ಬೆಂಗಳೂರು: ತುಂಗಭದ್ರಾ ಡ್ಯಾಂನ ಕ್ರಸ್ಟ್ ಗೇಟ್ ಕಿತ್ತು ಹೋಗಿರುವ ವಿಚಾರಕ್ಕೆ ಅಧಿಕಾಗಳ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ಹೊರಹಾಕಿದ್ದಾರೆ. ಮೊದಲೇ ನೊಂದಿರುವ ಜನಕ್ಕೆ
ಜಲಬಾಧೆ ಆವರಿಸದಿರಲಿ, ಇಂಥ ಬಹುದೊಡ್ಡ ಡ್ಯಾಂ (Tungabhadra Dam) ನಿರ್ವಹಣೆಯನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಿದ್ದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಡ್ಯಾಂನ ಕ್ರಸ್ಟ್ ಗೇಟ್ ಕಟ್ಟಾಗಿ ನದಿ ಪಾತ್ರದ 30ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಪ್ರವಾಹ ಎದುರಾಗುವ ಆತಂಕ ಜನರಲ್ಲಿ ಮನೆ ಮಾಡಿದೆ. ಬರಗಾಲದಿಂದ ನಿರಂತರ ತತ್ತರಿಸಿದ್ದ ಜನತೆಗೆ ಅಣೆಕಟ್ಟು ತುಂಬಿದ ಖುಷಿಯಲ್ಲಿರುವಾಗಲೇ, ಕ್ರಸ್ಟ್ ಗೇಟ್ ಕಟ್ಟಾಗಿರುವುದರ ಪರಿಣಾಮ, ಸಂಗ್ರಹಿತ ನೀರು ಹೊರಹೋದರೆ ಮುಂದೆ ಕೃಷಿಗೆ ತೊಂದರೆಯಾಗುವ ಆತಂಕ ಆರಂಭವಾಗಿದೆ. ಇಂಥ ಬಹುದೊಡ್ಡ ಡ್ಯಾಮ್ ನಿರ್ವಹಣೆಯನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಿದ್ದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಇದನ್ನೂ ಓದಿ | Tungabhadra Dam: ತುಂಗಭದ್ರಾ ಜಲಾಶಯಕ್ಕೆ ಡಿಸಿಎಂ ಡಿಕೆಶಿ ಭೇಟಿ; ಅಧಿಕಾರಿಗಳ ಜತೆ ಸಭೆ
ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ನೆರೆ ಭೀತಿಯಲ್ಲಿರುವ ಗ್ರಾಮಗಳ ಜನರನ್ನು ಸ್ಥಳಾಂತರಿಸಿ, ಕೂಡಲೇ ಜಲಾಶಯದ ಕ್ರಸ್ಟ್ ಗೇಟ್ ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ.
ನಾಳೆ ಮಧ್ಯಾಹ್ನ ಜಲಾಶಯಕ್ಕೆ ಬಿ.ವೈ. ವಿಜಯೇಂದ್ರ ಭೇಟಿ
ತುಂಗಭದ್ರಾ ಡ್ಯಾಂ ಗೇಟ್ ಹಾನಿ ಹಿನ್ನೆಲೆಯಲ್ಲಿ ನಾಳೆ ತುಂಗಭದ್ರಾ ಅಣೆಕಟ್ಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಭೇಟಿ ನೀಡಲಿದ್ದು, ಅಣೆಕಟ್ಟು ಪರಿಶೀಲನೆ ಮಾಡಿ ಮಾಹಿತಿ ಪಡೆಯಲಿದ್ದಾರೆ. ಬಳಿಕ ಮಧ್ಯಾಹ್ನ 3.30ಕ್ಕೆ ಮೃತ ಪಿಎಸ್ಐ ಪರಶುರಾಮ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ.
ಒಂದು ವಾರದಲ್ಲಿ ತುಂಗಭದ್ರಾ ಡ್ಯಾಂ ಗೇಟ್ ದುರಸ್ತಿಯಾಗಲಿದೆ ಎಂದ ಡಿ.ಕೆ.ಶಿವಕುಮಾರ್
ವಿಜಯನಗರ: ತುಂಗಭದ್ರಾ ಜಲಾಶಯದ 19 ನಂಬರ್ ಕ್ರಸ್ಟ್ ಗೇಟ್ನ ಚೈನ್ ತುಂಡಾಗಿದ್ದು ಅಪಾರ ಪ್ರಮಾಣದ ನೀರು ನದಿಪಾತ್ರಕ್ಕೆ ಹರಿದು ಹೋಗುತ್ತಿದೆ. ಹೀಗಾಗಿ ಜಲಾಶಯಕ್ಕೆ (Tungabhadra Dam) ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿ, ಆದಷ್ಟು ಬೇಗ ಡ್ಯಾಂ ಗೇಟ್ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಡಿ.ಕೆ. ಶಿವಕುಮಾರ್ ಮಾತನಾಡಿ, ಡ್ಯಾಂ ಬಗ್ಗೆ ಈಗಾಗಲೇ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಡ್ಯಾಂ ಮೇಲೆ ನಿಂತು ಸಂಪೂರ್ಣವಾಗಿ ವೀಕ್ಷಣೆ ಮಾಡಿದ್ದೇನೆ. ರಾತ್ರಿ ವೇಳೆ 10 ಗೇಟ್ ಕಾರ್ಯ ನಿರ್ವಹಣೆ ಮಾಡುತ್ತಿದ್ದವು. ಗೇಟ್ ನಂಬರ್ 19ರ ಚೈನ್ ಕಟ್ ಆಗಿ ಗೇಟ್ ಕಳಚಿ ಬಿದ್ದಿದೆ. ಹೀಗಾಗಿ ವಿಜಯನಗರ ಬಳ್ಳಾರಿಯ ಎಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿರು.
ಇದನ್ನೂ ಓದಿ | Tungabhadra Dam: ತುಂಗಭದ್ರಾ ಡ್ಯಾಂ ಗೇಟ್ ಚೈನ್ ಕಟ್; ನದಿಪಾತ್ರದಲ್ಲಿ ಪ್ರವಾಹ ಭೀತಿ
ಮೊದಲು ರೈತರನ್ನು ಬದುಕಿಸಬೇಕು, ರೈತರನ್ನು ಉದ್ಧಾರ ಮಾಡೋದಕ್ಕೆ ಅನೇಕ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ತುಂಗಭದ್ರಾ ಜಲಾಶಯವು 105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ನೀರು ಹೆಚ್ಚಿಗೆ ಇದ್ದಿದ್ದರಿಂದ ನೀರನ್ನು ನದಿಗೆ ಬಿಡಲಾಗಿದೆ. ಒಂದೇ ಗೇಟ್‌ನಲ್ಲಿ ಹೆಚ್ಚು ನೀರು ಹೋದಾಗ ಸಮಸ್ಯೆ ಆಗುತ್ತೆ, ಹೀಗಾಗಿ 98 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಒಂದೇ ಗೇಟ್‌ನಲ್ಲಿ 35 ಸಾವಿರ ಕ್ಯೂಸೆಕ್ ಹೋಗುತ್ತಿದೆ ಎಂದರು.
ಮಲೆನಾಡು ಭಾಗದಲ್ಲಿ ಮತ್ತೆ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ. ಅಕ್ಟೋಬರ್ ಅಷ್ಟೋತ್ತಿಗೆ ಮತ್ತೆ 60 ಟಿಎಂಸಿ ನೀರು ಜಲಾಶಯಕ್ಕೆ ಬರುವ ಸಾಧ್ಯತೆ ಇದೆ. 5 ಟಿಎಂಸಿಯಷ್ಟು ನೀರು ಈಗಾಗಲೇ ಹರಿದು ಹೋಗಿದೆ. ಟೆಕ್ನಿಕಲ್ ಟೀಂ, ನುರಿತ ತಂತ್ರಜ್ಞ ನಾರಾಯಣ ಸೇರಿ ಜೆಎಸ್‌ಡಬ್ಲ್ಯು ಮತ್ತಿತರರ ಸಹಾಯ ಕೇಳಿದ್ದೇವೆ. ಆದಷ್ಟು ಬೇಗ ಗೇಟ್ ದುರಸ್ತಿ ಮಾಡೋದಕ್ಕೆ ಹೇಳಲಾಗಿದೆ ಎಂದು ತಿಳಿಸಿದರು.
ಮೊದಲು ಯಾರು ಟಿಬಿ ಡ್ಯಾಂ ಗೇಟ್ ರೆಡಿ ಮಾಡಿದ್ದರೋ ಅವರಿಗೆ ಹೇಳಿದ್ದೇವೆ. ನಾವೆಲ್ಲರೂ ಶತಪ್ರಯತ್ನ ಮಾಡಿ ನೀರು ಉಳಿಸುವ ಕೆಲಸ ಮಾಡುತ್ತೇವೆ. ಯಾವುದೇ ರಾಜಕಾರಣ ಮಾಡದೇ ನೀರು ಉಳಿಸುವ ಕೆಲಸ ಮಾಡುತ್ತೇವೆ. ಎಲ್ಲೆಲ್ಲಿ ನೀರು ಉಳಿಸೋದಕ್ಕೆ ಸಾಧ್ಯ, ಅಲ್ಲಿ ಕೆಲಸ ಮಾಡುತ್ತೇವೆ. ಆಂಧ್ರ, ತೆಲಂಗಾಣ ರಾಜ್ಯದ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ರೈತರನ್ನ ಮೊದಲು ಉಳಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂದರು.
ಇದನ್ನೂ ಓದಿ | Tungabhadra Dam: ತುಂಗಭದ್ರಾ ಡ್ಯಾಂ ಗೇಟ್ ಚೈನ್ ಕಟ್ ಪ್ರಕರಣ; ಪ್ರವಾಹದ ಭೀತಿ ಇಲ್ಲ ಎಂದ ಗೃಹ ಸಚಿವ ಡಾ. ಜಿ.ಪರಮೇಶ್ವರ್
8 ತಿಂಗಳಿನಿಂದ ಟಿಬಿ ಡ್ಯಾಂಗೆ ಮುಖ್ಯ ಎಂಜಿನಿಯರ್ ನೇಮಕ ಆಗಿಲ್ಲ ಅನ್ನೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಯಾರ ಮೇಲೂ ದೂರುವುದಿಲ್ಲ, ಮೊದಲು ಗೇಟ್ ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಒಂದು ವಾರದಲ್ಲಿ ಗೇಟ್ ದುರಸ್ತಿ ಮಾಡಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.