ಕಳೆದ 15 ವರ್ಷಗಳಲ್ಲಿ 41.5 ಕೋಟಿ ಮಂದಿಯನ್ನು ಬಡತನ ರೇಖೆಯಿಂದ ಮೇಲೆತ್ತಿರುವ ಸಾಧನೆ ಮಾಡಿರುವುದಕ್ಕಾಗಿ ಭಾರತವನ್ನು ವಿಶ್ವಸಂಸ್ಥೆ ಮುಕ್ತಕಂಠದಿಂದ ಶ್ಲಾಘಿಸಿದೆ. 2005ರಿಂದ 2021ರವರೆಗಿನ 15 ವರ್ಷಗಳಲ್ಲಿ ಭಾರತದಲ್ಲಿ ಒಟ್ಟು 41.5 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ. 2005ರಲ್ಲಿ 55.1 ಪ್ರತಿಶತ ಇದ್ದ ದೇಶದ ಬಡತನ ದರ 2021ರಲ್ಲಿ 16.4 ಪ್ರತಿಶತಕ್ಕೆ ಇಳಿದಿದೆ. 2005ರಲ್ಲಿ ದೇಶದಲ್ಲಿ ಸುಮಾರು 64.5 ಕೋಟಿ ಜನರು ಬಹು ಬಗೆಯ ಬಡತನದಲ್ಲಿ ಇದ್ದರು. ಈ ಸಂಖ್ಯೆ 2015ರಲ್ಲಿ ಸುಮಾರು 37 ಕೋಟಿ ಮತ್ತು 2021ರಲ್ಲಿ 23 ಕೋಟಿಗೆ ಇಳಿದಿದೆ. ʼಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕʼದ (MPI) ಇತ್ತೀಚಿನ ವರದಿಯಲ್ಲಿ ಈ ಅಂಕಿಸಂಖ್ಯೆಗಳು ಹೊರಬಿದ್ದಿವೆ. ಇದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮಗಳ (OPHI) ಜಂಟಿ ಅಧ್ಯಯನದ ವರದಿ.
ವಿಶ್ವಸಂಸ್ಥೆಯ ಈ ವರದಿಯನ್ನು ನಂಬಲೇಬೇಕು; ಯಾಕೆಂದರೆ ಇಲ್ಲಿನ ಅಧ್ಯಯನಕಾರರಿಗೆ ಯಾವ ಬಗೆಯ ಹಂಗು, ಓಲೈಕೆ, ಪ್ರಭಾವ ಇರುವುದಿಲ್ಲ. 41.5 ಕೋಟಿ ಮಂದಿಯನ್ನು 15 ವರ್ಷಗಳಲ್ಲಿ ಬಡತನದ ಕಬಂಧ ಬಾಹುಗಳಿಂದ ಮೇಲೆತ್ತುವುದು ಸಣ್ಣ ಸಾಧನೆಯಲ್ಲ. ಇದಕ್ಕೆ ದೂರದೃಷ್ಟಿಯ ನಾಯಕತ್ವ, ಸದೃಢವಾದ ಪ್ರಜಾತಂತ್ರ, ಮುನ್ನೋಟವನ್ನು ಹೊಂದಿರುವ ಶಾಸಕಾಂಗ, ನಿರ್ದಿಷ್ಟ ಕಾರ್ಯಯೋಜನೆಗಳನ್ನು ಲೋಪದೋಷಗಳಿಲ್ಲದೆ ಅನುಷ್ಠಾನಕ್ಕೆ ಇಳಿಸುವ ಅಧಿಕಾರಶಾಹಿ, ಅನ್ಯಾಯಕ್ಕೆ ತಕ್ಷಣವೇ ತಡೆಹಾಕುವ ನ್ಯಾಯಾಂಗ ಎಲ್ಲವೂ ಬೇಕಾಗುತ್ತವೆ. ಭಾರತದಲ್ಲಿ ಇವೆಲ್ಲವೂ ನೂರಕ್ಕೆ ನೂರು ಸರಿಯಾಗಿವೆ ಎಂದಲ್ಲ; ಆದರೆ ಜಗತ್ತಿನ ಇತಿಹಾಸದಲ್ಲಿ ಬಡತನದ ನಿರ್ಮೂಲನೆಯೊಂದು ಮಹತ್ವದ ಅಂಶ. ಇದು ಸಮರ್ಪಕವಾಗಿ ನಡೆದರೆ ಉಳಿದ ಮಾನವೀಯ ಉದ್ದೇಶಗಳು ತಾನಾಗಿಯೇ ಈಡೇರುವತ್ತ ಚಲಿಸಲು ಸಾಧ್ಯವಾಗುತ್ತದೆ. ಬಡತನದ ತೆಕ್ಕೆಯಿಂದ ಬಿಡಿಸಿಕೊಂಡವರು ಒಳ್ಳೆಯ ಶಿಕ್ಷಣ ಪಡೆಯಲು, ಉತ್ತಮ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗುತ್ತದೆ. ಘನತೆಯಿಂದ ತಮ್ಮ ಹಕ್ಕುಗಳಿಗಾಗಿ ಹಕ್ಕೊತ್ತಾಯ ಮಂಡಿಸಲು ಸಾಧ್ಯವಾಗುತ್ತದೆ. ನೀತಿ ನಿರ್ಣಯಗಳಲ್ಲೂ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲೂ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಹೀಗೆ ಬಡತನ ನಿರ್ಮೂಲನೆ ಎಂಬುದು ರಾಷ್ಟ್ರದ ಪ್ರಗತಿಗೆ ಕಾರಣವಾಗುವ ಮೂಲ ಅಂಶ.
ವಿಶ್ವಸಂಸ್ಥೆ ಅಂಕಿಅಂಶಗಳ ಪ್ರಕಾರ ಏಪ್ರಿಲ್‌ನಲ್ಲಿ ಭಾರತದ ಜನಸಂಖ್ಯೆ 142.86 ಕೋಟಿ ತಲುಪಿದ್ದು, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ ಹಾಗೂ ಚೀನಾವನ್ನು ಹಿಂದಿಕ್ಕಿದೆ. ಈ ಹಿಂದೆ ಅನೇಕ ತಜ್ಞರು, ಹೆಚ್ಚಿನ ಜನಸಂಖ್ಯೆ ದೇಶಗಳಿಗೆ ಹಾನಿಕರ ಎಂದು ಹೇಳುತ್ತಿದ್ದರು. ಆದರೆ ಜನಸಂಖ್ಯೆಯನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಅದನ್ನು ಬಂಡವಾಳವಾಗಿಯೂ ನೋಡಬಹುದು ಎಂಬುದನ್ನು ಇತ್ತೀಚೆಗೆ ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಭಾರತ ಅದನ್ನು ಸಾಧಿಸಿ ತೋರಿಸಿದೆ. ಭಾರತದ ಮಾನವ ಸಂಪನ್ಮೂಲವೇ ಮುಂದಿನ ದಿನಗಳಲ್ಲಿ ಇದರ ದೊಡ್ಡ ಶಕ್ತಿಯೆನಿಸಲಿದೆ. ಭಾರತದಲ್ಲಿ ಬಡತನದ ವಿವಿಧ ಸೂಚಕಗಳಲ್ಲಿ ಇಳಿಮುಖವಾಗಿದ್ದು, ಅತ್ಯಂತ ಬಡ ರಾಜ್ಯಗಳ ಹಿಂದುಳಿದ ಜಾತಿ, ಸಮುದಾಯಗಳು ವೇಗವಾಗಿ ಪ್ರಗತಿಯನ್ನು ಹೊಂದಿದ್ದಾರೆ. ಈ ಅವಧಿಯಲ್ಲಿ ಭಾರತದಲ್ಲಿ ಮಕ್ಕಳ ಮರಣ ಪ್ರಮಾಣ ಶೇಕಡಾ 4.5ರಿಂದ ಶೇಕಡಾ 1.5ಕ್ಕೆ ಇಳಿದಿದೆ. ಪೌಷ್ಟಿಕಾಂಶದಿಂದ ವಂಚಿತರಾಗಿರುವ ಜನರ ಪ್ರಮಾಣ ಶೇಕಡಾ 44.3ರಿಂದ ಶೇಕಡಾ 11.8ಕ್ಕೆ ಇಳಿದಿದೆ ಎಂದೂ ವರದಿ ತಿಳಿಸಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಫ್ರಾನ್ಸ್ ಜತೆ ರಫೇಲ್ ಡೀಲ್ ಮುಂದುವರಿಕೆ, ಭಾರತದ ರಕ್ಷಣಾ ವ್ಯೂಹಕ್ಕೆ ಮತ್ತಷ್ಟು ಬಲ
ಇಷ್ಟಾದರೆ ಸಾಲದು. ಇನ್ನೂ 23 ಕೋಟಿ ಜನ ಬಡತನದ ತೆಕ್ಕೆಯಲ್ಲಿದ್ದಾರೆ ಎಂಬುದು ನಮ್ಮ ಕಾಳಜಿಯ ಅಂಶವಾಗಬೇಕು. ಅವರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಕಾರ್ಯಕ್ರಮಗಳೆಂದರೆ ಉಚಿತ ಕೊಡುಗೆಗಳನ್ನು ನೀಡುವುದಲ್ಲ. ಪುಕ್ಕಟೆ ಯೋಜನೆಗಳಿಂದ ದೀರ್ಘ ಕಾಲ ಬಡತನ ನಿರ್ಮೂಲನೆ ಮಾಡಲಾಗದು. ಕೆಲವು ಕಾಲದ ಮಟ್ಟಿಗೆ ಇದನ್ನು ನಡೆಸಬಹುದು. ಆದರೆ ನಿಧಾನವಾಗಿ ಹಿಂದೆಗೆದುಕೊಳ್ಳಬೇಕು. ಗಾದೆ ಮಾತು ಹೇಳುವಂತೆ, ಹಸಿದವನಿಗೆ ಮೀನು ಕೊಟ್ಟರೆ ಒಂದು ಹೊತ್ತಿನ ಊಟಕ್ಕೆ ಆಗುತ್ತದೆ; ಮೀನು ಹಿಡಿಯುವುದು ಕಲಿಸಿಕೊಟ್ಟರೆ ಜೀವಮಾನವಿಡೀ ಅದು ನೆರವಾಗುತ್ತದೆ. ಹೀಗೆ ಸ್ವಾವಲಂಬನೆ ತರಬೇಕು, ಉದ್ಯೋಗಗಳನ್ನು ಹೆಚ್ಚಿಸಬೇಕು. ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆಯನ್ನು ಮಾತ್ರ ಎಲ್ಲರಿಗೂ ತಲುಪಿಸುವುದು ಸರ್ಕಾರದ ಹೊಣೆ. ಉತ್ತಮ ಆಡಳಿತದೊಂದಿಗೆ ಇದನ್ನು ಸರ್ಕಾರ ಪಾಲಿಸಿದರೆ ಬಡತನದ ಸಂಪೂರ್ಣ ನಿರ್ಮೂಲನೆ ಕಷ್ಟವೇ ಅಲ್ಲ.