ದೇಶದ ಪ್ರತಿಯೊಬ್ಬ ನಾಗರಿಕರ ಡಿಜಿಟಲ್ ಡೇಟಾ ರಕ್ಷಣೆ ದಿಸೆಯಲ್ಲಿ ಕೇಂದ್ರ ಸರ್ಕಾರವು ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಸೋಮವಾರ ಲೋಕಸಭೆಯಲ್ಲಿ ವಿಧೇಯಕಕ್ಕೆ ಅನುಮೋದನೆ ದೊರೆತಿದೆ(Vistara Editorial). ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ವಿಧೇಯಕವನ್ನು ಆಗಸ್ಟ್ 3ರಂದು ಮಂಡಿಸಿದ್ದು, ಸೋಮವಾರ ಅಂಗೀಕಾರ ದೊರೆತಿದೆ. ದೇಶದ ನಾಗರಿಕರ ಡಿಜಿಟಲ್ ಮಾಹಿತಿ ಸಂಗ್ರಹ, ಬಳಕೆದಾರರ ಹಕ್ಕುಗಳು, ಕರ್ತವ್ಯಗಳು, ಡೇಟಾ ಸಂಗ್ರಹಣೆಯ ವಿಶ್ವಾಸಾರ್ಹತೆ, ಅಪರಾಧಗಳು ನಡೆದಾಗ ಬೇರೆ ದೇಶಗಳಿಗೆ ಡಿಜಿಟಲ್ ಡೇಟಾ ಟ್ರಾನ್ಸ್‌ಫರ್, ಬೇರೆ ದೇಶಗಳಿಂದ ಡೇಟಾ ಪಡೆಯುವುದು, ಕಂಪನಿಗಳು ಡೇಟಾ ಸಂರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ನಿಯಮ ಉಲ್ಲಂಘಿಸಿದರೆ ವಿಧಿಸುವ ದಂಡ ಸೇರಿ ನೂತನ ವಿಧೇಯಕವು ಹತ್ತಾರು ಅಂಶಗಳನ್ನು ಹೊಂದಿದೆ. ಹಾಗಾಗಿ, ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಬಿಲ್ ಮಹತ್ವ ಪಡೆದಿದೆ.
ಕೇಂದ್ರ ಸರ್ಕಾರ ಇದಕ್ಕೂ ಮೊದಲು ವೈಯುಕ್ತಿಕ ಮಾಹಿತಿ ರಕ್ಷಣಾ ವಿಧೇಯಕ- 2019 ರಚಿಸಿ, ಸಂಸತ್ತಿನಲ್ಲಿ ಮಂಡಿಸಿತ್ತು. 2018ರಲ್ಲಿ ನ್ಯಾಯಮೂರ್ತಿ ಬಿ.ಎನ್ ಶ್ರೀಕೃಷ್ಣ ನೇತೃತ್ವದ ಪರಿಣಿತ ಸಮಿತಿ ಈ ವಿಧೇಯಕವನ್ನು ರೂಪಿಸಿತ್ತು. ಆದರೆ, ವಿಧೇಯಕದಲ್ಲಿ 81 ತಿದ್ದುಪಡಿಗಳಿಗೆ ಜಂಟಿ ಸಂಸದೀಯ ಸಮಿತಿ ಸೂಚಿಸಿದ ಹಿನ್ನೆಲೆಯಲ್ಲಿ ಸಮಿತಿ ಸೂಚಿಸಿದ ತಿದ್ದುಪಡಿಗಳೊಂದಿಗೆ ಡಿಸೆಂಬರ್ 2021ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಕೊನೆಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಸರ್ಕಾರವು ವಿಧೇಯಕವನ್ನು ಹಿಂಪಡೆದಿತ್ತು. ಕಳೆದ ಬಾರಿ ಕಂಡುಬಂದ ಲೋಪದೋಷಗಳನ್ನು ಈ ಬಾರಿ ಸರಿಪಡಿಸಿಕೊಳ್ಳಲಾಗಿದೆ ಎಂದು ತಂತ್ರಜ್ಞಾನ ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಕಾಯಿದೆ ಬಂದ ಬಳಿಕ, ಭಾರತದಲ್ಲಿ ಪ್ರಜೆಗಳ ಡೇಟಾವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಖಾಸಗಿ ಕಂಪನಿಗಳಲ್ಲಿ ವರ್ತನಾತ್ಮಕ ಬದಲಾವಣೆಗಳು ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಭಾರತದಂಥ 136 ಕೋಟಿ ಪ್ರಜೆಗಳು ಇರುವ ದೇಶಕ್ಕೆ ಇಂಥದೊಂದು ಸಮಗ್ರ ಡೇಟಾ ಸಂರಕ್ಷಣೆ ಕಾಯಿದೆ ಅತ್ಯಗತ್ಯವಾಗಿದೆ. ದೇಶ ಸ್ಮಾರ್ಟ್‌ಫೋನ್ ಬಳಕೆಯ ಮೂಲಕ ಡಿಜಿಟಲ್ ಯುಗಕ್ಕೆ ಎಂದೋ ತೆರೆದುಕೊಂಡಿದೆ. ದೇಶದಲ್ಲಿ 120 ಕೋಟಿ ಮಂದಿ ಮೊಬೈಲ್ ಹಾಗೂ 60 ಕೋಟಿ ಮಂದಿ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ. ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳು ಸಾಮಾನ್ಯ ಎನಿಸಿವೆ. ದೇಶದ ನಾಗರಿಕರೀಗ ಡಿಜಿಟಲ್ ನಾಗರಿಕರಾಗಿದ್ದಾರೆ. ಬಹುತೇಕ ಪಾವತಿಗಳು ಡಿಜಿಟಲ್ ಮೂಲಕ ಆಗುತ್ತಿವೆ. ಗ್ರಾಮೀಣ ಜನತೆ ಕೂಡ ಆನ್‌ಲೈನ್ ಪಾವತಿ ಕಲಿತಿದ್ದಾರೆ. 2022ರಲ್ಲಿ 90 ಕೋಟಿ ಡಿಜಿಟಲ್ ಪಾವತಿಗಳು ಆಗಿವೆ. ಆದರೆ ಬಳಕೆ ಹೆಚ್ಚಾದಂತೆ, ದೇಶದ ಪ್ರಜೆಗಳ ವೈಯಕ್ತಿಕ ಡೇಟಾದ ದುರ್ಬಳಕೆ ಕೂಡ ಹೆಚ್ಚಿದೆ. ಕೆಲವು ಖಾಸಗಿ ಕಂಪನಿಗಳು ತಾವಾಗಿಯೇ ಡೇಟಾವನ್ನು ಗ್ರಾಹಕರನ್ನು ಸೆಳೆಯಲು ಬಳಸುತ್ತಿವೆ; ಇನ್ನು ಕೆಲವು ಈ ಮಾಹಿತಿಗಳನ್ನು ಮಾರಿಕೊಳ್ಳುತ್ತಿವೆ. ಇದ್ಯಾವುದನ್ನೂ ಕಾನೂನಾತ್ಮಕವಾಗಿ ಪ್ರಶ್ನಿಸಲು ಅಗತ್ಯವಾದ ಕಾಯಿದೆ ಇದುವರೆಗೆ ಇರಲಿಲ್ಲ.
ಇದನ್ನೂ ಓದಿ : ವಿಸ್ತಾರ Explainer: ವೈಯಕ್ತಿಕ ಡೇಟಾ ರಕ್ಷಣೆ ವಿಧೇಯಕಕ್ಕೆ ಲೋಕಸಭೆ ಅಸ್ತು; ಏನಿದು ಮಸೂದೆ? ಏನು ಉಪಯೋಗ?
ಪ್ರಜೆಗಳ ಸಂರಕ್ಷಣೆಗಾಗಿ ಹಲವು ಅಂಶಗಳು ಇದರಲ್ಲಿವೆ. ಜನರ ವೈಯಕ್ತಿಕ ಮಾಹಿತಿ ರಕ್ಷಣೆಯಲ್ಲಿ ವಿಫಲವಾದರೆ ಕಂಪನಿಗೆ ಕನಿಷ್ಠ 50 ಕೋಟಿ ರೂ.ನಿಂದ 250 ಕೋಟಿ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಯಾವುದೇ ಕಂಪನಿಯು ಗ್ರಾಹಕರ ವೈಯಕ್ತಿಕ ಮಾಹಿತಿ ಸಂಗ್ರಹಿಸಿದರೆ, ಥರ್ಡ್ ಪಾರ್ಟಿ ಸ್ಟೋರೇಜ್ ಇದ್ದರೂ ರಕ್ಷಣೆ ಕಡ್ಡಾಯ. ದತ್ತಾಂಶ ಸೋರಿಕೆಯಾದರೆ, ನಿಯಮ ಉಲ್ಲಂಘನೆಯಾದರೆ ಆ ಕಂಪನಿಯು ಗ್ರಾಹಕರು ಹಾಗೂ ಡೇಟಾ ರಕ್ಷಣೆ ಮಂಡಳಿಗೆ ಮಾಹಿತಿ ನೀಡಬೇಕು. ಮಕ್ಕಳು ಹಾಗೂ ವಿಶೇಷ ಚೇತನರ ವೈಯಕ್ತಿಕ ಮಾಹಿತಿ ಸಂಗ್ರಹಿಸುವಾಗ ಅವರ ಪೋಷಕರ ಅನುಮತಿ ಪಡೆಯುವುದು ಕಡ್ಡಾಯ. ಬೇರೆ ದೇಶಗಳಿಗೆ ಮಾಹಿತಿ ನೀಡುವ ನಿಯಂತ್ರಣವು ಕೇಂದ್ರ ಸರ್ಕಾರದ ಬಳಿಯೇ ಇರಲಿದೆ. ಬಳಕೆದಾರರ ಹಕ್ಕುಗಳು, ಕರ್ತವ್ಯಗಳು, ಡೇಟಾ ಸಂಗ್ರಹಣೆಯ ವಿಶ್ವಾಸಾರ್ಹತೆ, ಸೈಬರ್ ಅಪರಾಧಗಳು ನಡೆದಾಗ ಕಾನೂನು ಪ್ರಕ್ರಿಯೆಗೆ ಸಹಕಾರ ನೀಡುವುದು, ಬೇರೆ ದೇಶಗಳಿಗೆ ಡಿಜಿಟಲ್ ಡೇಟಾ ಟ್ರಾನ್ಸ್‌ಫರ್‌ಗೆ ನಿರ್ಬಂಧ, ಬೇರೆ ದೇಶಗಳಿಂದ ಡೇಟಾ ಪಡೆಯುವುದು, ಕಂಪನಿಗಳು ಡೇಟಾ ಸಂರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು ಇತ್ಯಾದಿ ಮಹತ್ವದ ಅಂಶಗಳು ಇದರಲ್ಲಿವೆ. ವೈಯಕ್ತಿಕ ಡೇಟಾದ ಸಂಗ್ರಹಣೆ ಮತ್ತು ಬಳಕೆ ಕಾನೂನುಬದ್ಧವಾಗಿರಬೇಕು. ಸೋರಿಕೆಯಾಗದಂತೆ ರಕ್ಷಿಸಬೇಕು ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು. ಕಾನೂನು ನಿಬಂಧನೆಗಳನ್ನು ಈಡೇರಿಸಬೇಕು; ಗ್ರಾಹಕನ ಉದ್ದೇಶ ಪೂರೈಸುವವರೆಗೆ ಮಾತ್ರ ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಬೇಕು. ಗ್ರಾಹಕರ ಅತ್ಯಗತ್ಯ ಡೇಟಾವನ್ನು ಮಾತ್ರ ಸಂಗ್ರಹಿಸಬೇಕು; ಸೋರಿಕೆ ಅಥವಾ ಡೇಟಾ ಕಳವಿನ ಸಂದರ್ಭದಲ್ಲಿ ಅದನ್ನು ನ್ಯಾಯಯುತ, ಪಾರದರ್ಶಕ ರೀತಿಯಲ್ಲಿ ಡೇಟಾ ಸಂರಕ್ಷಣಾ ಮಂಡಳಿಗಳಿಗೆ ವರದಿ ಮಾಡಬೇಕು- ಇತ್ಯಾದಿ ಅಂಶಗಳು ಇದರಲ್ಲಿ ಅಡಕವಾಗಿವೆ. ಹೀಗಾಗಿ ಇದೊಂದು ಮಹತ್ವದ ಕಾಯಿದೆಯಾಗಿದೆ ಎನ್ನಬಹುದು.