Site icon Vistara News

ವಿಸ್ತಾರ ಸಂಪಾದಕೀಯ: ಯುಗಾದಿ, ಹೊಸ ಭರವಸೆಯ ದಿನಗಳಿಗೆ ಹಾದಿಯಾಗಲಿ

ugadi-may-the-path-lead-to-new-hopeful-days

#image_title

ಇಂದು ಚಾಂದ್ರಮಾನ ಯುಗಾದಿ (Yugadi Festival). ಇಂದಿನಿಂದ ಹೊಸ ಸಂವತ್ಸರ ಆರಂಭವಾಗುತ್ತಿದೆ. ನೂತನ ಸಂವತ್ಸರದ ಹೆಸರು ಶೋಭಕೃತ್.‌ ಈ ಹೆಸರು ಶುಭವನ್ನು ಸೂಚಿಸುತ್ತಿದೆ. ಮುಂದಿನ ದಿನಗಳು ಶುಭವನ್ನು ಹೊತ್ತು ತರಲಿವೆ ಎಂಬ ಭರವಸೆಯನ್ನು ಈ ಯುಗಾದಿ ನಮ್ಮಲ್ಲಿ ಮೂಡಿಸಿದರೆ ಹಬ್ಬದ ಉದ್ದೇಶ ಸಾರ್ಥಕವಾದಂತೆ. ಪ್ರತಿನಿತ್ಯ ನಾವು ಸುದ್ದಿ ಮಾಧ್ಯಮಗಳಲ್ಲಿ ಕೆಡುಕಿನ, ಅಪರಾಧದ, ಭ್ರಷ್ಟಾಚಾರದ, ವಂಚನೆ ಇತ್ಯಾದಿ ಸುದ್ದಿಗಳನ್ನು ಓದುತ್ತಿರುತ್ತೇವೆ, ನೋಡುತ್ತಿರುತ್ತೇವೆ. ಇವೆಲ್ಲದರ ಆಚೆಗೂ ನಮ್ಮ ಮುಖದಲ್ಲಿ ಮುಗುಳ್ನಗೆ ಮೂಡಿಸುವ, ಬದುಕಿನಲ್ಲಿ ಭರವಸೆ ಹೆಚ್ಚಿಸುವ, ಧನಾತ್ಮಕ ಉತ್ಸಾಹ ತುಂಬುವ ಸುದ್ದಿಗಳು ಹಾಗೂ ಕಾರ್ಯಕ್ರಮಗಳನ್ನು ಇಂದು ನೋಡುವಂತಾಗಲಿ. ಹಾಗೂ ಇದು ಇಡೀ ವರ್ಷ ಮುಂದುವರಿಯಲಿ ಎಂದು ಹಾರೈಸೋಣ.

ಯುಗಾದಿ ಎಂಬ ಹಬ್ಬದ ಸಂದೇಶ ಬೇವು ಹಾಗೂ ಬೆಲ್ಲಗಳನ್ನು ಒಟ್ಟಾಗಿ ಸೇರಿಸಿ, ಸೇವಿಸಿ, ಬದುಕಿನಲ್ಲಿ ಅವೆರಡೂ ಸಮಾನವಾಗಿ ಇದೆ ಎಂಬ ಸತ್ಯವನ್ನು ಕಂಡುಕೊಳ್ಳುವುದು. ಹೊಂಗೆ- ಮಾವು ಚಿಗುರು ಬಿಟ್ಟು ಪ್ರಕೃತಿ ಹೊಸದಾಗುತ್ತಿದೆ. ಮಾವು- ಹಲಸು ಇತ್ಯಾದಿಗಳು ಎಷ್ಟು ಫಲ ನೀಡಲಿವೆ ಎಂಬುದು ಈ ಕ್ಷಣದಲ್ಲಿಯೇ ನಮಗೆ ಗೊತ್ತಾಗಿಬಿಡುತ್ತದೆ. ಆದರೆ ನಿತ್ಯದ ಬದುಕಿನ ಸ್ಥಿತಿಗತಿ ಹೇಗಿದೆ ಎಂಬುದನ್ನೂ ಸ್ವಲ್ಪ ನೋಡಬೇಕು. ಹಣದುಬ್ಬರ ಎಲ್ಲದರ ಮೇಲೂ ತನ್ನ ಕರಾಳ ಬಾಹುಗಳನ್ನು ಚಾಚಿದೆ. ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳಿಗೂ ಬೆಲೆಗಳು ದುಬಾರಿಯಾಗಿವೆ. ಹೀಗಾಗಿ ಕಳೆದ ವರ್ಷದ ಯುಗಾದಿಗೆ ಮಾಡಿದ ಪ್ರಮಾಣದಲ್ಲಿ ಈ ವರ್ಷವೂ ಸಿಹಿತಿಂಡಿ ಮಾಡಲು ಸಾಧ್ಯವಾಗಲಿಕ್ಕಿಲ್ಲ ಎಂಬುದು ಮಧ್ಯಮ, ಕೆಳಮಧ್ಯಮ ವರ್ಗದ ದುಗುಡ. ಬಡವರಿಗಂತೂ ಕೇಳುವುದೇ ಬೇಡ. ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಿದ್ದರೂ ರೈತನಿಗೇನೂ ಅದರಿಂದ ಲಾಭವಾಗಿಲ್ಲ ಎಂಬುದು ಗೊತ್ತೇ ಇದೆ. ಇವೆಲ್ಲವನ್ನೂ ಬೇವು ಎಂದು ಭಾವಿಸಿ ಬೆಲ್ಲವನ್ನು ಹುಡುಕಾಡಬೇಕಿದೆ. ಹೊಸ ಫಸಲು ಕೈಗೆ ಬರುವ ಕಾಲವಿದು. ಉತ್ತಮ ಬೆಳೆ ಬರಲಿ ಹಾಗೂ ಅದನ್ನು ಬೆಳೆದ ಅನ್ನದಾತನಿಗೆ ಸರಿಯಾದ ಬೆಲೆ ಸಿಗಲಿ ಎಂದು ಆಶಿಸೋಣ.

ಈ ಸಲದ ಬೇಸಿಗೆ ಇನ್ನಷ್ಟು ಬಿಸಿಯಾಗಿರಲಿದೆ, ಮುಂದಿನ ವರ್ಷ ಬರ ಪರಿಸ್ಥಿತಿ ಕಾಡಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಇದೇನೂ ಕೇಳಲು ಹಿತಕರವಾದ ಸುದ್ದಿಯಲ್ಲ. ಈ ವಿಶ್ಲೇಷಣೆ ಸುಳ್ಳಾಗದು, ಆದರೆ ಪರಿಸ್ಥಿತಿಯನ್ನು ಸಹನೀಯವಾಗಿಸಲು ಏನೇನು ಮಾಡಬಹುದು ಎಂಬುದನ್ನು ನಾವು ನೋಡಬೇಕಿದೆ. ಬರದಲ್ಲಿ ಸಿಲುಕಿ ನಾವು ಹಾಗೂ ಸುತ್ತಮುತ್ತಲಿನವರು ಸಂಕಷ್ಟಕ್ಕೆ ಒಳಗಾಗದಂತೆ ಯಾವ್ಯಾವ ಉಪಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಯೋಚಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಯುಗಾದಿಯ ಕಾಲಪುರುಷ ನಮಗೂ ನಮ್ಮನ್ನು ಆಳುವವರಿಗೂ ಅಧಿಕಾರಿಗಳಿಗೂ ವಿವೇಕವನ್ನು ಕೊಡಲಿ ಎಂದು ಹಾರೈಸೋಣ.

ವಿಶೇಷವೆಂದರೆ ಈ ಬಾರಿಯ ಯುಗಾದಿ ಜನಪ್ರಾತಿನಿಧ್ಯದ ಮಹತ್ವದ ನಿರ್ಣಯವನ್ನು ನೀಡುವ ಸಂದರ್ಭವನ್ನೂ ಹೊತ್ತು ತಂದಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬಂದಿದೆ. ನಮ್ಮನ್ನು ಆಳುವವರು ಹೇಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡು, ಹೇಗಿರಬೇಕು ಎಂಬುದನ್ನು ವಿಶ್ಲೇಷಿಸಿಕೊಂಡು, ಮುಂಬರುವ ಚುನಾವಣೆಯಲ್ಲಿ ಮೌಲಿಕವಾದ ರೀತಿಯಲ್ಲಿ ಮತದಾನ ಮಾಡುವ ಸಂದೇಶವನ್ನೂ ಈ ಬಾರಿಯ ಯುಗಾದಿ ನಮಗೆ ಹೊತ್ತು ತಂದಿದೆ. ಸರಿಯಾದ ಫಲಿತಾಂಶ ಮತ್ತು ಉತ್ತಮ ಸರ್ಕಾರ ನಮ್ಮದಾಗಬೇಕಿದ್ದರೆ ಪೂರ್ಣ ಪ್ರಮಾಣದ ಮತದಾನ ಆಗಬೇಕು ಹಾಗೂ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯೂ ಅದರಲ್ಲಿ ಭಾಗಿಯಾಗಬೇಕು. ಆಗ ಪ್ರಜಾಪ್ರಭುತ್ವ ಎಂಬುದು ಸಿಹಿಯಾದ ಬೆಲ್ಲವಾಗುತ್ತದೆ. ಅಲ್ಲಿ ಎಲ್ಲರ ಧ್ವನಿಗೂ ಮನ್ನಣೆ ದೊರೆಯುತ್ತದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ

ʼಕಾಲಚಕ್ರʼ ಎಂದು ಹಿರಿಯರು ಕರೆದಿದ್ದಾರೆ. ಅಂದರೆ ಸುಖದುಃಖಗಳು ಚಕ್ರದಂತೆ ತಿರುಗುತ್ತಲೇ ಇರುತ್ತವಂತೆ. ಹೀಗಾಗಿ ಇಂದು ಕಷ್ಟಗಳು ಎದುರಾದರೆ ನಾಳೆ ಸುಖ ಬರಬಹುದು. ಹೀಗಾಗಿ ಗತಿಸಿದ ಕಾಲದ ಬಗ್ಗೆ ಹೆಚ್ಚು ಕೊರಗದೆ ಮುಂಬರುವ ಹಿತವನ್ನು ಎದುರು ನೋಡುತ್ತಾ ಭರವಸೆಯಿಂದ ಬದುಕಬೇಕೆಂಬುದನ್ನೇ ನಮಗೆ ಯುಗಾದಿಯು ಸಂದೇಶ ರೂಪದಲ್ಲಿ ತಿಳಿಸುತ್ತದೆ. ಈ ಸಂದೇಶವನ್ನು ಅರ್ಥ ಮಾಡಿಕೊಂಡು ವಿವೇಕಯುತವಾದ ರೀತಿಯಲ್ಲಿ ಹಬ್ಬವನ್ನು ಆಚರಿಸೋಣ.

Exit mobile version