಹಿಂದೆ ಭಾರತಕ್ಕೆ ಬಂದ ಬ್ರಿಟಿಷರ ಸಂಖ್ಯೆ ಕೇವಲ ಕೆಲವು ಸಾವಿರ. ಆದರೆ ನಂತರ ಅವರು ಇಲ್ಲಿನ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತ ಹೋದಂತೆಲ್ಲ ತಮ್ಮ ಅಧಿಕಾರದ ವ್ಯಾಪ್ತಿಯನ್ನು ವಿಸ್ತರಿಸಿದರು. ಹಾಗಾಗಿ ಇಡೀ ಭಾರತ ಅವರ ಕೈವಶವಾಯಿತು. ಅದೇ ರೀತಿ ಇಸ್ಲಾಂನ ಕೆಲವೇ ಮಂದಿ ಭಾರತಕ್ಕೆ ಬಂದವರು ಇಲ್ಲಿ ತಮ್ಮ ಧರ್ಮವನ್ನು ವ್ಯಾಪಕಗೊಳಿಸಿದರು. ಬ್ರಿಟಿಷರಿಗೆ ಮುನ್ನ ಹಾಗೂ ಅವರ ಜತೆಗೆ ಬಂದ ಕ್ರೈಸ್ತ ಮಿಷನರಿಗಳು ಇಲ್ಲಿ ಅವರ ಧರ್ಮವನ್ನು ಹಬ್ಬಿಸಲು ಸಾಕಷ್ಟು ಪ್ರಯತ್ನಿಸಿದರು. ಇದಕ್ಕೆ ಭಾಗಶಃ ಯಶಸ್ಸಷ್ಟೇ ದೊರೆಯಿತು. ಇಸ್ಲಾಂ ಭಾರತದಲ್ಲಿ ಇಷ್ಟು ಹರಡಲು ಅದನ್ನು ಇಲ್ಲಿಗೆ ತಂದವರ ಆಕ್ರಮಣಕಾರಿ ಗುಣವೂ ಕಾರಣವಾಗಿತ್ತು. ಸಾವಿರಾರು ಹಿಂದೂಗಳನ್ನು ಮತಾಂತರಗೊಳಿಸಿ ಮುಸ್ಲಿಮರನ್ನಾಗಿಸಲಾಯಿತು.
ಇದನ್ನೂ ಓದಿ : ಇಸ್ಲಾಂಗಿಂತ ಹಿಂದುತ್ವ ಹಳೆಯದು, ಭಾರತದ ಮುಸ್ಲಿಮರು ಹಿಂದುಗಳಾಗಿದ್ದರು; ಗುಲಾಂ ನಬಿ ಆಜಾದ್ ಮತ್ತೇನು ಹೇಳಿದರು?
ಇದೆಲ್ಲಾ ಯಾವತ್ತೋ ಆಗಿ ಹೋದ ಮಾತು, ನಿಜ. ಇದಕ್ಕೆ ಸಾಕಷ್ಟು ದಾಖಲೆಗಳು, ಸಾಕ್ಷ್ಯಗಳೂ ಸಿಗುತ್ತವೆ. ಇದು ನಿಜವೆಂದು ಮತ್ತೆ ಮತ್ತೆ ಸಾಬೀತುಪಡಿಸುವ ಅಗತ್ಯವಿಲ್ಲ. ಆದರೆ ಇದನ್ನೇ ಮತ್ತೆ ಮತ್ತೆ ಹಿಡಿದು ಜಗ್ಗಾಡುವುದರಲ್ಲಿಯೂ ಅರ್ಥವಿಲ್ಲ. ಹಿಂದು ಧರ್ಮದ ನಂಬಿಕೆ, ಆಚರಣೆಗಳು ಬೇರೆ; ಮುಸ್ಲಿಮರು ನಂಬಿಕೆ, ಆಚರಣೆಗಳು ಬೇರೆ. ಆದರೆ ಸಹಬಾಳ್ವೆ ಸಾಧ್ಯವಿದೆ ಎಂದು ಶತಮಾನಗಳಿಂದ ಸಾಬೀತಾಗಿದೆ. ಹಿಂದೂ- ಇಸ್ಲಾಂಗಳು ಸೇರಿ ಸೃಷ್ಟಿಯಾಗಿರುವ ಸೂಫಿ ಬದುಕಿನ ಕ್ರಮವೂ ಭಾರತದಲ್ಲಿ ಇದೆ. ಇದು ಮುಸ್ಲಿಮರ ಏಕದೇವತಾರಾಧನೆಯನ್ನೇ ಮುಖ್ಯವಾಗಿ ಹೊಂದಿದ್ದರೂ ಹಿಂದೂ ಮೂಲದ ಹಾಡು ನೃತ್ಯ ಕುಣಿತಗಳನ್ನು ಪ್ರೀತಿಯಿಂದ ಒಳಗೊಂಡಿದೆ. ದೇಶದ ಎಲ್ಲ ಗ್ರಾಮಗಳಲ್ಲೂ ಹಿಂದೂ- ಮುಸ್ಲಿಮರು ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದಾರೆ. ಎಲ್ಲೋ ಕೆಲವೊಮ್ಮೆ ಕೆಲವು ದುಷ್ಟರಿಂದ ಶಾಂತಿ ಕದಡುವ ಕೃತ್ಯಗಳು ನಡೆಯುತ್ತವೆ. ತಪ್ಪು ಕಲ್ಪನೆ, ಪ್ರಚೋದನೆಗಳಿಂದ ಉಂಟಾಗುವ ಕೋಮುಗಲಭೆಗಳು ಕ್ಷೋಭೆಯನ್ನು ಉಂಟುಮಾಡುತ್ತವೆ. ಇಂಥ ಪ್ರಚೋದನೆಗಳಿಗೆ ಮನಸ್ಸು ಕೊಡದೆ ಒಟ್ಟಾಗಿ ಬದುಕುವ ಎಷ್ಟೋ ಸಮುದಾಯಗಳು, ಬಡಾವಣೆಗಳು ಇಂದಿಗೂ ತಮ್ಮ ಶಾಂತಿ ಸಮಾಧಾನ ಸಹಬಾಳ್ವೆಗಳನ್ನು ಕಾಪಾಡಿಕೊಂಡಿವೆ. ಇದು ನಮಗೆ ಮಾದರಿಯಾಗಿರಲಿ. ಹಿಂದೂ ಮುಸ್ಲಿಮರು ಸಹೋದರರು ಎಂದ ಮೇಲೆ ಸೋದರರ ನಡುವೆ ಬರಬಹುದಾದ ಸಣ್ಣಪುಟ್ಟ ಮನಸ್ತಾಪಗಳೂ ಉಂಟಾದರೆ ಅದು ಸಹಜ. ಆದರೆ ಅದನ್ನು ಆಗಗೊಡದಂತೆ ಬದುಕುವುದೇ ನಮ್ಮ ಆದ್ಯತೆಯಾಗಬೇಕು. ಗುಲಾಂ ಹೇಳಿಕೆ ಈ ನಿಟ್ಟಿನಲ್ಲಿ ಇತರ ಮುಸ್ಲಿಂ ಮುಖಂಡರ ಮಾತುಗಳಲ್ಲೂ ಪ್ರತಿಧ್ವನಿಸಲಿ. ಈ ಮಾತಿನ ಅನುರಣನ ನಮ್ಮ ದೇಶದ ಎಲ್ಲರ ಮನಸ್ಸಿನ ಆಳಕ್ಕಿಳಿದರೆ ಆಗ ಶಾಂತಿ ಸಮಾಧಾನದ ಬದುಕು ಸಾಧ್ಯ.