Site icon Vistara News

ವಿಸ್ತಾರ ಸಂಪಾದಕೀಯ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿನ ಸರಣಿ ಸಾವು ಆಘಾತಕರ

Hospital

ಕಳೆದ ಒಂದು ವಾರದಲ್ಲಿ ಮಹಾರಾಷ್ಟ್ರದ (Maharashtra) ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ರೋಗಿಗಳ ಸಾವು ವರದಿಯಾಗುತ್ತಿರುವ ಬೆನ್ನಲ್ಲೇ ಸಂಭಾಜಿನಗರದ ಘಾಟಿ ಆಸ್ಪತ್ರೆಯಲ್ಲಿ (Ghati Hospital) 24 ಗಂಟೆಯಲ್ಲಿ 10ಕ್ಕಿಂತ ಹೆಚ್ಚು ರೋಗಿಗಳು ಮೃತಪಟ್ಟಿದ್ದಾರೆ. ಈ ಹಿಂದೆ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ (Nanded Government hospital) 48 ಗಂಟೆಯಲ್ಲಿ ಶಿಶುಗಳು ಸೇರಿದಂತೆ 34 ರೋಗಿಗಳು ಮೃತಪಟ್ಟಿದ್ದರು. ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಜರಗುತ್ತಿರುವ ಘಟನೆಗಳು ಭಯಾನಕವಾಗಿವೆ. ಅದೇ ರೀತಿ ಘಾಟಿ ಆಸ್ಪತ್ರೆಯಲ್ಲಿ ರೋಗಿಗಳು ಸಾಯುತ್ತಿದ್ದಾರೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ. ಇಬ್ಬರು ಮಕ್ಕಳು ಸೇರಿದಂತೆ 8 ರೋಗಿಗಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ನಾಂದೇಡ್ ಆಸ್ಪತ್ರೆಯಲ್ಲಿ ಮತ್ತೆ 7 ರೋಗಿಗಳು ಮೃತಪಟ್ಟಿದ್ದಾರೆಂಬ ವರ್ತಮಾನವಿದೆ. ಇದೆಲ್ಲವೂ ಭಯಾನಕವಾಗಿದೆ ಎಂದು ಶಿವಸೇನೆಯ ನಾಯಕ ಆದಿತ್ಯ ಠಾಕ್ರೆ ಅವರು ಟ್ವೀಟ್ ಮಾಡಿದ್ದಾರೆ. ಈ ಅವಘಡಕ್ಕೆ ಸರ್ಕಾರಿ ಆಸ್ಪತ್ರೆ ಎದುರಿಸುತ್ತಿರುವ ಸಿಬ್ಬಂದಿ ಹಾಗೂ ಔಷಧಗಳ ಕೊರತೆಯ ಕಾರಣ ಎಂದು ನಾಂದೇಡ್ ಶಂಕರ್ ರಾವ್ ಚವಾಣ್ ಸರ್ಕಾರಿ ಆಸ್ಪತ್ರೆಯ ಡೀನ್ ಹೇಳಿದ್ದಾರೆ. ಈ ಪೈಕಿ ಹೆಚ್ಚಿನವರು ಹಾವು ಕಡಿತದಿಂದ ಬಳಲುತ್ತಿದ್ದರು.

ಈ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರವು ತನಿಖೆಗೆ ಸಮಿತಿಯನ್ನು ರಚಿಸುವುದಾಗಿ ಘೋಷಣೆ ಮಾಡಿದೆ. ಘೋಷಣೆ ಮಾಡಿದರೆ ಸಾಲದು, ಈ ಕ್ಷಣವೇ ತನಿಖಾ ಸಮಿತಿ ರಚಿಸಿ, ಈಗಿಂದೀಗಲೇ ಅದು ಕಾರ್ಯಪ್ರವೃತ್ತವಾಗುವಂತೆ ಮಾಡುವುದು ಅಗತ್ಯ. ಯಾಕೆಂದರೆ ಆರೋಗ್ಯ ಸೇವೆ ಬಿಗಡಾಯಿಸಿದರೆ ಅದು ಲಕ್ಷಾಮತರ ಜನರ ಜೀವಗಳ ಮೇಲೆ ಮಾರಕ ಪರಿಣಾಮ ಬೀರಬಲ್ಲುದು. ಇದನ್ನು ಕೋವಿಡ್‌ ಸಂದರ್ಭದಲ್ಲಿ ನೋಡಿದ್ದೇವೆ. ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್‌ ಸಾಕಷ್ಟು ಲಭ್ಯವಿಲ್ಲದೆ ಹೋದುದರಿಂದ ರೋಗಿಗಳು ಹುಳಗಳಂತೆ ಒದ್ದಾಡಿ ಸತ್ತುಹೋಗಿದ್ದರು. ಇದು ಭಯಾನಕ ವೈರಸ್‌ನ ಸಮಸ್ಯೆ ಮಾತ್ರವಾಗಿರಲಿಲ್ಲ; ಆರೋಗ್ಯ ಸೇವೆಯ ವೈಫಲ್ಯದ ಸಮಸ್ಯೆಯೂ ಆಗಿತ್ತು. ಇಂಥ ಸಮಸ್ಯೆಯನ್ನು ಮುಂಗಾಣದ ಸರ್ಕಾರದ ಆಡಳಿತಾತ್ಮಕ ವೈಫಲ್ಯವೂ ಆಗಿತ್ತು. ಪ್ರಸ್ತುತ ಇದು ಇನ್ನೊಂದು ಆಡಳಿತಾತ್ಮಕ ವೈಫಲ್ಯ ಆಗುವುದು ಬೇಕಿಲ್ಲ. ಅದ್ದರಿಂದ ತಕ್ಷಣವೇ ವಿವೇಚನಾತ್ಮಕ ನಿರ್ಧಾರ ಅಗತ್ಯವಿದೆ.

ಹಾವಿನ ಕಡಿತಕ್ಕೊಳಗಾದವರು ಹೆಚ್ಚಿನ ಪ್ರಮಾಣದಲ್ಲಿ ಸಾಯುತ್ತಿದ್ದಾರೆ ಎಂದರೆ ಅದಕ್ಕೆ ಸೂಕ್ತ ಮದ್ದು, ಆಂಟಿವೀನಮ್‌ ಕೊರತೆಯೂ ಕಾರಣವಿರಬಹುದು. ಹನ್ನೆರಡು ವಯಸ್ಕರು ವಿವಿಧ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ, ವಿವಿಧ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರಿಂದ ಆಸ್ಪತ್ರೆಯು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಆಸ್ಪತ್ರೆಯ ಡೀನ್ ಹೇಳಿದ್ದರು. ಸಿಬ್ಬಂದಿಯನ್ನು ವರ್ಗ ಮಾಡಿದರೆ ಅವರ ಜಾಗದಲ್ಲಿ ಇತರರು ಚಾರ್ಜ್‌ ತೆಗೆದುಕೊಳ್ಳುವಂತೆ ಮಾಡುವುದು ಯಾಕಾಗುತ್ತಿಲ್ಲ? ಈ ಆಸ್ಪತ್ರೆಯು ತೃತೀಯ ಹಂತದ ಆರೈಕೆ ಕೇಂದ್ರವಾಗಿದ್ದು, 70ರಿಂದ 80 ಕಿ.ಮೀ ವ್ಯಾಪ್ತಿಯಲ್ಲಿನ ಏಕೈಕ ಸರ್ಕಾರಿ ಆಸ್ಪತ್ರೆಯಾಗಿದೆ. ಹಾಗಾಗಿ, ದೂರದ ಸ್ಥಳಗಳಿಂದ ರೋಗಿಗಳು ಈ ಆಸ್ಪತ್ರೆಗೆ ಆಗಮಿಸುತ್ತಾರೆ. ರೋಗಿಗಳ ಸಂಖ್ಯೆ ಹೆಚ್ಚಳವಾದಾಗ ಅವರನ್ನು ಈ ಆಸ್ಪತ್ರೆಯಲ್ಲಿ ನಿರ್ವಹಣೆ ಮಾಡುವುದು ಕಷ್ಟ. ಆಗ ಸಮಸ್ಯೆಗಳು ಶುರುವಾಗುತ್ತವೆ. ನಾಂದೇಡ್‌ನಲ್ಲಿ ಆಸ್ಪತ್ರೆಯ ಅನೇಕ ಯಂತ್ರಗಳು ಕಾರ್ಯನಿರ್ವಹಿಸುತ್ತಿಲ್ಲ. ಆಸ್ಪತ್ರೆಯ ಸಾಮರ್ಥ್ಯ 500. ಆದರೆ 1,200 ರೋಗಿಗಳು ದಾಖಲಾಗಿದ್ದರು. ಸಿಬ್ಬಂದಿಯ ಕೊರತೆಯಿತ್ತು. ಗ್ರಾಮೀಣ ಪ್ರದೇಶ ಅಥವಾ ಅರೆ ಪಟ್ಟಣಗಳ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಆಡಳಿತಗಾರರ ಗಮನ ಅಷ್ಟಕ್ಕಷ್ಟೇ ಇರುತ್ತದೆ. ಇಂಥಲ್ಲಿ ವೈದ್ಯರ ಕೊರತೆ, ಸಿಬ್ಬಂದಿ ಕೊರತೆ, ಶಸ್ತ್ರಚಿಕಿತ್ಸೆಯ ವೈದ್ಯೋಪಕರಣಗಳ ಕೊರತೆ, ಔಷಧಗಳ ಕೊರತೆ ಇವೆಲ್ಲವೂ ಇರುತ್ತದೆ. ಇಂಥದನ್ನು ಗಮನಿಸಿ ಸರಿಪಡಿಸುವುದು ಆರೋಗ್ಯ ಸೇವೆಯ ನೇತೃತ್ವ ವಹಿಸಿದವರಿಗೆ ಸಾಧ್ಯವಾಗಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಗಲಭೆಕೋರರನ್ನು ಶಿಕ್ಷಿಸಿ, ವೋಟ್‌ ಬ್ಯಾಂಕ್‌ ಪಾಲಿಟಿಕ್ಸ್‌ ಬೇಡ

ಮಹಾರಾಷ್ಟರದ ಈ ಸ್ಥಿತಿಯಿಂದ ನಮ್ಮ ರಾಜ್ಯವೂ ಪಾಠ ಕಲಿಯಬೇಕು. ನಮ್ಮಲ್ಲಿಯೂ ವೈದ್ಯರ ಸಂಖ್ಯೆಯೇನೂ ಸಾಕಷ್ಟಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಯಾವಾಗಲೂ ವೈದ್ಯರು, ಸಿಬ್ಬಂದಿ ಕಡಿಮೆಯೇ. ಹಾವಿನ ಕಡಿತಕ್ಕೆ ಪ್ರತಿವಿಷ ಕೆಲವೊಮ್ಮೆ ಸ್ಟಾಕ್‌ ಇರುವುದೂ ಇಲ್ಲ. ಅಗತ್ಯ ಔಷಧ, ಉಪಕರಣಗಳ ಕೊರತೆಯೇ ಇದೆ. ಈಗೇನೂ ಕೋವಿಡ್‌ನಂಥ ತುರ್ತುಪರಿಸ್ಥಿತಿ ಇಲ್ಲವಾದರೂ, ಸೇವೆಯನ್ನು ಸರಿಪಡಿಸಲು ಅಂಥದೊಂದು ತುರ್ತುಸ್ಥಿತಿ ಬರಲಿ ಎಂದೇ ಕಾಯಬೇಕಿಲ್ಲ ಅಲ್ಲವೇ?

Exit mobile version