ಕೇಂದ್ರ ಸರ್ಕಾರವು 2014ರಲ್ಲಿ ಜಾರಿಗೆ ತಂದ ಜನಧನ್ ಯೋಜನೆ ಅಡಿಯಲ್ಲಿ ಇದುವರೆಗೆ 50 ಕೋಟಿಗೂ ಅಧಿಕ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಪ್ರಧಾನಮಂತ್ರಿ ಜನಧನ್ ಯೋಜನೆ ಅಡಿಯಲ್ಲಿ ತೆಗೆದ ಬ್ಯಾಂಕ್ ಖಾತೆಗಳ ಸಂಖ್ಯೆ 50 ಕೋಟಿ ದಾಟಿದ್ದು, ಶೇ.56ರಷ್ಟು ಮಹಿಳೆಯರೇ ಬ್ಯಾಂಕ್ ಖಾತೆ ತೆರೆದಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಜನಧನ್ ಬ್ಯಾಂಕ್ ಖಾತೆ ಸಾಧನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಮಹತ್ವದ ಮೈಲುಗಲ್ಲು. ಅರ್ಧಕ್ಕಿಂತ ಹೆಚ್ಚಿನ ಜನಧನ್ ಬ್ಯಾಂಕ್ ಖಾತೆಗಳು ನಮ್ಮ ನಾರಿಶಕ್ತಿಗೆ ಸೇರಿರುವುದು ಸಂತಸದ ವಿಷಯವಾಗಿದೆ ಎಂದಿದ್ದಾರೆ.
ಅರೆ ನಗರ ಅಥವಾ ಪಟ್ಟಣಗಳಲ್ಲಿ ಶೇ.67ರಷ್ಟು ಜನಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದು ಕೂಡ ಹಣದ ಹರಿವು ಹೆಚ್ಚಾಗಲು ಕಾರಣವಾಗಿದೆಯಂತೆ. ಕೇಂದ್ರ ಸರ್ಕಾರವು 2014ರಲ್ಲಿ ಜನರಿಗೆ ಒಂದು ಬ್ಯಾಂಕ್ ಖಾತೆ ಇರಬೇಕು ಎಂಬ ದೃಷ್ಟಿಯಿಂದ ಜನಧನ್ ಯೋಜನೆ ಜಾರಿಗೆ ತಂದಿದೆ. ಅದರಂತೆ ಇದುವರೆಗೆ ತೆರೆಯಲಾದ 50 ಕೋಟಿಗೂ ಅಧಿಕ ಬ್ಯಾಂಕ್ ಖಾತೆಗಳಲ್ಲಿ 2.03 ಲಕ್ಷ ಕೋಟಿ ರೂಪಾಯಿ ಠೇವಣಿ ಮಾಡಲಾಗಿದೆ. ಹಾಗೆಯೇ, ಸರ್ಕಾರವು ಉಚಿತವಾಗಿ 34 ಕೋಟಿ ರುಪೇ ಕಾರ್ಡ್‌ಗಳನ್ನು ವಿತರಿಸಿದೆ. ಪಿಎಂಜೆಡಿವೈ ಖಾತೆಗಳಲ್ಲಿ ಸರಾಸರಿ 4,076 ರೂಪಾಯಿಯಿಂದ 5.5 ಕೋಟಿ ರೂಪಾಯಿವರೆಗೆ ಠೇವಣಿ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಜನಧನ್ ಖಾತೆಯ ಸರಳತೆಯೇ ಅದರ ಶಕ್ತಿಯಾಗಿದೆ. ಯಾವುದೇ ಠೇವಣಿ ಇಲ್ಲದೆ ಜನಧನ್ ಬ್ಯಾಂಕ್ ಖಾತೆ ತೆರೆಯಬಹುದಾಗಿದೆ. ಹಾಗೆಯೇ, ಬ್ಯಾಂಕ್ ಖಾತೆ ಇರುವವರಿಗೆ ಎರಡು ಲಕ್ಷ ರೂಪಾಯಿವರೆಗೆ ಅಪಘಾತ ವಿಮೆಯೂ ಸಿಗುತ್ತದೆ. ಜನಧನ್ ಬ್ಯಾಂಕ್ ಖಾತೆಗಳು ನೇರವಾಗಿ ಹಣ ವರ್ಗಾಯಿಸುವಲ್ಲಿ (DBT) ಮಹತ್ತರ ಪಾತ್ರ ನಿರ್ವಹಿಸಿವೆ. ಸರ್ಕಾರದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಮಹತ್ತರ ಉದ್ದೇಶದಿಂದ ಈ ಜನಧನ್ ಖಾತೆಗಳನ್ನು ಆರಂಭಿಸಲಾಯಿತು. ಇದು ಒಂದು ಕ್ರಾಂತಿಯನ್ನೇ ಮಾಡಿದೆ. ಉಳಿತಾಯ ಖಾತೆಗಳೇ ಇಲ್ಲದ, ಬ್ಯಾಂಕ್‌ಗಳಿಗೆ ಎಂದೆಂದೂ ಹೋಗದೆ ಇದ್ದ ಜನಸಾಮಾನ್ಯರು ಕೂಡ ಉಳಿತಾಯ ಪ್ರಜ್ಞೆ ಮೂಡಿಸಿಕೊಳ್ಳುವಂತೆ ಇದು ಮಾಡಿದೆ. ಈ ಹಿಂದೆ ಸರ್ಕಾರಗಳ ಹಲವು ಯೋಜನೆಗಳ ಫಲಾನುಭವಿಗಳು ಮಧ್ಯವರ್ತಿಗಳ ಕಾಟವನ್ನು ಸಹಿಸಿ, ಅವರಿಗೆ ಲಂಚ ನೀಡಿ ಹಣ ಪಡೆಯಬೇಕಾಗುತ್ತಿತ್ತು. ಅದನ್ನು ತಪ್ಪಿಸಿ ನೇರವಾಗಿ ಹಣ ಪಡೆಯುವಂತಾದುದು ಸರ್ಕಾರ- ಜನಸಾಮಾನ್ಯರ ನಡುವೆ ಬಾಂಧವ್ಯ ವೃದ್ಧಿಸಿದೆ.
ಆದರೆ ಇದೆಲ್ಲವೂ, ಬ್ಯಾಂಕ್‌ಗಳು ಜನಸಾಮಾನ್ಯರೊಂದಿಗೆ ಹೇಗೆ ವರ್ತಿಸುತ್ತವೆ ಎಂಬುದನ್ನೂ ಆಧರಿಸಿದೆ. ಜನಧನ್ ಖಾತೆಗಳನ್ನಿಟ್ಟುಕೊಂಡ ಬ್ಯಾಂಕ್‌ಗಳಲ್ಲೂ ಜನಸಾಮಾನ್ಯರಿಗೆ ಸೂಕ್ತ ಸ್ಪಂದನೆ ಸಿಗಬೇಕು. ಮಿನಿಮಮ್ ಬ್ಯಾಲೆನ್ಸ್ ಅಗತ್ಯವಿಲ್ಲದ, ದೊಡ್ಡ ಪ್ರಮಾಣದ ಹಣದ ವಹಿವಾಟು ನಡೆಯದ ಖಾತೆಗಳ, ಖಾತೆದಾರರ ಬಗ್ಗೆ ಬ್ಯಾಂಕ್‌ಗಳು ನಿರ್ಲಕ್ಷ್ಯ ತೋರುತ್ತವೆ. ಗ್ರಾಮೀಣ ಭಾಗದ ಜನ ಈಗ ಜನಧನ್ ಖಾತೆಯಲ್ಲಿ ಹಣ ಜಮೆ ಮಾಡಲು, ಹಿಂತೆಗೆದುಕೊಳ್ಳಲು ಪರದಾಡುತ್ತಿದ್ದಾರೆ. ಬ್ಯಾಂಕ್‌ಗಳಲ್ಲಿ ಸರಾಗವಾಗಿ ಕೆಲಸ ಆಗುತ್ತಿಲ್ಲ ಎಂಬ ದೂರಿದೆ. ಈ ಬಗ್ಗೆಯೂ ಕೇಂದ್ರ ಸರ್ಕಾರ ಗಮನ ಹರಿಸಬೇಕು. ಇವು ವಹಿವಾಟು ನಡೆಯದ ಖಾತೆಗಳಲ್ಲ. ಈ 50 ಕೋಟಿ ಖಾತೆಗಳ ಮುಖಾಂತರ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ಕೇಂದ್ರ ಸರ್ಕಾರ ನಡೆಸುತ್ತದೆ. ಬ್ಯಾಂಕ್‌ಗಳು ಜನಧನ್ ಖಾತೆದಾರರ ಜತೆ ಸೌಜನ್ಯದಿಂದ, ಸ್ನೇಹಶೀಲ ರೀತಿಯಲ್ಲಿ ವರ್ತಿಸಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮೂಲ ಒಂದೇ, ಹಾಗಿದ್ದರೆ ಹಿಂದು- ಮುಸ್ಲಿಂ ಜಗಳವೇಕೆ?
ಸಣ್ಣ ಉಳಿತಾಯ ಖಾತೆಗಳು ಯಾವುದೇ ದೇಶದ ಹಲವು ಆಧಾರಸ್ತಂಭಗಳಲ್ಲಿ ಒಂದು. ಬ್ಯಾಂಕ್‌ನ ಒಟ್ಟಾರೆ ವ್ಯವಹಾರಕ್ಕೆ ಹೋಲಿಸಿದರೆ ಇವುಗಳ ಗಾತ್ರ ಸಣ್ಣದಿರಬಹುದು. ಆದರೆ ದೇಶದ ಒಟ್ಟಾರೆ ದೃಷ್ಟಿಯಿಂದ, ವೈಯಕ್ತಿಕವಾಗಿ ಖಾತೆದಾರರ ದೃಷ್ಟಿಯಲ್ಲಿ ಇದು ದೊಡ್ಡದೇ. ಇದು ದೇಶದ ಆರ್ಥಿಕ ಆಗುಹೋಗನ್ನು ನಿರ್ಧರಿಸದಿರಬಹುದು. ಆದರೆ ಒಂದು ದೇಶದ ಕೆಳಮಧ್ಯಮ, ಮಧ್ಯಮ ಹಾಗೂ ಕೆಳವರ್ಗದ ಜನತೆಯ ಆಶೆ ಆಶೋತ್ತರಗಳನ್ನಂತೂ ಪ್ರತಿನಿಧಿಸುತ್ತವೆ. ಬಾಂಗ್ಲಾದಲ್ಲಿ ಕ್ರಾಂತಿಯುಂಟುಮಾಡಿದ ʼಸಣ್ಣ ಸಾಲʼದ ಪರಿಕಲ್ಪನೆಯಂತೆಯೇ, ನಮ್ಮ ಜನಧನ್ ʼಸಣ್ಣ ಉಳಿತಾಯʼ ಕೂಡ ಇನ್ನೊಂದು ಬಗೆಯ ಕ್ರಾಂತಿ. ದೂರಗಾಮಿಯಾಗಿ ಇದರ ಯಶಸ್ಸು ಭವಿಷ್ಯದಲ್ಲಿ ದಾಖಲಾಗಲಿದೆ.