Site icon Vistara News

ವಿಸ್ತಾರ ಸಂಪಾದಕೀಯ | ಮುಖ್ಯ ಚುನಾವಣಾ ಆಯುಕ್ತರ ನೇಮಕದಲ್ಲಿ ಪಾರದರ್ಶಕತೆ ಅಗತ್ಯ

97 crore people registered to vote in Lok Sabha Election

ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಟಿ.ಎನ್‌ ಶೇಷನ್‌ ಅವರಂಥ ದಿಟ್ಟ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಕಟುವಾಗಿ ಹೇಳಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತರ ನೇಮಕದಲ್ಲಿ ಸುಧಾರಣೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಎಲ್ಲ ಸರ್ಕಾರಗಳು ಕೇಂದ್ರ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡಿವೆ. ಪ್ರಧಾನಿಯ ವಿರುದ್ಧವೂ ಕ್ರಮ ಕೈಗೊಳ್ಳುವ ಅಧಿಕಾರವುಳ್ಳ ಮುಖ್ಯ ಚುನಾವಣಾ ಆಯುಕ್ತರ ಅಗತ್ಯವಿದೆ. ಆಯುಕ್ತರ ನೇಮಕಕ್ಕೆ ಒಕ್ಕೂಟ ಸರ್ಕಾರದ ಸಚಿವ ಸಂಪುಟ ಮಾತ್ರವಲ್ಲದೇ ವಿಸ್ತೃತ ವ್ಯವಸ್ಥೆಯ ಅಗತ್ಯವಿದೆ. ಈಗಿರುವ ವ್ಯವಸ್ಥೆಯಲ್ಲಿ ಬದಲಾವಣೆ ಈ ಕ್ಷಣದ ಅಗತ್ಯವಾಗಿದೆ ಎಂದು ಪೀಠ ಹೇಳಿದೆ.

ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದಿಂದಲೇ ಬಂದಿರುವ ಈ ಅಭಿಪ್ರಾಯಕ್ಕೆ ಮಹತ್ವವಿದೆ ಹಾಗೂ ಇದನ್ನು ಯಾವ ರೀತಿಯಿಂದಲೂ ಕಡೆಗಣಿಸಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡ ವ್ಯಕ್ತಿಯನ್ನು ಆಯುಕ್ತರಾಗಿ ನೇಮಿಸಿರುವ ಹಿನ್ನೆಲೆಯಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದೆಯೇ ಎಂಬುದನ್ನು ಪರೀಕ್ಷಿಸುವುದು ಅಗತ್ಯವಿದೆ, ನೇಮಕಾತಿಯಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸಲಾಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು ಎಂದು ಪೀಠ ಹೇಳಿರುವುದರಿಂದ ಕೇಂದ್ರ ಸರ್ಕಾರಕ್ಕೆ ಮುಖಭಂಗವೇ ಆಗಿದೆ. ಪ್ರತಿ ಸರ್ಕಾರವೂ ಚುನಾವಣಾ ಆಯೋಗದ ಮುಖ್ಯಸ್ಥರನ್ನಾಗಿ ತನ್ನ ಧೋರಣೆಗೆ ಸರಿ ಹೊಂದುವವರನ್ನು ಮಾತ್ರವೇ ನೇಮಕ ಮಾಡುತ್ತ ಬಂದಿವೆ ಎಂದೇ ನ್ಯಾಯಮೂರ್ತಿಗಳೊಬ್ಬರು ಹೇಳಿದ್ದಾರೆ. ಇದು ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ ತಾಳಿರುವ ಕಠಿಣ ನಿಲುವುಗಳಲ್ಲಿ ಒಂದಾಗಿದೆ.

1950ರಲ್ಲಿ ಚುನಾವಣಾ ಆಯೋಗದ ರಚನೆ ಆಗಿದ್ದು, ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಹೊಣೆ ಅದರ ಮೇಲೆ ಹೊರಿಸಲಾಗಿದೆ. ಇದು ಹಾಕಿಕೊಡುವ ಚೌಕಟ್ಟಿನ ಒಳಗೆ ಮತದಾನ ಪ್ರಕ್ರಿಯೆಯನ್ನು ನಡೆಸಲು ಆಳುವ ಸರ್ಕಾರಗಳು, ಕಾನೂನು ಪಾಲನಾ ಸಂಸ್ಥೆಗಳು ಶ್ರಮಿಸಬೇಕು. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಬಹುತೇಕ ಎಲ್ಲ ಅಧಿಕಾರವೂ ತಾತ್ಕಾಲಿಕವಾಗಿ ಚುನಾವಣಾ ಆಯೋಗದ ಕೈಯಲ್ಲಿ ನಿಕ್ಷೇಪಿತವಾಗುತ್ತದೆ. ಇದು ಮೇಲ್ನೋಟಕ್ಕೆ ಆಯೋಗದ ಕೈಯಲ್ಲಿ ಅಪರಿಮಿತ ಅಧಿಕಾರವನ್ನು ಹೊಂದಿರುವಂತೆ ಕಾಣುತ್ತದೆ. ಆದರೆ, ಚುನಾವಣೆಗಳ ಹೊಣೆ ಹೊತ್ತುಕೊಂಡ ಆಯುಕ್ತರ ನೇಮಕಾತಿಯೇ ಸರ್ಕಾರದ ಕೈಯಲ್ಲಿ ಇದೆ. ಚುನಾವಣೆ ತಮ್ಮ ಅಪೇಕ್ಷೆಗೆ ತಕ್ಕಂತೆ ನಡೆಯಬೇಕು ಎಂಬುದು ಇದುವರೆಗಿನ ಎಲ್ಲ ಸರ್ಕಾರಗಳ ಇಂಗಿತವಾಗಿದೆ. ಹೀಗಾಗಿ ಸರ್ಕಾರಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಆಯುಕ್ತರನ್ನು ನೇಮಕ ಮಾಡಿಕೊಳ್ಳುತ್ತಿವೆ ಎಂಬ ದೂರು ಮೊದಲಿನಿಂದಲೂ ಇದೆ. ಒಂದೇ ರಾಜ್ಯದಲ್ಲಿ ಹಲವು ಹಂತಗಳ ಮತದಾನ ಘೋಷಿಸುವುದು, ಒಂದು ಕಡೆ ಮತದಾನ ನಡೆಯುವ ವೇಳೆಯಲ್ಲೇ ಇನ್ನೊಂದು ಕಡೆ ಚುನಾವಣಾ ರ್ಯಾಲಿಗಳಿಗೆ ಅವಕಾಶ ನೀಡುವುದು- ಇವೆಲ್ಲವೂ ಆಯೋಗ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಜನರ ಭಾವನೆಯನ್ನು ದೃಢಗೊಳಿಸುವಂತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ದಕ್ಷ, ಪಾರದರ್ಶಕ ಮತ್ತು ಬಲಿಷ್ಠ ಚುನಾವಣೆ ಆಯೋಗದ ಅಗತ್ಯ ಬಗ್ಗೆ ಮಾತನಾಡಿರುವುದು ಉತ್ತಮ ಬೆಳವಣಿಗೆ.

ನಾಮ್‌ ಕೆ ವಾಸ್ತೆಗೆ ರಾಷ್ಟ್ರಪತಿಗಳು ಆಯುಕ್ತರ ನೇಮಕಕ್ಕೆ ಅಂತಿಮ ಸಹಿ ಹಾಕುತ್ತಾರೆ. ಆದರೆ ಆಯುಕ್ತರ ನೇಮಕ ಶಿಫಾರಸು ಆಗುವುದು ಸಚಿವ ಸಂಪುಟದಿಂದಲೇ ಆಗಿರುವುದರಿಂದ, ನೇಮಕದ ಪೂರ್ತಿ ಅಧಿಕಾರದ ಸರ್ಕಾರದ ಕೈಯಲ್ಲಿರುತ್ತದೆ. 1989ರವರೆಗೂ ಏಕೈಕ ಆಯುಕ್ತರ ವ್ಯವಸ್ಥೆಯಿತ್ತು. ನಂತರ ಮೂವರು ಆಯುಕ್ತರ ನೇಮಕ ಆಗತೊಡಗಿತು. ಆಗಲೇ ಈ ವ್ಯವಸ್ಥೆ ದುರ್ಬಲಗೊಂಡಿತು. ಹಾಗೆಂದು, ಎಲ್ಲ ಆಯುಕ್ತರೂ ದುರ್ಬಲರೇ ಆಗಿದ್ದರೆಂದಲ್ಲ. 1990ರಿಂದ 1996ರವರೆಗೂ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್‌ ಶೇಷನ್‌ ಅವರು ಎಲ್ಲ ಅಪ್ರಾಮಾಣಿಕ ರಾಜಕಾರಣಿಗಳಿಗೂ ಸಿಂಹಸ್ವಪ್ನವೇ ಆಗಿದ್ದರು ಎಂಬುದು ಇಂದಿಗೆ ಒಂದು ದಂತಕಥೆ. ಅವರು ಚುನಾವಣಾ ಆಯೋಗ ಏನು ಮಾಡಬಲ್ಲದು, ಅದರ ಅಧಿಕಾರದ ವ್ಯಾಪ್ತಿ ಎಷ್ಟು ಎಂಬುದನ್ನು ಭಾರತದ ಪ್ರಜೆಗೆ ಸಂಪೂರ್ಣ ಮನದಟ್ಟು ಮಾಡಿಸಿದ್ದರು. ಅಂಥ ಆಯುಕ್ತರು ಮತ್ತೊಮ್ಮೆ ಬಾರದಿರಲಿ ಎಂಬುದೇ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಇರಾದೆಯಾಗಿದೆ. ಇದನ್ನೇ ಸುಪ್ರೀಂ ಕೋರ್ಟ್‌ ಗುರುತಿಸಿರುವುದರಿಂದಲೇ ಮೇಲಿನ ಮಾತುಗಳನ್ನು ಆಡಿದೆ.

ಆದರೆ ಚುನಾವಣೆ ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಆಗಬೇಕಿದ್ದರೆ ಸ್ವತಂತ್ರ ನಿಲುವು ಹೊಂದಿದ, ನಿರ್ಭೀತ ವ್ಯಕ್ತಿತ್ವದ, ಸಾಂವಿಧಾನಿಕ ನಿಷ್ಠೆಯನ್ನು ಹೊರತುಪಡಿಸಿ ವೈಯಕ್ತಿಕ ರಾಜಕೀಯ ನಿಷ್ಠೆಗಳಿಂದ ದೂರ ನಿಂತಿರುವವರ ನೇಮಕವಾಗುವುದು ಅಗತ್ಯವಿದೆ. ಅಂಥವರ ನೇಮಕ ಕಷ್ಟವೇ. ಆದರೆ ಪ್ರಜಾಪ್ರಭುತ್ವದ ಚೈತನ್ಯವನ್ನು ಉಳಿಸಲು ಅಂಥ ನೇಮಕ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೋರ್ಟ್‌ ಸೂಚಿಸಿರುವಂತೆ, ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳನ್ನೂ ಸೇರಿಸುವ ಮೂಲಕ ತಟಸ್ಥತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಗಡಿ ವಿವಾದ, ಮಹಾರಾಷ್ಟ್ರದ ಹತಾಶ ಯತ್ನ

Exit mobile version