ವಿಜಯನಗರ: ಹೊಸಪೇಟೆಯ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರೆಸ್ಟ್ ಗೇಟ್ ಮುರಿದಿರುವುದು (Crest Gate Crash) ಮಳೆಗಾಲ ಮುಗಿಯುವ ಮುನ್ನವೇ ಕಲ್ಯಾಣ ಕರ್ನಾಟಕ (Kalyana Karntaka) ಭಾಗದ ಅನ್ನದಾತರಿಗೆ (Farmers) ಶಾಕ್ ನೀಡಿದೆ. ಕ್ರೆಸ್ಟ್ ಗೇಟ್ ಮುರಿದುದರಿಂದ ಸುಮಾರು 15 ಟಿಎಂಸಿಯಷ್ಟು (TMC) ನೀರು ಹರಿದುಹೋಗಿದ್ದು, ಭರ್ತಿಯಾಗಿದ್ದ ಜಲಾಶಯ ಅಷ್ಟರ ಮಟ್ಟಿಗೆ ಈಗ ಖಾಲಿಯಾಗಿದೆ. ಇದರ ಪರಿಣಾಮ ಮೂರು ರಾಜ್ಯಗಳ 8 ಜಿಲ್ಲೆಗಳ ಲಕ್ಷಾಂತರ ರೈತರು ತಮ್ಮ ಎರಡು ಬೆಳೆಗಳನ್ನು ಕಳೆದುಕೊಳ್ಳುವ ಅನುಮಾನ ಮೂಡಿದೆ.
ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ಒಟ್ಟು ಹನ್ನೆರಡು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮೂರು ರಾಜ್ಯದ 8 ಜಿಲ್ಲೆಗಳಿಗೆ ಆಸರೆ ಆಗಿರುವ ತುಂಗಭದ್ರಾ ಜಲಾಶಯ ಕಲ್ಯಾಣ ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಆಂಧ್ರ ಪ್ರದೇಶದ ಕರ್ನೂಲ್, ಅನಂತಪುರ, ಕಡಪ, ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಗಳಿಗೆ ಜೀವನಾಡಿ.
ಈ ಬಾರಿ ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಅಷ್ಟಾಗಿ ಮಳೆ ಆಗಿಲ್ಲ. ಆದರೆ ಡ್ಯಾಂ ತುಂಬಿದ್ದರಿಂದ ಕಾಲುವೆ ನೀರು ನಂಬಿಕೊಂಡು ರೈತು ಬಿತ್ತನೆ ಮಾಡಿದ್ದಾರೆ. ಬಳ್ಳಾರಿಯಲ್ಲಿ 70 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬಿತ್ತನೆ ಮಾಡಲಾಗಿದೆ. 80 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ.
ಆದರೆ ಗೇಟ್ ರಿಪೇರಿಗಾಗಿ 60 TMC ನೀರನ್ನು ಅಣೆಕಟ್ಟಿನಿಂದ ಖಾಲಿ ಮಾಡುವ ಅನಿವಾರ್ಯತೆ ಇದೆ. 105 TMC ಸಾಮರ್ಥ್ಯದ TB ಡ್ಯಾಂನಲ್ಲಿ 20 ಅಡಿ ನೀರು ಕುಗ್ಗಿಸಿ 60 TMCಯಷ್ಟು ನೀರನ್ನು ಅಧಿಕಾರಿಗಳು ಖಾಲಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿಂದ ಮಳೆ ಪ್ರಮಾಣ ಕುಗ್ಗಬಹುದು. ಹೀಗಾಗಿ ಖಾಲಿಯಾದ 60 ಟಿಎಂಸಿ ನೀರನ್ನು ಮತ್ತೆ ತುಂಬಿಸುವುದು ಕಷ್ಟಸಾಧ್ಯ. ಬೇಸಿಗೆಯಲ್ಲಿ ನಿರ್ವಹಣೆಗಾಗಿ ಡ್ಯಾಂ ತುಂಬಿಸುವುದು ಅಧಿಕಾರಿಗಳಿಗೆ ಸವಾಲು ಆಗುತ್ತದೆ. ಸೆಪ್ಟೆಂಬರ್ ಬಳಿಕ ಕಾಲುವೆ ನೀರು ಕೈಕೊಟ್ಟರೆ ಬೆಳೆಗಳು ಬಾಡುತ್ತವೆ. ಹೀಗಾಗಿ ಈ ಬಾರಿ ಬೆಳೆಗಳಿಗೆ ಡ್ಯಾಂ ನೀರು ಸಿಗುವುದೇ ಅನುಮಾನ ಎಂಬಂತಾಗಿದೆ.
ಎರಡನೇ ಬೆಳೆಗಿಂತ ಮೊದಲ ಬೆಳೆಗಾದರೂ ಸರಿಯಾಗಿ ನೀರು ಸಿಗುವುದೇ ಎಂಬ ಆತಂಕವೂ ರೈತರನ್ನು ಕಾಡುತ್ತಿದೆ. 60 ಟಿಎಂಸಿ ನೀರು ಖಾಲಿಯಾದ್ರೆ ಡ್ಯಾಂನಲ್ಲಿ ಉಳಿಯುವುದು ಕೇವಲ 45 ಟಿಎಂಸಿ ನೀರು ಮಾತ್ರ. ಇದರಲ್ಲಿ ಆಂಧ್ರಪ್ರದೇಶದ ಕೋಟಾ ಕೂಡಾ ಇದೆ. ಹೀಗಾಗಿ ಕರ್ನಾಟಕ ಕೋಟಾ ಉಳಿಯುವುದು ಕೇವಲ ಇಪ್ಪತ್ತೈದು ಟಿಎಂಸಿ ನೀರು. ಇದರಲ್ಲಿಯೇ ಕುಡಿಯುವ ನೀರಿಗೆ ಹೆಚ್ಚಿನ ನೀರು ಇಟ್ಟುಕೊಳ್ಳುವುದರಿಂದ ರೈತರಿಗೆ ಇದೀಗ ಬೆಳೆಗೆ ನೀರು ಸಿಗುತ್ತಾ ಇಲ್ಲವೋ ಅನ್ನೋ ಆತಂಕ ಎದುರಾಗಿದೆ.
ತುಂಗಭದ್ರಾ ಜಲಾಶಯದ ನೀರಿನ ಮೇಲೆಯೇ ನಾಲ್ಕು ಜಿಲ್ಲೆಗಳ ಅನೇಕ ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ. ಡ್ಯಾಂನಲ್ಲಿರೋ ನೀರು ಖಾಲಿಯಾದ್ರೆ ಕುಡಿಯುವ ನೀರಿಗೆ ಕೂಡಾ ತತ್ವಾರವಾಗುತ್ತದೆ. ಕಳೆದ ಬೇಸಿಗೆಯಲ್ಲಿ ಅನೇಕ ಕಡೆ ಕುಡಿಯಲು ಕೂಡಾ ನೀರು ಬಿಡದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ಡ್ಯಾಂ ಖಾಲಿಯಾಗುತ್ತಿರುವುದರಿಂದ ಬೇಸಿಗೆಯಲ್ಲಿ ಈ ಬಾರಿ ಕೂಡಾ ತತ್ವಾರವಾಗೋ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ: Tungabhadra Dam: ತುಂಗಭದ್ರಾ ಜಲಾಶಯದಿಂದ 15 ಟಿಎಂಸಿ ನೀರು ವ್ಯರ್ಥ; ಇಂದು ಸಿಎಂ ಸಿದ್ದರಾಮಯ್ಯ ಭೇಟಿ