Site icon Vistara News

Hampi Monument: ಹಂಪಿಯಲ್ಲಿ ಭಾರಿ ಮಳೆಗೆ ಕುಸಿದು ಬಿದ್ದ ವಿಜಯನಗರ ಅರಸರ ಕಾಲದ ಕಲ್ಲು ಮಂಟಪ

Hampi Monument falls

ವಿಜಯನಗರ: ಕೇಂದ್ರ ಪುರಾತತ್ವ (Archaeology) ಹಾಗೂ ಪ್ರವಾಸೋದ್ಯಮ (tourism) ಇಲಾಖೆಗಳ ದಿವ್ಯ ನಿರ್ಲಕ್ಷ್ಯದ ದುಷ್ಪರಿಣಾಮ, ಯುನೆಸ್ಕೋ ಪಾರಂಪರಿಕ ತಾಣ (unesco heritage site) ಹಂಪಿಯ ಸ್ಮಾರಕಗಳ (Hampi Monument) ಮೇಲೆ ಆಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ಹಂಪಿಯ ರಥ ಬೀದಿಯಲ್ಲಿರುವ (Hampi car street) ಸಾಲು ಮಂಟಪಗಳಲ್ಲಿ ಕೆಲವು ಉರುಳಿ ಬಿದ್ದಿವೆ.

ಹಂಪಿಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟ ವಿಜಯನಗರ ಸಾಮ್ರಾಜ್ಯದ ಕಾಲದ ಕಲ್ಲು ಮಂಟಪಗಳು ಇವಾಗಿದ್ದು, ಮಳೆಗೆ ಕುಸಿದುಬಿದ್ದಿವೆ. ಇವುಗಳನ್ನು ವಿಜಯನಗರ ಅರಸರು ನಿರ್ಮಿಸಿದ್ದರು. ಇವು ಪಂಪಾ ವಿರೂಪಾಕ್ಷ ದೇವಾಲಯದ ರಥ ಬೀದಿಯಲ್ಲಿದ್ದು, ಹಂಪಿಗೆ ಬಂದಿಳಿಯುವವರಿಗೆ ಮೊದಲಾಗಿ ಕಾಣಿಸುವಂತಿವೆ. ಇವು ಮೊದಲೇ ಶಿಥಿಲವಾಗಿದ್ದು, ದುರಸ್ತಿಯ ಅಗತ್ಯದಲ್ಲಿದ್ದವು.

ಹಂಪಿಯ ಸ್ಮಾರಕಗಳು ಯುನೆಸ್ಕೋ ಪಟ್ಟಿಗೆ ಸೇರಿವೆ. ಹೀಗಾಗಿಯೇ ಇವುಗಳನ್ನು ನೋಡಲು ವಿದೇಶಗಳಿಂದ ಜನ ಆಗಮಿಸುತ್ತಾರೆ. ಆದರೆ ಪುರಾತತತ್ವ ಇಲಾಖೆ ಇವುಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ಸ್ಮಾರಕಗಳ ರಕ್ಷಣೆಗೆ ಲಕ್ಷ ಲಕ್ಷ ರೂಪಾಯಿ ಹಣ ಬರುತ್ತಿದ್ದರೂ, ಕೇಂದ್ರ ಪುರಾತತ್ವ ಇಲಾಖೆ ಇವುಗಳ ಸ್ಥಿತಿಗತಿಯ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ದೂರಲಾಗಿದೆ.

ಕಳೆದ ಒಂದು ವಾರದಿಂದ ವಿಜಯನಗರ ಜಿಲ್ಲಾದ್ಯಾಂತ ಉತ್ತಮ ಮಳೆಯಾಗುತ್ತಿದೆ. ಹಂಪಿಯಲ್ಲಿ ಇನ್ನಷ್ಟು ಶಿಥಿಲ ಸ್ಮಾರಕಗಳಿವೆ. ಸೂಕ್ತ ನಿರ್ವಹಣೆ ಇಲ್ಲದೇ ಇದ್ದಕ್ಕಿದ್ದಂತೆ ಉರುಳಿ ಬಿದ್ದಿರುವ ಸಾಲು ಮಂಟಪಗಳು, ಐತಿಹಾಸಿಕ ಹಂಪಿಯ ಸ್ಮಾರಕಗಳ ನಿರ್ವಹಣೆಯ ಸಮಸ್ಯೆಯತ್ತ ಬೆಟ್ಟು ಮಾಡಿವೆ.

ಹಂಪಿ ದೇಗುಲಕ್ಕೆ ಮೊಳೆ; ರಾಜ್ಯ ಸರ್ಕಾರಕ್ಕೆ ಎಎಸ್‌ಐ ನೋಟಿಸ್

ಆರು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಹಂಪಿ ವಿರೂಪಾಕ್ಷ ದೇವಾಲಯದ (Hampi Virupaksha Temple) ಕಂಬಗಳಿಗೆ ಮೊಳೆ ಹೊಡೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ದತ್ತಿ ಇಲಾಖೆಗೆ (Endowment Department) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನೋಟಿಸ್‌ ನೀಡಿದೆ. ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಕಂಬಗಳಿಗೆ ಮೊಳೆ ಹೊಡೆದ ಫೋಟೊಗಳು ವೈರಲ್‌ ಆದ ಬೆನ್ನಲ್ಲೇ ಎಎಸ್‌ಐ ನೋಟಿಸ್ ಜಾರಿಗೊಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಕನ್ನಡ ಜ್ಯೋತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಹಂಪಿಗೆ ತೆರಳಿದ್ದರು. ಇದೇ ವೇಳೆ ಧ್ವಜ ಕಟ್ಟಲು ವಿರೂಪಾಕ್ಷ ದೇವಾಲಯದ ಕಂಬಕ್ಕೆ ಮೊಳೆ ಹೊಡೆಯಲಾಗಿತ್ತು. ಡ್ರಿಲ್‌ನಿಂದ ಕೊರೆದು, ಕಂಬಕ್ಕೆ ಮೊಳೆ ಹೊಡೆಯಲಾಗಿತ್ತು. ದತ್ತಿ ಇಲಾಖೆಯಿಂದಲೇ ಮೊಳೆ ಹೊಡೆಸಲಾಗಿತ್ತು. ಆದರೆ, ಹಂಪಿಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಕಾರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪುರಾತತ್ವ ಇಲಾಖೆಯು ದತ್ತಿ ಇಲಾಖೆಗೆ ನೋಟಿಸ್‌ ಜಾರಿಗೊಳಿಸಿದೆ.

ದೇವಾಲಯದ ಉತ್ತರ ದಿಕ್ಕಿನಲ್ಲಿ ಗೇಟ್‌ ಕೂರಿಸಲು, ಭಕ್ತರು ಸಾಲಿನಲ್ಲಿ ಹೋಗಲು ತಂತಿ ಬೇಲಿ ನಿರ್ಮಿಸಬೇಕು ಎಂದು ದತ್ತಿ ಇಲಾಖೆಯಿಂದ ಮೊಳೆ ಹೊಡೆಯಲಾಗಿದೆ ಎಂದು ತಿಳಿದುಬಂದಿದೆ. ಮೊಳೆ ಹೊಡೆಯುವ ಮುನ್ನ ದತ್ತಿ ಇಲಾಖೆಯು ಪುರಾತತ್ವ ಇಲಾಖೆಯ ಅನುಮತಿ ಕೂಡ ಪಡೆದಿಲ್ಲ, ಮಾಹಿತಿಯನ್ನೂ ನೀಡಿಲ್ಲ. ಹಾಗಾಗಿ, ಹಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದತ್ತಿ ಇಲಾಖೆಯ ಅಧಿಕಾರಿಯನ್ನು ಕರೆಸಿ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಎಎಸ್‌ಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Hampi tourism: ಹಂಪಿ ಗ್ರಾಮ ಪಂಚಾಯತ್‌ಗೆ ಕೇಂದ್ರದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಪ್ರಶಸ್ತಿ

“ಹಂಪಿ ದೇವಾಲಯದ ಕಂಬವನ್ನು ವಿರೂಪಗೊಳಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ದೇವಾಲಯದ ಕಂಬಗಳಿಗೆ ಹಾನಿ ಮಾಡಿರುವ ಫೋಟೊಗಳನ್ನು ದಾಖಲೆಯಾಗಿ ಪರಿಗಣಿಸಲಾಗಿದೆ. ಹಂಪಿಯು ಯುನೆಸ್ಕೋ ಪಾರಂಪರಿಕ ತಾಣದ ಮಾನ್ಯತೆ ಪಡೆದಿದ್ದು, ಇದಕ್ಕೆ ಹಾನಿ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. 1986ರಲ್ಲಿಯೇ ಹಂಪಿಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ.

Exit mobile version