Site icon Vistara News

ವಿಸ್ತಾರ ಸಂಪಾದಕೀಯ: ಈ ವರ್ಷ ಭಾರತ ಜಗತ್ತಿನ ಪ್ರಬಲ ಆರ್ಥಿಕ ಶಕ್ತಿ, ಐಎಂಎಫ್ ಭವಿಷ್ಯ ಆಶಾದಾಯಕ

Economy

#image_title

ಈ ವರ್ಷ ಜಾಗತಿಕ ಆರ್ಥಿಕ ಪ್ರಗತಿ ಕುಸಿಯಲಿದೆ. ಆದರೆ ಭಾರತ ವಿಶ್ವದ ಪ್ರಬಲ ಆರ್ಥಿಕ ಶಕ್ತಿಯಾಗಿ (Indian Economy) ಬೆಳೆಯಲಿದೆ ಎಂದು ವಿಶ್ವ ಹಣಕಾಸು ಸಂಸ್ಥೆ (ಐಎಂಎಫ್‌) ಹೇಳಿದೆ. 2023ರಲ್ಲಿ ವಿಶ್ವದ ಶೇ. 50ರಷ್ಟು ಆರ್ಥಿಕತೆಯು ಭಾರತ ಮತ್ತು ಚೀನಾದ ಪಾಲಾಗಲಿದೆ ಎಂದೂ ಐಎಂಎಫ್ ಹೇಳಿದೆ. ಜಾಗತಿಕ ಆರ್ಥಿಕತೆಯಲ್ಲಿ ಅಮೆರಿಕ ಮತ್ತು ಯುರೋಪಿನ ದೇಶಗಳ ಪಾಲು ಕೇವಲ ಶೇ.10 ಇರಲಿದೆ ಎಂದೂ ಅದು ಉಲ್ಲೇಖಿಸಿರುವುದು ಗಮನಾರ್ಹ. 2022ರಲ್ಲಿ ಶೇಕಡಾ 6.8 ಇದ್ದ ಭಾರತದ ಆರ್ಥಿಕ ಬೆಳವಣಿಗೆ 2023ರಲ್ಲಿ 6.1ಕ್ಕೆ ಕುಸಿಯಲಿದ್ದರೂ, 2024ರ ಆರ್ಥಿಕ ವರ್ಷದಲ್ಲಿ ಮತ್ತೆ ಶೇಕಡಾ 6.8ಕ್ಕೆ ಬೆಳೆಯುವ ನಿರೀಕ್ಷೆಯಿದೆ ಎಂದಿದೆ. ಇದೊಂದು ಕುತೂಹಲಕರ ಮತ್ತು ಭರವಸೆದಾಯಕ ವರದಿ.

ಇದಕ್ಕೆ ಪೂರಕವಾಗಿ, ಈ ವರ್ಷದ ಬಜೆಟ್‌ಗೆ ಮುಂಚಿತವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಆರ್ಥಿಕ ಸಮೀಕ್ಷೆಯಲ್ಲೂ ಹಲವಾರು ಆಶಾದಾಯಕ ಅಂಶಗಳಿವೆ. ದೇಶದ ಈ ವರ್ಷದ ನೈಜ ಜಿಡಿಪಿ ಬೆಳವಣಿಗೆ ದರ ಶೇ.7 ಇರಲಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ನಿರೀಕ್ಷಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎಂಎಸ್‌ಎಂಇ ವಲಯದ ಬೆಳವಣಿಗೆ 30.5%ದಷ್ಟು ಏರಿದೆ. ಇದೊಂದು ಬಹಳ ಭರವಸೆಯ ವಲಯ. ಹಾಗೆಯೇ ಸರ್ಕಾರಿ ವೆಚ್ಚಗಳು 63.4%ದಷ್ಟು ಇರುವುದು ಆರ್ಥಿಕತೆ ಬೆಳವಣಿಗೆ ಪ್ರಮುಖ ಚಾಲಕ ಶಕ್ತಿಗಳಲ್ಲಿ ಒಂದು. ವಲಸೆ ಕಾರ್ಮಿಕರ ಮರಳುವಿಕೆಯು ನಿರ್ಮಾಣ ವಲಯವನ್ನು ಹುರಿದುಂಬಿಸಿದೆ. ರಫ್ತುಗಳು ದಾಖಲೆ ಪ್ರಮಾಣದಲ್ಲಿ ಹೆಚ್ಚಿದೆ. ಖಾಸಗಿ ವಲಯದ ಹೂಡಿಕೆ ಹಾಗೂ ತೊಡಗಿಸುವಿಕೆಗಳು ಭರವಸೆದಾಯಕವಾಗಿವೆ. ವಿತ್ತೀಯ ಕೊರತೆ ಹಾಗೂ ಹಣದುಬ್ಬರಗಳು ನಿಯಂತ್ರಣದ ಮಟ್ಟದಲ್ಲಿವೆ. ಈ ಎಲ್ಲದರ ಹಿನ್ನೆಲೆಯಲ್ಲಿ, ಈ ಬಾರಿಯ ಕೇಂದ್ರ ಬಜೆಟ್ ಜನಪರ ಮತ್ತು ಜನಸ್ನೇಹಿ ಆಗುವ ನಿರೀಕ್ಷೆ ಇದೆ.

ಐಎಂಎಫ್‌ ವರದಿ ಹಾಗೂ ಆರ್ಥಿಕ ಸಮೀಕ್ಷೆಗಳು ಮುಂದಿಟ್ಟಿರುವ ದೇಶದ ಆರ್ಥಿಕ ಚಿತ್ರಣ ಭರವಸೆದಾಯಕವಾಗಿರಲು ಹಲವು ಕಾರಣಗಳಿರಬಹುದು. ಕೊರೊನಾದಿಂದ ಮುಕ್ತವಾದ ಬಳಿಕ ದೇಶದ ಮಾರುಕಟ್ಟೆಯಲ್ಲಿ ಚಲನಶೀಲತೆ ಮರಳಿದೆ. ಪಟ್ಟಣ ಹಾಗೂ ಗ್ರಾಮೀಣ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಗಳು ಮರಳಿರುವುದರಿಂದ, ಗ್ರಾಹಕ ಮಾರುಕಟ್ಟೆಯಲ್ಲಿ ಗ್ರಾಹಕನಿಗೆ ವೆಚ್ಚ ಮಾಡುವ ಧೈರ್ಯವೂ ಹೆಚ್ಚಿದೆ. ಕಳೆದ ಡಿಸೆಂಬರ್‌ನಲ್ಲಿ ದೇಶದ ಜಿಎಸ್‌ಟಿ ಆದಾಯ 1.49 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.15ರಷ್ಟು ಅಧಿಕವಾಗಿದೆ. ರಫ್ತು ಕಳೆದ ವರ್ಷಕ್ಕಿಂತ ಶೇ.16ರಷ್ಟು ಹೆಚ್ಚಿದ್ದು, ಜಗತ್ತಿನ 7ನೇ ಅತಿ ದೊಡ್ಡ ರಫ್ತುದಾರ ಎನಿಸಿದೆ. ವಿದೇಶಿ ವಿನಿಮಯ ಮೀಸಲು ಮೊತ್ತ (563 ಶತಕೋಟಿ ಡಾಲರ್)‌ ಸುರಕ್ಷಿತವಾಗಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಭಾರತ್ ಜೋಡೋ ಮೂಲಕ ಕಾಂಗ್ರೆಸ್ ಬಲಪಡಿಸುವ ರಾಹುಲ್ ಗಾಂಧಿ ಪ್ರಯತ್ನ ಪ್ರಶಂಸಾರ್ಹ

ಇದರ ಜತೆಗೆ, ವಿಶ್ವಸಂಸ್ಥೆಯ ಇತ್ತೀಚಿನ ಜಾಗತಿಕ ಜನಸಂಖ್ಯಾ ವರದಿ (WPR) ವರದಿ ಹೇಳಿರುವ ಪ್ರಕಾರ, ಇಷ್ಟರಲ್ಲೇ ಭಾರತದ ಜನಸಂಖ್ಯೆ ಚೀನಾವನ್ನೂ ಮೀರಿಸಿ ಮುಂದಡಿಯಿಡಲಿದೆ. ಚೀನಾದ ಜನಸಂಖ್ಯೆಯ ಹೆಚ್ಚಿನ ಪ್ರಮಾಣ 40 ವರ್ಷ ಮೀರುತ್ತಿದ್ದರೆ, ಭಾರತದ ಶೇ.50 ಮಂದಿ 30 ವರ್ಷಕ್ಕಿಂತ ಕೆಳಗಿನವರು ಹಾಗೂ ಅದೇ ಕಾರಣಕ್ಕಾಗಿ ಇವರು ಮುಂದಿನ ಮೂರು ದಶಕಗಳ ಕಾಲ ದುಡಿಯುವವರಾಗಿರುತ್ತಾರೆ. ಭಾರತದ ಫಲವತ್ತತೆ ದರವೂ ಚೀನಾಕ್ಕಿಂತ ಮುಂದಿದೆ ಹಾಗೂ ಮುಂದಿನ ದಶಕದಲ್ಲಿ ಅದು ಚೀನಾವನ್ನೂ ಅಭಿವೃದ್ಧಿಯಲ್ಲಿ ಹಿಂದಿಕ್ಕಲಿದೆ. ಇದೇ ಕಾರಣದಿಂದ ಮುಂದಿನ ದಶಕಗಳು ಭಾರತದ್ದಾಗಿದ್ದು, ಇಲ್ಲಿನ ದುಡಿಯುವ ಕೈಗಳು ಜಗತ್ತಿನ ಪಾಲಿಗೆ ಭರವಸೆಯ ಕಿರಣಗಳಾಗಿ ಹೊಮ್ಮಲಿವೆ. ಈ ಹಿಂದೆ ಎರಡು ಬಾರಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾದಾಗಲೂ ಭಾರತಕ್ಕೆ ಅದರ ಬಿಸಿ ತಟ್ಟಿರಲಿಲ್ಲ. ಈ ಬಾರಿ ವಿಶ್ವದ ಹಲವು ದೇಶಗಳು ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದ್ದರೂ ಭಾರತ ಯಥಾಸ್ಥಿತಿಯಲ್ಲಿದೆ ಎಂಬುದು ಮಹತ್ವದ ಅಂಶ. ಮುಂದಿನ ವರ್ಷ ಆರ್ಥಿಕ ಕುಸಿತ ಉಂಟಾಗಲಿದೆ ಎಂಬ ಆತಂಕದಿಂದ ಹಲವಾರು ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಈಗಾಗಲೇ ಉದ್ಯೋಗ ಕಡಿತ ಮಾಡಿವೆ. ಆದರೆ ಭಾರತದಲ್ಲಿ ಅಂಥ ಕಳವಳಕ್ಕೆ ಕಾರಣವಿಲ್ಲ ಎಂದು ತಿಳಿಸುವ ಮೂಲಕ ಐಎಂಎಫ್‌ ಹೊಸ ಭರವಸೆಯನ್ನೇ ಸೃಷ್ಟಿಸಿದೆ.

Exit mobile version