ನವದೆಹಲಿ: ಹೊಸ ಪಿಂಚಣಿ ಯೋಜನೆಯನ್ನು (NPS) ಸುಧಾರಿಸಲು ಕೇಂದ್ರ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆ ಇಂದು ಈಡೇರಿದೆ. ನಿವೃತ್ತಿಯ ನಂತರ ಖಚಿತವಾದ ಪಿಂಚಣಿಗಾಗಿ ಏಕೀಕೃತ ಪಿಂಚಣಿ ಯೋಜನೆಗೆ(Unified Pension scheme) ಕೇಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ. ಯುಪಿಎಸ್ ಅನ್ನು ಏಪ್ರಿಲ್ 1, 2025 ರಿಂದ ಜಾರಿಯಾಗಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಪ್ರತಿಕ್ರಿಯಿಸಿದ್ದು, ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಸರ್ಕಾರಿ ನೌಕರರ ಯೋಗಕ್ಷೇಮಕ್ಕೆ ಸರ್ಕಾರ ತೋರಿರುವ ಬದ್ಧತೆಯಾಗಿದೆ ಮತ್ತು ಅವರಿಗೆ ಸುರಕ್ಷಿತ ಭವಿಷ್ಯವನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು, ರಾಷ್ಟ್ರೀಯ ಪ್ರಗತಿಗೆ ಗಣನೀಯ ಕೊಡುಗೆ ನೀಡುವ ಎಲ್ಲಾ ಸರ್ಕಾರಿ ನೌಕರರ ಶ್ರಮದ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಏಕೀಕೃತ ಪಿಂಚಣಿ ಯೋಜನೆಯು ಸರ್ಕಾರಿ ನೌಕರರಿಗೆ ಘನತೆ ಮತ್ತು ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುತ್ತದೆ, ಅವರ ಯೋಗಕ್ಷೇಮ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ನಮ್ಮ ಬದ್ಧತೆಗೆ ಅನುಗುಣವಾಗಿರುತ್ತದೆ ಹೇಳಿದ್ದಾರೆ.
We are proud of the hard work of all government employees who contribute significantly to national progress. The Unified Pension Scheme ensures dignity and financial security for government employees, aligning with our commitment to their well-being and a secure future.…
— Narendra Modi (@narendramodi) August 24, 2024
ಕ್ಯಾಬಿನೆಟ್ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, “ಎನ್‌ಪಿಎಸ್ (ಹೊಸ ಪಿಂಚಣಿ ಯೋಜನೆ) ಅನ್ನು ಸುಧಾರಿಸಲು ಸರ್ಕಾರಿ ನೌಕರರಿಂದ ಬೇಡಿಕೆಗಳು ಬಂದಿವೆ. ಪ್ರಧಾನಿ ನರೇಂದ್ರ ಮೋದಿ ಅವರು 2023 ರ ಏಪ್ರಿಲ್‌ನಲ್ಲಿ ಟಿ ವಿ ಸೋಮನಾಥನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದರು. ಸಮಿತಿಯು ಏಕೀಕೃತ ಪಿಂಚಣಿ ಯೋಜನೆಯನ್ನು ಶಿಫಾರಸು ಮಾಡಿದೆ. ಇಂದು ಕೇಂದ್ರ ಸಚಿವ ಸಂಪುಟವು ಯೋಜನೆಗೆ ಅನುಮೋದನೆ ನೀಡಿದೆ ಎಂದಿದ್ದಾರೆ.
ಇದು ಸರ್ಕಾರಿ ನೌಕರರಿಗೆ ಇತ್ತೀಚಿನ ಪಿಂಚಣಿ ಯೋಜನೆಯಾಗಿದೆ. ಸರ್ಕಾರಿ ನೌಕರರಿಗೆ ನಿಶ್ಚಿತ ಪಿಂಚಣಿ ಮೊತ್ತದ ಭರವಸೆ ನೀಡುವ ಯೋಜನೆ ಇದಾಗಿದೆ.UPS ಅಡಿಯಲ್ಲಿ, ನಿಗದಿತ ಪಿಂಚಣಿಯು ಕಳೆದ 12 ತಿಂಗಳುಗಳ ಅವಧಿಯಲ್ಲಿ ಪಡೆದ ಸರಾಸರಿ ಮೂಲ ವೇತನದ 50 ಪ್ರತಿಶತದಷ್ಟಿರುತ್ತದೆ.
ಯುಪಿಎಸ್‌ಗೆ ಯಾರು ಸೇರಬಹುದು?
“ಕೇಂದ್ರ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್) ಉಳಿಯಲು ಅಥವಾ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಸೇರಲು ನಿರ್ಧರಿಸುವ ಹಕ್ಕನ್ನು ಹೊಂದಿರುತ್ತಾರೆ” ಎಂದು ವೈಷ್ಣವ್ ಹೇಳಿದರು. ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ನಿಯೋಜಿತ ಟಿ ವಿ ಸೋಮನಾಥನ್ ಅವರು, “ಇದು ಈಗಾಗಲೇ ಎನ್‌ಪಿಎಸ್ ಅಡಿಯಲ್ಲಿ 2004 ರಿಂದ ನಿವೃತ್ತರಾದ ಎಲ್ಲರಿಗೂ ಅನ್ವಯಿಸುತ್ತದೆ. ಹೊಸ ಯೋಜನೆಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆಯಾದರೂ, NPS ಪ್ರಾರಂಭವಾದ ಸಮಯದಿಂದ ನಿವೃತ್ತರಾದ ಪ್ರತಿಯೊಬ್ಬರೂ ಮತ್ತು ಮಾರ್ಚ್ 31, 2025 ರವರೆಗೆ ನಿವೃತ್ತರಾದವರು ಸೇರಿದಂತೆ, UPS ನ ಈ ಎಲ್ಲಾ ಐದು ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ” ಎಂದಿದ್ದಾರೆ.
NPS ಮತ್ತು UPS ಎಂದರೇನು?
ಜನವರಿ 2004 ರಲ್ಲಿ ಜಾರಿಗೊಳಿಸಕಾದ, ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಮೂಲತಃ ಸರ್ಕಾರಿ ನೌಕರರಿಗೆ ಪ್ರತ್ಯೇಕವಾಗಿ ಸರ್ಕಾರಿ ಪ್ರಾಯೋಜಿತ ನಿವೃತ್ತಿ ಯೋಜನೆಯಾಗಿ ಕಾರ್ಯನಿರ್ವಹಿಸುತ್ತದೆ. ನಂತರ, 2009 ರಲ್ಲಿ, ಇದನ್ನು ಎಲ್ಲಾ ಇತರ ಕ್ಷೇತ್ರಗಳನ್ನು ಒಳಗೊಳ್ಳಲು ವಿಸ್ತರಿಸಲಾಯಿತು.
NPS ಅನ್ನು ಸರ್ಕಾರ ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಜಂಟಿಯಾಗಿ ನಿರ್ವಹಿಸುತ್ತದೆ ಮತ್ತು ನಿವೃತ್ತಿಗೆ ಅನುಗುಣವಾಗಿ ದೀರ್ಘಾವಧಿಯ, ಸ್ವಯಂಪ್ರೇರಿತ ಹೂಡಿಕೆ ಕಾರ್ಯಕ್ರಮವಾಗಿ ವಿನ್ಯಾಸಗೊಳಿಸಲಾಗಿದೆ.
ಎನ್‌ಪಿಎಸ್ ಪಿಂಚಣಿಗೆ ಭರವಸೆ ನೀಡುತ್ತದೆ, ಜೊತೆಗೆ ಗಣನೀಯ ಹೂಡಿಕೆಯ ಲಾಭಗಳ ಸಾಧ್ಯತೆಯಿದೆ. ನಿವೃತ್ತಿಯ ನಂತರ, ಚಂದಾದಾರರು ತಮ್ಮ ಸಂಗ್ರಹವಾದ ಕಾರ್ಪಸ್‌ನ ಒಂದು ಭಾಗವನ್ನು ಹಿಂಪಡೆಯಲು ಆಯ್ಕೆಯನ್ನು ಹೊಂದಿರುತ್ತಾರೆ, ಉಳಿದ ಮೊತ್ತವನ್ನು ಮಾಸಿಕ ಆದಾಯವಾಗಿ ವಿತರಿಸಲಾಗುತ್ತದೆ. ಈ ತಂತ್ರವು ನಿವೃತ್ತಿಯ ನಂತರ ಸ್ಥಿರವಾದ ಆದಾಯವನ್ನು ಒದಗಿಸುತ್ತದೆ.
NPS ಅನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ: ಶ್ರೇಣಿ 1 ಖಾತೆಗಳು ಮತ್ತು ಶ್ರೇಣಿ 2 ಖಾತೆಗಳು. ಶ್ರೇಣಿ 1 ಖಾತೆಯನ್ನು ಆಯ್ಕೆ ಮಾಡುವ ವ್ಯಕ್ತಿಗಳು ಅವರು ನಿವೃತ್ತರಾದ ನಂತರ ಮಾತ್ರ ಹಣವನ್ನು ಹಿಂಪಡೆಯಬಹುದು, ಆದರೆ ಶ್ರೇಣಿ 2 ಖಾತೆಗಳು ಮುಂಚಿತವಾಗಿ ಹಿಂಪಡೆಯಲು ಅವಕಾಶ ನೀಡುತ್ತವೆ.
ಇದನ್ನೂ ಓದಿ: NPS v/s UPS: ಏಕೀಕೃತ ಪಿಂಚಣಿ ಯೋಜನೆ ಅಂದ್ರೆ ಏನು? ಇದು NPSಗಿಂತ ಹೇಗೆ ಭಿನ್ನ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್