ಬೆಂಗಳೂರಿನಲ್ಲಿ ಭಾನುವಾರ ಮಳೆ ಸುರಿದ ವೇಳೆ, ಅಂಡರ್ ಪಾಸ್‌ನಲ್ಲಿ ತುಂಬಿದ ನೀರಿನೊಳಗೆ ಸಿಲುಕಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ವಿಚಿತ್ರವೆಂದರೆ, ಅಂಡರ್ ಪಾಸ್‌ನಲ್ಲಿ ತಿಳಿಯದೆ ಕಾರು ಚಲಾಯಿಸಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಅಂಡರ್ ಪಾಸ್ ನಿರ್ವಹಣೆಯಲ್ಲಿ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ತಪ್ಪೆಸಗಿದ ಅಧಿಕಾರಿಗಳನ್ನು, ಸಿಬ್ಬಂದಿಯನ್ನು ಕಂಡುಹಿಡಿದು ಬಂಧಿಸಿ ಜೈಲಿಗಟ್ಟಬೇಕಾದ ಕೆಲಸ ಮೊದಲು ಆಗಬೇಕಿತ್ತು. ಆದರೆ ಬಡಪಾಯಿ ಚಾಲಕ ಸಿಕ್ಕಿಹಾಕಿಕೊಂಡಿದ್ದಾನೆ. ಬಲಿಪಶು ಒಬ್ಬ ದೊರೆತರೆ ಮೇಲಿನವರನ್ನು ರಕ್ಷಿಸುವುದು ಸುಲಭಸಾಧ್ಯ.
ರಾಜ್ಯದ ನಾನಾ ಭಾಗಗಳಲ್ಲಿ ಸರ್ಕಾರದ ಮೂಲ ಸೌಕರ್ಯ ಲೋಪಗಳಿಂದ ಹೀಗೆ ಸಾವು ನೋವು ಸಂಭವಿಸುತ್ತಲೇ ಇರುತ್ತವೆ. ಇಂಥ ದುರಂತ ಸಂಭವಿಸಿ ಜನಾಕ್ರೋಶ ಭುಗಿಲೆದ್ದಾಗ ಸರ್ಕಾರ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಹೇಳಿಕೆ ನೀಡುತ್ತದೆ. ಆದರೆ ಈವರೆಗೆ ಯಾವ ಅಧಿಕಾರಿಯೂ ಇಂಥ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿಲ್ಲ. ಬೆಂಗಳೂರಿನಂಥ ನಗರಗಳಲ್ಲಿ ಬಿಬಿಎಂಪಿ, ಜಲ ಮಂಡಳಿ, ಬೆಸ್ಕಾಂಗಳ ಬೇಜವಾಬ್ದಾರಿಯಿಂದಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಒಂದು ಕುಸಿದು ತಾಯಿ- ಮಗು ದುರ್ಮರಣ ಕಂಡಿದ್ದರು. ಅಲ್ಲೂ ಮೆಟ್ರೋ ಆಡಳಿತ ನಿರ್ದೇಶಕರ, ಗುತ್ತಿಗೆದಾರರ ಮೇಲೆ ಯಾವುದೇ ಕಠಿಣ ಕ್ರಮ ಆಗಿಲ್ಲ. ಈ ಸಾವು ನ್ಯಾಯವೇ ಎಂಬಂಥ ಪ್ರಶ್ನೆಗಳನ್ನು ನಾವು ಯಾರಿಗೆ ಕೇಳಬೇಕು? ಮೂಲಸೌಕರ್ಯಗಳಲ್ಲಿ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದೆ ಕಾಮಗಾರಿ ಮಾಡಿದವರನ್ನೋ, ಸುರಕ್ಷತೆಯನ್ನು ಖಾತ್ರಿಪಡಿಸಬೇಕಿದ್ದ ಮೇಲಧಿಕಾರಿಗಳನ್ನೋ, ಅಥವಾ ಇಂಥ ದುರಂತ ಸಂಭವಿಸಿದಾಗ ಪರಿಹಾರ ಘೋಷಿಸಿ ಆ ಬಳಿಕ ಮರೆತುಬಿಡುವ ಸರ್ಕಾರವನ್ನೋ?
ಕೆಲವು ದಿನಗಳ ಹಿಂದೆ, ಬೆಂಗಳೂರು ಸಂಚಾರ ಪೊಲೀಸರು, ಮಳೆ ಬರುವಾಗ ಅಂಡರ್‌ಪಾಸ್‌ಗಳ ಅಡಿಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಾರದು ಎಂದು ನಿಷೇಧ ವಿಧಿಸಿದ್ದರು. ಇದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಇಂಥ ಕ್ಷುಲ್ಲಕ ಸಂಗತಿಗಳಿಗೆ ತಲೆ ಕೆಡಿಸಿಕೊಳ್ಳುವ ಬದಲು, ಅಂಡರ್‌ಪಾಸ್‌ಗಳನ್ನು ಇನ್ನಷ್ಟು ವೈಜ್ಞಾನಿಕವಾಗಿ, ಸುರಕ್ಷಿತವಾಗಿ ನಿರ್ವಹಿಸುವುದು ಹೇಗೆ ಎಂಬ ಬಗ್ಗೆ ಸರ್ಕಾರ ಚಿಂತಿಸಬಹುದಿತ್ತಲ್ಲವೇ? ಜೋರು ಮಳೆ ಸುರಿದಾಗ ಅಂಡರ್‌ಪಾಸ್‌ಗಳು ವಾಹನ ಸವಾರರಿಗೆ ಜಲಸಮಾಧಿಗಳಾಗಿಬಿಡುತ್ತವೆ. ಇಲ್ಲಿ ದೊಡ್ಡ ಪ್ರಮಾಣದ ನೀರು ಕ್ಷಿಪ್ರವಾಗಿ ಹರಿದುಹೋಗಬಹುದಾದ ಸಾಮರ್ಥ್ಯವನ್ನು ಹೊಂದಿದಂತೆ ಅಂಡರ್‌ಪಾಸ್‌ಗಳನ್ನು ಕಟ್ಟುವುದು ಮುಖ್ಯ. ಹಾಗೆಯೇ ಈಗಿರುವ ಅಂಡರ್‌ಪಾಸ್‌ಗಳನ್ನು ಅದಕ್ಕೆ ತಕ್ಕಂತೆ ದುರಸ್ತಿ ಮಾಡುವುದು ಮತ್ತು ನಿರ್ವಹಿಸುವುದೂ ಅಗತ್ಯವಿದೆ. ಇಲ್ಲವಾದರೆ ಭಾನುವಾರದ ಘಟನೆ ಮರುಕಳಿಸುತ್ತದೆ.
ಇದನ್ನೂ ಓದಿ: Bangalore Rain: ಬೆಂಗಳೂರಿನ ಮಹಾಮಳೆಗೆ ಕೊಚ್ಚಿ ಹೋದ ಚಿನ್ನದಂಗಡಿ; 2 ಕೋಟಿ ರೂ. ಮೌಲ್ಯದಷ್ಟು ನಷ್ಟ
ಇಂಥ ಹಲವಾರು ಸಂದರ್ಭಗಳಲ್ಲಿ ಹೈಕೋರ್ಟ್ ಸರ್ಕಾರಕ್ಕೂ ಆಡಳಿತ ಪ್ರಾಧಿಕಾರಗಳಿಗೂ ಎಚ್ಚರಿಕೆ ನೀಡಿದೆ; ಅಧಿಕಾರಿಗಳ ಮೇಲೆ ಚಾಟಿ ಬೀಸಿದೆ. ಇಷ್ಟಾಗಿಯೂ ರಸ್ತೆ ಗುಂಡಿಗಳು, ಫುಟ್‌ಪಾತ್ ಅವ್ಯವಸ್ಥೆ, ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬಗಳು, ನೇತು ಬಿದ್ದಿರುವ ಕೇಬಲ್‌ಗಳು, ತೆರೆದ ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಮ್ಯಾನ್‌ಹೋಲ್‌ಗಳು, ಜನರ ಪ್ರಾಣ ತಿನ್ನುತ್ತವೆ. ಇದಕ್ಕೆಲ್ಲ ಸ್ಥಳೀಯ ಆಡಳಿತಗಳ ಅಧಿಕಾರಿಗಳನ್ನೇ ಹೊಣೆ ಮಾಡುವ ಉತ್ತರದಾಯಿತ್ವ ನಮಗೆ ಬರುವವರೆಗೆ ಇಂಥ ದುರಂತಗಳು ಮುಂದುವರಿಯುತ್ತವೆ. ಇಂಥ ದುರಂತ ಸಂಭವಿಸಿದಾಗ ಒಂದಿಷ್ಟು ಅಧಿಕಾರಿಗಳ ಮೇಲೆ ಕೇಸು ದಾಖಲಿಸಿ ಜೈಲಿಗಟ್ಟಿದರೆ ಉಳಿದ ಅಧಿಕಾರಿಗಳೂ ಬುದ್ಧಿ ಕಲಿಯುವಂತಾಗಲಿದೆ. ಸರ್ಕಾರ ಈ ಕುರಿತು ಕಠಿಣ ಹೆಜ್ಜೆ ಇಡಲಿ. ಜನ ಸುಖಾಸುಮ್ಮನೆ ಬಲಿಯಾದಾಗ 5 ಲಕ್ಷ ರೂ. ಪರಿಹಾರ ಘೋಷಿಸಿ ಕೈ ತೊಳೆದುಕೊಂಡರೆ ಈ ಸಮಸ್ಯೆ ಬಗೆಹರಿಯದು. ದುರಂತಗಳು ಸಂಭವಿಸಿದಾಗ ಮೇಲ್ಮಟ್ಟದ ಅಧಿಕಾರಶಾಹಿ ತಾನು ಹೊಣೆ ಹೊರದಂತೆ ಜಾರಿಕೊಳ್ಳುತ್ತದೆ. ಇದಕ್ಕೆ ತಡೆ ಹಾಕಲೇಬೇಕು. ಅದಕ್ಕೆ ತಕ್ಕ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು.