ವಿಜಯನಗರ: ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ (Tungabhadra Dam Crest gate) ಕಿತ್ತು ಹೋದ (Crest gate crash) ಪರಿಣಾಮ ಅನ್ಯಾಯವಾಗಿ 15 ಟಿಎಂಸಿ (TMC) ನೀರು ಯಾವ ಉಪಯೋಗಕ್ಕೂ ಬಾರದೆ ನದಿಪಾಲಾಗಿದೆ. ಇಂದು ನಡೆಯಬೇಕಿದ್ದ ಸಿಎಂ ಬಾಗಿನ ಕಾರ್ಯಕ್ರಮ ರದ್ದುಪಡಿಸಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ (CM Siddaramaiah) ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಲಿದ್ದಾರೆ.
ತುಂಗಭದ್ರಾ ಜಲಾಶಯ 105.788 ಟಿಎಂಸಿ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಭರಪೂರ ಮಳೆಯ ಪರಿಣಾಮ ಡ್ಯಾಮ್ ಪೂರ್ತಿಯಾಗಿ ತುಂಬಿತ್ತು. ಗೇಟ್ ಕೊಚ್ಚಿಹೋದ ದಿನ 105.788 ಟಿಎಂಸಿ ನೀರು ಸಂಗ್ರಹ ಇತ್ತು. ಅಂದಿನಿಂದ ಸದ್ಯದವರೆಗೆ 14ರಿಂದ 15 ಟಿಎಂಸಿಗೂ ಅಧಿಕ ನೀರು ನದಿ ಪಾಲಾಗಿದೆ. ಗೇಟ್ ಕಿತ್ತುಹೋಗಿದ್ದರಿಂದ ಯಾವುದೇ ಉಪಯೋಗಕ್ಕೆ ಬಾರದೇ ಜಲಾಶಯದ ನೀರು ಹರಿದುಹೋಗಿದೆ.
ತುಂಗಭದ್ರಾ ಜಲಾಶಯಕ್ಕೆ ಒಳಹರಿವು 35 ಸಾವಿರ ಕ್ಯೂಸೆಕ್ ಇದ್ದರೆ, ಹೊರಹರಿವು 1.09 ಲಕ್ಷ ಇದೆ. 105788 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲೀಗ 91 ಟಿಎಂಸಿ ನೀರು ಸಂಗ್ರಹವಾಗಿದೆ.
ಚೈನ್ ಲಿಂಕ್ ಕಟ್ ಆದಾಗಿನಿಂದ ಇಲ್ಲಿಯವರೆಗೆ ಟಿಬಿ ಬೋರ್ಡ್ ಯಾವುದೇ ದುರಸ್ತಿಗೆ ಮುಂದಾಗಿಲ್ಲ. 19ನೇ ಗೇಟ್ ಪೂರ್ತಿ ಹಾಳಾಗಿದ್ದು, ಹೊಸ ಗೇಟ್ ಕೂರಿಸಬೇಕು ಅಂದರೆ ಜಲಾಶಯದ ಅರ್ಧ ನೀರು ಖಾಲಿ ಆಗಲೇಬೇಕು. ಆಗ ಮಾತ್ರ ಗೇಟ್ ದುರಸ್ತಿ ಮಾಡೋದಕ್ಕೆ ಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಂದರೆ ಮುಂದಿನ ಮೇ ತಿಂಗಳವರೆಗೂ ಇದರ ದುರಸ್ತಿ ಮಾಡಲು ಸಾದ್ಯವಿಲ್ಲದಾಗಿದೆ.
2022ರಲ್ಲೂ 19ನೇ ಗೇಟ್‌ಗೆ ಬಂದಿತ್ತು ಕಂಟಕ
2022ರಲ್ಲೂ 19ನೇ ಗೇಟ್‌ನಲ್ಲಿ ದೋಷ ಕಂಡುಬಂದಿತ್ತು. ತಾಂತ್ರಿಕ ದೋಷ ಕಂಡುಬಂದದ್ದರಿಂದ ಆ ಗೇಟ್ ಮೂಲಕ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿತ್ತು. ದೋಷ ನಿವಾರಿಸಿ, ಗೇಟ್ ಉಪಯೋಗಿಸಬೇಡಿ ಎಂದು ತಂತ್ರಜ್ಞರು ಸೂಚನೆ ಕೊಟ್ಟಿದ್ದರು. ಕಳೆದ ವರ್ಷ ಬರಗಾಲದಿಂದ ತುಂಗಭದ್ರಾ ಜಲಾಶಯ ತುಂಬಲೇ ಇಲ್ಲ. ಆಗ ಗೇಟ್ ಸರಿಪಡಿಸಲು ಸೂಕ್ತವಾದ ಕಾಲವಾಗಿತ್ತು. ಆದರೆ ತೊಂದರೆ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ನಿರ್ವಹಣೆ ಮಾಡಿ ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಏನೂ ಮಾಡಿರಲಿಲ್ಲ.
ಮುಂಜಾಗ್ರತೆ ಕೈಗೊಂದು ಗೇಟ್ ಸರಿಯಾಗಿ ದುರಸ್ತಿ ಮಾಡಿಸಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಹೊಣಿಗೇಡಿತನದ ಪರಿಣಾಮ. ದಿವ್ಯ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ತಲೆದಂಡ ಆಗಬೇಕು ಎಂದು ರೈತ ಸಂಘಟನೆಗಳು, ಅನ್ನದಾತರು, ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇಂದು ಸಿಎಂ ತುಂಗಭದ್ರಾ ಜಲಾಶಯ ವೀಕ್ಷಣೆ
ಇಂದು ಸಿಎಂ ಸಿದ್ದರಾಮಯ್ಯ ಅವರು ಜಲಾಶಯಕ್ಕೆ ಭೇಟಿ ನೀಡಿ ಚೈನ್ ಲಿಂಕ್ ಕಟ್ ಆಗಿ ಹಾನಿಗೊಳಗಾದ ಗೇಟ್ ಮತ್ತು ಜಲಾಶಯ ಪರಿಶೀಲಿಸಲಿದ್ದಾರೆ. ಬೆಳಗ್ಗೆ 11.00ಕ್ಕೆ HAL ವಿಮಾನ ನಿಲ್ದಾಣದಿಂದ ಟೇಕಾಫ್ ಆಗಲಿರುವ ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್, 12.15ಕ್ಕೆ ಕೊಪ್ಪಳ ತಾಲೂಕಿನ ಗಿಣಗೇರಾ ಹೆಲಿಪ್ಯಾಡ್‌ಗೆ ತಲುಪಲಿದೆ. ಬಳಿಕ ರಸ್ತೆ ಮಾರ್ಗವಾಗಿ 12.30ಕ್ಕೆ ಹೊಸಪೇಟೆ ಬಳಿಯಿರುವ ತುಂಗಭದ್ರಾ ಜಲಾಶಯಕ್ಕೆ ಬರಲಿದ್ದಾರೆ.
ಜಲಾಶಯ ವೀಕ್ಷಣೆ ಬಳಿಕ ಹೊಸಪೇಟೆಯ ವೈಕುಂಠ ಅತಿಥಿ ಗೃಹದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಗೇಟ್ ಯಾಕೆ ಸಮಸ್ಯೆ ಆಯ್ತು, ದುರಸ್ತಿ ಮಾಡುವುದು ಹೇಗೆ ಇತ್ಯಾದಿ ಮಾಹಿತಿ ಪಡೆಯಲಿದ್ದಾರೆ. ನಂತರ ಮಾಜಿ ಸಂಸದ ಸಂಗಣ್ಣ ಕರಡಿ ಮನೆಗೆ ಊಟಕ್ಕೆ ತೆರಳಲಿದ್ದಾರೆ. ಸಂಜೆ 4ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆ.
ಸಿಎಂ ಬಾಗಿನ ಇಲ್ಲ
ಆಡಂಬರದಿಂದ ಇರಬೇಕಾದ ಜಲಾಶಯದಲ್ಲೀಗ ನೀರವ ಮೌನ ಕವಿದಿದ್ದು, ಇಂದು ನಡೆಯಬೇಕಿದ್ದ ಸಿಎಂ ಬಾಗಿನ ಕಾರ್ಯಕ್ರಮ ರದ್ದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮದುವಣಗಿತ್ತಿಯಂತೆ ಜಲಾಶಯ ಸಿಂಗಾರಗೊಳ್ಳಬೇಕಿತ್ತು. ವರ್ಷದಲ್ಲಿ ಎರಡನೇ ಬಾರಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿ ಆಗಿತ್ತು. ಮೂರು ದಿನದ ಮೊದಲೇ ಸಿಎಂ ಸಿದ್ದರಾಮಯ್ಯರಿಂದ ಬಾಗಿನ ಅರ್ಪಣೆ ಕಾರ್ಯಕ್ರಮ ನಿಗದಿ ಆಗಿತ್ತು. ಬಾಗಿನ ಅರ್ಪಣೆಗೆ ಅಧಿಕಾರಿಗಳು ಭಾರಿ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ ಜಲಾಶಯದ ಕ್ರೆಸ್ಟ್ ಗೇಟ್ ಕಿತ್ತುಹೋಗಿದ್ದರಿಂದ ಬಾಗಿನ ಅರ್ಪಣೆಗೆ ಬ್ರೇಕ್ ಬಿದ್ದಿದೆ. ಅಳವಡಿಸಿದ್ದ ಬ್ಯಾನರ್, ಫ್ಲೆಕ್ಸ್‌ಗಳ ತೆರವು ಮಾಡಲಾಗಿದೆ. ಡೆಕೋರೇಷನ್‌ಗೆ ತಂದ ವಸ್ತುಗಳನ್ನು ಟಿಬಿ ಬೋರ್ಡ್, ಜಿಲ್ಲಾಡಳಿತ ರಾಶಿ ಹಾಕಿದೆ. ಡ್ಯಾಂ ಸಿಂಗಾರಗೊಳಿಸಲು ತಂದಿದ್ದ ಪ್ಲಾಸ್ಟಿಕ್ ಶಾಮಿಯಾನ, ಆನೆ ಮೂರ್ತಿಗಳು, ಶಿಲ್ಪಕಲಾ ರೀತಿಯ ಕಂಬಗಳು ಹಾಗೆಯೇ ಬಿದ್ದಿವೆ. ಡ್ಯಾಂನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: Tungabhadra Dam: ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಿಸಲು ಬೊಮ್ಮಾಯಿ ಆಗ್ರಹ