ಶ್ರೀನಗರ: ಜಮ್ಮು-ಕಾಶ್ಮೀರದ (Jammu Kashmir) ದೋಡಾ ಜಿಲ್ಲೆಯಲ್ಲಿ ಅಡಗಿ ಕುಳಿತಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಲು ಭದ್ರತಾ ಸಿಬ್ಬಂದಿ ಕೈಗೊಂಡ ಕಾರ್ಯಾಚರಣೆಯು ಯಶಸ್ವಿಯಾಗಿದೆ. ಮೂವರೂ ಉಗ್ರರನ್ನು ಹತ್ಯೆಗೈಯುವಲ್ಲಿ (Terrorists Killed) ಯೋಧರು ಯಶಸ್ವಿಯಾಗಿದ್ದಾರೆ. ಅಮೆರಿಕದಲ್ಲಿ ತಯಾರಿಸಿದ ಎಂ4 ರೈಫಲ್ ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ಭದ್ರತಾ ಸಿಬ್ಬಂದಿಯು ವಶಪಡಿಸಿಕೊಂಡಿದ್ದಾರೆ. ಮೂವರು ಉಗ್ರರ ಶವಗಳು ಕೂಡ ಸಿಕ್ಕಿವೆ. ಆದರೆ, ಅವರು ಯಾವ ಸಂಘಟನೆಗೆ ಸೇರಿದವರು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ಮೂವರೂ ಪಾಕಿಸ್ತಾನದವರು ಎಂಬ ಮಾಹಿತಿ ಲಭ್ಯವಾಗಿದೆ.
ದೋಡಾ ಜಿಲ್ಲೆ ಗಂಡೋಹ್ ಪ್ರದೇಶದ ಬಜಾದ್ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಮೂವರು ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಕುರಿತು ಗುಪ್ತಚರ ಮಾಹಿತಿ ಆಧರಿಸಿ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡರು. ಬುಧವಾರ (ಜೂನ್ 26) ಬೆಳಗ್ಗೆ 9.50ರ ಸುಮಾರಿಗೆ ಕಾರ್ಯಾಚರಣೆ ಕೈಗೊಂಡಿದ್ದು, ಇದೇ ವೇಳೆ ಉಗ್ರರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಆಗ ಕಾರ್ಯಾಚರಣೆಯು ಎನ್‌ಕೌಂಟರ್ ಆಗಿ ಬದಲಾಗಿದ್ದು, ಮೊದಲಿಗೆ ಭದ್ರತಾ ಸಿಬ್ಬಂದಿಯು ಒಬ್ಬ ಉಗ್ರನನ್ನು ಹತ್ಯೆಗೈದಿದ್ದಾರೆ. ನಂತರೂ ಕಾರ್ಯಾಚರಣೆ ನಡೆಸಿ, ಇನ್ನಿಬ್ಬರನ್ನು ಕೂಡ ಹೊಡೆದುರುಳಿಸಿದ್ದಾರೆ.
#BREAKING: Three Pakistan sponsored terrorists killed in Doda encounter with Indian Army and J&K Police in Jammu & Kashmir. Intelligence agencies suspect 4 more terrorists on the run in the area. M4 Carbine Assault Rifle recovered from the neutralised terrorists. pic.twitter.com/EFI3RHI30l
— Aditya Raj Kaul (@AdityaRajKaul) June 26, 2024
ಜೂನ್ 11, 12ರಂದು ಚಟ್ಟರ್ಗಲ್ಲಾ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದರು. ಇದಕ್ಕೆ ಸೇನೆ ಪ್ರತಿಕಕಾರ ತೀರಿಸಿಕೊಳ್ಳುತ್ತಿದ್ದು, ಈಗಾಗಲೆ 7-8 ಭಯೋತ್ಪಾದಕರು ಸತ್ತಿದ್ದಾರೆ. ಭಯೋತ್ಪಾದಕರಿಗೆ ಆಹಾರ ಮತ್ತು ಆಶ್ರಯ ನೀಡಿದ ಆರೋಪದ ಮೇಲೆ ಮೂವರು ಸ್ಥಳೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಾಲ್ವರು ಪಾಕಿಸ್ತಾನಿ ಭಯೋತ್ಪಾದಕರ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಿಸಲಾಗಿದೆ.
ಇದರ ಜತೆಗೆ ಮಂಗಳವಾರ ಸಂಜೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ರಜೌರಿ ಜಿಲ್ಲೆಯ ಪಿಂಡ್ ಗ್ರಾಮದಿಂದ ಚೀನಾದ ಹ್ಯಾಂಡ್ ಗ್ರೆನೇಡ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಭದ್ರತಾ ಪಡೆಯ ಸಿಬ್ಬಂದಿ ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಕನಿಷ್ಠ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದರು. ಈ ಮೂಲಕ ಗಡಿ ನಿಯಂತ್ರಣ ರೇಖೆ (LoC) ಉದ್ದಕ್ಕೂ ಒಳನುಸುಳುವ ಭಯೋತ್ಪಾದಕರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಹತ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಐವರು ಲಷ್ಕರ್ ಉಗ್ರರ ಹತ್ಯೆ