ವಿಜಯನಗರ: ತುಂಗಭದ್ರಾ ಜಲಾಶಯದಲ್ಲಿ (Tungabhadra Dam) ಮುರಿದುಹೋದ 19ನೇ ಗೇಟ್‌ನಿಂದ ಹೊರಹರಿಯುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲು ತಜ್ಞರ ತಂಡ ಸಫಲವಾಗಿದೆ. ಮೂರು ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಗೆ ಯಶಸ್ಸು ದೊರೆತಿದ್ದು, ಪೋಲಾಗಲಿದ್ದ ನೀರನ್ನು ಉಳಿಸುವಲ್ಲಿ ತಜ್ಞ ಕನ್ನಯ್ಯ ನಾಯ್ಡು ತಂಡ ಸಫಲವಾಗಿದೆ.
ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್‌ಗೆ 3 ಸ್ಟಾಪ್ ಲಾಗ್ ಅಳವಡಿಸುವಲ್ಲಿ ತಂಡ ಯಶಸ್ವಿಯಾಗಿದ್ದು, ಮೂರು ಸ್ಟಾಪ್ ಲಾಗ್ ಅಳವಡಿಸಿದ್ದರಿಂದಾಗಿ ಹೊರ ಹರಿಯುವ ನೀರು ಸ್ಟಾಪ್ ಆಗಿದೆ. 19ನೇ ಗೇಟ್ ಸುರಕ್ಷಿತವಾದ ಪರಿಣಾಮ, ಡ್ಯಾಂನಿಂದ ನೀರು ಹೊರಬಿಡಲಾಗಿದ್ದ ಎಲ್ಲ 33 ಗೇಟ್‌ಗಳನ್ನು ಮುಚ್ಚಿ ಆ ಮೂಲಕ ಪೋಲಾಗುತ್ತಿದ್ದ ನೀರನ್ನು ಟಿಬಿ ಡ್ಯಾಂ ಮಂಡಳಿ ತಡೆದಿದೆ.
ಚೈನ್ ಲಿಂಕ್ ಕಟ್ ಆಗಿ ಮುರಿದುಬಿದ್ದಿದ್ದ 19 ನಂಬರ್ ಕ್ರಸ್ಟ್ ಗೇಟ್ ಅನ್ನು ಕೂಡಿಸಲು ಮೂರು ದಿನಗಳಿಂದ ತಜ್ಞರ ತಂಡ ಪ್ರಯತ್ನಿಸುತ್ತಿತ್ತು. ನಿನ್ನೆ ರಾತ್ರಿ ಮೊದಲ ಸ್ಟಾಪ್ ಲಾಗ್ ಗೇಟ್‌ನ ಮೊದಲ ಎಲಿಮೆಂಟ್ ಕೂಡಿಸುವಲ್ಲಿ ಯಶಸ್ವಿಯಾಗಿತ್ತು. ಇಂದು ಬೆಳಗ್ಗಿನಿಂದ ಇನ್ನೆರಡು ಎಲಿಮೆಂಟ್‌ಗಳುನ್ನು ಕನ್ನಯ್ಯ ನಾಯ್ಡು ನೇತೃತ್ವದ ತಜ್ಞರ ತಂಡ ಕೂರಿಸಿದೆ.
ಹೀಗಾಗಿ 70 ಟಿಎಂಸಿಯಷ್ಟು ನೀರು ಉಳಿಸಲು ಟಿಬಿ ಬೋರ್ಡ್ ಯಶಸ್ವಿಯಾಗಿದೆ. ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇದುವರೆಗೆ ಪೋಲಾದ ನೀರು ಮತ್ತೆ ತುಂಬಿಕೊಳ್ಳುವ ವಿಶ್ವಾಸ ಮೂಡಿದೆ. ಸದ್ಯ ಜಲಾಶಯಕ್ಕೆ 41 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ 80 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿತ್ತು.
ಸದ್ಯ ಜಲಾಶಯದಲ್ಲಿ 70.759 ಟಿಎಂಸಿ ನೀರು ಸಂಗ್ರಹವಿದೆ. ಒಳಹರಿವು ಹೀಗೇ ಇದ್ದರೆ ವಾರದಲ್ಲಿ ಮತ್ತೆ ಜಲಾಶಯ ಭರ್ತಿಯಾಗಲಿದೆ. ಹೀಗಾಗಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಆಶಾಭಾವನೆ ಮೂಡಿದ್ದು, ಎರಡು ಬೆಳೆಗೆ ನೀರು ಸಿಗುವ ವಿಶ್ವಾಸವನ್ನು ಜಲಾನಯನ ಪ್ರದೇಶದ ಜನರು ಹೊಂದಿದ್ದಾರೆ.
ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ತಜ್ಞ ಕನ್ಹಯ್ಯ ನಾಯ್ಡು, ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ್ದರು. ʼಸಿಎ ಸಿದ್ದರಾಮಯ್ಯ ಬಂದಿದ್ದರು. ನನಗೆ ಕೈಮುಗಿದು ಒಂದೇ ಕೇಳಿಕೊಂಡರು. ನೀರು ಹೋದರೆ ಜನರಿಗೆ ಊಟ ಸಿಗಲ್ಲ. ಹೇಗಾದರೂ ಮಾಡಿ ನೀರು ಉಳಿಸಿ ಅಂತ ಕೇಳಿಕೊಂಡರು. ನಾನು ಅದಕ್ಕೇ ಬಂದಿದ್ದೇನೆ ಅಂತ ಹೇಳಿದೆʼ ಎಂದು ಹೇಳಿದ್ದರು.
“70 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೇಟ್ ಒಡೆದಿದೆ. ನೀರಿನ ರಭಸಕ್ಕೆ ಗೇಟ್ ಕೊಚ್ಚಿ ಹೋಗಿದೆ. ಇದನ್ನು ಆಗಲೇ ತಯಾರು ಮಾಡಲಾಗ್ತಿದೆ. ನಾಳೆಯಿಂದ ಗೇಟ್ ಕೂಡಿಸೋ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಕನ್ನಯ್ಯ ನಾಯ್ಡು ಮತ್ತವರ ತಂಡದಿಂದ ಕಾರ್ಯ ನಡೆಯುತ್ತಿದೆ. ಬಹಳ ಅನುಭವಿ ಅವರು, ಅವರ ನೇತೃತ್ವದಲ್ಲಿ ನಾಳೆಯಿಂದ ತಾತ್ಕಾಲಿಕ ಗೇಟ್ ಕೂಡಿಸಲಾಗ್ತದೆ. ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಗೇಟ್ ಬದಲಿಸಬೇಕು. ಇನ್ಮುಂದೆ ತಜ್ಞರು ಹೇಳಿದಂತೆ, ಜಲಾಶಯ ನಿರ್ವಹಣೆ ಮಾಡಲಾಗುತ್ತದೆ” ಎಂದು ಸಿಎಂ ಸಿದ್ದರಾಮಯ್ಯ ಅಣೆಕಟ್ಟಿಗೆ ಭೇಟಿ ನೀಡಿದ ಬಳಿಕ ಹೇಳಿದ್ದರು.
ಇದನ್ನೂ ಓದಿ: Tungabhadra Dam: ತುಂಗಭದ್ರಾ ಡ್ಯಾಂಗೆ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಚುರುಕು