ಬೆಂಗಳೂರು: ಇಂಜಿನಿಯರಿಂಗ್ (Engineering) ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ (UGCET 2024) ಪ್ರವೇಶಕ್ಕೆ ತಮ್ಮ ಆಸಕ್ತಿಗನುಗುಣವಾಗಿ ಆಪ್ಷನ್ ದಾಖಲಿಸಿರುವ ಸಿಇಟಿ ರ‍್ಯಾಂಕಿಂಗ್ (CET Ranking) ಅಭ್ಯರ್ಥಿಗಳಿಗೆ ಇಂದು (August 7) ಮಧ್ಯಾಹ್ನ 2 ಗಂಟೆಗೆ ಅಣಕು ಸೀಟು ಹಂಚಿಕೆ (Mock Seat Sharing) ಸಾಧ್ಯತೆ ಇದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಕುರಿತು ಅಪ್‌ಡೇಟ್ ನೀಡಲಿದೆ.
ಅಭ್ಯರ್ಥಿಗಳಿಗೆ ತಮ್ಮ ಆಪ್ಷನ್ ದಾಖಲಿಸಲು ಆಗಸ್ಟ್ 4 ಕೊನೆಯ ದಿನವಾಗಿತ್ತು. ಇಂಜಿನಿಯರಿಂಗ್, ಯೋಗ, ನ್ಯಾಚುರೋಪಥಿ, ಪಶುವೈದ್ಯ, ನರ್ಸಿಂಗ್, ಕೃಷಿ ವಿಜ್ಞಾನ, ಬಿ -ಫಾರ್ಮಾ ಮತ್ತು ಡಿ-ಫಾರ್ಮಾ ಕೋರ್ಸ್ ಮತ್ತು ಕಾಲೇಜ್‌ಗಳ ಆಯ್ಕೆ ಆಪ್ಷನ್ ಮೂಲಕ ನಡೆದಿದೆ. ಇಂದು ಅಣಕು ಸೀಟು ಹಂಚಿಕೆ ಬಳಿಕ ನೈಜ ಸೀಟು ಹಂಚಿಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಈ ಮೊದಲು ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಏಳು ದಿನ ಅವಕಾಶ ನೀಡಲಾಗಿತ್ತು. ಜು.30ರಂದು ಕೊನೆಯಾಗಲಿದ್ದ ಅದನ್ನು ಅಭ್ಯರ್ಥಿಗಳ ಮನವಿ ಮೇರೆಗೆ ಮತ್ತೂ ವಿಸ್ತರಿಸಲಾಗಿತ್ತು. ಯೋಗ ಮತ್ತು ನ್ಯಾಚುರೋಪತಿ ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಅದಕ್ಕೂ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿತ್ತು. ರಾಷ್ಟ್ರೀಯ ವೈದ್ಯಕೀಯ ಮಂಡಳಿ, ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳು / ಅಧಿಸೂಚನೆಗಳ ಅನ್ವಯ ವೈದ್ಯಕೀಯ ಮತ್ತು ದಂತ ವೈದ್ಯಕ್ಯೀಯ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ.
ಡಿಸಿಇಟಿ 2ನೇ ಸುತ್ತಿನ ಸೀಟು ಹಂಚಿಕೆ ಸದ್ಯಕ್ಕೆ ಸ್ಥಗಿತ; ಚಾಯ್ಸ್ ಆಯ್ಕೆಗೆ ಆ.8ರವರೆಗೆ ಅವಕಾಶ
ಬೆಂಗಳೂರು: ಡಿಸಿಇಟಿ-24 (DCET 2024) ತೆಗೆದುಕೊಂಡು, ಮೊದಲ ಸುತ್ತಿನಲ್ಲಿ ಎಂಜಿನಿಯರಿಂಗ್ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಚಾಯ್ಸ್ ಆಯ್ಕೆ ಮಾಡಲು ಆ.8ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಮಳೆ ಕಾರಣಕ್ಕೆ ಶುಲ್ಕ ಪಾವತಿ ಇತ್ಯಾದಿ ಸಮಸ್ಯೆಗಳು ಎದುರಾಗಿವೆ ಎಂದು ಅಭ್ಯರ್ಥಿಗಳು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ದಿನಾಂಕ ವಿಸ್ತರಿಸಲಾಗಿದೆ. ಈ ಕಾರಣಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದು, ಇಚ್ಛೆ ದಾಖಲಿಸಲು ಮತ್ತಷ್ಟು ದಿನ ಅವಕಾಶ ನೀಡಲಾಗುವುದು. ಸದ್ಯದಲ್ಲೇ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಮೊದಲ ಸುತ್ತಿನಲ್ಲಿ ಚಾಯ್ಸ್ – 1 ಮತ್ತು 2 ಅನ್ನು ಆಯ್ಕೆ ಮಾಡಿಕೊಂಡವರು ಆ.8ರೊಳಗೆ ಚಲನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಶುಲ್ಕ ಪಾವತಿಗೆ ಆ.9ರವರೆಗೆ ಅವಕಾಶ ಇರುತ್ತದೆ. ಆ.10ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಟಾಗೂ ಅವಕಾಶ
ಡಿಸಿಇಟಿ-24ಗೆ ಅರ್ಜಿ ಸಲ್ಲಿಸಿ, ದಾಖಲಾತಿ ಪೂರ್ಣಗೊಳಿಸಿರುವ ಆರ್ಕಿಟೆಕ್ಚರ್ ಅಭ್ಯರ್ಥಿಗಳು, ನಾಟಾ ಅಂಕಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸದೇ ಇದ್ದಲ್ಲಿ ಆ.8ರಂದು ಖುದ್ದು ಕೆಇಎಗೆ ಬಂದು ಸಲ್ಲಿಸಿ, ರಾಂಕ್ ಪಡೆಯಬಹುದು. ನಂತರ 2ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: B.Ed Exam Scam: ಬಿ.ಇಡಿ ಪರೀಕ್ಷೆ ಅಕ್ರಮ; ಗುಲ್ಬರ್ಗಾ ವಿವಿ ಕುಲಸಚಿವೆ ಸೇರಿ ಐವರ ವಿರುದ್ಧ ಎಫ್‌ಐಆರ್