ನವದೆಹಲಿ: ಟರ್ಕಿ ಇತ್ತೀಚೆಗೆ ಭಾರತದಿಂದ ಸಾಗಣೆಯಾಗಿದ್ದ ಗೋಧಿಯನ್ನು ತಿರಸ್ಕರಿಸಿದೆ. ಇದು ರಫ್ತುದಾರರಲ್ಲಿ ಕಳವಳ ಮೂಡಿಸಿದೆ. ಗೋಧಿಯನ್ನು ಹೊತ್ತು ಸಾಗಿದ್ದ ಹಡಗುಗಳು ಅದರೊಂದಿಗೆ ಗುಜರಾತ್‌ನ ಕಾಂಡ್ಲಾ ಬಂದರಿಗೆ ಮರಳಿವೆ. ಟರ್ಕಿಗೆ 56,877 ಟನ್ ಗೋಧಿಯನ್ನು ರಫ್ತು ಮಾಡಲಾಗಿತ್ತು.
ಟರ್ಕಿಯ ಅಧಿಕಾರಿಗಳ ಪ್ರಕಾರ ಭಾರತದಿಂದ ರವಾನೆಯಾಗಿದ್ದ ಗೋಧಿಯಲ್ಲಿ ಭಾರತೀಯ ರುಬೆಲ್ಲಾ ಅಥವಾ ದಡಾರ ಸೋಂಕು ಪತ್ತೆಯಾಗಿದೆ. ಹೀಗಾಗಿ ಗೋಧಿಯನ್ನು ತಿರಸ್ಕರಿಸಿರುವುದಾಗಿ ಟರ್ಕಿ ತಿಳಿಸಿದೆ. ಈ ಬಗ್ಗೆ ಭಾರತೀಯ ಅಧಿಕಾರಿಗಳು ಇದುವರೆಗೆ ಪ್ರತಿಕ್ರಿಯಿಸಿಲ್ಲ. ಒಂದು ವೇಳೆ ದಡಾರ ಪತ್ತೆಯಾಗಿದ್ದರೆ ಎಲ್ಲ ಆಮದುದಾರ ರಾಷ್ಟ್ರಗಳಿಗೂ ಕಳವಳಕಾರಿಯೇ. ಆದರೆ ಭಾರತೀಯ ಗೋಧಿಯಲ್ಲಿ ಅದರ ಪತ್ತೆ ವಿರಳಾತಿ ವಿರಳ ಎಂದು ತಜ್ಞರು ಹೇಳಿದ್ದಾರೆ.
ಏನಿದು ರುಬೆಲ್ಲಾ/ದಡಾರ ಕಾಯಿಲೆ?
ರುಬೆಲ್ಲಾ ಸೋಂಕನ್ನು ದಡಾರ ಎಂದೂ ಕರೆಯುತ್ತಾರೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ಪಾರಾ ಮಿಕ್ಸೊ ಗುಂಪಿಗೆ ಸೇರಿದ ಮೋರ್ಬಿಲಿ ಎಂಬ ವೈರಸ್ ಇದಕ್ಕೆ ಕಾರಣ. ಈ ಸೋಂಕು ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ. ಕ್ಷಿಪ್ರವಾಗಿ ಹರಡುತ್ತದೆ.
ದಡಾರದ ಲಕ್ಷಣಗಳೇನು?
ಶ್ವಾಸಕೋಶದ ಸೋಂಕು, ಜ್ವರ, ತ್ವಚೆಯ ಮೇಲೆ ಕೆಂಪಾದ ಗುಳ್ಳೆ,, ಕೆಮ್ಮು,, ಮೈ ಕೈ ನೋವು ಕಾಣಿಸುತ್ತದೆ. 3-5 ದಿನಗಳಲ್ಲಿ ಸೋಂಕು ಇದ್ದು ಹೋಗುತ್ತದೆ. ಅಧ್ಯಯನದ ಪ್ರಕಾರ ಶೇ.25-50 ಮಂದಿಗೆ ರುಬೆಲ್ಲಾ ಸೋಂಕು ಬಂದ ಲಕ್ಷಣವೇ ಇರುವುದಿಲ್ಲ. ಕೋವಿಡ್-19ರಿಂದ ಜಗತ್ತು ಚೇತರಿಸುತ್ತಿರುವ ವೇಳೆಯಲ್ಲಿ ಭಾರತೀಯ ದಡಾರ ಸೋಂಕಿನ ಪತ್ತೆ ವರದಿ ಕಳವಳಕಾರಿ. ಒಂದು ವೇಳೆ ಖಾತರಿಯಾದರೆ ಭಾರತದ ಗೋಧಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಬಹುದು.
ರೋಗ ಬರದಂತೆ ತಡೆಯುವುದು ಹೇಗೆ?
ರುಬೆಲ್ಲಾ ಲಸಿಕೆ ಪಡೆಯುವುದು ಉತ್ತಮ ಪರಿಹಾರ. ಮಕ್ಕಳಲ್ಲಿ 12- 15 ತಿಂಗಳ ವಯಸ್ಸಿನವರಿಗೆ ಲಸಿಕೆಯ ಮೊದಲ ಡೋಸ್ ನೀಡಬಹುದು. 4-6 ವರ್ಷದಲ್ಲಿ ಮತ್ತೊಮ್ಮೆ ಡೋಸ್ ಕೊಡಬಹುದು.