Site icon Vistara News

Unified pension scheme: ಕೇಂದ್ರ ಸರ್ಕಾರದ ಯುಪಿಎಸ್ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಸಂಘಗಳ ವಿರೋಧ

unified pension scheme


ಬೆಂಗಳೂರು: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಹೊಸ ಯುಪಿಎಸ್ ಪಿಂಚಣಿ ಯೋಜನೆ(Unified pension scheme)ಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ(Karnataka government employees) ವಿರೋಧ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ಈ ನಿರ್ಧಾರ ತೃಪ್ತಿಕರವಲ್ಲ ಎಂದು ಈ ಸಂಘಗಳು ಅಭಿಪ್ರಾಯಪಟ್ಟಿವೆ

ಕೇಂದ್ರ ಸರ್ಕಾರ ಸಚಿವ ಸಂಪುಟದಲ್ಲಿ ಯುಪಿಎಸ್ ಪಿಂಚಣಿ ಯೋಜನೆ ಜಾರಿಗೆ ಶೇಕಡ 50ರಷ್ಟು ಪಿಂಚಣಿ ನೀಡಲು ತೆಗೆದುಕೊಂಡಿರುವ ತೀರ್ಮಾನ ತೃಪ್ತಿ ತಂದಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಮತ್ತೊಮ್ಮೆ ಪುನರ್ ಪರಿಶೀಲಿಸಿ ಶೇಕಡ 100ರಷ್ಟು ಪಿಂಚಣಿ ನೀಡಲು ಆಗ್ರಹಿಸುತ್ತೇವೆ ಎಂದು ಷಡಾಕ್ಷರಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು ಪೂರ್ಣವಾಗಿ ವಿರೋಧಿಸುತ್ತದೆ ಎಂದು ಈ ಸಂಘದ ಅಧ್ಯಕ್ಷ ಶಾಂತಾರಾಮ್ ಅವರು ಹೇಳಿಕೆ ನೀಡಿದ್ದಾರೆ. ನಮ್ಮ ಬೇಡಿಕೆ ಹಳೆ ಪಿಂಚಣಿಯ ಮರು ಸ್ಥಾಪನೆ ಮಾತ್ರ ಎಂದು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ಹೇಳಿದ್ದಾರೆ.

ಏನಿದು ಕೇಂದ್ರ ಸರ್ಕಾರದ ಯುಪಿಎಸ್ ಪಿಂಚಣಿ ಯೋಜನೆ?:

ಇದು ಸರ್ಕಾರಿ ನೌಕರರಿಗೆ ಇತ್ತೀಚಿನ ಪಿಂಚಣಿ ಯೋಜನೆಯಾಗಿದೆ. ಸರ್ಕಾರಿ ನೌಕರರಿಗೆ ನಿಶ್ಚಿತ ಪಿಂಚಣಿ ಮೊತ್ತದ ಭರವಸೆ ನೀಡುವ ಯೋಜನೆ ಇದಾಗಿದೆ. UPS ಅಡಿಯಲ್ಲಿ, ನಿಗದಿತ ಪಿಂಚಣಿಯು ಕಳೆದ 12 ತಿಂಗಳುಗಳ ಅವಧಿಯಲ್ಲಿ ಪಡೆದ ಸರಾಸರಿ ಮೂಲ ವೇತನದ 50 ಪ್ರತಿಶತದಷ್ಟಿರುತ್ತದೆ.ಇದು ಖಚಿತವಾದ ಕುಟುಂಬ ಪಿಂಚಣಿಯನ್ನು ಸಹ ಹೊಂದಿರುತ್ತದೆ, ಇದು ಉದ್ಯೋಗಿಯ ಮೂಲ ವೇತನದ 60 ಪ್ರತಿಶತವಾಗಿದೆ. ನೌಕರನ ಮರಣದ ಸಂದರ್ಭದಲ್ಲಿ ಅದನ್ನು ತಕ್ಷಣವೇ ನೀಡಲಾಗುವುದು. ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತಿಯ ಸಂದರ್ಭದಲ್ಲಿ, UPS ತಿಂಗಳಿಗೆ 10,000 ರೂ.ಗಳ ಖಚಿತವಾದ ಕನಿಷ್ಠ ಪಿಂಚಣಿಯನ್ನು ಒದಗಿಸುತ್ತದೆ.

ಯುಪಿಎಸ್‌ಗೆ ಯಾರು ಸೇರಬಹುದು?

“ಕೇಂದ್ರ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್) ಉಳಿಯಲು ಅಥವಾ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಸೇರಲು ನಿರ್ಧರಿಸುವ ಹಕ್ಕನ್ನು ಹೊಂದಿರುತ್ತಾರೆ” ಎಂದು ವೈಷ್ಣವ್ ಹೇಳಿದರು. ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ನಿಯೋಜಿತ ಟಿ ವಿ ಸೋಮನಾಥನ್ ಅವರು, “ಇದು ಈಗಾಗಲೇ ಎನ್‌ಪಿಎಸ್ ಅಡಿಯಲ್ಲಿ 2004 ರಿಂದ ನಿವೃತ್ತರಾದ ಎಲ್ಲರಿಗೂ ಅನ್ವಯಿಸುತ್ತದೆ. ಹೊಸ ಯೋಜನೆಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆಯಾದರೂ, NPS ಪ್ರಾರಂಭವಾದ ಸಮಯದಿಂದ ನಿವೃತ್ತರಾದ ಪ್ರತಿಯೊಬ್ಬರೂ ಮತ್ತು ಮಾರ್ಚ್ 31, 2025 ರವರೆಗೆ ನಿವೃತ್ತರಾದವರು ಸೇರಿದಂತೆ, UPS ನ ಈ ಎಲ್ಲಾ ಐದು ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ” ಎಂದಿದ್ದಾರೆ.

ಇದನ್ನೂ ಓದಿ: NPS v/s UPS: ಏಕೀಕೃತ ಪಿಂಚಣಿ ಯೋಜನೆ ಅಂದ್ರೆ ಏನು? ಇದು NPSಗಿಂತ ಹೇಗೆ ಭಿನ್ನ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Exit mobile version